ಈ ವ್ಯಕ್ತಿ ಇಂದು ತುಂಬಾ ಖುಷಿಯಾಗಿದ್ದಾನೆ: ಅಂದು ಪೆಟ್ರೋಲ್ ಪಂಪ್ ಇಂದು ವಿಶ್ವಕಪ್​! ವೈರಲ್​ ಆಯ್ತು SKY ಟ್ವೀಟ್​... Suryakumar Yadav

ಈ ವ್ಯಕ್ತಿ ಇಂದು ತುಂಬಾ ಖುಷಿಯಾಗಿದ್ದಾನೆ: ಅಂದು ಪೆಟ್ರೋಲ್ ಪಂಪ್ ಇಂದು ವಿಶ್ವಕಪ್​! ವೈರಲ್​ ಆಯ್ತು SKY ಟ್ವೀಟ್​... Suryakumar Yadav
ಈ ವ್ಯಕ್ತಿ ಇಂದು ತುಂಬಾ ಖುಷಿಯಾಗಿದ್ದಾನೆ: ಅಂದು ಪೆಟ್ರೋಲ್ ಪಂಪ್ ಇಂದು ವಿಶ್ವಕಪ್​! ವೈರಲ್​ ಆಯ್ತು SKY ಟ್ವೀಟ್​... Suryakumar Yadav
Published on

