ಮೈದಾನದಲ್ಲಿ ಸುಖಾಸುಮ್ಮನೇ ವೈಭವ್ ಸೂರ್ಯವಂಶಿಯನ್ನು ಕೆಣಕಿದ ಲಂಕಾ ಆಟಗಾರನಿಗೆ ಬಿಗ್​ ಶಾಕ್​! Vaibhav Sooryavanshi

ಮೈದಾನದಲ್ಲಿ ಸುಖಾಸುಮ್ಮನೇ ವೈಭವ್ ಸೂರ್ಯವಂಶಿಯನ್ನು ಕೆಣಕಿದ ಲಂಕಾ ಆಟಗಾರನಿಗೆ ಬಿಗ್​ ಶಾಕ್​! Vaibhav Sooryavanshi
ಮೈದಾನದಲ್ಲಿ ಸುಖಾಸುಮ್ಮನೇ ವೈಭವ್ ಸೂರ್ಯವಂಶಿಯನ್ನು ಕೆಣಕಿದ ಲಂಕಾ ಆಟಗಾರನಿಗೆ ಬಿಗ್​ ಶಾಕ್​! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಲಂಕಾ ಆಟಗಾರ ವಿಶೇನ್ ಹಲಂಬಾಗೆ ಮತ್ತು ವೈಭವ್ ನಡುವೆ ನಡೆದ ಜಟಾಪಟಿ
  • ಮೈದಾನದಲ್ಲೇ ಕಿರಿಕ್ ಮಾಡಿದ ವಿಶೇನ್ ಹಲಂಬಾಗೆಗೆ ಶಾಕ್​ ಕೊಟ್ಟ ಶ್ರೀಲಂಕಾ ಕ್ರಿಕೆಟ್ ಮಂಡಳಿ
  • ವರದಿಯ ಆಧಾರದ ಹಲಂಬಾಗೆಗೆ ದಂಡ ವಿಧಿಸಿದ ಮ್ಯಾಚ್ ರೆಫ್ರಿ ಪ್ರದೀಪ್ ಜಯಪ್ರಗಾಶ್
  • ದಂಡ ವಿಧಿಸುವ ಮುನ್ನ ಯಾವುದೇ ಔಪಚಾರಿಕ ಐಸಿಸಿ ಶೈಲಿಯ ವಿಚಾರಣೆ ನಡೆದಿಲ್ಲ
Vaibhav Sooryavanshi : ಭಾರತ ‘ಎ’ ಹಾಗೂ ಶ್ರೀಲಂಕಾ ‘ಎ’ ತಂಡಗಳ ನಡುವೆ ಸೋಮವಾರ ನಡೆದ ಪಂದ್ಯದ ವೇಳೆ ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಜೊತೆ ಮೈದಾನದಲ್ಲೇ ಕಿರಿಕ್ ಮಾಡಿಕೊಂಡಿದ್ದ ಶ್ರೀಲಂಕಾದ ಆಟಗಾರ ವಿಶೇನ್ ಹಲಂಬಾಗೆಗೆ ಅಲ್ಲಿನ ಕ್ರಿಕೆಟ್ ಮಂಡಳಿ (SLC) ದಂಡ ವಿಧಿಸಿದೆ.
ಕ್ರಿಕ್‌ಬಜ್ ವರದಿಯ ಪ್ರಕಾರ, ಆನ್-ಫೀಲ್ಡ್ ಅಂಪೈರ್‌ಗಳು ನೀಡಿದ ವರದಿಯ ಆಧಾರದ ಮೇಲೆ ಮ್ಯಾಚ್ ರೆಫ್ರಿ ಪ್ರದೀಪ್ ಜಯಪ್ರಗಾಶ್ ಅವರು ಹಲಂಬಾಗೆಗೆ ದಂಡ ವಿಧಿಸಿದ್ದು, ಈ ಕ್ರಮ ಕೈಗೊಳ್ಳುವ ಮುನ್ನ ಯಾವುದೇ ಔಪಚಾರಿಕ ಐಸಿಸಿ (ICC) ಶೈಲಿಯ ವಿಚಾರಣೆ ನಡೆದಿಲ್ಲ ಎಂದು ತಿಳಿದುಬಂದಿದೆ.
ಅದೇ ವರದಿಯಲ್ಲಿ ಶ್ರೀಲಂಕಾದ ಹಿರಿಯ ವಿಕೆಟ್ ಕೀಪರ್-ಬ್ಯಾಟರ್ ನಿರೋಷನ್ ಡಿಕ್ವೆಲ್ಲಾ ಅವರಿಗೂ ಕೂಡ ದಂಡ ವಿಧಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಡಿಕ್ವೆಲ್ಲಾ ಮೇಲಿನ ಈ ಶಿಸ್ತು ಕ್ರಮಕ್ಕೂ ಹಾಗೂ ಮೈದಾನದಲ್ಲಿ ವಿಶೇನ್ ಹಲಂಬಾಗೆ ಮತ್ತು ವೈಭವ್ ಸೂರ್ಯವಂಶಿ ನಡುವೆ ನಡೆದ ಜಗಳದ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಅಷ್ಟಕ್ಕೂ ಏನಾಯಿತು?

