ಆ ನೋವು ನನ್ನನ್ನು ತುಂಬಾ ಕಾಡಿತು... ಫೈನಲ್​ ಪಂದ್ಯದಲ್ಲಿ ಅಬ್ಬರಿಸಿದ ಬೆನ್ನಲ್ಲೇ ವೈಭವ್ ಭಾವುಕ ನುಡಿ! Vaibhav Sooryavanshi

ಆ ನೋವು ನನ್ನನ್ನು ತುಂಬಾ ಕಾಡಿತು... ಫೈನಲ್​ ಪಂದ್ಯದಲ್ಲಿ ಅಬ್ಬರಿಸಿದ ಬೆನ್ನಲ್ಲೇ ವೈಭವ್ ಭಾವುಕ ನುಡಿ! Vaibhav Sooryavanshi
ಆ ನೋವು ನನ್ನನ್ನು ತುಂಬಾ ಕಾಡಿತು... ಫೈನಲ್​ ಪಂದ್ಯದಲ್ಲಿ ಅಬ್ಬರಿಸಿದ ಬೆನ್ನಲ್ಲೇ ವೈಭವ್ ಭಾವುಕ ನುಡಿ! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಲಂಕಾದ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ ಪಂದ್ಯ
  • ಶ್ರೀಲಂಕಾ ಎ ತಂಡವನ್ನು 66 ರನ್​ಗಳ ಅಂತರದಿಂದ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ ಎ ತಂಡ
  • ಫೈನಲ್​ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿ ಭಾರತ ತಂಡದ ಗೆಲುವಿಗೆ ಕಾರಣರಾದ ವೈಭವ್​ ಸೂರ್ಯವಂಶಿ
  • ವಿಮರ್ಶಕರಿಗೆ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕವೇ ಖಡಕ್​ ಉತ್ತರ ನೀಡಿದ ವಂಡರ್​ ಕಿಡ್​ ವೈಭವ್​
Vaibhav Sooryavanshi : ಕ್ರೀಡಾ ಜಗತ್ತಿನಲ್ಲಿ ರಾತ್ರೋರಾತ್ರಿ ತಾರೆಗಳಾಗಿ ಹೊಳೆಯುವುದು ಎಷ್ಟು ಸತ್ಯವೋ, ಒಂದು ಸರಣಿಯ ವೈಫಲ್ಯದಿಂದ ಪಾತಾಳಕ್ಕೆ ಕುಸಿಯುವುದು ಅಷ್ಟೇ ನಿಜ ಎಂಬುದಕ್ಕೆ 15 ವರ್ಷದ ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ಇತ್ತೀಚಿನ ಸ್ಥಿತಿಯೇ ಸಾಕ್ಷಿ.
ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದ ಈ ಯುವ ಆಟಗಾರ, ಪ್ರಸಕ್ತ ತ್ರಿಕೋನ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಕೇವಲ 109 ರನ್ ಗಳಿಸಿ ತೀವ್ರ ಟೀಕೆಗೆ ಒಳಗಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು 'ನಿನ್ನ ಕೆಲಸ ಮುಗಿಯಿತು, ಇನ್ಮುಂದೆ ಬರೀ ಐಪಿಎಲ್ ಆಡಿಕೊಂಡಿರು' ಎಂದು ಕ್ರೂರವಾಗಿ ಟ್ರೋಲ್ ಮಾಡಿದ್ದರು.
ಆದರೆ, ಈ ಎಲ್ಲಾ ಟೀಕೆಗಳಿಗೆ ಭಾನುವಾರ ನಡೆದ ಶ್ರೀಲಂಕಾ 'ಎ' ತಂಡದ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೇವಲ 29 ಎಸೆತಗಳಲ್ಲಿ 94 ರನ್‌ಗಳ ಬಿರುಗಾಳಿಯ ಇನಿಂಗ್ಸ್ ಆಡುವ ಮೂಲಕ ಉತ್ತರ ನೀಡಿರುವ ವೈಭವ್, ತಮಗೆ ತಾವೇ ಸಾಟಿಯೆಂದು ಸಾಬೀತುಪಡಿಸಿ ವಿಮರ್ಶಕರ ಬಾಯಿ ಮುಚ್ಚಿಸಿದ್ದಾರೆ. ಅಲ್ಲದೆ, ಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡದ ಭರ್ಜರಿ ಗೆಲುವಿಗೆ ಸೂರ್ಯವಂಶಿ ಕಾರಣರಾಗಿದ್ದಾರೆ.
ವೈಭವ್ ಸೂರ್ಯವಂಶಿ ಅವರ ಈ ಉದಾಹರಣೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಬ್ಬ ಯುವ ಆಟಗಾರ ಎಂತಹ ಕಠಿಣ ಒತ್ತಡವನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಐಪಿಎಲ್ ಮುಗಿದ ತಕ್ಷಣವೇ ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಗಳಿಗೆ ವೈಭವ್ ಆಯ್ಕೆಯಾಗಲು ಅವರಲ್ಲಿದ್ದ ಅಸಾಧಾರಣ ಪ್ರತಿಭೆಯೇ ಮುಖ್ಯ ಕಾರಣವಾಗಿತ್ತು. ಆದರೆ, ಪ್ರಸ್ತುತ ಭಾರತ ತಂಡ ಆಡುತ್ತಿರುವ ತ್ರಿಕೋನ ಸರಣಿಯ ಲೀಗ್ ಹಂತದ ಪಂದ್ಯಗಳಲ್ಲಿ ಅವರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾದಾಗ, ವಿಮರ್ಶಕರು ಅವರ ಸಾಮರ್ಥ್ಯ ಮತ್ತು ಆಯ್ಕೆಯನ್ನೇ ನೇರವಾಗಿ ಪ್ರಶ್ನಿಸಲು ಆರಂಭಿಸಿದ್ದರು.
