INDvNZ: ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗಳ ಭರ್ಜರಿ ಜಯ ಗಳಿಸಿ, 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಪಂದ್ಯದ ದ್ವಿತೀಯ ಇನ್ನಿಂಗ್ಸ್ನಲ್ಲಿ ಕೇವಲ 6 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ನಿರ್ಗಮಿಸಿದರೂ, ಹಿರಿಯ ಆಟಗಾರ ರೋಹಿತ್ ಶರ್ಮಾ ಮಾಡಿದ ಅತ್ಯದ್ಭುತ ಕಾರ್ಯವೊಂದು ಇಡೀ ಪಂದ್ಯದ ಗತಿಯನ್ನೇ ನಮ್ಮತ್ತ ಬದಲಿಸಿತು ಎಂದು ನಾಯಕ ಶುಭಮಾನ್ ಗಿಲ್ ಪ್ರಶಂಸಿಸಿದ್ದಾರೆ.
ನ್ಯೂಜಿಲೆಂಡ್ ನೀಡಿದ 186 ರನ್ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಮಳೆ ಇನ್ನಿಲ್ಲದಂತೆ ಕಾಡಿತು. ಡಕ್ವರ್ಥ್ ಲೂಯಿಸ್ (DLS) ನಿಯಮದಂತೆ ಭಾರತದ ಗುರಿಯನ್ನು ಮೊದಲು 40 ಓವರ್ಗಳಲ್ಲಿ 167 ರನ್ಗಳಿಗೆ ಹಾಗೂ ನಂತರ 32 ಓವರ್ಗಳಲ್ಲಿ 143 ರನ್ಗಳಿಗೆ ಮರುನಿಗದಿಪಡಿಸಲಾಯಿತು. ವಿರಾಟ್ ಕೊಹ್ಲಿ ಅದ್ಭುತ 74 ರನ್ಗಳ (51 ಎಸೆತ) ನೆರವಿನಿಂದ ಭಾರತ 22.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಈ ಗುರಿಯನ್ನು ತಲುಪಿತು.
ಪಂದ್ಯದ ನಂತರ ಮಾತನಾಡಿದ ನಾಯಕ ಶುಭಮಾನ್ ಗಿಲ್, ತಂಡದ ಬೌಲಿಂಗ್ ಮತ್ತು ಫೀಲ್ಡಿಂಗ್ ಅತ್ಯುತ್ತಮವಾಗಿತ್ತು. ಪ್ರಮುಖವಾಗಿ ಡೆರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಜೋಡಿ ಕ್ರೀಸ್ನಲ್ಲಿದ್ದಾಗ ಪಂದ್ಯ ಕಿವೀಸ್ ಕಡೆಗೆ ವಾಲುತಿತ್ತು. ಆದರೆ ರೋಹಿತ್ ಭಾಯ್ ಮಾಡಿದ ಆ ಅದ್ಭುತ ರನ್-ಔಟ್ ಪಂದ್ಯದ ಗತಿಯನ್ನೇ ಸಂಪೂರ್ಣವಾಗಿ ಬದಲಿಸಿತು. ಈ ಇಬ್ಬರು ಬ್ಯಾಟ್ಸ್ಮನ್ಗಳು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದನ್ನು ನಾವು ನೋಡಿದ್ದೆವು. ಹಾಗಾಗಿ ಆ ವಿಕೆಟ್ ಪಂದ್ಯಕ್ಕೆ ದೊಡ್ಡ ತಿರುವು ನೀಡಿತು ಎಂದು ಗಿಲ್ ತಿಳಿಸಿದರು.
ಆಕ್ಲೆಂಡ್ನ ಪರಿಸ್ಥಿತಿಯನ್ನು ಸದುಪಯೋಗಪಡಿಸಿಕೊಂಡ ಯುವ ವೇಗಿಗಳಾದ ಅನ್ಶುಲ್ ಕಂಬೋಜ್ (10 ಓವರ್ಗಳಲ್ಲಿ 22/2) ಹಾಗೂ ಗುರ್ನೂರ್ ಬ್ರಾರ್ (9.2 ಓವರ್ಗಳಲ್ಲಿ 44/3) ಅವರ ಬೌಲಿಂಗ್ ಪ್ರದರ್ಶನವನ್ನು ಗಿಲ್ ಮುಕ್ತಕಂಠದಿಂದ ಶ್ಲಾಘಿಸಿದರು. ಅನ್ಶುಲ್ ಈ ರೀತಿಯ ವಾತಾವರಣಕ್ಕೆ ಹೇಳಿಮಾಡಿಸಿದ ಬೌಲರ್, ಹೊಸ ಮತ್ತು ಹಳೆಯ ಚೆಂಡಿನಲ್ಲಿ ಸೀಮ್ ಮೂವ್ಮೆಂಟ್ ತರುವ ಚಾಕಚಕ್ಯತೆ ಅವರಲ್ಲಿದೆ. ಇನ್ನು ವಿಕೆಟ್ನಿಂದ ಬೌಲರ್ಗಳಿಗೆ ಹೆಚ್ಚಿನ ನೆರವು ಸಿಗದಿದ್ದಾಗ ಗುರ್ನೂರ್ ತಮ್ಮ ವೇಗ ಮತ್ತು ಹೆಚ್ಚುವರಿ ಬೌನ್ಸ್ ಮೂಲಕ ಎದುರಾಳಿಗಳನ್ನು ಕಟ್ಟಿಹಾಕಿದರು ಎಂದು ಗಿಲ್ ಅಭಿಪ್ರಾಯಪಟ್ಟರು.
