ಕ್ಯಾನ್ಸರ್​​ಗೆ ಲಸಿಕೆ ಕಂಡುಹಿಡಿದ ರಷ್ಯಾ? ನಾಲ್ಕೇ ತಿಂಗಳಲ್ಲಿ ಕರಗಿದ ಗೆಡ್ಡೆ; ಮೊದಲ ರೋಗಿಯಲ್ಲೇ ಪವಾಡಸದೃಶ ಫಲಿತಾಂಶ! Cancer Vaccine

A new cancer vaccine developed by Russia
ರಷ್ಯಾ ಅಭಿವೃದ್ಧಿಪಡಿಸಿದ ಹೊಸ ಕ್ಯಾನ್ಸರ್ ಲಸಿಕೆ
Published on: 

ಮಾಸ್ಕೋ: ರಷ್ಯಾ ಅಭಿವೃದ್ಧಿಪಡಿಸಿರುವ ಹೊಸ 'ಕ್ಯಾನ್ಸರ್ ಲಸಿಕೆ' ಆರಂಭಿಕ ಹಂತದಲ್ಲೇ ಪವಾಡಸದೃಶ ಫಲಿತಾಂಶ ನೀಡಿದ್ದು, ಮಾರಣಾಂತಿಕ ಕ್ಯಾನ್ಸರ್ ವಿರುದ್ಧದ ವೈದ್ಯಕೀಯ ಲೋಕದ ಹೋರಾಟಕ್ಕೆ ಈಗ ದೊಡ್ಡ ಬಲ ಸಿಕ್ಕಂತಾಗಿದೆ. ಈ ಲಸಿಕೆ ಪಡೆದ ಮೊದಲ ರೋಗಿಯ ದೇಹದಲ್ಲಿದ್ದ ಕ್ಯಾನ್ಸರ್ ಗೆಡ್ಡೆಗಳು ಸಂಪೂರ್ಣವಾಗಿ ಕಣ್ಮರೆಯಾಗಿದ್ದು, ಕಳೆದ ನಾಲ್ಕು ತಿಂಗಳ ಚಿಕಿತ್ಸೆಯಲ್ಲಿ ಯಾವುದೇ ಹೊಸ ಗೆಡ್ಡೆಗಳು ಕಾಣಿಸಿಕೊಂಡಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಮೊದಲ ರೋಗಿಯಲ್ಲಿ ಕಂಡುಬಂದ ಅಚ್ಚರಿಯ ಬದಲಾವಣೆ!

ರಷ್ಯಾದ ಪ್ರಸಿದ್ಧ ಗಮಲೇಯ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಅಲೆಕ್ಸಾಂಡರ್ ಗಿಂಟ್ಸ್‌ಬರ್ಗ್ ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ನಮ್ಮ ಮೊದಲ ರೋಗಿ ಈಗ ಸಂಪೂರ್ಣ ಆರೋಗ್ಯವಾಗಿದ್ದಾರೆ. ಇಲ್ಲಿಯವರೆಗೆ ಅವರ ದೇಹದಲ್ಲಿ ಯಾವುದೇ ಹೊಸ ಕ್ಯಾನ್ಸರ್ ಬೆಳವಣಿಗೆಗಳು ಪತ್ತೆಯಾಗಿಲ್ಲ" ಎಂದು ಅವರು ಹೇಳಿದ್ದಾರೆ.

ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಹರಡಿದ್ದ 60 ವರ್ಷದ ವ್ಯಕ್ತಿಯೊಬ್ಬರಿಗೆ ಕಳೆದ ಏಪ್ರಿಲ್‌ನಲ್ಲಿ ಮಾಸ್ಕೋದ ಹರ್ಜೆನ್ ಆಂಕೊಲಾಜಿ ಸಂಶೋಧನಾ ಸಂಸ್ಥೆಯಲ್ಲಿ 'ನಿಯೋಂಕೊವಾಕ್' (Neoncovac) ಎಂಬ ಈ ಲಸಿಕೆಯನ್ನು ನೀಡಲಾಗಿತ್ತು. ಜುಲೈ ವೇಳೆಗೆ ಅವರ ದೇಹದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ವೃದ್ಧಿಯಾಗಿರುವುದು ಕಂಡುಬಂದಿದೆ. ಸದ್ಯ ವೈದ್ಯರು ಪ್ರತಿ ತಿಂಗಳು ಹೈ-ರೆಸಲ್ಯೂಶನ್ CT ಸ್ಕ್ಯಾನ್ ಮೂಲಕ ಅವರ ದೇಹವನ್ನು ಪರೀಕ್ಷಿಸುತ್ತಿದ್ದು, ಮುಂದಿನ ಮೂರು ವರ್ಷಗಳ ಕಾಲ ನಿಗಾ ವಹಿಸಲಿದ್ದಾರೆ.

Russia ಈ ಕ್ಯಾನ್ಸರ್ ಲಸಿಕೆ ಹೇಗೆ ಕೆಲಸ ಮಾಡುತ್ತದೆ?

