

ಓಮಾನ್: ಅಲ್ ಅಮರತ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸಿ ಕೇವಲ ಒಂದು ವಿಕೆಟ್‌ನ ರೋಚಕ ಗೆಲುವಿನೊಂದಿದೆ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಪಾಕಿಸ್ತಾನ ನೀಡಿದ್ದ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭದಿಂದಲೂ ದೊಡ್ಡ ಸವಾಲು ಎದುರಾಗಿತ್ತು. ನಾಯಕ ಲಕ್ಷ್ಯ ರಾಜೇಶ್ ರೈಚಂದಾನಿ ಮತ್ತು ಆರ್ಯವೀರ್ ಸೆಹ್ವಾಗ್ ತಲಾ ಅರ್ಧಶತಕಗಳನ್ನು ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಮಧ್ಯಮ ಕ್ರಮಾಂಕದಲ್ಲಿ ಮನಲ್ ಚೌಹಾಣ್ 47 ರನ್‌ಗಳ ವೇಗದ ಇನ್ನಿಂಗ್ಸ್ ಆಡಿ ರನ್ ವೇಗಕ್ಕೆ ಬಲ ತುಂಬಿದರು.
ಆದರೆ, ಪಾಕ್ ಬೌಲರ್‌ಗಳು ನಿಯಮಿತ ಅಂತರದಲ್ಲಿ ವಿಕೆಟ್ ಕಬಳಿಸುತ್ತಾ ಪಂದ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸಿದರು. 9 ವಿಕೆಟ್‌ಗಳು ಪತನಗೊಂಡಾಗ ಭಾರತದ ಕೈಯಿಂದ ಟ್ರೋಫಿ ಜಾರಿತು ಎಂದೇ ಎಲ್ಲರೂ ಭಾವಿಸಿದ್ದರು.
ಒತ್ತಡದ ಸನ್ನಿವೇಶದಲ್ಲಿ ಕ್ರೀಸ್‌ಗೆ ಇಳಿದ ಮೋಹಿತ್ ಉಲ್ವಾ ಅಕ್ಷರಶಃ ಆಪದ್ಬಾಂಧವನಾದರು. ಪಾಕ್ ಬೌಲರ್‌ಗಳ ಬೆವರಿಳಿಸಿದ ಉಲ್ವಾ, ಕೇವಲ 25 ಎಸೆತಗಳಲ್ಲಿ ಅಜೇಯ 45 ರನ್ ಚಚ್ಚಿದರು. 180ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಇವರು 4 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಚಚ್ಚಿದರು.
ಇವರಿಗೆ ಕೊನೆಯ ವಿಕೆಟ್‌ನಲ್ಲಿ ಚಿಗುರುಪತಿ ವೆಂಕಟ 8 ಎಸೆತಗಳಲ್ಲಿ ಅಜೇಯ 11 ರನ್ ಗಳಿಸಿ ಸಾಥ್ ನೀಡಿದರು. ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಭಾರತ 1 ವಿಕೆಟ್‌ನ ಅವಿಸ್ಮರಣೀಯ ಗೆಲುವು ದಾಖಲಿಸಿ ಟ್ರೋಫಿಗೆ ಮುತ್ತಿಕ್ಕಿತು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ, ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿತು. ಆರಂಭಿಕ ಬ್ಯಾಟರ್ಗಳಾದ ಉಸ್ಮಾನ್ ಖಾನ್ ಮತ್ತು ಅಬ್ದುಲ್ ಖಾದಿರ್ ಪವರ್ಪ್ಲೇ ಸೇರಿದಂತೆ ಇನ್ನುಳಿದ ಓವರ್ಗಳಲ್ಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ನಂತರ ಕ್ರೀಸ್‌ಗೆ ಬಂದ ಅಬ್ದುಲ್ ಖಾದಿರ್ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಉಸ್ಮಾನ್ ಖಾನ್ ಜತೆಗೂಡಿ ರನ್ ವೇಗ ಹೆಚ್ಚಿಸಿದ ಅವರು, ಕೇವಲ 54 ಎಸೆತಗಳಲ್ಲಿ 80 ರನ್ ಸಿಡಿಸಿದರು. ಈ ಜೋಡಿ ಮಹತ್ವದ ರನ್‌ಗಳ ಜತೆಯಾಟವನ್ನೂ ನೀಡಿತು. ಉಸ್ಮಾನ್ ತಮ್ಮ ಶತಕದ ಮೂಲಕ ಪಾಕಿಸ್ತಾನದ ಇನ್ನಿಂಗ್ಸ್‌ಗೆ ಬಲ ತುಂಬಿದರು.
ಇನ್ನೊಂದೆಡೆ, ಪಾಕಿಸ್ತಾನದ ನಾಯಕ ಫರ್ಹಾನ್ ಯೂಸಫ್ ಅರ್ಧಶತಕದ ಕೊಡುಗೆ ನೀಡುವ ಮೂಲಕ ಕ್ಯಾಪ್ಟನ್ ಇನ್ನಿಂಗ್ಸ್ ತೋರಿದರು. ಈ ಮೂಲಕ ನಿಯಮಿತ 50 ಓವರ್ಗಳಲ್ಲಿ ಪಾಕಿಸ್ತಾನ 9 ವಿಕೆಟ್ ಕಳೆದುಕೊಂಡು ಪಾಕಿಸ್ತಾನ 337 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಇನ್ನು, ಟೀಮ್ ಇಂಡಿಯಾ ಪರ ಕಾವ್ಯಾ ಪಟೇಲ್ 4 ವಿಕೆಟ್ ಪಡೆದು ಮಿಂಚಿದರೆ, ಚಿಗುರುಪತಿ ವೆಂಕಟ 3 ಮತ್ತು ಅರ್ಜುನ್ ರಾಜ್‌ಪುತ್ 1 ವಿಕೆಟ್ ಪಡೆದರು. ಮತ್ತೊಂದು ರನ್ಔಟ್ ಮೂಲಕ ಸಿಕ್ಕಿತ್ತು, (ಏಜೆನ್ಸೀಸ್).