

ವೆಲ್ಲಿಂಗ್ಟನ್: ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್ ಸದ್ಯ ಲವ್ ಮೂಡ್ನಲ್ಲಿದ್ದಾರೆ. ಕ್ರಿಕೆಟ್ ನಡುವೆ ತಮ್ಮ ಪ್ರೇಯಸಿ, ನಟಿ ಹಾಗೂ ಮಾಡೆಲ್ ಆಗಿರುವ ಸಮ್ರೀನ್ ಕೌರ್ ( Samreen Kaur ) ಅವರೊಂದಿಗೆ ಅರ್ಷದೀಪ್ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಭಾಗವಾಗಿರುವ ಅರ್ಷದೀಪ್, ಕೀವೀಸ್ ನಾಡಿನಲ್ಲೇ ಅತ್ಯಂತ ಸಮ್ರೀನ್ ಅವರಿಗೆ ಉಂಗುರ ತೊಡಿಸಿ, ರೋಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ್ದಾರೆ. 11.11.2026 ರಂದು ನಡೆದ ಈ ಶುಭ ಘಟನೆಯ ಫೋಟೋಗಳನ್ನು ಸಮ್ರೀನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ, ಕ್ರೀಡಾಲೋಕ ಹಾಗೂ ಚಿತ್ರರಂಗದಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.
"ಜೀವನ ನಮಗೆ ನೀಡಬಹುದಾದ ಎಲ್ಲದಕ್ಕಿಂತ ಹೆಚ್ಚಾಗಿ, ನಾವು ಒಬ್ಬರಿಗೊಬ್ಬರು ಸಿಕ್ಕಿರುವುದಕ್ಕೆ ನನಗೆ ಅತ್ಯಂತ ಸಂತೋಷವಿದೆ. ಜೀವನಪೂರ್ತಿ ಒಂದಾಗಿ ಬಾಳಲು ಹೆಜ್ಜೆ ಇಡುತ್ತಿದ್ದೇವೆ (Hi Fiance)" ಎಂಬ ಭಾವುಕ ಸಾಲುಗಳೊಂದಿಗೆ ಸಮ್ರೀನ್ ಅವರು ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಂದಹಾಗೆ, ಈ ಜೋಡಿಯ ಲವ್ ಕಹಾನಿ ಬಗ್ಗೆ ಕಳೆದ ಐಪಿಎಲ್ (IPL 2026) ಸರಣಿಯ ವೇಳೆ ಭಾರಿ ವದಂತಿಗಳು ಹರಿದಾಡಿದ್ದವು. ಧರ್ಮಶಾಲಾದಲ್ಲಿ ಇಬ್ಬರೂ ಕೈಕೈ ಹಿಡಿದು ನಡೆಯುತ್ತಿದ್ದ ವಿಡಿಯೋಗಳು ಮತ್ತು ಪಂಜಾಬ್ ಕಿಂಗ್ಸ್ ಪಂದ್ಯಗಳ ವೇಳೆ ಸಮ್ರೀರ್ ಕೌರ್ ಗ್ಯಾಲರಿಯಲ್ಲಿ ನಿಂತು ಹುರಿದುಂಬಿಸುತ್ತಿದ್ದ ದೃಶ್ಯಗಳು ವೈರಲ್ ಆಗಿದ್ದವು. ಆ ಬಳಿಕ ಜುಲೈ 26 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರೂ ಒಟ್ಟಿಗಿರುವ ಫೋಟೋ ಹಂಚಿಕೊಳ್ಳುವ ಮೂಲಕ ಅರ್ಷದೀಪ್ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದರು.