ಮಳೆಯಿಂದಾಗಿ ಪದೇ ಪದೆ ಪಂದ್ಯ ಸ್ಥಗಿತಗೊಂಡಿದ್ದು ಬ್ಯಾಟ್ಸ್ಮನ್ಗಳಿಗೆ ಸವಾಲಾಗಿತ್ತು ಎಂದು ಗಿಲ್ ಒಪ್ಪಿಕೊಂಡರು. ಕ್ರೀಸ್ನಲ್ಲಿ ನೆಲೆ ಕಂಡುಕೊಂಡ ನಂತರ ಮಳೆ ಬಂದರೆ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಮಳೆಯ ನಂತರ ಪಿಚ್ ವೇಗವಾಗಿ ಬೌನ್ಸ್ ಆಗಲು ಪ್ರಾರಂಭಿಸಿತು. ಆದರೆ ವಿರಾಟ್ ಕೊಹ್ಲಿ ಅವರು ಬ್ಯಾಟಿಂಗ್ ಮಾಡಿದ ರೀತಿ ನಮ್ಮ ಮೇಲಿದ್ದ ಒತ್ತಡವನ್ನು ಸಂಪೂರ್ಣವಾಗಿ ಕಡಿಮೆ ಮಾಡಿತು ಎಂದರು. ಕೊಹ್ಲಿ ಮತ್ತು ಗಿಲ್ (37) ನಡುವಿನ 114 ರನ್ಗಳ ಜೊತೆಯಾಟ ಭಾರತದ ಗೆಲುವನ್ನು ಸುಲಭಗೊಳಿಸಿತು.
ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆದ 5 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಡಿಎಲ್ಎಸ್ (DLS) ನಿಯಮದಡಿ 5 ವಿಕೆಟ್ಗಳ ಸುಲಭ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಭಾರತೀಯ ವೇಗಿಗಳ ದಾಳಿಗೆ ತತ್ತರಿಸಿ 185 ರನ್ಗೆ ಆಲೌಟ್ ಆಯಿತು. ಟೀಮ್ ಇಂಡಿಯಾ ಪರ ಅರ್ಶ್ದೀಪ್ ಸಿಂಗ್ 4 ವಿಕೆಟ್ ಪಡೆದರೆ, ಅನ್ಶುಲ್ ಕಂಬೋಜ್ (10 ಓವರ್ಗಳಲ್ಲಿ 22 ರನ್ಗೆ 2 ವಿಕೆಟ್) ಅತ್ಯಂತ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿದರು. ಕಿವೀಸ್ ಪರ ಟಿಮ್ ಸೀಫರ್ಟ್ (38) ಮತ್ತು ಬ್ಲೇರ್ ಟಿಕ್ನರ್ (34) ಗರಿಷ್ಠ ರನ್ ಕಲೆಹಾಕಿದರು.
ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರ ರೋಹಿತ್ ಶರ್ಮಾ (೦) ಬೇಗ ನಿರ್ಗಮಿಸಿದರೂ, ವಿರಾಟ್ ಕೊಹ್ಲಿ (74 ರನ್, 51 ಎಸೆತ) ಹಾಗೂ ಶುಭಮಾನ್ ಗಿಲ್ (37) ನಡುವಿನ 113 ರನ್ಗಳ ಜೊತೆಯಾಟ ತಂಡಕ್ಕೆ ಆಸರೆಯಾಯಿತು. ಕೊಹ್ಲಿ ನಿರ್ಗಮನದ ನಂತರ ಸಣ್ಣ ಆತಂಕ ಎದುರಾಯಿತಾದರೂ, ಕೊನೆಯಲ್ಲಿ ಕೆ ಎಲ್ ರಾಹುಲ್ ಮತ್ತು ನಮನ್ ಧೀರ್ ಸೇರಿ ಗುರಿ ತಲುಪಿಸಿ ಸರಣಿಯಲ್ಲಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು(ಏಜೆನ್ಸೀಸ್).