ಅಜಿತ್​ ಪವಾರ್​ ದುರಂತ ಸಾವು: ಕೊನೇ ಕ್ಷಣದಲ್ಲಿ ಏನಾಯ್ತು? ವಿಮಾನ ಪತನದ ಇಂಚಿಂಚೂ ಮಾಹಿತಿ ಇಲ್ಲಿದೆ... Ajit Pawar

ವಿಮಾನ ಪತನದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್​ ದುರ್ಮರಣ
ವಿಮಾನ ಪತನದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್​ ಪವಾರ್​ ದುರ್ಮರಣ
Published on

ಪ್ರಮುಖ ಮುಖ್ಯಾಂಶಗಳು

  • ಇಂದು (ಜ.28) ಬೆಳಗ್ಗೆ ಪುಣೆ ಜಿಲ್ಲೆಯ ಬಾರಾಮತಿ ಬಳಿ ಸಂಭವಿಸಿದ ಲಘು ವಿಮಾನ ದುರಂತ
  • ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್​ ಪವಾರ್​ ಸೇರಿದಂತೆ ಐವರು ಮಂದಿ ದುರ್ಮರಣ
  • ವಿಮಾನ ಪತನ ಹೇಗೆ ಸಂಭವಿಸಿತು ಎಂಬುವುದರ ಕಂಪ್ಲೀಟ್​ ಡೀಟೆಲ್ಸ್​ ಇಲ್ಲಿದೆ
ಪುಣೆ: ಇಂದು (ಜ.28) ಬೆಳಗ್ಗೆ ಪುಣೆ ಜಿಲ್ಲೆಯ ಬಾರಾಮತಿ ಬಳಿ ಸಂಭವಿಸಿದ ಲಘು ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್​ ಪವಾರ್​ ( Ajit Pawar ) ಸೇರಿದಂತೆ ಐವರು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಈ ದುರ್ಘಟನೆಗೆ ಕಾರಣವಾದ ಸಣ್ಣ ವಿಮಾನವು ಖಾಸಗಿಯಾಗಿ ನಿರ್ವಹಿಸಲ್ಪಡುವ ಚಾರ್ಟರ್ಡ್ ವಿಮಾನವಾಗಿದ್ದು, ಮುಂಬೈನಿಂದ ನಿಗದಿತ ರಾಜಕೀಯ ರ್ಯಾಲಿಗಳಿಗಾಗಿ ಹೊರಟಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಪವಾರ್ ಅವರು ನಾಲ್ಕು ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಬೇಕಿತ್ತು. ಆದರೆ, ವಿಧಿ ಅವರನ್ನು ಬಲಿ ಪಡೆದಿದೆ.
ಮುಂಬೈನಿಂದ ಬೆಳಗ್ಗೆ 8.10 ಕ್ಕೆ ಹೊರಟ ವಿಮಾನ 8.50ಕ್ಕೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, 8.45ರ ಸುಮಾರಿಗೆ ವಿಮಾನ ಪತನಗೊಂಡಿದೆ. ಈ ದುರಂತದಲ್ಲಿ ಡಿಸಿಎಂ ಅಜಿತ್​ ಪವಾರ್​ ಸೇರಿ ಒಟ್ಟು 5 ಮಂದಿ ಸಾವಿಗೀಡಾಗಿದ್ದಾರೆ. ಮೃತಪಟ್ಟವರನ್ನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್, ಅವರ ಪಿಎಸ್ಒ ವಿದಿಪ್ ಜಾಧವ್, ಪೈಲಟ್‌ಗಳಾದ ಸುಮಿತ್ ಕಪೂರ್ ಮತ್ತು ಸಂಭವಿ ಪಾಠಕ್ ಮತ್ತು ವಿಮಾನ ಸಹಾಯಕಿ ಪಿಂಕಿ ಮಾಲಿ ಎಂದು ಗುರುತಿಸಲಾಗಿದೆ.

