ಸೂರತ್ ಬಟ್ಟೆ ಗೋದಾಮಿನಲ್ಲಿ ಅಗ್ನಿ ಅವಘಡ: ಮುಗಿಲೆತ್ತರಕ್ಕೆ ಚಿಮ್ಮಿದ ದಟ್ಟ ಹೊಗೆ; ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ! Surat Fire Accident

A massive fire at a textile warehouse in Surat, and fire tenders engaged in extinguishing the blaze.
ಸೂರತ್ ಬಟ್ಟೆ ಗೋದಾಮಿನಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡ ಮತ್ತು ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ವಾಹನಗಳು
Published on: 

ಸೂರತ್​: ಶನಿವಾರ (ನ.14) ಸೂರತ್‌ನ ಖರ್ವಾಸ ಪ್ರದೇಶದಲ್ಲಿರುವ ಬೃಹತ್ ಬಟ್ಟೆ ಸಂಗ್ರಹಣಾ ಗೋದಾಮೊಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿದೆ. ಕೆಲ ದಿನಗಳ ಹಿಂದಷ್ಟೇ ಅಹಮದಾಬಾದ್ ಸಮೀಪದ ಚಾಕೊಲೇಟ್ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಓರ್ವ ಕಾರ್ಮಿಕ ಪ್ರಾಣ ಕಳೆದುಕೊಂಡಿದ್ದ. ಆ ಆಘಾತ ಮಾಸುವ ಮುನ್ನವೇ ಸೂರತ್‌ನಲ್ಲಿ ಮತ್ತೊಂದು ದೊಡ್ಡ ಅಗ್ನಿ ಅವಘಡ ಸಂಭವಿಸಿದೆ.

ಸೂರತ್ ಗೋದಾಮಿನಲ್ಲಿ ಬೆಂಕಿಯ ರುದ್ರನರ್ತನ!

ಶನಿವಾರ ಸೂರತ್‌ನ ಖರ್ವಾಸ ಪ್ರದೇಶದ ಬಟ್ಟೆ ಗೋದಾಮಿನಲ್ಲಿ ಅಚಾನಕ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಗೋದಾಮಿನಲ್ಲಿ ಅಪಾರ ಪ್ರಮಾಣದ ಬಟ್ಟೆಗಳು ಮತ್ತು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ವಸ್ತುಗಳು ಇದ್ದ ಕಾರಣ, ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡವನ್ನು ಆವರಿಸಿಕೊಂಡಿದೆ. ಕಪ್ಪು ಹೊಗೆ ಮುಗಿಲೆತ್ತರಕ್ಕೆ ಚಿಮ್ಮುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಬೆಂಕಿ ನಂದಿಸಲು 60 ಸಿಬ್ಬಂದಿ, ಜೆಸಿಬಿಗಳ ಹರಸಾಹಸ

ವಿಷಯ ತಿಳಿಯುತ್ತಿದ್ದಂತೆ 10 ರಿಂದ 12 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಸುಮಾರು 50 ರಿಂದ 60 ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಂಕಿಯ ತೀವ್ರತೆ ಎಷ್ಟಿದೆಯೆಂದರೆ, ಗೋದಾಮಿನ ಒಳಭಾಗಕ್ಕೆ ನೀರು ಹಾಯಿಸಲು ಅಡ್ಡಿಯಾದ ಹಿನ್ನೆಲೆಯಲ್ಲಿ ಎರಡು ಜೆಸಿಬಿ ಯಂತ್ರಗಳನ್ನು ಸ್ಥಳಕ್ಕೆ ತರಿಸಿ ಗೋಡೆಗಳನ್ನು ಒಡೆಯುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ ಉಪ ಅಗ್ನಿಶಾಮಕ ಅಧಿಕಾರಿ ವಿಜಯ್ ಸೋಲಂಕಿ, "ಬೆಂಕಿ ಬಹಳ ವ್ಯಾಪಕವಾಗಿ ಹರಡಿದ್ದು ಸದ್ಯಕ್ಕೆ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ನಿರಂತರವಾಗಿ ನೀರು ಹಾಯಿಸುವ ಕೆಲಸ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ, ಅದೃಷ್ಟವಶಾತ್ ಇದುವರೆಗೆ ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ.

Also Read
20 ಲಕ್ಷ ನಕಲಿ ಇ-ಮೇಲ್​: ಪಾಕ್-ಬಾಂಗ್ಲಾ ನಂಟು; ಕಾನ್ಪುರದಲ್ಲಿ ಸೈಬರ್​ ಕಿಲಾಡಿ ಅರೆಸ್ಟ್! Fake Gmail
A massive fire at a textile warehouse in Surat, and fire tenders engaged in extinguishing the blaze.

ಚಾಕೊಲೇಟ್ ಕಾರ್ಖಾನೆ ದುರಂತದ ಕರಾಳ ನೆನಪು!

ಸೂರತ್ ಘಟನೆಗೂ ಮುನ್ನ, ನವೆಂಬರ್ 7 ರಂದು ಬಾವ್ಲಾ-ಅಹಮದಾಬಾದ್ ರಸ್ತೆಯಲ್ಲಿರುವ 'ಲೀಮಾಕ್ ಕಂಪನಿ' ಘಟಕದಲ್ಲಿ ಇಂತಹದ್ದೇ ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಚಾಕೊಲೇಟ್ ಉತ್ಪಾದನೆ ನಡೆಯುತ್ತಿದ್ದ ಈ ಕಾರ್ಖಾನೆಯ ಮೂರನೇ ಮಹಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು.

ಬೆಂಕಿಯ ತೀವ್ರತೆ ಹೆಚ್ಚಾದಂತೆ ಸಾನಂದ್, ಬಾವ್ಲಾ ಮತ್ತು ಅಹಮದಾಬಾದ್‌ನಿಂದ ಹಲವಾರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಸತತ ಮೂರು ಗಂಟೆಗಳ ಕಾಲ ಹರಸಾಹಸ ಪಟ್ಟು, ನಿರಂತರವಾಗಿ ನೀರು ಹಾಯಿಸುವ ಮೂಲಕ ಬೆಂಕಿಯನ್ನು ಹತೋಟಿಗೆ ತಂದಿದ್ದರು. ಆದರೆ, ಈ ದುರ್ಘಟನೆಯಲ್ಲಿ ಓರ್ವ ವ್ಯಕ್ತಿ ಸಜೀವ ದಹನವಾಗಿ ಮೃತಪಟ್ಟಿರುವುದು ದೃಢಪಟ್ಟಿತ್ತು, (ಏಜೆನ್ಸೀಸ್​).