ಫಾಲೋ-ಆನ್ ಇದ್ದಿದ್ದರೆ ಇವರಿಬ್ಬರ ಬ್ಯಾಟಿಂಗ್ ಮತ್ತೊಮ್ಮೆ ನೋಡಬಹುದಿತ್ತು: ಟೀಮ್ ಇಂಡಿಯಾ ಹೀನಾಯ ಸೋಲಿನ ಬಳಿಕ ಗವಾಸ್ಕರ್ ಹಾಸ್ಯ ಚಟಾಕಿ! | Sunil Gavaskar

ಫಾಲೋ-ಆನ್ ಇದ್ದಿದ್ದರೆ ಇವರಿಬ್ಬರ ಬ್ಯಾಟಿಂಗ್ ಮತ್ತೊಮ್ಮೆ ನೋಡಬಹುದಿತ್ತು: ಟೀಮ್ ಇಂಡಿಯಾ ಹೀನಾಯ ಸೋಲಿನ ಬಳಿಕ ಗವಾಸ್ಕರ್ ಹಾಸ್ಯ ಚಟಾಕಿ! | Sunil Gavaskar
Published on: 

Sunil Gavaskar: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಅನುಭವಿಸಿದ 244 ರನ್‌ಗಳ ಹೀನಾಯ ಸೋಲಿನ ಬೆನ್ನಲ್ಲೇ, ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹಾಸ್ಯಮಯವಾಗಿ ಕಾಲೆಳೆದಿದ್ದಾರೆ. ಬೇ ಓವಲ್ ಮೈದಾನದಲ್ಲಿ ನ್ಯೂಜಿಲೆಂಡ್ ನೀಡಿದ 334 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ, ಕೇವಲ 89 ರನ್‌ಗಳಿಗೆ ಆಲೌಟ್ ಆಯಿತು. ಇದು ಏಕದಿನ ಕ್ರಿಕೆಟ್‌ನಲ್ಲಿ ಕಿವೀಸ್ ವಿರುದ್ಧ ಭಾರತ ದಾಖಲಿಸಿದ ಎರಡನೇ ಕನಿಷ್ಠ ಮೊತ್ತವಾಗಿದೆ.

ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಶೂನ್ಯಕ್ಕೆ (ಡಕ್) ಔಟಾಗಿದ್ದನ್ನು ಉಲ್ಲೇಖಿಸಿ ಮಾತನಾಡಿದ ಗವಾಸ್ಕರ್, ಏಕದಿನ ಪಂದ್ಯದಲ್ಲೂ ಫಾಲೋ-ಆನ್ ನಿಯಮ ಇದ್ದಿದ್ದರೆ, ಅಭಿಮಾನಿಗಳಿಗೆ ಕೊಹ್ಲಿ ಮತ್ತು ರೋಹಿತ್ ಬ್ಯಾಟಿಂಗ್ ಅನ್ನು ಮತ್ತೊಮ್ಮೆ ನೋಡುವ ಅವಕಾಶ ಸಿಗುತ್ತಿತ್ತು ಎಂದು ತಮಾಷೆ ಮಾಡಿದ್ದಾರೆ.

ಪಂದ್ಯದ ನಂತರ ಸೋನಿ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಾತನಾಡಿದ ಗವಾಸ್ಕರ್, ನ್ಯೂಜಿಲೆಂಡ್ 244 ರನ್‌ಗಳಿಂದ ಗೆದ್ದಿದೆ, ಇದೊಂದು ಬೃಹತ್ ಜಯ. ನಾವು ಲಾಂಜ್‌ನಲ್ಲಿ ಕುಳಿತು ತಮಾಷೆ ಮಾಡುತ್ತಿದ್ದೆವು. ಒಂದು ವೇಳೆ ಫಾಲೋ-ಆನ್ ನಿಯಮ ಇದ್ದಿದ್ದರೆ, ನಮಗೆ ರೋಹಿತ್ ಮತ್ತು ವಿರಾಟ್ ಬ್ಯಾಟಿಂಗ್ ನೋಡಲು ಮತ್ತೊಂದು ಅವಕಾಶ ಸಿಗುತ್ತಿತ್ತು. ಆದಾಗ್ಯೂ, ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