ವಿಮಾನ ಪತನ ಹೇಗೆ ಸಂಭವಿಸಿತು ಎಂಬುವುದರ ಕಂಪ್ಲೀಟ್​ ಡೀಟೆಲ್ಸ್​ ಈ ಕೆಳಕಂಡಂತಿದೆ

* ಇಂದು (ಜ.28) ಬೆಳಗ್ಗೆ ಪುಣೆ ಮತ್ತು ಬಾರಾಮತಿ ಪ್ರದೇಶದಲ್ಲಿ ದಟ್ಟ ಮಂಜು ಆವರಿಸಿತ್ತು. ಇದರಿಂದ ಪೈಲಟ್​ಗೆ ಏನು ಕಾಣುತ್ತಿರಲಿಲ್ಲ.

* ಬಾರಾಮತಿ ವಿಮಾನ ನಿಲ್ದಾಣದ ಏರ್​ಸ್ಟ್ರಿಪ್​ ತುಂಬಾ ಚಿಕ್ಕದಾಗಿದೆ ಮತ್ತು ಯಾವುದೇ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ ಸೌಲಭ್ಯಗಳನ್ನು ರನ್​ವೇ ಹೊಂದಿಲ್ಲ. ಇದು ಕೂಡ ಲ್ಯಾಂಡಿಂಗ್​ಗೆ ಸಮಸ್ಯೆಯಾಯಿತು.

* ವಿಮಾನ ನಿಲ್ದಾಣದ ಹತ್ತಿರ ಬರುತ್ತಿದ್ದಂತೆ ಪೈಲಟ್ ಶಾಂಭವಿ ಪಾಠಕ್​, ಸ್ವಯಂ ಚಾಲಿತ ಮತ್ತು ವಿಸುವಲ್​ ಲ್ಯಾಂಡಿಂಗ್​ಗೆ ಪ್ರಯತ್ನಿಸಿದರು.

* ಲ್ಯಾಂಡಿಂಗ್​ ಮಾಡುವಾಗ ವಿಮಾನ ನೇರವಾಗಿ ರನ್​ವೇ ಸಮೀಪ ಬರಲಿಲ್ಲ ಹೀಗಾಗಿ ವಿಮಾನ, ಒಂದು ದೊಡ್ಡ ಟರ್ನ್​ ತೆಗೆದುಕೊಂಡಿತು. ಇದರಿಂದ ಮೊದಲ ಲ್ಯಾಂಡಿಂಗ್​ ಫೇಲ್​ ಆಯಿತು.

* ದಟ್ಟ ಮಂಜಿನಿಂದಾಗಿ ವಿಮಾನವನ್ನು ರನ್​ವೇಗೆ ಸರಿಯಾಗಿ ಹೊಂದಿಸುವುದು ತುಂಬಾ ಕಷ್ಟಕರವಾಗಿತ್ತು.

* ಮೊದಲ ಪ್ರಯತ್ನ ವಿಫಲವಾದಾಗ ಪೈಲಟ್​ ಎರಡನೇ ಲ್ಯಾಂಡಿಂಗ್​ ಪ್ರಯತ್ನವನ್ನು ಮಾಡಿದರು.

* ಎರಡನೇ ಪ್ರಯತ್ನದ ವೇಳೆ ಪೈಲಟ್​ ಮೇಡೇ ಕರೆಯನ್ನು ನೀಡಿದರು. ಮೇಡೇ ಕರೆ ಎಂದರೆ, ವಿಮಾನ ಅಥವಾ ಹಡಗುಗಳಲ್ಲಿ ಗಂಭೀರ ತುರ್ತು ಸಂದರ್ಭದಲ್ಲಿ ರೇಡಿಯೋ ಮೂಲಕ ನೀಡುವ ಅಂತಾರಾಷ್ಟ್ರೀಯ ತುರ್ತು ಸಿಗ್ನಲ್ ಅಥವಾ ಸಹಾಯಕ್ಕಾಗಿ ಮಾಡುವ ಕರೆಯಾಗಿದೆ.

* ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಮೂಲಗಳ ಪ್ರಕಾರ ಬಾರಾಮತಿ ಒಂದು ಟೇಬಲ್​ ಟಾಪ್​ ರನ್​ವೇ. ಅಂದರೆ, ಗುಡ್ಡ ಅಥವಾ ಎತ್ತರದ ಚಪ್ಪಟೆ ಜಾಗದ ಮೇಲೆ ನಿರ್ಮಿಸಲಾದ ರನ್‌ವೇ ಆಗಿದೆ.

