ಹೇಗಿರಲಿದೆ ಟಿ20 ವಿಶ್ವಕಪ್​ ಫಾರ್ಮ್ಯಾಟ್​? ಪ್ರತಿ ತಂಡ ಎಷ್ಟು ಪಂದ್ಯಗಳನ್ನು ಆಡಲಿವೆ? ಎಷ್ಟು ಹಣ ಗಳಿಸಲಿವೆ? T20 World Cup 2026

ಪುರುಷರ ಟಿ20 ವಿಶ್ವಕಪ್‌ 2026 ( T20 World Cup 2026 )
ಪುರುಷರ ಟಿ20 ವಿಶ್ವಕಪ್‌ 2026 ( T20 World Cup 2026 )
Published on

ಪ್ರಮುಖ ಮುಖ್ಯಾಂಶಗಳು

  • ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ
  • ಫೆ. 7 ರಿಂದ ಈ ಮೆಗಾ ಟೂರ್ನಮೆಂಟ್​ ಆರಂಭವಾಗಲಿದೆ
  • ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಟೂರ್ನಿಯನ್ನು ಆಯೋಜಿಸುತ್ತಿವೆ
  • ಫೈನಲ್​ ಪಂದ್ಯ ಮಾರ್ಚ್​ 8ರಂದು ಅಹಮದಾಬಾದ್​ನಲ್ಲಿ ನಡೆಯಲಿದೆ
T20 World Cup 2026 : ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಫೆ. 7 ರಿಂದ ಈ ಮೆಗಾ ಟೂರ್ನಮೆಂಟ್​ ಆರಂಭವಾಗಲಿದ್ದು, ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಟೂರ್ನಿಯನ್ನು ಆಯೋಜಿಸುತ್ತಿವೆ. ಈ ಮೆಗಾ ಟೂರ್ನಮೆಂಟ್​ನಲ್ಲಿ ಒಟ್ಟು 20 ತಂಡಗಳು ಭಾಗವಹಿಸುತ್ತಿದ್ದು, ಒಟ್ಟು 50 ಪಂದ್ಯಗಳು ನಡೆಯಲಿವೆ. ಫೈನಲ್​ ಪಂದ್ಯ ಮಾರ್ಚ್​ 8ರಂದು ಅಹಮದಾಬಾದ್​ನಲ್ಲಿ ನಡೆಯಲಿದೆ. 
ಈ ಟೂರ್ನಮೆಂಟ್‌ನಲ್ಲಿ ಭಾರತ ವಿರುದ್ಧ ಆಡದಿರಲು ಪಾಕಿಸ್ತಾನ ನಿರ್ಧಾರ ತೆಗೆದುಕೊಂಡಿದೆ. ಸದ್ಯ ಇದು ವಿವಾದಕ್ಕೆ ಕಾರಣವಾಗಿದ್ದರು ಕೂಡ ಇನ್ನಿತರ ಪಂದ್ಯಗಳಿಗೆ ಸಕಲ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದೆ. ಎಲ್ಲ ತಂಡಗಳು ಈಗಾಗಲೇ ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದು, ಮೆಗಾ ಟೂರ್ನಿಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ. ಇದು ಕೇವಲ ಪ್ರತಿಷ್ಠೆಯ ಕಣ ಮಾತ್ರವಲ್ಲ, ಕಡಿಮೆ ಆದಾಯ ಹೊಂದಿರುವ ಕ್ರಿಕೆಟ್​ ಮಂಡಳಿಗಳಿಗೆ ಆದಾಯದ ಮೂಲ ಕೂಡ ಇದಾಗಿದೆ. ಹಾಗಾದರೆ, 2026ರ ಟಿ20 ವಿಶ್ವಕಪ್‌ನ ಫಾರ್ಮ್ಯಾಟ್​ ಹೇಗಿರಲಿದೆ? ಪ್ರತಿ ತಂಡವು ಟೂರ್ನಮೆಂಟ್​ ಮುಕ್ತಾಯದ ಮೂಲಕ ಎಷ್ಟು ಗಳಿಸಲಿದೆ? ಎಂಬಿತ್ಯಾದಿ ಮಾಹಿತಿಗಳನ್ನು ನಾವೀಗ ತಿಳಿದುಕೊಳ್ಳೋಣ.

