ವೈಭವ್ ಬದುಕಿನ ಅತ್ಯಂತ ದೊಡ್ಡ ಸುದ್ದಿ ಮೊದಲು ತಲುಪಿದ್ದು ಆ ಸ್ಪೆಷಲ್ ವ್ಯಕ್ತಿಗೆ!...ಭಾವುಕ ಕ್ಷಣ ಬಿಚ್ಚಿಟ್ಟ ವಂಡರ್​ ಕಿಡ್​ | Vaibhav Sooryavanshi

Vaibhav Sooryavanshi | ವೈಭವ್ ಬದುಕಿನ ಅತ್ಯಂತ ದೊಡ್ಡ ಸುದ್ದಿ ಮೊದಲು ತಲುಪಿದ್ದು ಆ ಸ್ಪೆಷಲ್ ವ್ಯಕ್ತಿಗೆ!...ಭಾವುಕ ಕ್ಷಣ ಬಿಚ್ಚಿಟ್ಟ ವಂಡರ್​ ಕಿಡ್
Vaibhav Sooryavanshi | ವೈಭವ್ ಬದುಕಿನ ಅತ್ಯಂತ ದೊಡ್ಡ ಸುದ್ದಿ ಮೊದಲು ತಲುಪಿದ್ದು ಆ ಸ್ಪೆಷಲ್ ವ್ಯಕ್ತಿಗೆ!...ಭಾವುಕ ಕ್ಷಣ ಬಿಚ್ಚಿಟ್ಟ ವಂಡರ್​ ಕಿಡ್
Published on
Vaibhav Sooryavanshi: 2026 ರ ಜುಲೈ 4 ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ದಿನವಾಗಿದೆ. ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಬಿಹಾರದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಟೀಮ್​ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಕೇವಲ 15 ವರ್ಷ 99 ದಿನಗಳ ಪ್ರಾಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವೈಭವ್, ಭಾರತದ ಪರ ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ, ಟೆಸ್ಟ್ ಆಡುವ ರಾಷ್ಟ್ರಗಳ ಪೈಕಿ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಪಾದಾರ್ಪಣೆಗಾರ ಎಂಬ ವಿಶ್ವ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಕ್ಯಾಪ್ ನೀಡಿದ ತಿಲಕ್ ವರ್ಮಾ ಹೇಳಿದ್ದೇನು..?

ಪಂದ್ಯ ಆರಂಭಕ್ಕೂ ಮುನ್ನ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಸ್ಟಾರ್ ಆಟಗಾರ ತಿಲಕ್ ವರ್ಮಾ ಇಂಡಿಯಾ ಕ್ಯಾಪ್ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಿಲಕ್ ವರ್ಮಾ, ಮೊದಲನೆಯದಾಗಿ, ಇದು ನಿನಗೆ ಮತ್ತು ನಿನ್ನ ಕುಟುಂಬಕ್ಕೆ ಅತ್ಯಂತ ಹೆಮ್ಮೆಯ ಕ್ಷಣ. ನಿನ್ನ ಹಿಂದೆ ಅವರು ತುಂಬಾ ಶ್ರಮಿಸಿದ್ದಾರೆ. ಕಠಿಣ ಪರಿಶ್ರಮದಿಂದಲೇ ಈ ಕ್ರಿಕೆಟ್ ಕ್ಯಾಪ್ ಗಳಿಸಿದ್ದೀಯಾ. ಇಲ್ಲಿ ಏನೂ ಬದಲಾಗುವುದಿಲ್ಲ, ಯಾವುದೇ ಭಯವಿಲ್ಲದೆ ಕ್ರಿಕೆಟ್ ಆಡು. ಸರಿಯಾದ ಮನೋಭಾವ ಮತ್ತು ನಗುಮುಖದೊಂದಿಗೆ ಆಟವನ್ನು ಆನಂದಿಸು ಎಂದು ಬೆನ್ನು ತಟ್ಟಿದರು.

ವೈಭವ್ ಮೊದಲು ವಿಷಯ ತಿಳಿಸಿದ್ದ್ಯಾರಿಗೆ ಗೊತ್ತಾ..?

