ಗಿಲ್ ಎಂಟ್ರಿ, ಸಂಜು ಔಟ್​​... ಹರಿಣಗಳ ವಿರುದ್ಧ ಮೊದಲ ಟಿ20 ಪಂದ್ಯಕ್ಕೆ ಭಾರತದ ಪ್ಲೇಯಿಂಗ್​ ಇಲೆವೆನ್ ಹೀಗಿದೆ... Team India Playing XI

ಟೀಮ್​ ಇಂಡಿಯಾ ಆಟಗಾರರಾದ ಶುಭಮಾನ್​ ಗಿಲ್​ ಮತ್ತು ಹಾರ್ದಿಕ್​ ಪಾಂಡ್ಯ
ಟೀಮ್​ ಇಂಡಿಯಾ ಆಟಗಾರರಾದ ಶುಭಮಾನ್​ ಗಿಲ್​ ಮತ್ತು ಹಾರ್ದಿಕ್​ ಪಾಂಡ್ಯ
Published on

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಆಫ್ರಿಕಾ ವಿರುದ್ಧದ T20 ಸರಣಿಯನ್ನು ವಶಪಡಿಸಿಕೊಳ್ಳುವತ್ತ ಭಾರತದ ಗಮನ
  • ಮೊದಲ ಟಿ20 ಪಂದ್ಯವು ನಾಳೆ ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಲಿದೆ
  • ಗಾಯದಿಂದ ಹೊರಗುಳಿದಿದ್ದ ಟೀಮ್​ ಇಂಡಿಯಾದ ನಿಯಮಿತ ನಾಯಕ ಶುಭಮಾನ್ ಗಿಲ್​ ಮತ್ತೆ ಎಂಟ್ರಿ
Team India Playing XI : ಟೆಸ್ಟ್ ಸರಣಿಯ ಹೀನಾಯ ಸೋಲಿನ ಬಳಿಕ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿರುವ ಟೀಮ್​ ಇಂಡಿಯಾ, ಈಗ T20 ಸರಣಿಯನ್ನು ವಶಪಡಿಸಿಕೊಳ್ಳುವತ್ತ ಸಂಪೂರ್ಣ ಗಮನ ಹರಿಸಿದೆ.
2026ರ T20 ವಿಶ್ವಕಪ್‌ಗೆ ಸಿದ್ಧತೆಯ ಭಾಗವಾಗಿ, ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ T20 ಸರಣಿಯನ್ನು ಟೀಮ್​ ಇಂಡಿಯಾ ಆಡಲಿದೆ. ಇದು ಮೆಗಾ ಟೂರ್ನಮೆಂಟ್​ ಆರಂಭಕ್ಕೂ ಮುಂಚಿತವಾಗಿ ಈ ವರ್ಷದಲ್ಲಿ ನಡೆಯುವ ಕೊನೆಯ ಟಿ20 ಸರಣಿಯಾಗಿದೆ. ಮುಂದಿನ ಜನವರಿಯಲ್ಲಿ ನ್ಯೂಜಿಲೆಂಡ್​ ವಿರುದ್ಧ ಟೀಮ್​ ಇಂಡಿಯಾ ಟಿ20 ಸರಣಿ ಆಡಲಿದೆ. ಅಂದಹಾಗೆ, ಟೀಮ್​ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯವು ನಾಳೆ (ಡಿಸೆಂಬರ್ 9) ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕೋಲ್ಕತದ ಈಡನ್​ ಗಾರ್ಡನ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲೇ ಕುತ್ತಿಗೆ ನೋವಿನಿಂದಾಗಿ ಟೆಸ್ಟ್ ಮತ್ತು ಏಕದಿನ ಸರಣಿಯಿಂದ ಹೊರಗುಳಿದಿದ್ದ ಟೀಮ್​ ಇಂಡಿಯಾದ ನಿಯಮಿತ ನಾಯಕ ಶುಭಮಾನ್ ಗಿಲ್​, ಇದೀಗ ತಂಡಕ್ಕೆ ಮರಳುತ್ತಿದ್ದಾರೆ. ಅಭಿಷೇಕ್ ಶರ್ಮ ಜತೆ ಗಿಲ್ ಆರಂಭಿಕರಾಗಿ ಆಡುವ ಸಾಧ್ಯತೆಯಿದೆ. ನಾಯಕ ಸೂರ್ಯಕುಮಾರ್ ಯಾದವ್ ಮೂರನೇ ಸ್ಥಾನದಲ್ಲಿ ಹಾಗೂ ನಂತರದ ಸ್ಥಾನದಲ್ಲಿ ತಿಲಕ್ ವರ್ಮಾ ಆಡುವ ಸಾಧ್ಯತೆ ಇದೆ.
ಇನ್ನು ಜಿತೇಶ್ ಶರ್ಮಗೆ ವಿಕೆಟ್ ಕೀಪರ್ ಆಗಿ ಆದ್ಯತೆ ನೀಡುವ ಸಾಧ್ಯತೆಯಿದೆ. ಗಾಯದಿಂದಾಗಿ ಏಷ್ಯಾ ಕಪ್‌ನಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಕೂಡ ಈ ಸರಣಿಯೊಂದಿಗೆ ತಂಡಕ್ಕೆ ಮರಳಲಿದ್ದಾರೆ. ಆಲ್‌ರೌಂಡರ್‌ಗಳಾದ ಶಿವಂ ದುಬೆ, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಅವರನ್ನು ಆಲ್‌ರೌಂಡರ್ ಕೋಟಾದಲ್ಲಿ ತಂಡಕ್ಕೆ ಸೇರಿಸಿಕೊಂಡಿರುವುದರಿಂದ ವಾಷಿಂಗ್ಟನ್ ಸುಂದರ್‌ಗೆ ಈ ಪಂದ್ಯದಲ್ಲಿ ಅವಕಾಶ ಸಿಗದಿರಬಹುದು. ಅಲ್ಲದೆ, ಸಂಜು ಸ್ಯಾಮ್ಸನ್ ಕೂಡ ಓಪನರ್ ಆಗಿ ಬೆಂಚ್‌ಗೆ ಸೀಮಿತವಾಗಬಹುದು ಎಂಬ ಊಹಾಪೋಹಗಳಿವೆ.
ಭಾರತವು ಇಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿಗೆ ಅಂತಿಮ ತಂಡದಲ್ಲಿ ಅವಕಾಶ ನೀಡಲಿದೆ. ಇದರೊಂದಿಗೆ, ಜಸ್​ಪ್ರೀತ್ ಬುಮ್ರಾ ಸ್ಪೆಷಲಿಸ್ಟ್ ವೇಗಿಯಾಗಿ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯುವ ಅವಕಾಶವಿರುವುದರಿಂದ ಅರ್ಷದೀಪ್ ಸಿಂಗ್ ಕೂಡ ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎನ್ನಲಾಗುತ್ತಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಶುಭಮಾನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮ, ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಜಸ್​ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಹರ್ಷಿತ್​ ರಾಣಾ ಮತ್ತು ವಾಷಿಂಗ್ಟನ್​ ಸುಂದರ್​.

ಆಡುವ ಹನ್ನೊಂದರ ಬಳಗ (ಅಂದಾಜು)

ಶುಭಮಾನ್ ಗಿಲ್, ಅಭಿಷೇಕ್ ಶರ್ಮ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ಜಿತೇಶ್ ಶರ್ಮ, ಶಿವಂ ದುಬೆ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್​ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net