ಸೂರ್ಯ ಶಿಕಾರಿಗೆ ಲಂಕಾ ದಹನ: ತ್ರಿಕೋನ ಎ ಸರಣಿ ಗೆದ್ದು ಬೀಗಿದ ಭಾರತ, ಅಡಗಿತು ಸಿಂಹಳೀಯರ ಸೊಕ್ಕು! IND A vs SL A Final

ಸೂರ್ಯ ಶಿಕಾರಿಗೆ ಲಂಕಾ ದಹನ: ತ್ರಿಕೋನ ಎ ಸರಣಿ ಗೆದ್ದು ಬೀಗಿದ ಭಾರತ, ಅಡಗಿತು ಸಿಂಹಳೀಯರ ಸೊಕ್ಕು! IND A vs SL A Final
ಸೂರ್ಯ ಶಿಕಾರಿಗೆ ಲಂಕಾ ದಹನ: ತ್ರಿಕೋನ ಎ ಸರಣಿ ಗೆದ್ದು ಬೀಗಿದ ಭಾರತ, ಅಡಗಿತು ಸಿಂಹಳೀಯರ ಸೊಕ್ಕು! IND A vs SL A Final
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಲಂಕಾದ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ ಪಂದ್ಯ
  • ಶ್ರೀಲಂಕಾ ಎ ತಂಡವನ್ನು 66 ರನ್​ಗಳ ಅಂತರದಿಂದ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ ಎ ತಂಡ
  • ಫೈನಲ್​ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿ ಭಾರತ ತಂಡದ ಗೆಲುವಿಗೆ ಕಾರಣರಾದ ವೈಭವ್​ ಸೂರ್ಯವಂಶಿ
IND A vs SL A Final : ಭಾನುವಾರ (ಜೂನ್ 21) ಶ್ರೀಲಂಕಾದ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎ ತಂಡದ ವಿರುದ್ಧ ಭಾರತ ಎ ತಂಡವು 66 ರನ್‌ಗಳ ಭರ್ಜರಿ ಜಯ ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡವು ಎದುರಾಳಿಗಳಿಗೆ 378 ರನ್‌ಗಳ ಬೃಹತ್ ಗುರಿಯನ್ನು ನೀಡಿತ್ತು. ಆದರೆ, ಈ ಕಠಿಣ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಎ ತಂಡವು ಭಾರತೀಯ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿ 47.1 ಓವರ್‌ಗಳಲ್ಲಿ 311 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಶರಣಾಯಿತು.
ಭಾರತ ಎ ತಂಡದ ಈ ಐತಿಹಾಸಿಕ ಪ್ರಶಸ್ತಿ ಗೆಲುವಿನಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಪ್ರಮುಖ ಪಾತ್ರ ವಹಿಸಿದರು. ಫೈನಲ್ ಪಂದ್ಯದ ಒತ್ತಡದ ನಡುವೆಯೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್​, ಕೇವಲ 29 ಎಸೆತಗಳಲ್ಲಿ 92 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡುವ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಬಲವಾದ ಮುನ್ನುಡಿ ಬರೆದರು. ಅವರ ಈ ಬಿರುಸಿನ ಬ್ಯಾಟಿಂಗ್ ಪ್ರದರ್ಶನವೇ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಲು ಪ್ರಮುಖ ಕಾರಣವಾಯಿತು.
ಈ ತ್ರಿಕೋನ ಸರಣಿಯ ಲೀಗ್ ಹಂತದಲ್ಲಿ ಭಾರತ ಎ ತಂಡವು ಒಟ್ಟು ನಾಲ್ಕು ಅಂಕಗಳನ್ನು ಗಳಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದಿತ್ತು. ಮತ್ತೊಂದೆಡೆ, ಶ್ರೀಲಂಕಾ ಎ ತಂಡವು ಆರು ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಫೈನಲ್ ತಲುಪಿದ್ದರೆ, ಕೇವಲ ಎರಡು ಅಂಕ ಗಳಿಸಿದ ಅಫ್ಘಾನಿಸ್ತಾನ ಎ ತಂಡವು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಹೊರಬಿದ್ದಿತ್ತು. ಪ್ರಸಕ್ತ ಟೂರ್ನಿಯಲ್ಲಿ ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಮೂರನೇ ಬಾರಿಯಾಗಿದ್ದು, ಫೈನಲ್ ಪಂದ್ಯವು ತೀವ್ರ ಕುತೂಹಲ ಮೂಡಿಸಿತ್ತು.