ಇದು ಸಾಮಾನ್ಯ ಕ್ಯಾನ್ಸರ್​ ಲಸಿಕೆಯಲ್ಲ, ಬದಲಾಗಿ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕವಾಗಿ ತಯಾರಿಸಲಾಗುವ 'mRNA' ತಂತ್ರಜ್ಞಾನದ ಲಸಿಕೆಯಾಗಿದೆ. ರೋಗಿಯ ದೇಹದಲ್ಲಿರುವ ಕ್ಯಾನ್ಸರ್ ಕೋಶಗಳು ಮತ್ತು ಆರೋಗ್ಯಕರ ಅಂಗಾಂಶಗಳನ್ನು ಅಧ್ಯಯನ ಮಾಡಿ ಈ ಲಸಿಕೆಯನ್ನು ಸಿದ್ಧಪಡಿಸಲಾಗುತ್ತದೆ. ಇದು ದೇಹದ ರೋಗನಿರೋಧಕ ವ್ಯವಸ್ಥೆಗೆ ಕ್ಯಾನ್ಸರ್ ಕೋಶಗಳನ್ನು ಗುರುತಿಸಿ, ಅವುಗಳ ಮೇಲೆ ದಾಳಿ ಮಾಡಿ ನಾಶಪಡಿಸುವಂತೆ ತರಬೇತಿ ನೀಡುತ್ತದೆ. ಇದೊಂದು ಮೂಲಭೂತವಾಗಿ ಹೊಸ ಕ್ಯಾನ್ಸರ್ ಚಿಕಿತ್ಸಾ ವಿಧಾನ ಎಂದು ತಜ್ಞರು ಬಣ್ಣಿಸಿದ್ದಾರೆ.

Also Read
'ಅವಳು' ಅಂತ ಕರೆಯಬೇಡಿ, ನಾನು 'ನಾನ್-ಬೈನರಿ': ತಮ್ಮ ಲಿಂಗ ಗುರುತಿನ ಬಗ್ಗೆ ಸ್ಪಷ್ಟನೆ ನೀಡಿದ ನೇಹಾ ಬೋರಾ! Neha Bora
A new cancer vaccine developed by Russia

ಅಡ್ಡಪರಿಣಾಮಗಳಿವೆಯೇ? ಮುಂದೇನು?

ಲಸಿಕೆ ಪಡೆದ ಮೊದಲ ರೋಗಿಗೆ ಆಗಾಗ್ಗೆ 38 ರಿಂದ 38.5 ಡಿಗ್ರಿ ಸೆಲ್ಸಿಯಸ್‌ವರೆಗೆ ಜ್ವರ ಕಾಣಿಸಿಕೊಳ್ಳುತ್ತಿತ್ತು, ಆದರೆ ಸಾಮಾನ್ಯ ಮಾತ್ರೆಗಳಿಂದ ಕೆಲವೇ ಗಂಟೆಗಳಲ್ಲಿ ಅದು ಕಡಿಮೆಯಾಗುತ್ತಿತ್ತು. ವಿಶೇಷವೆಂದರೆ, ಚಿಕಿತ್ಸೆ ಪಡೆಯುತ್ತಿರುವ ಎರಡನೇ ರೋಗಿಗೆ ಜ್ವರವೂ ಕಾಣಿಸಿಕೊಂಡಿಲ್ಲ. ಇದುವರೆಗೆ ಒಟ್ಟು 6 ಮಂದಿಗೆ ಈ ಲಸಿಕೆ ನೀಡಲಾಗಿದ್ದು, ವರ್ಷಾಂತ್ಯದ ವೇಳೆಗೆ 20 ಜನರಿಗೆ ಚಿಕಿತ್ಸೆ ನೀಡುವ ಗುರಿ ಹೊಂದಲಾಗಿದೆ.

ಚಿಕಿತ್ಸೆಯ ವೆಚ್ಚ ಎಷ್ಟು? ರಷ್ಯಾ ಸರ್ಕಾರದ ಉಚಿತ ಕೊಡುಗೆ!

ಈ ವಿಶೇಷ ಲಸಿಕೆ ಮತ್ತು ಪೂರ್ಣ ಚಿಕಿತ್ಸಾ ಕೋರ್ಸ್‌ಗೆ ಸುಮಾರು 7 ಮಿಲಿಯನ್ ರೂಬಲ್ಸ್ (ಸುಮಾರು 80 ಲಕ್ಷ ರೂಪಾಯಿ) ವೆಚ್ಚವಾಗುತ್ತದೆ. ಆದರೆ ರಷ್ಯಾದ ನಾಗರಿಕರಿಗೆ ಕಡ್ಡಾಯ ಆರೋಗ್ಯ ವಿಮೆಯ ಅಡಿಯಲ್ಲಿ ಇದು ಸಂಪೂರ್ಣ ಉಚಿತವಾಗಿ ಸಿಗಲಿದೆ. ಈ ವರ್ಷ ಮತ್ತು ಮುಂದಿನ ವರ್ಷ ಒಟ್ಟು 120 ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರ ಹಣ ಮೀಸಲಿಟ್ಟಿದೆ.

ಇಷ್ಟೇ ಅಲ್ಲದೆ, ಮೇದೋಜ್ಜೀರಕ ಗ್ರಂಥಿ, ಮೂತ್ರಪಿಂಡ, ಮೂತ್ರಕೋಶ, ಕರುಳು ಮತ್ತು ಶ್ವಾಸಕೋಶದ ಕ್ಯಾನ್ಸರ್‌ಗಳಿಗೂ ಇದೇ ಮಾದರಿಯ ಲಸಿಕೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, 2027ರ ವೇಳೆಗೆ ಇವುಗಳಿಗೆ ಅನುಮೋದನೆ ಸಿಗುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ರಷ್ಯಾದ ಈ ಸಂಶೋಧನೆಯು ಜಗತ್ತಿನಾದ್ಯಂತ ಇರುವ ಕೋಟ್ಯಂತರ ಕ್ಯಾನ್ಸರ್ ರೋಗಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).