ಆದರೆ, ನಿಜವಾದ ಚಾಂಪಿಯನ್‌ಗಳು ಎಂತಹ ಕಠಿಣ ಒತ್ತಡದ ನಡುವೆಯೂ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂಬುದನ್ನು ವೈಭವ್ ಸೂರ್ಯವಂಶಿ ಈ ಪಂದ್ಯದ ಮೂಲಕ ಸಾಬೀತುಪಡಿಸಿದ್ದಾರೆ. ಫೈನಲ್ ಪಂದ್ಯ ಮುಗಿದ ಬಳಿಕ ಮಾತನಾಡಿದ ವೈಭವ್, ನನ್ನ ಮೇಲೆ ಭಾರಿ ಒತ್ತಡವಿತ್ತು ಎಂಬುದು ನಿಜ, ಆದರೆ ಈ ನಿರ್ಣಾಯಕ ಪಂದ್ಯದಲ್ಲಿ ಹೇಗಾದರೂ ಮಾಡಿ ಒಂದು ಅತ್ಯುತ್ತಮ ಇನಿಂಗ್ಸ್ ಆಡಲೇಬೇಕು ಎಂದು ನಾನು ಬಲವಾಗಿ ಸಂಕಲ್ಪ ಮಾಡಿದ್ದೆ ಎಂದು ಹೇಳುವ ಮೂಲಕ ತಮ್ಮ ಮನಸ್ಥಿತಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಹಿಂದಿನ ಪಂದ್ಯದಲ್ಲಿ ನಡೆದ ಘಟನೆಯಿಂದ ಬೇಸರಗೊಂಡಿದ್ದಾಗಿ ಮತ್ತು ಆ ಘಟನೆ ತನ್ನ ತುಂಬಾ ಕಾಡಿದ್ದಾಗಿ ವೈಭವ್​ ಹೇಳಿದ್ದಾರೆ.
ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ನೀಡಿದ ಪ್ರದರ್ಶನ ಕೇವಲ ರನ್ ಗಳಿಸುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಬದಲಿಗೆ ಅದು ತಮ್ಮ ಮೇಲಿದ್ದ ಟೀಕೆಗಳ ವಿರುದ್ಧ ಸಾಧಿಸಿದ ಮಹತ್ತರ ಜಯವಾಗಿತ್ತು. ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಲಿಸ್ಟ್-ಎ (List-A) ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಜಾಗತಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಪಂದ್ಯದ ಬಳಿಕ ಮಾತನಾಡಿದ ವೈಭವ್​, ನಾನು ಎಂದಿಗೂ ದಾಖಲೆಗಳಿಗಾಗಿ ಆಡುವುದಿಲ್ಲ, ನನ್ನ ವೈಯಕ್ತಿಕ ಸ್ಕೋರ್‌ಗಿಂತ ನಾನು ಗಳಿಸುವ ರನ್‌ಗಳು ತಂಡದ ಗೆಲುವಿಗೆ ಎಷ್ಟು ಸಹಕಾರಿಯಾಗುತ್ತವೆ ಎಂಬುದಷ್ಟೇ ನನಗೆ ಮುಖ್ಯ ಎಂದು ಹೇಳುವ ಮೂಲಕ ತಮ್ಮ ಪ್ರೌಢಿಮೆ ಹಾಗೂ ಕ್ರೀಡಾ ಸ್ಫೂರ್ತಿಯನ್ನು ಮೆರೆದಿದ್ದಾರೆ. ದಾಖಲೆಗಳ ಹಿಂದೆ ಬೀಳದೆ ತಂಡದ ಹಿತವನ್ನು ಮನಸ್ಸಿನಲ್ಲಿಟ್ಟುಕೊಂಡು ಆಡಿದ್ದರಿಂದಲೇ ಅವರ ಬ್ಯಾಟ್‌ನಿಂದ ಇಂತಹ ನಿರ್ಭೀತ ಇನಿಂಗ್ಸ್ ಮೂಡಿಬರಲು ಸಾಧ್ಯವಾಯಿತು ಮತ್ತು ತಮ್ಮ ಮೇಲಿದ್ದ ಆಯ್ಕೆಗಾರರ ನಂಬಿಕೆಯನ್ನು ಅವರು 100% ನಿಜವಾಗಿಸಿದ್ದಾರೆ.
ವೈಭವ್ ಸೂರ್ಯವಂಶಿ ಅವರ ಬ್ಯಾಟ್‌ನಿಂದ ಮೂಡಿಬಂದ ಈ ಸ್ಫೋಟಕ ಇನಿಂಗ್ಸ್ ಭಾರತೀಯ ಕ್ರಿಕೆಟ್‌ನ ಉಜ್ವಲ ಭವಿಷ್ಯಕ್ಕೆ ಭರವಸೆಯ ಕಿರಣವಾಗಿದೆ. ತಮಗೆ ಎದುರಾದ ಕಟು ಟೀಕೆಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದ ಈ 15 ವರ್ಷದ ಯುವ ಆಟಗಾರ, ಅದನ್ನೇ ತಮ್ಮ ಬ್ಯಾಟಿಂಗ್ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡ ಕೌಶಲಕ್ಕೆ ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದಾರೆ. ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಗಳಲ್ಲೂ ವೈಭವ್ ಇದೇ ಫಾರ್ಮ್ ಹಾಗೂ ರನ್ ಬೇಟೆಯನ್ನು ಮುಂದುವರಿಸಲಿ ಎಂದು ಸಮಸ್ತ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಶಿಸುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net