ಭಾರತ ನೀಡಿದ 378 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಎ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಮೊದಲ ಪವರ್‌ಪ್ಲೇ ಅವಧಿಯಲ್ಲೇ ಲಂಕಾ ಪಡೆ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಭಾರತದ ಬೌಲರ್ ಯಶ್ ಠಾಕೂರ್ ಅತ್ಯುತ್ತಮ ದಾಳಿ ನಡೆಸಿ ನಿರೋಷನ್ ಡಿಕ್ವೆಲ್ಲಾ (25 ರನ್), ಅವಿಷ್ಕ ಫೆರ್ನಾಂಡೋ (3 ರನ್) ಮತ್ತು ನುವಾನಿಡು ಫೆರ್ನಾಂಡೋ (21 ರನ್) ಅವರ ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾದ ಆರಂಭಿಕ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಆರಂಭಿಕ ಆಘಾತದ ಬಳಿಕ ಸದೀರ ಸಮರವಿಕ್ರಮ ಮತ್ತು ನಾಯಕ ಸಹನ್ ಅರಾಚ್ಚಿಗೆ 4ನೇ ವಿಕೆಟ್‌ಗೆ 53 ರನ್‌ಗಳನ್ನು ಸೇರಿಸಿ ತಂಡಕ್ಕೆ ಆಸರೆಯಾಗಲು ಯತ್ನಿಸಿದರು. ಭರವಸೆ ಮೂಡಿಸಿದ್ದ ಸಮರವಿಕ್ರಮ 44 ಎಸೆತಗಳಲ್ಲಿ 9 ಬೌಂಡರಿ ಒಳಗೊಂಡ 52 ರನ್ ಬಾರಿಸಿದರೆ, ನಾಯಕ ಸಹನ್ ಅರಾಚ್ಚಿಗೆ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 38 ರನ್ ಕಾಣಿಕೆ ನೀಡಿದರು. ಆದರೆ, ಮತ್ತೊಬ್ಬ ಬ್ಯಾಟರ್ ರವಿಂದು ಫೆರ್ನಾಂಡೋ 19 ರನ್‌ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ನಾಯಕ ಸಹನ್ ಅರಾಚ್ಚಿಗೆ ಔಟಾದಾಗ ಶ್ರೀಲಂಕಾ ಎ ತಂಡವು 177 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಪೂರ್ಣ ಒತ್ತಡಕ್ಕೆ ಸಿಲುಕಿತು.
ಶ್ರೀಲಂಕಾ ಎ ತಂಡದ ಇನ್ನಿಂಗ್ಸ್‌ನಲ್ಲಿ ವನುಜ ಸಹಾನ್ (62 ರನ್, 69 ಎಸೆತ, 5 ಬೌಂಡರಿ) ಮತ್ತು ವಿಜಯಕಾಂತ್ ವ್ಯಾಸ್ಕಾಂತ್ (39 ರನ್) ಜೋಡಿಯು 7ನೇ ವಿಕೆಟ್‌ಗೆ 77 ರನ್‌ಗಳ ಜೊತೆಯಾಟವಾಡಿ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು, ಆದರೆ ವನುಜ ಅವರ ವಿಕೆಟ್ ಪತನದ ನಂತರ ಭಾರತದ ಗೆಲುವು ಸುಲಭವಾಯಿತು. ಬಳಿಕ ಬಂದ ದುಲಾಜ್ ಸಮುದಿತ (15 ರನ್) ಮತ್ತು ಮೊಹಮ್ಮದ್ ಶಿರಾಜ್ (21 ರನ್) ಹೆಚ್ಚಿನ ಪ್ರತಿರೋಧ ತೋರಲಿಲ್ಲ. ಭಾರತದ ಪರ ಬೌಲಿಂಗ್‌ನಲ್ಲಿ ವಿಪ್ರಾಜ್ ನಿಗಮ್ ಮತ್ತು ಯಶ್ ಠಾಕೂರ್ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಅನುಕುಲ್ ರಾಯ್ 2 ವಿಕೆಟ್ ಹಾಗೂ ತಿಲಕ್ ವರ್ಮಾ ಮತ್ತು ಅಶೋಕ್ ಶರ್ಮಾ ತಲಾ 1 ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾ ತಂಡದ ಆಸೆಗೆ ತಣ್ಣೀರೆರಚಿದರು.