ಪ್ರಮುಖ ಮುಖ್ಯಾಂಶಗಳು

  • ಭಾರತದ ಕ್ರೀಡಾಭಿಮಾನಿಗಳ ನಿರೀಕ್ಷೆಯಂತೆ ಟೀಮ್ ಇಂಡಿಯಾ 2026ರ ಟಿ20 ವಿಶ್ವಕಪ್​ನಲ್ಲಿ ಗೆಲುವು ಸಾಧಿಸಿದೆ.
  • ಆತಿಥೇಯ ಭಾರತ ತಂಡ, ನ್ಯೂಜಿಲೆಂಡ್​ ತಂಡವನ್ನು ಸೋಲಿಸಿ ಮೂರನೇ ಬಾರಿ ವಿಶ್ವ ಚಾಂಪಿಯನ್ ಆಯಿತು
  • ವಿಶ್ವಕಪ್​ ಟ್ರೋಫಿಯನ್ನು ಮತ್ತೆ ಗೆಲ್ಲುವುದರೊಂದಿಗೆ ಹಲವು ದಾಖಲೆಗಳನ್ನು ಟೀಮ್​ ಇಂಡಿಯಾ ಬರೆದಿದೆ
  • ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್​ ವೈರಲ್​ ಆಗಿದೆ
Suryakumar Yadav : ಭಾರತದ ಕ್ರೀಡಾಭಿಮಾನಿಗಳ ನಿರೀಕ್ಷೆಯಂತೆ ಟೀಮ್ ಇಂಡಿಯಾ 2026ರ ಟಿ20 ವಿಶ್ವಕಪ್​ನಲ್ಲಿ ಗೆಲುವು ಸಾಧಿಸಿದೆ. ಭಾನುವಾರ (ಮಾರ್ಚ್​ 08) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಆತಿಥೇಯ ಭಾರತ ತಂಡ, ನ್ಯೂಜಿಲೆಂಡ್​ ತಂಡವನ್ನು ಸೋಲಿಸಿ ಮೂರನೇ ಬಾರಿ ವಿಶ್ವ ಚಾಂಪಿಯನ್ ಆಯಿತು.
ಪ್ರತಿಷ್ಠಿತ ವಿಶ್ವಕಪ್​ ಟ್ರೋಫಿಯನ್ನು ಮತ್ತೆ ಗೆಲ್ಲುವುದರೊಂದಿಗೆ ಹಲವು ದಾಖಲೆಗಳನ್ನು ಟೀಮ್​ ಇಂಡಿಯಾ ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ. ಸತತ ಎರಡೇ ಬಾರಿ ಟಿ20 ವಿಶ್ವಕಪ್​ ಗೆದ್ದ ಏಕೈಕ ತಂಡ ಹಾಗೂ ಟಿ20 ವಿಶ್ವಕಪ್​ ಗೆದ್ದ ಮೊದಲ ಆತಿಥೇಯ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಭಾರತವು ಅತಿ ಹೆಚ್ಚು ಬಾರಿ ಟಿ20 ವಿಶ್ವಕಪ್ ಗೆದ್ದ ತಂಡವಾಗಿ ದಾಖಲೆ ಪುಸ್ತಕಗಳನ್ನು ಪ್ರವೇಶಿಸಿದೆ. ಇದು ಭಾರತಕ್ಕೆ ಮೂರನೇ (2007, 2024, 2026) ಟಿ20 ವಿಶ್ವಕಪ್ ಟ್ರೋಫಿಯಾಗಿದೆ. ಈ ಸ್ಮರಣೀಯ ಗೆಲುವಿನ ನಂತರ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಸಕ್ತಿದಾಯಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
12 ವರ್ಷಗಳ ಹಿಂದಿನ ಅಂದರೆ, 2014ರಲ್ಲಿ ತೆಗೆದ ಫೋಟೋ ಮತ್ತು ಇತ್ತೀಚಿಗೆ ಅಂದರೆ, ವಿಶ್ವಕಪ್​ ಗೆದ್ದ ಬಳಿಕ ಸೆರೆಹಿಡಿದ ಫೋಟೋವನ್ನು ಸೂರ್ಯ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. 12 ವರ್ಷಗಳ ಹಿಂದಿನ ಫೋಟೋಗೆ "ಸ್ನೇಹಿತನ ಪೆಟ್ರೋಲ್ ಪಂಪ್ ಉದ್ಘಾಟನೆ ದಿನ... ನಿಜಕ್ಕೂ ಆತ ಸಂತೋಷವಾಗಿದ್ದಾನೆ" ಎಂದು ಸೂರ್ಯ ಬರೆದುಕೊಂಡಿದ್ದರು. 2026ರ ಟಿ 20 ವಿಶ್ವಕಪ್ ಗೆದ್ದ ನಂತರ ಟ್ರೋಫಿಯೊಂದಿಗೆ ತೆಗೆಸಿಕೊಂಡಿರುವ ಫೋಟೋವನ್ನು, ಹಳೆಯ ಟ್ವೀಟ್​ನೊಂದಿಗೆ ಹಂಚಿಕೊಂಡಿರುವ ಸೂರ್ಯ, 'ಈ ವ್ಯಕ್ತಿ ಇಂದು ತುಂಬಾ ಸಂತೋಷವಾಗಿದ್ದಾನೆ' ಎಂದು ಬರೆದುಕೊಂಡಿದ್ದಾರೆ.
ಸದ್ಯ ಸೂರ್ಯಕುಮಾರ್​ ಅವರ ಪೋಸ್ಟ್​ ವೈರಲ್​ ಆಗಿದ್ದು, ನೆಟ್ಟಿಗರು ಬಗೆಬಗೆಯ ಕಾಮೆಂಟ್​ ಮಾಡುತ್ತಿದ್ದಾರೆ. ಎಷ್ಟೇ ಎತ್ತರದ ಸ್ಥಾನಕ್ಕೆ ಏರಿದರೂ ಹಳೆಯದ್ದನ್ನು ಮರೆಯಬಾರದು ಅನ್ನೋದನ್ನು ಸೂರ್ಯರನ್ನು ನೋಡಿ ಕಲಿಯಬೇಕು ಎಂದು ಕಾಮೆಂಟ್​ ಮಾಡುತ್ತಿದ್ದಾರೆ.
ಮುಂದಿನ ಗುರಿ
ಫೈನಲ್​ ಪಂದ್ಯದ ನಂತರ ಮಾತನಾಡಿದ ಸೂರ್ಯಕುಮಾರ್, ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದು ನಮ್ಮ ಮುಂದಿನ ಗುರಿಯಾಗಿದೆ ಮತ್ತು ಅದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್-2028 ಟ್ರೋಫಿಯನ್ನು ಎತ್ತಿ ಹಿಡಿಯುವುದು ಕೂಡ ನಮ್ಮ ಗುರಿಯಾಗಿದೆ ಎಂದು ಹೇಳಿದರು. 

ನನ್ನ ಮೇಲೆ ನಂಬಿಕೆ ಇಟ್ಟರು

ವಿಶ್ವಕಪ್​ ಗೆದ್ದ ನನಗಿಂದು ತುಂಬಾ ಸಂತೋಷವಾಗಿದೆ. ಇದೊಂದು ದೀರ್ಘ ಪ್ರಯಾಣವಾಗಿದ್ದು, ಈ ಯಶಸ್ಸಿಗೆ 2024ರ ವಿಶ್ವಕಪ್ ನಂತರ ತಂಡದಲ್ಲಿ ಆಗಿರುವ ಬದಲಾವಣೆಗಳೇ ಕಾರಣ. ಆ ಸಮಯದಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ್ ಶಾ, ರೋಹಿತ್ (ಶರ್ಮಾ) ಭಾಯ್ ಮತ್ತು ತಂಡದ ಎಲ್ಲಾ ಸದಸ್ಯರು ನನ್ನ ಮೇಲೆ ನಂಬಿಕೆ ಇಟ್ಟಿದ್ದರು ಮತ್ತು ತಂಡವನ್ನು ಮುನ್ನಡೆಸಲು ನನಗೆ ಅವಕಾಶ ನೀಡಿದರು. ಆ ನಂಬಿಕೆ ತಂಡವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಿದೆ ಎಂದು ಸೂರ್ಯಕುಮಾರ್​ ಹೇಳಿದರು.