ಅರ್ಷದೀಪ್ ಅವರ ಮನಗೆದ್ದ ಸಮ್ರೀನ್ ಕೌರ್ ಜಮ್ಮು ಮತ್ತು ಕಾಶ್ಮೀರ ಮೂಲದವರಾಗಿದ್ದು, ನಟಿ ಮತ್ತು ಗ್ಲಾಮರಸ್ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. 2018ರ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಜಮ್ಮು-ಕಾಶ್ಮೀರವನ್ನು ಪ್ರತಿನಿಧಿಸಿ ಫೈನಲಿಸ್ಟ್ ಆಗಿದ್ದ ಸಮ್ರೀನ್, ಬಾಲಿವುಡ್‌ನ '83' ಸಿನಿಮಾ, ಜೀ5 ನ 'ನೇಲ್ ಪೋಲಿಶ್' ವೆಬ್ ಸರಣಿ ಹಾಗೂ 'ಸರ್ದಾರ್ ಜಿ 2' ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಅಷ್ಟೇ ಅಲ್ಲದೆ, ಗುರು ರಾಂಧವಾ, ಬಾದ್‌ಶಾ ಹಾಗೂ ಜುಬಿನ್ ನೌಟಿಯಾಲ್ ಅವರ ಜನಪ್ರಿಯ ಮ್ಯೂಸಿಕ್ ವಿಡಿಯೋಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್ ಕಿತ್ತ ಬಳಿಕ ಅರ್ಷದೀಪ್ ಮಾಡಿದ ವಿಶಿಷ್ಟ ಸಂಭ್ರಮಾಚರಣೆಯೂ ತಮ್ಮ ಪ್ರೇಯಸಿಗಾಗಿ ಮಾಡಿದ್ದು ಎಂದು ಪಂದ್ಯದ ನಂತರ ಬಹಿರಂಗಪಡಿಸಿದ್ದರು.
ಈ ನಿಶ್ಚಿತಾರ್ಥದ ಸುದ್ದಿ ಹೊರಬೀಳುವ ಕೆಲವೇ ಗಂಟೆಗಳ ಮುನ್ನ ಅರ್ಷದೀಪ್ ಸಿಂಗ್ ಅವರ ಐಪಿಎಲ್ ವೃತ್ತಿಜೀವನದಲ್ಲೂ ಅತ್ಯಂತ ದೊಡ್ಡ ತಿರುವು ಲಭಿಸಿದೆ. ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ನಡೆದ ಬೃಹತ್ ಪ್ಲೇಯರ್ ಟ್ರೇಡ್ (Trade) ನಲ್ಲಿ, ಅರ್ಷದೀಪ್ ಸಿಂಗ್ 18 ಕೋಟಿ ರೂ. ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ಬಳಗವನ್ನು ಸೇರಿಕೊಂಡಿದ್ದಾರೆ. ಪ್ರತಿಯಾಗಿ ಮುಂಬೈ ಇಂಡಿಯನ್ಸ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡಕ್ಕೆ ಹಾರಿದ್ದಾರೆ. 2019 ರಿಂದ ಪಂಜಾಬ್ ತಂಡದ ಪರ 96 ಪಂದ್ಯಗಳನ್ನು ಆಡಿ 111 ವಿಕೆಟ್ ಪಡೆಯುವ ಮೂಲಕ ಫ್ರಾಂಚೈಸಿಯ ಸಾರ್ವಕಾಲಿಕ ಗರಿಷ್ಠ ವಿಕೆಟ್ ಸರದಾರ ಎನಿಸಿಕೊಂಡಿದ್ದ ಅರ್ಷದೀಪ್, ಈಗ ಐಪಿಎಲ್ 2027 ಕ್ಕೂ ಮುನ್ನ ಮುಂಬೈ ಬಳಗಕ್ಕೆ ಬಲ ತುಂಬಲಿದ್ದಾರೆ.
ಒಟ್ಟಿನಲ್ಲಿ, ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಜತೆಗೆ, ಮುಂಬೈ ಇಂಡಿಯನ್ಸ್‌ನಂತಹ ಐದು ಬಾರಿಯ ಚಾಂಪಿಯನ್ ತಂಡಕ್ಕೆ ಸೇರ್ಪಡೆಯಾಗಿರುವುದು ಮತ್ತು ಜೀವನದ ಹೊಸ ಅಧ್ಯಾಯಕ್ಕೆ ಹೆಜ್ಜೆ ಇಡುತ್ತಿರುವುದು... ಹೀಗೆ ಒಂದೇ ದಿನದಲ್ಲಿ ಎರಡೆರಡು ಸಂಭ್ರಮಗಳು ಅರ್ಷದೀಪ್ ಸಿಂಗ್ ಅವರ ಮನೆ ಬಾಗಿಲು ತಟ್ಟಿವೆ. ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ಈ ಯುವ ಜೋಡಿಗೆ ಉಜ್ವಲ ಭವಿಷ್ಯದ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ, (ಏಜೆನ್ಸೀಸ್).