ಮೊಬೈಲ್, ಬೈಕ್​, ಚಪ್ಪಲಿ ಚೆಲ್ಲಾಪಿಲ್ಲಿ...ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದನ ಸಾವಿನ ಸುತ್ತ ಅನುಮಾನದ ಹುತ್ತ! Siddharth Parsunoor

ಮೊಬೈಲ್, ಬೈಕ್​, ಚಪ್ಪಲಿ ಚೆಲ್ಲಾಪಿಲ್ಲಿ...ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದನ ಸಾವಿನ ಸುತ್ತ ಅನುಮಾನದ ಹುತ್ತ! Siddharth Parsunoor
ಮೊಬೈಲ್, ಬೈಕ್​, ಚಪ್ಪಲಿ ಚೆಲ್ಲಾಪಿಲ್ಲಿ...ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದನ ಸಾವಿನ ಸುತ್ತ ಅನುಮಾನದ ಹುತ್ತ! Siddharth Parsunoor
Published on

ಪ್ರಮುಖ ಮುಖ್ಯಾಂಶಗಳು

  • ಹಾಸ್ಯ ಕಲಾವಿದ ಸಿದ್ದಾರ್ಥ ಪರಸನೋರ ನಿಗೂಢ ಸಾವಿನ ಹಿಂದೆ ಹತ್ಯೆ ಶಂಕೆ?
  • ನನ್ನ ಮಗನನ್ನ ಕೊಲೆ ಮಾಡಿ ಅರಣ್ಯ ಪ್ರದೇಶದಲ್ಲಿ ಬಿಸಾಡಿದ್ದಾರೆಂದು ಮೃತನ ತಂದೆ ಗಂಭೀರ ಆರೋಪ
  • ಹುಮನಾಬಾದ್ ತಾಲ್ಲೂಕಿನ ಹಣಕುಣಿ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಸಿದ್ದಾರ್ಥ್ ಶವ ಪತ್ತೆ
  • ಮೊಬೈಲ್, ಚಪ್ಪಲಿ ಹಾಗೂ ಬೈಕ್ ಬೇರೆ ಬೇರೆ ಪ್ರದೇಶಗಳಲ್ಲಿ ಬಿಸಾಡಿ ಹತ್ಯೆ ಮಾಡಿದ್ದಾರೆಂದು ಆರೋಪ
ಬೆಂಗಳೂರು: 'ಮಜಾ ಭಾರತ' ಸೇರಿದಂತೆ ರಿಯಾಲಿಟಿ ಶೋಗಳ ಮೂಲಕ ಕರ್ನಾಟಕದಾದ್ಯಂತ ಜನಪ್ರಿಯತೆ ಗಳಿಸಿದ್ದ ಯುವ ಹಾಸ್ಯ ಕಲಾವಿದ ಸಿದ್ದಾರ್ಥ ಪರಸನೋರ ( Siddharth Parsunoor ) ಅವರ ನಿಗೂಢ ಸಾವು ಇದೀಗ ತೀವ್ರ ಕೌತುಕ ಮೂಡಿಸಿದೆ. ಇತ್ತೀಚೆಗೆ ಅವರ ಮೃತದೇಹ ಪತ್ತೆಯಾದ ಬೆನ್ನಲ್ಲೇ, ಸಿದ್ದಾರ್ಥ ಸಾವು ಸಹಜ ಸಾವಲ್ಲ, ಅದರ ಹಿಂದೆ ಕೊಲೆಯ ಶಂಕೆ ಇದೆ ಎಂಬ ಅನುಮಾನದ ಹುತ್ತ ಸದ್ಯ ದಟ್ಟವಾಗತೊಡಗಿದೆ.
