ಪಾಕಿಸ್ತಾನ ಏನಾದ್ರೂ ಟಿ20 ವಿಶ್ವಕಪ್​ ಆಡದೇ ಹೋದ್ರೆ ಇಂಗ್ಲೆಂಡ್​ಗೆ 1327 ಕೋಟಿ ರೂ. ನಷ್ಟ! ಅದು ಹೇಗೆ? ಇಲ್ಲಿದೆ ಉತ್ತರ... T20 World Cup 2026

ಪಾಕಿಸ್ತಾನ ಟಿ20 ವಿಶ್ವಕಪ್​ ಆಡದೇ ಹೋದರೆ ಇಂಗ್ಲೆಂಡ್​ಗೆ ನಷ್ಟ
ಪಾಕಿಸ್ತಾನ ಟಿ20 ವಿಶ್ವಕಪ್​ ಆಡದೇ ಹೋದರೆ ಇಂಗ್ಲೆಂಡ್​ಗೆ ನಷ್ಟ
Published on

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್​ ಪ್ರಿಯರು ಕಾತರದಿಂದ ಎದುರು ನೋಡುತ್ತಿರುವ ಟಿ20 ವಿಶ್ವಕಪ್​ ಫೆಬ್ರವರಿ 7 ರಿಂದ ಆರಂಭ
  • ಈ ಮೆಗಾ ಟೂರ್ನಿಯನ್ನು ಜಂಟಿಯಾಗಿ ಆಯೋಜನೆ ಮಾಡುತ್ತಿರುವ ಭಾರತ ಮತ್ತು ಶ್ರೀಲಂಕಾ
  • ಈ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನದ ಭಾಗವಹಿಸುವಿಕೆ ಈ ಕ್ಷಣದವರೆಗೂ ಅನಿಶ್ಚಿತತೆಯಿಂದ ಕೂಡಿದೆ
  • ಬಾಂಗ್ಲಾ ಬೆಂಬಲಕ್ಕೆ ನಿಂತು ಪಾಕ್​ ಕೂಡ ವಿಶ್ವಕಪ್​ ಬಹಿಷ್ಕಾರ ಹಾಕುವ ಬೆದರಿಕೆ ಒಡ್ಡುತ್ತಿದೆ
T20 World Cup 2026 : ಕ್ರಿಕೆಟ್​ ಪ್ರಿಯರು ಕಾತರದಿಂದ ಎದುರು ನೋಡುತ್ತಿರುವ ಟಿ20 ವಿಶ್ವಕಪ್-2026, ಫೆಬ್ರವರಿ 7 ರಿಂದ ಆರಂಭವಾಗಲಿದೆ. ಈ ಮೆಗಾ ಟೂರ್ನಿಯನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದ್ದು, ಇನ್ನೂ ಎರಡೇ ವಾರದಲ್ಲಿ ಶುರುವಾಗಲಿದೆ. ಆದಾಗ್ಯೂ, ಈ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನದ ಭಾಗವಹಿಸುವಿಕೆ ಈ ಕ್ಷಣದವರೆಗೂ ಅನಿಶ್ಚಿತತೆಯಿಂದ ಕೂಡಿದೆ.
ಭಾರತದಲ್ಲಿ ನಮ್ಮ ಸುರಕ್ಷತೆಯ ಬಗ್ಗೆ ಆತಂಕವಿದೆ ಎಂಬ ನೆಪ ಒಡ್ಡಿ ಟಿ20 ವಿಶ್ವಕಪ್​ ಆಡಲು ಬಾಂಗ್ಲಾದೇಶ ನಿರಾಕರಿಸಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಹೀಗಾಗಿ, ಬಾಂಗ್ಲಾದಿಂದ ತೆರವಾಗಿರುವ ಸ್ಥಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ, ಸ್ಕಾಟ್ಲೆಂಡ್​ ತಂಡಕ್ಕೆ ಅವಕಾಶ ನೀಡಿದೆ. ಟಿ20 ವಿಶ್ವಕಪ್​ನಿಂದ ಬಾಂಗ್ಲಾದೇಶವನ್ನು ದೂರ ಇಡುತ್ತಿದ್ದಂತೆ ತನ್ನ ಹೊಟ್ಟೆಗೆ ಬೆಂಕಿ ಬಿದ್ದಂತೆ ಆಡುತ್ತಿರುವ ಪಾಕಿಸ್ತಾನ ( Pakistan ), ಬಾಂಗ್ಲಾ ಬೆಂಬಲಕ್ಕೆ ನಿಂತು ತಾವು ಕೂಡ ವಿಶ್ವಕಪ್​ ಬಹಿಷ್ಕಾರ ಹಾಕುವ ಬೆದರಿಕೆ ಒಡ್ಡುತ್ತಿದೆ. ಆದರೆ, ಐಸಿಸಿ ಮಾತ್ರ ಇದ್ಯಾವುದಕ್ಕೂ ಕವಡೆ ಕಾಸಿನ ಬೆಲೆ ನೀಡುತ್ತಿಲ್ಲ.