ವಿಶ್ವಕಪ್​ ಫಾರ್ಮ್ಯಾಟ್​

ಅಂದಹಾಗೆ, 2026ರ ಟಿ20 ವಿಶ್ವಕಪ್‌ನ ಸ್ವರೂಪ 2024 ರಲ್ಲಿ ನಡೆದ ಪಂದ್ಯಾವಳಿಯಂತೆಯೇ ಇರುತ್ತದೆ. 2024ರಲ್ಲಿ 20 ತಂಡಗಳು ಮೊದಲ ಬಾರಿಗೆ ಈ ಪಂದ್ಯಾವಳಿಯಲ್ಲಿ ಆಡಿದ್ದವು. ಮೊದಲ ಸುತ್ತಿನಲ್ಲಿ, 20 ತಂಡಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಆಯಾ ತಂಡಗಳು ತಮ್ಮ ಗುಂಪಿನಲ್ಲಿರುವ ಇತರ ತಂಡಗಳೊಂದಿಗೆ ರೌಂಡ್-ರಾಬಿನ್ ಸ್ವರೂಪದಲ್ಲಿ ಆಡುತ್ತವೆ. ನಾಲ್ಕು ಗುಂಪುಗಳಿಂದ ಅಗ್ರ ಎರಡು ತಂಡಗಳು ಸೂಪರ್ 8 ಹಂತಕ್ಕೆ ಮುನ್ನಡೆಯುತ್ತವೆ.
ಐಸಿಸಿ ರ್ಯಾಂಕಿಂಗ್​ ಪ್ರಕಾರ ಸೂಪರ್ 8 ಹಂತಕ್ಕೆ ತಂಡಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಅದರ ಪ್ರಕಾರ, ಮೊದಲ ಸೂಪರ್ 8 ಗುಂಪಿನಲ್ಲಿ ಭಾರತ (X1), ಆಸ್ಟ್ರೇಲಿಯಾ (X2), ವೆಸ್ಟ್ ಇಂಡೀಸ್ (X3), ದಕ್ಷಿಣ ಆಫ್ರಿಕಾ (X4) ತಂಡಗಳಿವೆ. ಎರಡನೇ ಸೂಪರ್ 8 ಗುಂಪಿನಲ್ಲಿ ಇಂಗ್ಲೆಂಡ್ (Y1), ನ್ಯೂಜಿಲೆಂಡ್ (Y2), ಪಾಕಿಸ್ತಾನ (Y3), ಶ್ರೀಲಂಕಾ (Y4) ತಂಡಗಳಿವೆ. ಆದರೆ, ಮೊದಲ ಸುತ್ತಿನಲ್ಲಿ ಯಾವುದಾದರೂ ಸೀಡ್ ಆಗಿರುವ ತಂಡ ಟಾಪ್-2ರ ಒಳಗೆ (ಮೊದಲ ಅಥವಾ ಎರಡನೇ ಸ್ಥಾನ) ಬರದೇ ಇದ್ದರೆ (ಅಂದರೆ ಅವರು ಕ್ವಾಲಿಫೈ ಆಗದೇ ಇದ್ದರೆ), ಆ ಸೀಡ್ ತಂಡದ ಸ್ಥಾನವನ್ನು (X1, X2, Y1 ಇತ್ಯಾದಿ) ಅದೇ ಗ್ರೂಪ್‌ನಿಂದ ಕ್ವಾಲಿಫೈ ಆಗಿರುವ ಬೇರೆ ತಂಡ ತೆಗೆದುಕೊಳ್ಳುತ್ತದೆ. ಅಂದರೆ, ಆ ಹೊಸ ತಂಡವು ಸೀಡ್ ತಂಡದಂತೆಯೇ ಸೂಪರ್ 8ರಲ್ಲಿ ಅದೇ ಸ್ಥಾನ ಮತ್ತು ಗುಂಪನ್ನು ಪಡೆಯುತ್ತದೆ. ಪ್ರತಿ ಸೂಪರ್ 8 ಗುಂಪಿನಿಂದ ಅಗ್ರ ಎರಡು ಸ್ಥಾನ ಪಡೆಯುವವರು ನಾಕೌಟ್ ಹಂತಕ್ಕೆ ಮುನ್ನಡೆಯುತ್ತಾರೆ. ಅಂದರೆ, ಸೆಮಿಫೈನಲ್ ಮತ್ತು ಫೈನಲ್​ಗೆ ಮುನ್ನಡೆಡಯುತ್ತಾರೆ. 

ಟಿ20 ವಿಶ್ವಕಪ್​ 2026 ಗ್ರೂಪ್​ಗಳು

ಗ್ರೂಪ್​ ಎ: ಭಾರತ (X1), ನಮೀಬಿಯಾ, ನೆದರ್‌ಲ್ಯಾಂಡ್ಸ್, ಪಾಕಿಸ್ತಾನ (Y3), ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ.

ಗ್ರೂಪ್​ ಬಿ: ಆಸ್ಟ್ರೇಲಿಯಾ (X2), ಐರ್ಲೆಂಡ್, ಓಮನ್, ಶ್ರೀಲಂಕಾ (Y4), ಜಿಂಬಾಬ್ವೆ.

ಗ್ರೂಪ್​ ಸಿ: ಇಂಗ್ಲೆಂಡ್ (Y1), ಇಟಲಿ, ನೇಪಾಳ, ಸ್ಕಾಟ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ (X3).

