ಐಪಿಎಲ್​ನಲ್ಲಿ ಮತ್ತೆ ಹೆಚ್ಚಾಗಲಿದೆ ತಂಡಗಳ ಸಂಖ್ಯೆ: 10 ರಿಂದ 12 ಕ್ಕೆ ಹೆಚ್ಚಿಸಲು ಬಿಸಿಸಿಐ ಮಾಸ್ಟರ್ ಪ್ಲಾನ್! IPL Team Increase

ಐಪಿಎಲ್​ನಲ್ಲಿ ಮತ್ತೆ ತಂಡಗಳ ಏರಿಕೆ ಸಾಧ್ಯತೆ
ಐಪಿಎಲ್​ನಲ್ಲಿ ಮತ್ತೆ ತಂಡಗಳ ಏರಿಕೆ ಸಾಧ್ಯತೆ
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ನಲ್ಲಿ ಮತ್ತೆ ತಂಡಗಳ ಏರಿಕೆ ಸಾಧ್ಯತೆ
  • ತಂಡಗಳ ಸಂಖ್ಯೆಯನ್ನು 10 ರಿಂದ 12 ಕ್ಕೆ ಹೆಚ್ಚಿಸಲು ಬಿಸಿಸಿಐ ಪ್ಲಾನ್​
  • 2028 ರ ನಂತರ ಹೊಸ ತಂಡಗಳ ಸೇರ್ಪಡೆ ಸಾಧ್ಯತ
ಮುಂಬೈ: ಏಂಟು ತಂಡಗಳಿಂದ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಪ್ರಸ್ತುತ ಹತ್ತು ತಂಡಗಳು ಟ್ರೋಫಿಗಾಗಿ ಸೆಣೆಸಾಡುತ್ತಿದ್ದು, ಈ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ (IPL Team Increase) ಸೂಚನೆಯೊಂದು ಹೊರಬಿದ್ದಿದೆ.
ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರು ಲೀಗ್‌ನ ಭವಿಷ್ಯದ ಬಗ್ಗೆ ಮಹತ್ವದ ಸುಳಿವು ನೀಡಿದ್ದು, ಇನ್ಮುಂದೆ ಐಪಿಎಲ್ ಕೇವಲ ಎರಡು ತಿಂಗಳ ಆಟವಾಗಿ ಉಳಿಯದೆ, ಫುಟ್‌ಬಾಲ್ ಮಾದರಿಯಂತೆ ವರ್ಷದ ಬಹುತೇಕ ಅವಧಿಯಲ್ಲಿ ನಡೆಯು ಟೂರ್ನಿಯಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಈ ನಿರ್ಧಾರಕ್ಕೆ ಕಾರಣವೇನು?

ಐಪಿಎಲ್ ಈಗಾಗಲೇ ವಿಶ್ವದ ಎರಡನೇ ಅತ್ಯಂತ ಮೌಲ್ಯಯುತ ಕ್ರೀಡಾ ಲೀಗ್ ಆಗಿ ಬೆಳೆದು ನಿಂತಿದೆ. ಒಂದು ಐಪಿಎಲ್ ಪಂದ್ಯದ ಮೌಲ್ಯವು ಅಮೆರಿಕದ ಎನ್‌ಎಫ್‌ಎಲ್ (NFL) ನಂತಹ ದೈತ್ಯ ಲೀಗ್‌ಗಳಿಗೂ ಪೈಪೋಟಿ ನೀಡುತ್ತಿದೆ. ಹೂಡಿಕೆದಾರರು ಐಪಿಎಲ್‌ನಲ್ಲಿ ಹಣ ಹೂಡಲು ತುದಿಗಾಲಲ್ಲಿ ನಿಂತಿದ್ದಾರೆ.
ಅರುಣ್ ಧುಮಾಲ್ ಅವರ ಪ್ರಕಾರ, ಐಪಿಎಲ್‌ನಲ್ಲಿ ಹೂಡಿಕೆ ಮಾಡಿದರೆ ಲಾಭ ಗ್ಯಾರಂಟಿ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಈ ಬದಲಾವಣೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ ಸಮಸ್ಯೆಯನ್ನು ಉಂಟುಮಾಡುತ್ತಿದೆ. ಇದರ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೆವೆ ಎಂದು ಅವರು ಹೇಳಿದ್ದಾರೆ.
2027 ರ ನಂತರ ಬದಲಾವಣೆ ಸಾಧ್ಯತೆ
ಸದ್ಯದ ಲೆಕ್ಕಾಚಾರದ ಪ್ರಕಾರ 2026ರ ಐಪಿಎಲ್ ಕೂಡ 74 ಪಂದ್ಯಗಳಿಗೇ ಸೀಮಿತವಾಗಲಿದೆ. ಯಾಕೆಂದರೆ 2027ರ ಏಪ್ರಿಲ್ ವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿ (FTP) ಫುಲ್ ಪ್ಯಾಕ್ ಆಗಿದೆ. ಜೊತೆಗೆ ಜೂನ್ ತಿಂಗಳಲ್ಲಿ ಭಾರತದಲ್ಲಿ ಮಳೆಗಾಲ ಶುರುವಾಗುವುದರಿಂದ ಪಂದ್ಯಗಳನ್ನು ನಡೆಸುವುದು ಕಷ್ಟವಾಗುತ್ತದೆ.
ಆದರೆ, 2027ರಲ್ಲಿ ಈಗಿರುವ ಮಾಧ್ಯಮ ಹಕ್ಕುಗಳ ಒಪ್ಪಂದ ಮುಗಿಯಲಿದೆ. ಆನಂತರ, ಅಂದರೆ 2028ರಿಂದ ಐಪಿಎಲ್ 12 ತಂಡಗಳ ಬೃಹತ್ ಟೂರ್ನಿಯಾಗಿ ಬದಲಾಗುವ ಸಾಧ್ಯತೆಯಿದೆ. ಆಗ ಪಂದ್ಯಗಳ ಸಂಖ್ಯೆ 74 ರಿಂದ 94 ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಫುಟ್‌ಬಾಲ್ ಹಾದಿಯಲ್ಲಿ ಕ್ರಿಕೆಟ್​!

ಯುರೋಪಿಯನ್ ಫುಟ್‌ಬಾಲ್ ಲೀಗ್‌ಗಳಲ್ಲಿ ಆಟಗಾರರು ತಮ್ಮ ಕ್ಲಬ್‌ಗಳಿಗಾಗಿ ವರ್ಷಪೂರ್ತಿ ಆಡುತ್ತಾರೆ ಮತ್ತು ದೇಶಕ್ಕಾಗಿ ಕೇವಲ ಪ್ರಮುಖ ಟೂರ್ನಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಕ್ರಿಕೆಟ್ ಕೂಡ ಈಗ ಅದೇ ಹಾದಿಯಲ್ಲಿದೆ. ಐಪಿಎಲ್ ಕ್ರಮೇಣ ವರ್ಷದ ಹೆಚ್ಚಿನ ಸಮಯವನ್ನು ಆಕ್ರಮಿಸಿಕೊಳ್ಳಲಿದ್ದು, ದ್ವಿಪಕ್ಷೀಯ ಸರಣಿಗಳಿಗಿಂತ ಲೀಗ್ ಕ್ರಿಕೆಟ್‌ಗೇ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ ಎನ್ನವುದು ಕ್ರಿಕೆಟ್​ ಪರಿಣಿತರ ಅಭಿಪ್ರಾಯವಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net