ಸೋಮವಾರವಷ್ಟೇ ಪಾಕಿಸ್ತಾನದ ಪ್ರಧಾನಿ ಶೆಹಬಾಜ್​ ಶರೀಫ್​ ಜತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೋಹ್ಸಿನ್​ ನಖ್ವಿ ಸಭೆ ನಡೆಸಿದ್ದಾರೆ. ಆದರೆ, ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ವಿಶ್ವಕಪ್​ ಆಡಬೇಕಾ? ಬೇಡವಾ? ಅನ್ನೋ ಗೊಂದಲದಲ್ಲಿ ಪಾಕ್​ ಮುಳುಗಿದೆ. ಈ ವಾರದ ಅಂತ್ಯಕ್ಕೆ ಒಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಒಂದು ವೇಳೆ ಪಾಕಿಸ್ತಾನ, ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ವಿಫಲವಾದರೆ, ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಭಾರಿ ಬೆಲೆ ತೆರಬೇಕಾಗುತ್ತದೆ. ಹಿಂದೆಂದೂ ಕಾಣದ ರೀತಿಯಲ್ಲಿ ಆರ್ಥಿಕ ತೊಂದರೆಗಳಿಗೆ ಸಿಲುಕಬೇಕಾಗುತ್ತದೆ. ಅದೇ ಸಮಯದಲ್ಲಿ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಕೂಡ ಸುಮಾರು 1327 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳಲಿದೆ ಎಂಬ ವರದಿಗಳಿವೆ. ಅಯ್ಯೋ ಪಾಕಿಸ್ತಾನವನ್ನು ಬ್ಯಾನ್​ ಮಾಡಿದ್ರೆ ಇಂಗ್ಲೆಂಡ್​ಗೆ ಹೇಗೆ ನಷ್ಟವಾಗುತ್ತದೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಒಂದು ವೇಳೆ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್‌ನಿಂದ ಹೊರಗುಳಿದರೆ, ಆ ತಂಡದ ವಿರುದ್ಧ ಐಸಿಸಿ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ತಂಡವನ್ನು ಬ್ಯಾನ್​ ಮಾಡಿದರೂ ಅಚ್ಚರಿಪಡಬೇಕಿಲ್ಲ. ಒಮ್ಮೆ ಬ್ಯಾನ್​ ಆದರೆ, ದ್ವಿಪಕ್ಷೀಯ ಕ್ರಿಕೆಟ್‌ನಿಂದಲೂ ಪಾಕಿಸ್ತಾನ ಅಮಾನತ್ತಿಗೆ ಒಳಗಾಗಬಹುದು. ಹಾಗೆ ಸಂಭವಿಸಿದರೆ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಭಾರಿ ನಷ್ಟವಾಗುತ್ತದೆ.
ಮೊದಲೇ ನಿಗದಿಯಾಗಿರುವ ವೇಳಾಪಟ್ಟಿಯ ಪ್ರಕಾರ, ಪಾಕಿಸ್ತಾನ ತಂಡವು ಆಗಸ್ಟ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದ ಸಮಯದಲ್ಲಿ, ಪಾಕಿಸ್ತಾನ ತಂಡವು ಆತಿಥೇಯ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯು ಆಗಸ್ಟ್ 19 ರಿಂದ ಪ್ರಾರಂಭವಾಗಲಿದೆ. ಒಂದು ವೇಳೆ ಪಾಕಿಸ್ತಾನ ಟಿ20 ವಿಶ್ವಕಪ್‌ನಲ್ಲಿ ಆಡದಿದ್ದರೆ, ಐಸಿಸಿ ತಂಡದ ಮೇಲೆ ನಿಷೇಧ ಹೇರುತ್ತದೆ. ಇದರಿಂದ ಇಂಗ್ಲೆಂಡ್​ ವಿರುದ್ಧದ ಸರಣಿ ನಡೆಯುವುದಿಲ್ಲ.
ಪಾಕಿಸ್ತಾನ ಮತ್ತು ಇಂಗ್ಲೆಂಡ್​ ನಡುವಿನ ಸರಣಿ ಏನಾದರೂ ರದ್ದಾದರೆ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಸುಮಾರು 105 ಮಿಲಿಯನ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು 1,327.49 ಕೋಟಿ ರೂ.) ನಷ್ಟ ಅನುಭವಿಸಲಿದೆ ಎಂದು TheiPaper ವರದಿ ಮಾಡಿದೆ. ಪ್ರಸಾರದ ಹಕ್ಕುಗಳು, ಟಿಕೆಟ್ ಮಾರಾಟ ಮತ್ತು ಇನ್ನಿತರ ಮೂಲಗಳಿಂದ ECB ಪ್ರತಿ ಟೆಸ್ಟ್‌ಗೆ ಸುಮಾರು 35 ಮಿಲಿಯನ್ ನಷ್ಟ ಅನುಭವಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ, ಈ ಆರ್ಥಿಕ ನಷ್ಟವನ್ನು ಸರಿದೂಗಿಸಲು ECB, ಪಾಕಿಸ್ತಾನ ತಂಡದ ಬದಲಿಗೆ ಮತ್ತೊಂದು ತಂಡವನ್ನು ತರಲು ಪ್ರಯತ್ನಿಸಬಹುದು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net