

ನವದೆಹಲಿ: ಕಳಪೆ ಫಾರ್ಮ್‌ನಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ( Suryakumar Yadav ) ಅವರ ಬ್ಯಾಟ್ ಇದೀಗ ಮತ್ತೆ ಗರ್ಜಿಸಲು ಶುರು ಮಾಡಿದೆ. ತಮ್ಮ ಭರ್ಜರಿ ಕಮ್‌ಬ್ಯಾಕ್ ಮತ್ತು ಅದೃಷ್ಟ ಬದಲಾಗಿದ್ದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವಿಶೇಷ ಭೇಟಿಯೇ ಕಾರಣ ಎಂಬ ಸ್ವಾರಸ್ಯಕರ ಸಂಗತಿಯನ್ನು ಸೂರ್ಯಕುಮಾರ್ ಬಿಚ್ಚಿಟ್ಟಿದ್ದಾರೆ.
ನವೆಂಬರ್ 6ರಂದು ತಮ್ಮ ಕುಟುಂಬ ಸಮೇತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಳಿಕ ತಮ್ಮ ಅದೃಷ್ಟವೇ ಬದಲಾಯಿತು. ಹೇಗೆಂದರೆ, ನಾನು ಮರಳಿ ಫಾರ್ಮ್‌ಗೆ ಬಂದು ರನ್ ಗಳಿಸುತ್ತಿದ್ದೇನೆ ಎಂದು ದೆಹಲಿಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಸೂರ್ಯಕುಮಾರ್ ಯಾದವ್ ಹೇಳಿಕೊಂಡಿದ್ದಾರೆ.
ಮೋದಿಯವರು ನಮಗೆ ಕೇವಲ ಐದು ಅಥವಾ ಹತ್ತು ನಿಮಿಷಗಳ ಸಮಯ ನೀಡಬಹುದು ಎಂದು ಭಾವಿಸಿದ್ದೆ, ಆದರೆ ಪ್ರಧಾನಿಯವರು ಬರೋಬ್ಬರಿ 40 ರಿಂದ 45 ನಿಮಿಷಗಳ ಕಾಲ ನಮ್ಮೊಂದಿಗೆ ಆತ್ಮೀಯವಾಗಿ ಮಾತನಾಡಿದರು ಎಂದು ಸೂರ್ಯ ಸಂತಸ ಹಂಚಿಕೊಂಡಿದ್ದಾರೆ. ಆ ಭೇಟಿಯ ನಂತರವೇ ಮೈದಾನದಲ್ಲಿ ರನ್‌ಗಳ ಹೊಳೆ ಹರಿಯಲು ಶುರುವಾಯಿತು ಎಂದು ಸೂರ್ಯ ಹಾಸ್ಯಮಯವಾಗಿ ಹೇಳಿಕೊಂಡಿದ್ದಾರೆ.
ಕ್ರಿಕೆಟ್ ಆಡುವಾಗ ಮೈದಾನದಲ್ಲಿ ಸಾಕಷ್ಟು ಒತ್ತಡವಿರುತ್ತದೆ, ಹೀಗಿರುವಾಗ ಇಡೀ ದೇಶದ ಪ್ರಧಾನಿಯಾಗಿ ಇಷ್ಟೊಂದು ದೊಡ್ಡ ಜವಾಬ್ದಾರಿಗಳನ್ನು ಹೊತ್ತುಕೊಂಡು ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಎಂದು ಮೋದಿಯವರನ್ನು ಕೇಳಿದ್ದಾಗಿ ಸೂರ್ಯಕುಮಾರ್ ವಿವರಿಸಿದ್ದಾರೆ. ತಮ್ಮ ಈ ಪ್ರಶ್ನೆಗೆ ಪ್ರಧಾನಿಯವರು ಅತ್ಯುತ್ತಮ ಉತ್ತರಗಳನ್ನು ನೀಡಿದರು ಹಾಗೂ ಆ ಇಡೀ ಸಂಭಾಷಣೆ ತುಂಬಾ ಲವಲವಿಕೆಯಿಂದ ಮತ್ತು ಆರಾಮದಾಯಕವಾಗಿತ್ತು ಎಂದು ಸೂರ್ಯ ತಿಳಿಸಿದ್ದಾರೆ. ಪ್ರಧಾನಿಯವರ ಸಲಹೆ ಮತ್ತು ಮಾತುಗಳು ನನ್ನ ಮೇಲಿದ್ದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಮುಕ್ತವಾಗಿ ಬ್ಯಾಟ್ ಬೀಸಲು ಪ್ರೇರಣೆ ನೀಡಿದವು ಎಂದು ಸೂರ್ಯಕುಮಾರ್ ಹೇಳಿದ್ದಾರೆ.
