ಚೇಸ್ ಮಾಸ್ಟರ್ ವಿರಾಟ್ ಕಿರೀಟಕ್ಕೆ ಮತ್ತೊಂದು ಗರಿ: ಕ್ರಿಕೆಟ್​ ದೇವರನ್ನೇ ಮೀರಿಸಿದ ಕಿಂಗ್​!...ಏನದು ದಾಖಲೆ? | Virat Kohli

ಕ್ರಿಕೆಟ್​ ದೇವರನ್ನೇ ಮೀರಿಸಿದ ಕಿಂಗ್​
ಕ್ರಿಕೆಟ್​ ದೇವರನ್ನೇ ಮೀರಿಸಿದ ಕಿಂಗ್​
Published on: 

Virat Kohli: ಭಾರತೀಯ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ರನ್ ಚೇಸ್ ಮಾಡುವಾಗ ಅತಿ ಹೆಚ್ಚು ರನ್ ಗಳಿಸಿದ್ದ ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನು ಕೊಹ್ಲಿ ಮುರಿದರು. ನ್ಯೂಜಿಲೆಂಡ್ ವಿರುದ್ಧ ಆಕ್ಲೆಂಡ್‌ನ ಐಕಾನಿಕ್ ಈಡನ್ ಪಾರ್ಕ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಈ ಮಹತ್ವದ ಮೈಲಿಗಲ್ಲನ್ನು ತಲುಪಿದರು.

ಗುರುವಾರ (ನವೆಂಬರ್ 5) ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿರುವ ಕಿಂಗ್​ ಕೊಹ್ಲಿ, ಕಿವೀಸ್ ವಿರುದ್ಧದ ಈ ಪಂದ್ಯದಲ್ಲಿ ಕಣಕ್ಕಳಿಯುವ ಮುನ್ನ ಸಚಿನ್ ದಾಖಲೆ ಮುರಿಯಲು ಕೇವಲ 54 ರನ್‌ಗಳ ಅಗತ್ಯವಿತ್ತು. ಪಂದ್ಯದ ಆರಂಭದಿಂದಲೂ ಉತ್ತಮ ಲಯದಲ್ಲಿದ್ದ ಕೊಹ್ಲಿ, ತಾವೆದುರಿಸಿದ 39ನೇ ಎಸೆತದಲ್ಲಿ 54ನೇ ರನ್ ಕಲೆಹಾಕುವ ಮೂಲಕ ಸಚಿನ್ ತೆಂಡೂಲ್ಕರ್ ಅವರ 8,720 ರನ್‌ಗಳ ದಾಖಲೆಯನ್ನು ಹಿಂದಿಕ್ಕಿ ಏಕದಿನ ರನ್ ಚೇಸ್‌ನ ನಂಬರ್ ಒನ್ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಪ್ರಸ್ತುತ ವಿರಾಟ್ ಕೊಹ್ಲಿ ಒಟ್ಟು 176 ಏಕದಿನ ಪಂದ್ಯಗಳ 169 ಇನ್ನಿಂಗ್ಸ್‌ಗಳಲ್ಲಿ ಈವರೆಗೆ 8,722 ರನ್‌ಗಳನ್ನು ಕಲೆಹಾಕಿದ್ದಾರೆ. ಈ ವಿಶೇಷ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿ ಮತ್ತೊಬ್ಬ ದಿಗ್ಗಜ ರೋಹಿತ್ ಶರ್ಮಾ ಇದ್ದಾರೆ. ಹಿಟ್​​ಮ್ಯಾನ್​ 167 ಮ್ಯಾಚ್‌ಗಳ 163 ಇನ್ನಿಂಗ್ಸ್‌ಗಳಲ್ಲಿ ಒಟ್ಟು 6,801 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

Also Read
ವಿರಾಟ್ ಕೊಹ್ಲಿ ಅಬ್ಬರದ ಅರ್ಧಶತಕ: ಕಿವೀಸ್​ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ಭರ್ಜರಿ ಜಯ, ಸರಣಿ ಶುಭಾರಂಭ! India vs New Zealand 1st ODI
ಕ್ರಿಕೆಟ್​ ದೇವರನ್ನೇ ಮೀರಿಸಿದ ಕಿಂಗ್​