ಗ್ರೂಪ್​ ಡಿ: ಅಫ್ಘಾನಿಸ್ತಾನ, ಕೆನಡಾ, ನ್ಯೂಜಿಲೆಂಡ್ (Y2), ದಕ್ಷಿಣ ಆಫ್ರಿಕಾ (X4), ಯುನೈಟೆಡ್ ಅರಬ್ ಎಮಿರೇಟ್ಸ್.

ಪ್ರತಿ ತಂಡ ಎಷ್ಟು ಪಂದ್ಯಗಳನ್ನು ಆಡುತ್ತವೆ?

ಎಲ್ಲ 20 ತಂಡಗಳು ಲೀಗ್​ ಹಂತದಲ್ಲಿ ಕನಿಷ್ಠ ನಾಲ್ಕು ಪಂದ್ಯಗಳನ್ನು ಆಡಲಿವೆ. ಸೂಪರ್ 8ರ ಹಂತಕ್ಕೆ ಪ್ರವೇಶಿಸಿ, ಅಲ್ಲಿಂದ ಹೊರಬೀಳುವ ತಂಡಗಳು ಏಳು ಪಂದ್ಯಗಳನ್ನು ಆಡಲಿವೆ. ಸೆಮಿಫೈನಲ್​ ಹಂತಕ್ಕೆ ಪ್ರವೇಶಿಸಿ ಅಲ್ಲಿಂದ ಹೊರಬೀಳುವ ತಂಡಗಳು ಎಂಟು ಪಂದ್ಯಗಳನ್ನು ಆಡಲಿದ್ದು, ಅಂತಿಮ ಸುತ್ತಿಗೆ ತಲುಪಿದ ತಂಡಗಳು ಒಂಬತ್ತು ಪಂದ್ಯಗಳನ್ನು ಆಡಲಿವೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ಒಂಬತ್ತು ಪಂದ್ಯಗಳಲ್ಲಿಯೂ ಜಯ ಸಾಧಿಸಿತು. ಎಲ್ಲ ಪಂದ್ಯಗಳನ್ನು ಗೆದ್ದು ಪ್ರಶಸ್ತಿ ಗೆದ್ದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನು ಭಾರತ ಹೊಂದಿದೆ. 

ಪ್ರತಿ ತಂಡ ಎಷ್ಟು ಹಣ ಸಂಪಾದಿಸಲಿದೆ?

2026ರ ವಿಶ್ವಕಪ್​ ಟೂರ್ನಿಯ ಬಹುಮಾನ ಮೊತ್ತವನ್ನು ಇನ್ನೂ ಘೋಷಿಸಲಾಗಿಲ್ಲ. ಕಳೆದ ಟಿ20 ವಿಶ್ವಕಪ್​ನಲ್ಲಿ ವಿಜೇತ ತಂಡಕ್ಕೆ 2.45 ಮಿಲಿಯನ್ ಡಾಲರ್​ಗಳನ್ನು ನೀಡಲಾಯಿತು. ಇದರ ಜೊತೆಗೆ ಸೆಮಿಫೈನಲ್ ಮತ್ತು ಫೈನಲ್ ಗಳನ್ನು ಹೊರತುಪಡಿಸಿ, ಪ್ರತಿ ತಂಡವು ಗೆದ್ದ ಪ್ರತಿ ಪಂದ್ಯಕ್ಕೂ ಹೆಚ್ಚುವರಿಯಾಗಿ 31,154 ಡಾಲರ್​ಗಳನ್ನು ನೀಡಲಾಯಿತು. ರನ್ನರ್ ಅಪ್ ತಂಡವು ಕನಿಷ್ಠ 1.28 ಮಿಲಿಯನ್ ಡಾಲರ್​ ಗಳಿಸಿದರೆ, ಸೋತ ಸೆಮಿಫೈನಲಿಸ್ಟ್‌ಗಳು ತಲಾ 7,87,500 ಡಾಲರ್​ ಗಳಿಸಿದವು. ಎರಡನೇ ಸುತ್ತನ್ನು ದಾಟದ ತಂಡಗಳು ತಲಾ 3,82,500 ಡಾಲರ್​ ಗಳಿಸಿದವು ಮತ್ತು ಒಂಬತ್ತನೇ ಮತ್ತು 12ನೇ ಸ್ಥಾನಗಳ ನಡುವೆ ಸ್ಥಾನ ಪಡೆದ ತಂಡಗಳು ತಲಾ 2,47,500 ಡಾಲರ್​ ಗಳಿಸಿದವು. 13 ರಿಂದ 20ನೇ ಸ್ಥಾನದವರೆಗಿನ ತಂಡಗಳು ತಲಾ 2,25,000 ಡಾಲರ್​ ಗಳಿಸಿದವು.
ಅಂದಹಾಗೆ, ಈ ವರ್ಷದ ಬಹುಮಾನದ ಮೊತ್ತವು ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ, ಆದ್ದರಿಂದ ಎಲ್ಲಾ 20 ತಂಡಗಳಿಗೂ ದೊಡ್ಡ ವೇತನವೇ ಕಾಯುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net