ಪ್ರಸ್ತುತ 2026-27ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸುತ್ತಿರುವ ಸೂರ್ಯಕುಮಾರ್ ಯಾದವ್, ತಮ್ಮ ಹಳೆಯ ಸ್ಫೋಟಕ ಶೈಲಿಯ ಬ್ಯಾಟಿಂಗ್‌ಗೆ ಮರಳಿದ್ದಾರೆ. ನವೆಂಬರ್ 14ರಂದು ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 60 ರನ್ ಚಚ್ಚಿದ್ದರು. ಅದರ ಬೆನ್ನಲ್ಲೇ ಗುಜರಾತ್ ವಿರುದ್ಧ ಕೇವಲ 29 ಎಸೆತಗಳಲ್ಲಿ 82 ರನ್ ಸಿಡಿಸಿ ಅಬ್ಬರಿಸಿದ್ದ ಸೂರ್ಯ, ನಂತರದ ಗೋವಾ ವಿರುದ್ಧದ ಪಂದ್ಯದಲ್ಲೂ 12 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 25 ರನ್ ಗಳಿಸಿ ಮುಂಬೈ ತಂಡ 18 ರನ್‌ಗಳ ಗೆಲುವು ಸಾಧಿಸಲು ನೆರವಾದರು.
ಇದಕ್ಕೂ ಮುನ್ನ ಕಳೆದ ಐಪಿಎಲ್ ಆವೃತ್ತಿಯು ಸೂರ್ಯಕುಮಾರ್ ಪಾಲಿಗೆ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ, 13 ಇನ್ನಿಂಗ್ಸ್‌ಗಳಿಂದ ಕೇವಲ 269 ರನ್ ಗಳಿಸಿದ್ದ ಅವರ ಕಳಪೆ ಪ್ರದರ್ಶನವು ಭಾರತೀಯ ಟಿ20 ತಂಡದ ನಾಯಕತ್ವ ಬದಲಾವಣೆಗೂ ಕಾರಣವಾಗಿತ್ತು. ಪರಿಣಾಮವಾಗಿ ಕಳೆದ ಜೂನ್‌ನಲ್ಲಿ ಆಯ್ಕೆಗಾರರು ಶ್ರೇಯಸ್ ಅಯ್ಯರ್ ಅವರನ್ನು ಭಾರತ ಟಿ20 ತಂಡದ ನೂತನ ನಾಯಕರನ್ನಾಗಿ ನೇಮಿಸಿದ್ದರು. ಇದಕ್ಕೂ ಮೊದಲು ಸೂರ್ಯಕುಮಾರ್ ನಾಯಕತ್ವದಲ್ಲೇ ಟೀಮ್ ಇಂಡಿಯಾ 2026ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಉಳಿಸಿಕೊಂಡು, ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದ ಮೊದಲ ತಂಡ ಎಂಬ ಐತಿಹಾಸಿಕ ದಾಖಲೆ ಬರೆದಿತ್ತು. ಆ ಟೂರ್ನಿಯಲ್ಲಿ ಅಮೆರಿಕ ವಿರುದ್ಧದ 84 ರನ್‌ಗಳ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಸೇರಿದಂತೆ ಒಟ್ಟು 9 ಇನ್ನಿಂಗ್ಸ್‌ಗಳಿಂದ 242 ರನ್ ಕಲೆಹಾಕಿದ್ದ ಸೂರ್ಯ, ಇದೀಗ ದೇಶೀಯ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್‌ಗೆ ಮರಳುವ ಮೂಲಕ ಮತ್ತೆ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಸಂದೇಶ ರವಾನಿಸಿದ್ದಾರೆ, (ಏಜೆನ್ಸೀಸ್).