ಹಾಸ್ಯ ಕಲಾವಿದ ಸಿದ್ದಾರ್ಥ ಪರಸನೋರ ಅವರ ಸಾವಿನ ಸುತ್ತ ಹಲವು ನಿಗೂಢತೆಗಳು ಸುತ್ತುವರಿದಿದ್ದು, ಪಾಲಕರು ತಮ್ಮ ಮಗನ ಹತ್ಯೆಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. "ನನ್ನ ಮಗನನ್ನ ವ್ಯವಸ್ಥಿತವಾಗಿ ಕೊಲೆ ಮಾಡಿ ಅರಣ್ಯ ಪ್ರದೇಶದಲ್ಲಿ ತಂದು ಬಿಸಾಡಿದ್ದಾರೆ" ಎಂದು ಮೃತ ಕಲಾವಿದನ ತಂದೆ ನರಸಪ್ಪ ಹಾಗೂ ಕುಟುಂಬಸ್ಥರು ಆರೋಪಿಸಿ ಕಣ್ಣೀರಿಡುತ್ತಿದ್ದಾರೆ. ಕಳೆದ ಜೂನ್ 13ರಂದು ಸ್ನೇಹಿತರೊಂದಿಗೆ ಮನೆಯಿಂದ ಹೊರಹೋಗಿದ್ದ ಸಿದ್ದಾರ್ಥ, ಅದಾದ ಮೂರು ದಿನಗಳ ಬಳಿಕ ಹುಮನಾಬಾದ್ ತಾಲ್ಲೂಕಿನ ಹಣಕುಣಿ ರಸ್ತೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರು.
ಕುಟುಂಬಸ್ಥರ ಅನುಮಾನಕ್ಕೆ ಪ್ರಮುಖ ಕಾರಣ ಸಿದ್ದಾರ್ಥ ಅವರ ವಸ್ತುಗಳು ಸಿಕ್ಕಿರುವ ವಿಚಿತ್ರ ಸ್ಥಿತಿ. ಹಂತಕರು ಸಿದ್ದಾರ್ಥನನ್ನ ಕೊಲೆ ಮಾಡಿ, ಪ್ರಕರಣದ ದಾರಿ ತಪ್ಪಿಸಲು ಆತನ ಮೊಬೈಲ್, ಚಪ್ಪಲಿ ಹಾಗೂ ಬೈಕ್ ಅನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬಿಸಾಡಿದ್ದಾರೆ ಎಂದು ಪೋಷಕರು ಸುಳಿವು ನೀಡಿದ್ದಾರೆ. ಟಿವಿ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಇಡೀ ನಾಡನ್ನೇ ನಗಿಸುತ್ತಿದ್ದ ಮಗನ ಕಾಮಿಡಿ ವಿಡಿಯೋಗಳನ್ನು ಈಗ ಮೊಬೈಲ್‌ನಲ್ಲಿ ನೋಡುತ್ತಾ ಹೆತ್ತ ಕರುಳು ಕಣ್ಣೀರು ಹಾಕುತ್ತಿದ್ದು, ತಮ್ಮ ಮಗನ ಸಾವಿಗೆ ನ್ಯಾಯ ಒದಗಿಸಿಕೊಡಬೇಕೆಂದು ಕಣ್ಣೀರಿನೊಂದಿಗೆ ಮನವಿ ಮಾಡುತ್ತಿದ್ದಾರೆ.
ಸದ್ಯ ಸಿದ್ದಾರ್ಥ ಪರಸನೋರ ಕುಟುಂಬಸ್ಥರು ವ್ಯಕ್ತಪಡಿಸಿರುವ ಗಂಭೀರ ಶಂಕೆಯ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ನಿಗೂಢ ಸಾವಿನ ಅಸಲಿ ರಹಸ್ಯವನ್ನು ಭೇದಿಸಲು ಪೊಲೀಸರು ಈಗಾಗಲೇ ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ತೇಜಗೊಳಿಸಿದ್ದಾರೆ. ವಿಶೇಷವಾಗಿ ಜೂನ್ 13ರಂದು ಕೊನೆ ಘಳಿಗೆಯಲ್ಲಿ ಸಿದ್ದಾರ್ಥ್ ಜೊತೆಗಿದ್ದ ಆತನ ಸ್ನೇಹಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ತನಿಖೆಯ ಬಳಿಕವಷ್ಟೇ ಈ ಸಾವಿನ ಹಿಂದಿನ ನೈಜ ಸತ್ಯಾಂಶ ಹೊರಬರಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net