ಭಾರತ ತಂಡದ ಕ್ಯಾಪ್ ಪಡೆದ ತಕ್ಷಣದ ಭಾವುಕ ಕ್ಷಣವನ್ನು ಬಿಸಿಸಿಐ (BCCI) ಜೊತೆ ಹಂಚಿಕೊಂಡ ವೈಭವ್, ತುಂಬಾ ಸಂತೋಷವಾಗುತ್ತಿದೆ. ಭಾರತದ ಪರ ಆಡುವುದು ಯಾವುದೇ ಭಾರತೀಯನಿಗೆ ಅತ್ಯಂತ ದೊಡ್ಡ ಹೆಮ್ಮೆಯ ವಿಷಯ. ಏಕೆಂದರೆ ಪ್ರತಿಯೊಬ್ಬ ಕ್ರಿಕೆಟಿಗನೂ ದೇಶವನ್ನು ಪ್ರತಿನಿಧಿಸಿ, ದೇಶಕ್ಕೆ ಹೆಮ್ಮೆ ತರಬೇಕೆಂದು ಬಯಸುತ್ತಾನೆ. ಕ್ಯಾಪ್ ಸಿಕ್ಕ ತಕ್ಷಣ ನಾನು ಮೊದಲು ನನ್ನ ರೂಮಿಗೆ ಹೋಗಿ ನನ್ನ ಜೊತೆಯಲ್ಲೇ ಇದ್ದ ತಂದೆಗೆ ಈ ವಿಷಯ ತಿಳಿಸಿದೆ. ಅವರನ್ನು ಬಿಟ್ಟರೆ ಬೇರೆ ಯಾರಿಗೂ ಮೊದಲು ಹೇಳಲಿಲ್ಲ. ಆ ಬಳಿಕ ನನ್ನ ತಾಯಿ ಮತ್ತು ಕೋಚ್ ರೋಮಿ ಸರ್‌ಗೆ ವಿಷಯ ತಿಳಿಸಿದೆ. ತಂದೆ ತುಂಬಾ ಸಂತೋಷಪಟ್ಟರು ಮತ್ತು ಯಾವುದೇ ಒತ್ತಡ ತೆಗೆದುಕೊಳ್ಳದೆ, ನಿನ್ನ ನೈಸರ್ಗಿಕ ಆಟವನ್ನು ಆಡು ಎಂದು ಧೈರ್ಯ ತುಂಬಿದರು ಎಂದು ವಂಡರ್​ ಕಿಡ್​ ತಿಳಿಸಿದ್ದಾರೆ.
ತಮ್ಮ ಚೊಚ್ಚಲ ಪಂದ್ಯದಲ್ಲೇ ವೈಭವ್ ಸೂರ್ಯವಂಶಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮನರಂಜನಾತ್ಮಕ ಆರಂಭ ನೀಡಿದರು. ಎದುರಿಸಿದ ಕೇವಲ 10 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 14 ರನ್ ಗಳಿಸಿದ ಅವರು, ವಿಲ್ ಜ್ಯಾಕ್ಸ್ ಬೌಲಿಂಗ್‌ನಲ್ಲಿ ಸ್ಟಂಪ್ ಔಟ್ ಆಗುವ ಮೂಲಕ ತಮ್ಮ ಬ್ಯಾಟಿಂಗ್ ಝಲಕ್​ಗೆ ತೆರೆ ಎಳೆದರು.

ಇದು ಅತ್ಯಂತ ಭಾವುಕ ಕ್ಷಣ ಎಂದ ಕೋಚ್ ಮನೀಶ್ ಓಜಾ

ವೈಭವ್​ರ ಈ ಸಾಧನೆಯ ಕುರಿತು ಮಾತನಾಡಿದ ಅವರ ಬಾಲ್ಯದ ಕೋಚ್ ಮನೀಶ್ ಓಜಾ, ವೈಭವ್ ಭಾರತ ತಂಡಕ್ಕೆ ಪದಾರ್ಪಣೆ ಮಾಡಿರುವುದು ಅತ್ಯಂತ ಹೆಮ್ಮೆಯ ಮತ್ತು ಭಾವುಕ ಕ್ಷಣವಾಗಿದೆ. ಅವನ ಕಠಿಣ ಪರಿಶ್ರಮ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ತೋರಿದ ಸ್ಥಿರ ಪ್ರದರ್ಶನವೇ ಇವತ್ತು ಅವನಿಗೆ ಈ ದೊಡ್ಡ ಅವಕಾಶವನ್ನು ತಂದುಕೊಟ್ಟಿದೆ ಎಂದು ಶ್ಲಾಘಿಸಿದ್ದಾರೆ. ಅಲ್ಲದೆ, ಈಗಾಗಲೇ ಐಪಿಎಲ್ ಮತ್ತು ಅಂಡರ್-19 ವಿಶ್ವಕಪ್‌ನಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿರುವಂತೆಯೇ, ವೈಭವ್ ಈಗ ಅಂತರರಾಷ್ಟ್ರೀಯ ಮಟ್ಟದಲ್ಲೂ ಅದ್ಭುತವಾಗಿ ಯಶಸ್ವಿಯಾಗಲಿದ್ದಾನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net