ಅಬ್ಬರಿಸಿದ ಸೂರ್ಯವಂಶಿ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡವು ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 377 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಯುವ ಆಟಗಾರ ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ನೀಡಿದರು. ಕೇವಲ 3 ಓವರ್‌ಗಳಲ್ಲೇ ತಂಡದ ಮೊತ್ತ 50ರ ಗಡಿ ದಾಟುವಂತೆ ಮಾಡಿದ ಅವರು, ಮೊಹಮ್ಮದ್ ಶಿರಾಜ್ ಎಸೆದ ಪಂದ್ಯದ ಮೂರನೇ ಓವರ್‌ನಲ್ಲಿಯೇ 3 ಸಿಕ್ಸರ್ ಹಾಗೂ 2 ಬೌಂಡರಿ ಸೇರಿದಂತೆ ಭರ್ಜರಿ 26 ರನ್ ಚಚ್ಚಿದರು. ಇದೇ ತೂಫಾನ್ ಬ್ಯಾಟಿಂಗ್ ಮುಂದುವರಿಸಿದ ವೈಭವ್, ಕೇವಲ 11 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ ಅಬ್ಬರದ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕವೂ ಬೌಂಡರಿ-ಸಿಕ್ಸರ್‌ಗಳ ಮಳೆ ಹರಿಸಿದ ವೈಭವ್ ಸೂರ್ಯವಂಶಿ ಶತಕದತ್ತ ಮುನ್ನುಗ್ಗುತ್ತಿದ್ದರು. ಆದರೆ, ಶ್ರೀಲಂಕಾ ನಾಯಕ ಸಹನ್ ಅರಾಚ್ಚಿಗೆ ಎಸೆದ 9ನೇ ಓವರ್‌ನ 5ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ವಿಕೆಟ್ ಕೀಪರ್‌ಗೆ ಕೀಪರ್ ಕ್ಯಾಚ್ ನೀಡಿ ಔಟಾದರು. ಅವರು ಔಟಾಗುವಾಗ ಭಾರತದ ಮೊತ್ತ 9 ಓವರ್‌ಗಳ ಒಳಗೆ 132 ರನ್ ತಲುಪಿತ್ತು. ವೈಭವ್ ವಿಕೆಟ್ ಪತನದ ಬೆನ್ನಲ್ಲೇ ಉತ್ತಮವಾಗಿ ಆಡುತ್ತಿದ್ದ ಪ್ರಿಯಾಂಶ್ ಆರ್ಯ (39 ರನ್) ಕೂಡ ದುಲಾಜ್ ಸಮುದಿತಾಗೆ ವಿಕೆಟ್ ಒಪ್ಪಿಸಿದರು.
ಇದಾದ ಬಳಿಕ ನಾಯಕ ತಿಲಕ್ ವರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ಜೋಡಿ 3ನೇ ವಿಕೆಟ್‌ಗೆ 84 ರನ್ ಸೇರಿಸಿ ಇನಿಂಗ್ಸ್ ಮುನ್ನಡೆಸಿತು. ರುತುರಾಜ್ 40 ರನ್ ಗಳಿಸಿ ಮೊಹಮ್ಮದ್ ಶಿರಾಜ್‌ಗೆ ವಿಕೆಟ್ ಒಪ್ಪಿಸಿದರೆ, ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ತಿಲಕ್ ವರ್ಮಾ 90 ಎಸೆತಗಳಲ್ಲಿ 67 ರನ್ ಬಾರಿಸಿದರು. ಇವರಿಗೆ ಕುಮಾರ್ ಕುಶಾಗ್ರ (36 ರನ್) ಸಾಥ್ ನೀಡಿ 4ನೇ ವಿಕೆಟ್‌ಗೆ 63 ರನ್ ಸೇರಿಸಿದರು. ಕೊನೆಯಲ್ಲಿ ವಿಪ್ರಾಜ್ ನಿಗಮ್ (27 ರನ್), ನಿಶಾಂತ್ ಸಿಂಧು (16 ರನ್) ಅಲ್ಪ ರನ್ ಕಲೆಹಾಕಿದರೆ, ಅನುಕುಲ್ ರಾಯ್ ಕೇವಲ 15 ಎಸೆತಗಳಲ್ಲಿ 39 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 377ಕ್ಕೆ ತಲುಪಿಸಿದರು. ಶ್ರೀಲಂಕಾ ಪರ ಕುಗದಾಸ್ ಮಥುಲನ್, ವನುಜ ಸಹಾನ್ ಮತ್ತು ರವಿಂದು ಫೆರ್ನಾಂಡೋ ತಲಾ 2 ವಿಕೆಟ್ ಪಡೆದರು. ಅಂತಿಮವಾಗಿ ಭಾರತ ಎ ತಂಡ ಭರ್ಜರಿ ಗೆಲುವಿನೊಂದಿಗೆ ತ್ರಿಕೋನ ಎ ಸರಣಿಯನ್ನು ಗೆದ್ದು ಬೀಗಿತು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net