ಭಾರತೀಯ ಮಾಧ್ಯಮಗಳ ವರದಿಗಳ ಪ್ರಕಾರ, 21 ವರ್ಷದ ಲಂಕಾ ಆಲ್‌ರೌಂಡರ್ ವಿಶೇನ್ ಹಲಂಬಾಗೆ, ಭಾರತದ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರ ಐಪಿಎಲ್ ಪ್ರದರ್ಶನವನ್ನು ಗುರಿಯಾಗಿಸಿಕೊಂಡು ಸತತವಾಗಿ ಸ್ಲೆಡ್ಜಿಂಗ್ ಮಾಡಿದ್ದೇ ಈ ಗಲಾಟೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026 ಟೂರ್ನಿಯಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲೇ 'ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್' ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ದಂಬುಲ್ಲಾದಲ್ಲಿ ನಡೆದ ಈ ಅತ್ಯಂತ ರೋಚಕ ಪಂದ್ಯದ ಸೂಪರ್ ಓವರ್‌ನಲ್ಲಿ ಭಾರತದ ಗೆಲುವಿಗೆ ಕೊನೆಯ 3 ಎಸೆತಗಳಲ್ಲಿ 14 ರನ್‌ಗಳ ಅಗತ್ಯವಿದ್ದಾಗ ವೈಭವ್ ಬ್ಯಾಟಿಂಗ್‌ಗೆ ಇಳಿದಿದ್ದರು. ಆದರೆ, ಆ ಎಸೆತಗಳಲ್ಲಿ ಕೇವಲ ಒಂದು ಫೋರ್, ಎರಡು ರನ್ ಹಾಗೂ ಒಂದು ಡಾಟ್ ಬಾಲ್ ಮಾಡಲಷ್ಟೇ ಅವರಿಗೆ ಸಾಧ್ಯವಾಗಿತ್ತು. ಭಾರತ ಸೋಲುತ್ತಿದ್ದಂತೆ ಲಂಕಾ ಆಟಗಾರರು ಅತಿಯಾದ ಸ್ಲೆಡ್ಜಿಂಗ್ ಮೂಲಕ ಸಂಭ್ರಮಿಸಲು ಶುರು ಮಾಡಿದರು, ಇದರಿಂದ ವೈಭವ್ ತೀವ್ರ ನಿರಾಶೆಯಿಂದ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದರು.
ಮೊದಲಿಗೆ ವೈಭವ್ ಸೂರ್ಯವಂಶಿ ಹಾಗೂ ಸೂರ್ಯಂಶ್ ಶೇಡ್ಗೆ ಲಂಕಾ ಆಟಗಾರರ ಈ ವರ್ತನೆಯನ್ನು ನಿರ್ಲಕ್ಷಿಸಲು ಯತ್ನಿಸಿದರಾದರೂ, ಆ ಬಳಿಕ ಶೇಡ್ಗೆ ತಿರುಗಿಬಿದ್ದು ಶ್ರೀಲಂಕಾ ಆಟಗಾರರನ್ನು ನೇರವಾಗಿ ಎದುರಿಸಿದರು. ಈ ವೇಳೆ ಯುವ ಆಟಗಾರ ವೈಭವ್ ಕೂಡ ಅವರೊಂದಿಗೆ ಸೇರಿಕೊಂಡು ವಿಶೇನ್ ಹಲಂಬಾಗೆ ಮೈಮೇಲೆ ಕೈಯಿಟ್ಟು ತಳ್ಳಾಡಿದರು. ಸದ್ಯ ಈ ಮೈದಾನದ ಜಗಳಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು (SLC) ಆಟಗಾರ ಹಲಂಬಾಗೆ ವಿರುದ್ಧ ನಿಖರವಾಗಿ ಯಾವ ನಿಯಮದ ಅಡಿಯಲ್ಲಿ ಶಿಸ್ತು ಕ್ರಮ ಜರುಗಿಸಿದೆ ಮತ್ತು ದಂಡ ವಿಧಿಸಿದೆ ಎಂಬುದು ಇನ್ನು ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಈ ಪಂದ್ಯಗಳು ಐಸಿಸಿ (ICC) ವ್ಯಾಪ್ತಿಯಿಂದ ಹೊರಗಿರುವುದರಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ತನ್ನದೇ ಆದ ಶಿಸ್ತು ಪ್ರಕ್ರಿಯೆಯ ಅಡಿಯಲ್ಲಿ ಈ ಕ್ರಮ ಕೈಗೊಂಡಿದೆ. ಮತ್ತೊಂದೆಡೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಯುವ ಆಟಗಾರ ವೈಭವ್ ಸೂರ್ಯವಂಶಿ ವಿರುದ್ಧ ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ. ಸದ್ಯ ಇಂದು ಅಫ್ಘಾನಿಸ್ತಾನ 'ಎ' ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಸೂರ್ಯವಂಶಿ ಆಡುತ್ತಿದ್ದಾರೆ.
ಇನ್ನು ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಭಾರತ ಹಿರಿಯರ ತಂಡದ ಸ್ಪಿನ್ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಲೆ, ಮೈದಾನದಲ್ಲಿ ಹೇಗೆ 'ನಡೆದುಕೊಳ್ಳಬೇಕು' ಎಂಬ ಬಗ್ಗೆ ಉಭಯ ತಂಡಗಳ ಆಟಗಾರರಿಗೂ ಸೂಕ್ತ 'ಮಾರ್ಗದರ್ಶನ ಅಥವಾ ಶಿಕ್ಷಣ' ನೀಡುವ ಅಗತ್ಯವಿದೆ ಎಂದು ತಿಳಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net