Also Read
ಅದೇ ನನ್ನ ಮುಖ್ಯ ಗುರಿಯಾಗಿತ್ತು! ಟೀಮ್ ಇಂಡಿಯಾ ದಿಗ್ಗಜರನ್ನು ಕಟ್ಟಿಹಾಕಿದ ರಹಸ್ಯ ಬಿಚ್ಚಿಟ್ಟ ಕಿವೀಸ್​ ವೇಗಿ | Matt Henry
ಫಾಲೋ-ಆನ್ ಇದ್ದಿದ್ದರೆ ಇವರಿಬ್ಬರ ಬ್ಯಾಟಿಂಗ್ ಮತ್ತೊಮ್ಮೆ ನೋಡಬಹುದಿತ್ತು: ಟೀಮ್ ಇಂಡಿಯಾ ಹೀನಾಯ ಸೋಲಿನ ಬಳಿಕ ಗವಾಸ್ಕರ್ ಹಾಸ್ಯ ಚಟಾಕಿ! | Sunil Gavaskar

ಮ್ಯಾಟ್ ಹೆನ್ರಿ ಬೌಲಿಂಗ್ ಶ್ಲಾಘಿಸಿದ ಗವಾಸ್ಕರ್

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಾತ್ರವಲ್ಲದೆ, ಹಂಗಾಮಿ ನಾಯಕ ಶ್ರೇಯಸ್ ಅಯ್ಯರ್ ಕೂಡ ಖಾತೆ ತೆರೆಯದೆ ಪೆವಿಲಿಯನ್ ಸೇರಿದ್ದರು. ಪಂದ್ಯದ ಬಳಿಕ ಅಗ್ರ ಕ್ರಮಾಂಕದ ಕುಸಿತವನ್ನು ಸಮರ್ಥಿಸಿಕೊಂಡಿದ್ದ ಅಯ್ಯರ್, ಉತ್ತಮ ಎಸೆತಗಳಿಗೆ ಬ್ಯಾಟರ್‌ಗಳು ವಿಕೆಟ್ ಒಪ್ಪಿಸಿದ್ದಾರೆ ಎಂದು ಹೇಳಿದ್ದರು. ಅಯ್ಯರ್ ಅವರ ಈ ಅಭಿಪ್ರಾಯಕ್ಕೆ ಬೆಂಬಲ ಸೂಚಿಸಿದ ಸುನಿಲ್ ಗವಾಸ್ಕರ್, ಮ್ಯಾಟ್ ಹೆನ್ರಿ ನೇತೃತ್ವದ ನ್ಯೂಜಿಲೆಂಡ್ ಬೌಲರ್‌ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದು, ಅವರಿಗೆ ಪೂರ್ಣ ಶ್ರೇಯಸ್ಸು ಸಲ್ಲಬೇಕು ಎಂದು ಹೇಳಿದ್ದಾರೆ.

ಮ್ಯಾಟ್ ಹೆನ್ರಿ ಬೌಲಿಂಗ್ ಮಾಡಿದ ಲೈನ್ ಮತ್ತು ಲೆಂತ್, ಚೆಂಡನ್ನು ಸ್ವಿಂಗ್ ಮಾಡುತ್ತಿದ್ದ ರೀತಿ ಹಾಗೂ ಆಗಾಗ ಬೌನ್ಸರ್‌ಗಳನ್ನು ಎಸೆದ ಪರಿ ನಿಜಕ್ಕೂ ಅಸಾಧಾರಣವಾಗಿತ್ತು. ಅಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಗಿರಲಿಲ್ಲ. ಶ್ರೇಯಸ್ ಹೇಳಿದಂತೆ ಯಾರೂ ತಮ್ಮ ವಿಕೆಟ್ ಅನ್ನು ಸುಲಭವಾಗಿ ಎಸೆದು ಹೋಗಿಲ್ಲ. ಅತ್ಯುತ್ತಮ ಎಸೆತಗಳಿಗೆ ಅವರು ಔಟಾಗಿದ್ದಾರೆ, ಕ್ರಿಕೆಟ್‌ನಲ್ಲಿ ಕೆಲವೊಮ್ಮೆ ಹೀಗಾಗುತ್ತದೆ ಎಂದು ಗವಾಸ್ಕರ್ ವಿಶ್ಲೇಷಿಸಿದರು.

ರೋಹಿತ್ ಶರ್ಮಾ ವಿಕೆಟ್ ಬಗ್ಗೆ ಗವಾಸ್ಕರ್ ವಿಶ್ಲೇಷಣೆ!

ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಔಟಾದ ರೋಹಿತ್ ಶರ್ಮಾ ಅವರ ವಿಕೆಟ್ ಪತನದ ಬಗ್ಗೆಯೂ ಗವಾಸ್ಕರ್ ತಮ್ಮ ಅಭಿಪ್ರಾಯ ಹಂಚಿಕೊಂಡರು. ಅಗ್ರ ಕ್ರಮಾಂಕದ ವೈಫಲ್ಯಗಳಲ್ಲಿ ರೋಹಿತ್ ವಿಕೆಟ್​ ಅನ್ನು ತಪ್ಪಿಸಲು ಸಾಧ್ಯವೇ ಇರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಪಿಚ್ ಹೇಗೆ ವರ್ತಿಸುತ್ತದೆ ಎಂಬುದರ ಯಾವುದೇ ಮುನ್ಸೂಚನೆ ಇಲ್ಲದ ಕಾರಣ, ಆಡಲು ಅಸಾಧ್ಯವಾದ ಎಸೆತಕ್ಕೆ ರೋಹಿತ್ ಬಲಿಯಾದರು ಎಂದು ಗವಾಸ್ಕರ್ ಹೇಳಿದರು.

ಅದು ಐದನೇ ಅಥವಾ ಆರನೇ ಎಸೆತವಾಗಿದ್ದರೆ ನಿಮ್ಮ ಫುಟ್‌ವರ್ಕ್ ಸ್ವಲ್ಪ ಕೆಲಸ ಮಾಡುತ್ತಿತ್ತು ಮತ್ತು ಪಿಚ್‌ನಿಂದ ಚೆಂಡು ಹೇಗೆ ಬರುತ್ತಿದೆ ಎಂಬ ಸಣ್ಣ ಕಲ್ಪನೆ ಸಿಗುತ್ತಿತ್ತು. ಆಗ ಸಣ್ಣ ಹೊಂದಾಣಿಕೆ ಮಾಡಿಕೊಳ್ಳಬಹುದಿತ್ತು. ಆದರೆ ಆರಂಭಿಕ ಬ್ಯಾಟರ್‌ಗಳಿಗೆ ಇರುವ ದೊಡ್ಡ ಸಮಸ್ಯೆಯೇ ಇದು. ಕೆಲವೊಮ್ಮೆ ಮೊದಲ ಒಂದೆರಡು ಓವರ್‌ಗಳಲ್ಲಿ ಚೆಂಡು ಎಷ್ಟೊಂದು ಸ್ವಿಂಗ್ ಆಗುತ್ತದೆ ಎಂದರೆ ಬ್ಯಾಟರ್‌ಗಳಿಗೆ ಯಾವುದೇ ಅವಕಾಶವೇ ಇರುವುದಿಲ್ಲ ಎಂದು ಗವಾಸ್ಕರ್ ವಿವರಿಸಿದರು.

ಮ್ಯಾಟ್ ಹೆನ್ರಿ ಅವರ ಆ ಎಸೆತವನ್ನು ದಿಗ್ಗಜ ಕಪಿಲ್ ದೇವ್ ಅವರ ಬೌಲಿಂಗ್‌ಗೆ ಹೋಲಿಸಿದ ಗವಾಸ್ಕರ್, ರೋಹಿತ್ ಸಂಪೂರ್ಣವಾಗಿ ಕಕ್ಕಾಬಿಕ್ಕಿಯಾದರು. ಕಪಿಲ್ ದೇವ್ ಇಂತಹ ಎಸೆತಗಳನ್ನು ಹಾಕುತ್ತಿದ್ದರು. ಕಪಿಲ್ ತಮ್ಮ ವೃತ್ತಿಜೀವನದ ಮೊದಲ ಮೂರ್ನಾಲ್ಕು ವರ್ಷಗಳಲ್ಲಿ ಎಷ್ಟೊಂದು ಅದ್ಭುತವಾಗಿ ಔಟ್‌ಸ್ವಿಂಗ್ ಮಾಡುತ್ತಿದ್ದರು ಎಂದರೆ, ದೊಡ್ಡ ದೊಡ್ಡ ಬ್ಯಾಟರ್‌ಗಳೇ ಸಂಪೂರ್ಣವಾಗಿ ತಬ್ಬಿಬ್ಬಾಗುತ್ತಿದ್ದರು. ಅದು ಅಂತಹದ್ದೇ ಒಂದು ಅತ್ಯುತ್ತಮ ಎಸೆತವಾಗಿತ್ತು, ಅದೂ ಇನ್ನಿಂಗ್ಸ್‌ನ ಮೊದಲ ಎಸೆತ ಎಂದು ಕೊಂಡಾಡಿದರು(ಏಜೆನ್ಸೀಸ್​).