ಸಚಿನ್ ತೆಂಡೂಲ್ಕರ್ ಅವರ ಈ ವಿಶ್ವದಾಖಲೆಯನ್ನು ಮುರಿಯುವುದರ ಜೊತೆಗೆ, ವಿರಾಟ್ ಕೊಹ್ಲಿ ವಿದೇಶಿ ನೆಲದ ಏಕದಿನ ಪಂದ್ಯಗಳಲ್ಲಿ ಬರೊಬ್ಬರಿ 50 ಅರ್ಧ ಶತಕಗಳನ್ನು ಪೂರ್ಣಗೊಳಿಸಿ ಮತ್ತೊಂದು ಮೈಲಿಗಲ್ಲು ತಲುಪಿದರು. ಇದಲ್ಲದೆ, ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಸ್ಟ್ರೇಲಿಯಾದ ದಂತಕಥೆ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದಾರೆ. ಪಾಂಟಿಂಗ್ 1995 ರಿಂದ 2011ರ ನಡುವೆ ಕಿವೀಸ್ ವಿರುದ್ಧ 51 ಏಕದಿನ ಪಂದ್ಯಗಳಲ್ಲಿ 1,971 ರನ್ ಗಳಿಸಿದ್ದರು(ಏಜೆನ್ಸೀಸ್​).

ಮ್ಯಾಚ್​ ರಿಪೋರ್ಟ್!

ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ 5 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಡಿಎಲ್‌ಎಸ್ (DLS) ನಿಯಮದಡಿ 5 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಭಾರತೀಯ ವೇಗಿಗಳ ದಾಳಿಗೆ ತತ್ತರಿಸಿ 185 ರನ್​ಗೆ ಆಲೌಟ್ ಆಯಿತು. ಟೀಮ್​ ಇಂಡಿಯಾ ಪರ ಅರ್ಶ್‌ದೀಪ್ ಸಿಂಗ್ 4 ವಿಕೆಟ್ ಪಡೆದರೆ, ಅನ್ಶುಲ್ ಕಂಬೋಜ್ (10 ಓವರ್‌ಗಳಲ್ಲಿ 22 ರನ್‌ಗೆ 2 ವಿಕೆಟ್) ಅತ್ಯಂತ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿದರು. ಕಿವೀಸ್ ಪರ ಟಿಮ್ ಸೀಫರ್ಟ್ (38) ಮತ್ತು ಬ್ಲೇರ್ ಟಿಕ್ನರ್ (34) ಗರಿಷ್ಠ ರನ್ ಕಲೆಹಾಕಿದರು.

ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ ಪರ ಆರಂಭಿಕ ಆಟಗಾರ ರೋಹಿತ್ ಶರ್ಮಾ (೦) ಬೇಗ ನಿರ್ಗಮಿಸಿದರೂ, ವಿರಾಟ್ ಕೊಹ್ಲಿ (74 ರನ್, 51 ಎಸೆತ) ಹಾಗೂ ಶುಭಮನ್ ಗಿಲ್ (37) ನಡುವಿನ 113 ರನ್‌ಗಳ ಜೊತೆಯಾಟ ತಂಡಕ್ಕೆ ಆಸರೆಯಾಯಿತು. ಕೊಹ್ಲಿ ನಿರ್ಗಮನದ ನಂತರ ಸಣ್ಣ ಆತಂಕ ಎದುರಾಯಿತಾದರೂ, ಕೊನೆಯಲ್ಲಿ ಕೆ ಎಲ್​ ರಾಹುಲ್ ಮತ್ತು ನಮನ್ ಧೀರ್ ಸೇರಿ ಗುರಿ ತಲುಪಿಸಿ ಸರಣಿಯಲ್ಲಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು(ಏಜೆನ್ಸೀಸ್​).