* ಎರಡನೇ ಪ್ರಯತ್ನದ ಲ್ಯಾಂಡಿಂಗ್​ ವೇಳೆ ವಿಮಾನವು ರನ್​ವೇ ಅಂಚಿನ ಬಳಿಯೇ ನೆಲಕ್ಕೆ ಅಪ್ಪಳಿಸಿತು.

* ಅಂದಾಜು 100 ಅಡಿ ಎತ್ತರದಲ್ಲಿ ಇರುವಾಗಲೇ ವಿಮಾನವೂ ತನ್ನ ನಿಯಂತ್ರಣವನ್ನು ಕಳೆದುಕೊಂಡಿತು.

* ನಿಯಂತ್ರಣ ತಪ್ಪಿದ ವಿಮಾನ, ರನ್​ವೇ ತಲುಪುವ ಮುಂಚೆಯೇ ನೆಲಕ್ಕೆ ಅಪ್ಪಳಿಸಿತು.

* ನೆಲಕ್ಕೆ ಅಪ್ಪಳಿಸಿದ ಪರಿಣಾಮ, ತಕ್ಷಣ ಆ ಸ್ಥಳದಲ್ಲಿ ದೊಡ್ಡ ಸ್ಫೋಟ ಸಂಭವಿಸಿತು. ಇದಾದ ಬಳಿಕ ಅನೇಕ ಸಣ್ಣ ಸ್ಫೋಟಗಳು ಕೂಡ ಸಂಭವಿಸಿದವು.

* ಸರಣಿ ಸ್ಫೋಟಗಳಿಂದಾಗಿ ವಿಮಾನವು ಬೆಂಕಿಯ ಉಂಡೆಯಾಗಿ ಸ್ಥಳದಲ್ಲೇ ಹೊತ್ತಿ ಉರಿಯಿತು.

* ಬೆಂಕಿ ಆವರಿಸಿಕೊಂಡಿದ್ದರಿಂದ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿಲ್ಲ.

* ಸದ್ಯ ಅಪಘಾತದ ತನಿಖೆ ಮುಂದುವರೆದಿದ್ದು, ಅಂತಿಮ ಕಾರಣವನ್ನು ಡಿಜಿಸಿಎ ವರದಿಯಲ್ಲಿ ದೃಢಪಡಿಸಲಾಗುತ್ತದೆ.

ಲಿಯರ್‌ಜೆಟ್ 45XR ವಿಮಾನದ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ

* ಅಪಘಾತಕ್ಕೀಡಾದ ಲಿಯರ್‌ಜೆಟ್ 45XR ವಿಮಾನವು ಭಾರತದ ಅತಿದೊಡ್ಡ ನಾನ್-ಶೆಡ್ಯೂಲ್ಡ್ ವಿಮಾನ ನಿರ್ವಾಹಕರಲ್ಲಿ ಒಂದಾದ ವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನಕ್ಕೆ ಸೇರಿದೆ.

* ಲಿಯರ್‌ಜೆಟ್ 45 ಎಂಬುದು ಬೊಂಬಾರ್ಡಿಯರ್ ಏರೋಸ್ಪೇಸ್ (1998-2009) ತಯಾರಿಸಿದ ಮಧ್ಯಮ ಗಾತ್ರದ ಬಿಜಿನೆಸ್​ ಜೆಟ್ ಆಗಿದೆ. ಇದು 2,000-2,235 ನಾಟಿಕಲ್ ಮೈಲುಗಳ ವ್ಯಾಪ್ತಿಯನ್ನು ಹೊಂದಿದೆ. ಇದು ಎಂಟು ಆಸನಗಳನ್ನು ಹೊಂದಿದ್ದು, ತನ್ನ ಹೈ-ಸ್ಪೀಡ್ ಕ್ರೂಸಿಂಗ್‌ಗೆ ಹೆಸರುವಾಸಿಯಾಗಿದೆ (ಮ್ಯಾಕ್ 0.78-0.81).

* ಎರಡು ಹನಿವೆಲ್ TFE731 ಎಂಜಿನ್‌ಗಳಿಂದ ನಡೆಸಲ್ಪಡುವ ಈ ವಿಮಾನ, ಬರೋಬ್ಬರಿ 51,000 ಅಡಿಗಳವರೆಗೆ ಹಾರಬಲ್ಲದು. ಈ ವಿಮಾನವು ತನ್ನ ವೇಗ ಮತ್ತು ದಕ್ಷತೆ ಹಾಗೂ ಆರಾಮದಾಯಕ ಕ್ಯಾಬಿನ್‌ಗೆ ಹೆಸರುವಾಸಿಯಾಗಿದೆ.

