20 ಲಕ್ಷ ನಕಲಿ ಇ-ಮೇಲ್​: ಪಾಕ್-ಬಾಂಗ್ಲಾ ನಂಟು; ಕಾನ್ಪುರದಲ್ಲಿ ಸೈಬರ್​ ಕಿಲಾಡಿ ಅರೆಸ್ಟ್! Fake Gmail

Ankit, a cyber fraudster from Kanpur, arrested for creating 2 million fake emails.
20 ಲಕ್ಷ ನಕಲಿ ಇಮೇಲ್ ಸೃಷ್ಟಿಸಿ ಬಂಧನಕ್ಕೊಳಗಾದ ಕಾನ್ಪುರದ ಸೈಬರ್ ವಂಚಕ ಅಂಕಿತ್​
Published on: 

ಕಾನ್ಪುರ​​: ದೇಶದ ಹಲವು ಸ್ಥಳಗಳಲ್ಲಿ ಅದರಲ್ಲೂ ಶಾಲಾ-ಕಾಲೇಜು, ಬಾಲಿವುಡ್​ ನಟರು, ಸಂಗೀತಗಾರರ ಕಾರ್ಯಕ್ರಮಗಳಲ್ಲಿ ಬಾಂಬ್​ ಸ್ಪೋಟಿಸುವ ಕುರಿತು ಬೆದರಿಕೆ ಇ-ಮೇಲ್​ಗಳು ನಿರಂತರವಾಗಿ ಬರುತ್ತಿದ್ದವು. ಈ ಬೆದರಿಕೆ ಇ-ಮೇಲ್​ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದರ ಜಾಡು ಹಿಡಿದು ಹೊರಟ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳಕ್ಕೆ ಕಾನ್ಪುರದಲ್ಲಿ ಸೈಬರ್ ಕಿಲಾಡಿವೊಬ್ಬ ಸಿಕ್ಕಿಬಿದ್ದಿದ್ದಾನೆ.

ಲ್ಯಾಪ್‌ಟಾಪ್ ತೆರೆದ ಎಟಿಎಸ್‌ಗೆ ಕಾದಿತ್ತು ಶಾಕ್!

ಅಕ್ಟೋಬರ್ 28 ರಂದು ಖಚಿತ ಮಾಹಿತಿ ಮೇರೆಗೆ ಎಟಿಎಸ್ ತಂಡ ಬಂಧಿತ ಆರೋಪಿ ಅಂಕಿತ್ ಶಂಖ್ವಾರ್ ಮನೆಗೆ ನುಗ್ಗಿತ್ತು. ಆತನ ಬಳಿಯಿದ್ದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ವಶಪಡಿಸಿಕೊಂಡು ಪರಿಶೀಲಿಸಿದ ಅಧಿಕಾರಿಗಳಿಗೆ ಅಕ್ಷರಶಃ ಶಾಕ್ ಆಗಿದೆ. ಏಕೆಂದರೆ, ಈತ ನಕಲಿ ಗುರುತುಗಳನ್ನು ಬಳಸಿ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ನಕಲಿ ಜಿಮೇಲ್ (Gmail) ಖಾತೆಗಳನ್ನು ಸೃಷ್ಟಿಸಿದ್ದಾನೆ.

ಪಾಕಿಸ್ತಾನ, ಬಾಂಗ್ಲಾದೇಶಕ್ಕೆ ಇಮೇಲ್ ಮಾರಾಟ!

2021ರಿಂದಲೇ ಈ ದಂಧೆಗಿಳಿದಿದ್ದ ಅಂಕಿತ್, ವೈಫೈ ಮತ್ತು ಪ್ರಾಕ್ಸಿ ನೆಟ್‌ವರ್ಕ್ ಬಳಸಿ ಯಾರಿಗೂ ಅನುಮಾನ ಬಾರದಂತೆ ಲಕ್ಷಾಂತರ ಇಮೇಲ್ ಐಡಿಗಳನ್ನು ತಯಾರಿಸುತ್ತಿದ್ದ. ಬಳಿಕ ಫೇಸ್‌ಬುಕ್ ಗ್ರೂಪ್‌ಗಳ ಮೂಲಕ ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ ಮತ್ತು ಈಜಿಪ್ಟ್ ದೇಶದವರಿಗೆ ಇವುಗಳನ್ನು ಮಾರಾಟ ಮಾಡುತ್ತಿದ್ದ. ಕೇವಲ ಇಮೇಲ್ ಐಡಿ ಮಾತ್ರವಲ್ಲ, ಪಾಸ್‌ವರ್ಡ್, ರಿಕವರಿ ಮೇಲ್ ಮತ್ತು ಸೆಕ್ಯುರಿಟಿ ಕೋಡ್‌ಗಳ ಸಮೇತ ಎಕ್ಸೆಲ್ ಶೀಟ್ ತಯಾರಿಸಿ ವಾಟ್ಸಾಪ್ ಮೂಲಕ ಕಳುಹಿಸುತ್ತಿದ್ದ. ಇದಕ್ಕೆ ಪ್ರತಿಯಾಗಿ ಕ್ರಿಪ್ಟೋಕರೆನ್ಸಿ ಮೂಲಕ ಲಕ್ಷಾಂತರ ರೂಪಾಯಿ ಹಣ ಪಡೆಯುತ್ತಿದ್ದ.