ತುಂಬಾ ವಿಶೇಷ ಕ್ಷಣ

ಇಂದು ನಾವು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ದೊಡ್ಡ ಗೆಲುವು ಸಾಧಿಸಿದ್ದೇವೆ. ಇದೊಂದು ವಿಶೇಷ ಭಾವನೆ. ಭಾರತೀಯ ತಂಡವನ್ನು ಮುನ್ನಡೆಸುವುದು ಮತ್ತು ವಿಶ್ವಕಪ್ ಗೆಲ್ಲುವುದು ನನ್ನ ಜೀವನದಲ್ಲಿ ಬಹಳ ವಿಶೇಷವಾಗಿದೆ. ಈ ಕ್ಷಣಗಳನ್ನು ನಾನು ಎಂದಿಗೂ ಒಟ್ಟಿಗೆ ಸೇರಿಸಲು ಸಾಧ್ಯವಾಗುವುದಿಲ್ಲ. ಇದೊಂದು ವಿಶೇಷ ಕ್ಷಣ ಎಂದು ಸೂರ್ಯಕುಮಾರ್​ ಯಾದವ್​ ಅವರು ಹೇಳಿದರು.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ನಡೆದ ಫೈನಲ್​ ಎಂಬ ಮಹಾಕದನದಲ್ಲಿ ಟೀಮ್​ ಇಂಡಿಯಾ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ (89 ರನ್​, 46 ಎಸೆತ, 5 ಬೌಂಡರಿ, 8 ಸಿಕ್ಸರ್‌) ಹಾಗೂ ಅಭಿಷೇಕ್ ಶರ್ಮಾ (52 ರನ್​, 21 ಎಸೆತ, 6 ಬೌಂಡರಿ, 3 ಸಿಕ್ಸರ್‌) ಭರ್ಜರಿ ಆರಂಭ ಒದಗಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಇಶಾನ್ ಕಿಶನ್ (54 ರನ್​, 25 ಎಸೆತ, 4 ಬೌಂಡರಿ, 4 ಸಿಕ್ಸರ್‌) ಅರ್ಧ ಶತಕದೊಂದಿಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಕೊನೆಯಲ್ಲಿ ಬಂದ ಶಿವಂ ದುಬೆ ( ಅಜೇಯ 26 ರನ್​, 8 ಎಸೆತ, 3 ಬೌಂಡರಿ, 2 ಸಿಕ್ಸರ್‌) ವಿನಾಶಕಾರಿ ಇನ್ನಿಂಗ್ಸ್ ಆಡಿದರು. ಈ ಮೂಲಕ ಟೀಮ್​ ಇಂಡಿಯಾ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 255 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಕಿವೀಸ್ ಬೌಲರ್‌ಗಳಲ್ಲಿ, ಜೇಮ್ಸ್ ನೀಶಮ್ ಮೂರು ವಿಕೆಟ್‌ಗಳನ್ನು ಪಡೆದರೆ, ಮ್ಯಾಟ್ ಹೆನ್ರಿ ಮತ್ತು ರಾಚಿನ್ ರವೀಂದ್ರ ತಲಾ ಒಂದು ವಿಕೆಟ್ ಪಡೆದರು.
256 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕಿವೀಸ್ ತಂಡ, ಟೀಮ್​ ಇಂಡಿಯಾದ ಬೌಲಿಂಗ್​ ದಾಳಿಗೆ ತತ್ತರಿಸಿತು. ಅಂತಿಮವಾಗಿ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಕಿವೀಸ್​ ಪರ ಟಿಮ್ ಸೈಫರ್ಟ್ (26 ಎಸೆತಗಳಲ್ಲಿ 52 ರನ್) ಮತ್ತು ಮಿಚೆಲ್ ಸ್ಯಾಂಟ್ನರ್ (35 ಎಸೆತಗಳಲ್ಲಿ 43 ರನ್) ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಉಳಿದಂತೆ ಯಾವೊಬ್ಬ ಬ್ಯಾಟರ್​ ಕೂಡ ಪ್ರಭಾವ ಬೀರಲಿಲ್ಲ. ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದ್ದ ಫಿನ್​ ಅಲೆನ್​ ನಿನ್ನೆಯ ಪಂದ್ಯದಲ್ಲಿ ಕೇವಲ 9 ರನ್​ಗೆ ಔಟಾದರು. ಟೀಮ್​ ಇಂಡಿಯಾ ಪರ  ಜಸ್​ಪ್ರೀತ್​ ಬುಮ್ರಾ ನಾಲ್ಕು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮೂರು ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಮತ್ತು ಅಭಿಷೇಕ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net