* ಈ ಬಿಜಿನೆಸ್​ ಜೆಟ್ ಅನ್ನು ಕಡಿಮೆ ಮತ್ತು ಮಧ್ಯಮ ದೂರದ ವಿಮಾನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ವಿಮಾನವು 47 ಅಡಿ ರೆಕ್ಕೆಗಳನ್ನು ಮತ್ತು 9,752 ಕೆಜಿ ತೂಕವನ್ನು ಹೊಂದಿದೆ.

* ವಿಎಸ್ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ವಿ.ಕೆ. ಸಿಂಗ್ ಸ್ಥಾಪಿಸಿದರು. ಅವರ ನಾಯಕತ್ವದಲ್ಲಿ ವಿ.ಎಸ್.ಆರ್. ವೆಂಚರ್ಸ್ ವಿಮಾನಗಳನ್ನು ನಿರ್ವಹಿಸುತ್ತಿದೆ ಮತ್ತು ಆಪರೇಟ್​ ಮಾಡುತ್ತಿದೆ.

* ಈ ಸಂಸ್ಥೆಯು ಖಾಸಗಿ ಜೆಟ್ ಚಾರ್ಟರ್‌ಗಳು, ಹೆಲಿಕಾಪ್ಟರ್ ಬಾಡಿಗೆಗಳು, ಏರ್ ಆಂಬ್ಯುಲೆನ್ಸ್ ಮತ್ತು ವಿಮಾನ ಗುತ್ತಿಗೆಯಲ್ಲಿ ಪರಿಣತಿ ಹೊಂದಿದೆ. ಈ ಕಂಪನಿಯ ಫ್ಲೀಟ್‌ನಲ್ಲಿ ಲಿಯರ್‌ಜೆಟ್ 45XR, ಬೀಚ್‌ಕ್ರಾಫ್ಟ್ ಸೂಪರ್ ಕಿಂಗ್ ಏರ್ B200 ಮತ್ತು ಅಗಸ್ಟಾ 109 ಹೆಲಿಕಾಪ್ಟರ್‌ಗಳಂತಹ ವೈವಿಧ್ಯಮಯ ವಿಮಾನಗಳು ಸೇರಿವೆ.

* ನವದೆಹಲಿಯ ಮಹಿಪಾಲ್‌ಪುರದಲ್ಲಿ ಈ ಕಂಪನಿಯು ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಈ ಕಂಪನಿಯು ಸಮಗ್ರ ವಾಯುಯಾನ ಸಲಹಾ ಮತ್ತು ವಿಮಾನ ನಿರ್ವಹಣಾ ಸೇವೆಗಳನ್ನು ಒದಗಿಸುತ್ತದೆ.

ಯಾವ ಕಾರಣಕ್ಕೆ ಅಜಿತ್​ ಪವಾರ್​ ವಿಮಾನದಲ್ಲಿ ಹೊರಟ್ಟಿದ್ದರು?

ಜಿಲ್ಲಾ ಪರಿಷತ್ ಚುನಾವಣೆಗಾಗಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಲು ಅಜಿತ್​ ಪವಾರ್ ಅವರು ಬಾರಾಮತಿಗೆ ಪ್ರಯಾಣಿಸುತ್ತಿದ್ದರು. ಮಂಗಳವಾರ, ಅಜಿತ್ ಪವಾರ್ ಮುಂಬೈನಲ್ಲಿದ್ದರು, ಅಲ್ಲಿ ಅವರು ಮೂಲಸೌಕರ್ಯ ಕುರಿತ ಮಹಾರಾಷ್ಟ್ರ ಸಚಿವ ಸಂಪುಟ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದರು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಸಚಿವ ಚಂದ್ರಶೇಖರ್ ಬವಾಂಕುಲೆ ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಭೆ ಮುಗಿಸಿ, ಇಂದು ಬಾರಾಮತಿಗೆ ಹೊರಟರು. ಆದರೆ, ವಿಮಾನ ಲ್ಯಾಂಡಿಂಗ್​ ವೇಳೆ ದುರಂತ ಸಾವಿಗೀಡಾಗಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net