ಬಾಂಬ್ ಬೆದರಿಕೆ ಲಿಂಕ್ ಸಿಕ್ಕಿದ್ದು ಹೇಗೆ?

ಅಕ್ಟೋಬರ್ 12 ರಂದು 'ಖಲಿಸ್ತಾನ್ ನ್ಯಾಷನಲ್ ಆರ್ಮಿ-ಬಬ್ಬರ್ ಖಾಲ್ಸಾ' ಹೆಸರಿನಲ್ಲಿ ಶಾಲೆಗಳಿಗೆ ಮತ್ತು ಗಾಯಕ ದಿಲ್ಜಿತ್ ದೋಸಾಂಜ್ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಹಾಗೆಯೇ ಅಕ್ಟೋಬರ್ 23 ರಂದು ಮುಂಬೈ ಮೇಯರ್ ಕಚೇರಿಗೂ ಬೆದರಿಕೆ ಮೇಲ್ ಹೋಗಿತ್ತು. ತನಿಖಾಧಿಕಾರಿಗಳು ಈ ಇಮೇಲ್‌ಗಳ ಜಾಡು ಹಿಡಿದಾಗ, ಅದು ಕಾನ್ಪುರದ ಅಂಕಿತ್ ಬಳಿ ಬಂದು ನಿಂತಿತ್ತು.

Also Read
ಕ್ಯಾನ್ಸರ್​​ಗೆ ಲಸಿಕೆ ಕಂಡುಹಿಡಿದ ರಷ್ಯಾ? ನಾಲ್ಕೇ ತಿಂಗಳಲ್ಲಿ ಕರಗಿದ ಗೆಡ್ಡೆ; ಮೊದಲ ರೋಗಿಯಲ್ಲೇ ಪವಾಡಸದೃಶ ಫಲಿತಾಂಶ! Cancer Vaccine
Ankit, a cyber fraudster from Kanpur, arrested for creating 2 million fake emails.

ವಿಚಾರಣೆ ವೇಳೆ ಬಾಂಗ್ಲಾದೇಶದ ಪ್ರಜೆ ಅಲಾಮಿನ್ ಇಸ್ಲಾಂ ಎಂಬಾತನ ಹೆಸರು ಬಯಲಾಗಿದೆ. ಫೇಸ್‌ಬುಕ್ ಮೂಲಕ ಅಂಕಿತ್‌ನನ್ನು ಸಂಪರ್ಕಿಸಿದ್ದ ಅಲಾಮಿನ್, 6,000 ಕ್ರಿಪ್ಟೋಕರೆನ್ಸಿ ನೀಡಿ ನಕಲಿ ಇಮೇಲ್‌ಗಳನ್ನು ಖರೀದಿಸಿದ್ದ. ಅದೇ ಇಮೇಲ್ ಬಳಸಿ ದೇಶದಲ್ಲಿ ಆತಂಕ ಸೃಷ್ಟಿಸಲು ಬಾಂಬ್ ಬೆದರಿಕೆ ಹಾಕಲಾಗಿತ್ತು ಎಂಬ ಸತ್ಯ ಹೊರಬಿದ್ದಿದೆ.

ಗೂಗಲ್‌ಗೆ ಪತ್ರ ಬರೆದ ಎಟಿಎಸ್!

ಸದ್ಯ ಈ 20 ಲಕ್ಷ ನಕಲಿ ಖಾತೆಗಳು ಭಯೋತ್ಪಾದಕರು ಅಥವಾ ಸೈಬರ್ ವಂಚಕರ ಕೈಸೇರಿ ಮತ್ತಷ್ಟು ಅನಾಹುತ ಸೃಷ್ಟಿಸುವುದನ್ನು ತಡೆಯಲು ಯುಪಿ ಎಟಿಎಸ್, ಕ್ಯಾಲಿಫೋರ್ನಿಯಾದಲ್ಲಿರುವ ಗೂಗಲ್ ಕಚೇರಿಗೆ ಪತ್ರ ಬರೆದು ಈ ಎಲ್ಲಾ ಖಾತೆಗಳನ್ನು ಬ್ಲಾಕ್ ಮಾಡುವಂತೆ ಮನವಿ ಮಾಡಿದೆ. ಸದ್ಯ ಆರೋಪಿ ಅಂಕಿತ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲು ಸಿದ್ಧತೆ ನಡೆದಿದೆ, (ಏಜೆನ್ಸೀಸ್​).