ಯಶಸ್ವಿ ಜೈಸ್ವಾಲ್​ ಕೇಕ್​​ ತಿನ್ನಿಸಲು ಬಂದಾಗ ನೋ ಎಂದಿದ್ದೇಕೆ ರೋಹಿತ್​? ವಿಶ್ವಕಪ್​ಗಾಗಿ ಕಠಿಣ ತಯಾರಿ! Rohit Sharma

ಯಶಸ್ವಿ ಜೈಸ್ವಾಲ್​ ಕೇಕ್​​ ತಿನ್ನಿಸಲು ಬಂದಾಗ ನೋ ಎಂದ ರೋಹಿತ್​ ಶರ್ಮ
ಯಶಸ್ವಿ ಜೈಸ್ವಾಲ್​ ಕೇಕ್​​ ತಿನ್ನಿಸಲು ಬಂದಾಗ ನೋ ಎಂದ ರೋಹಿತ್​ ಶರ್ಮ
Published on

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾದ ಏಕದಿನ ಸರಣಿ ಜಯ
  • ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡ ಭಾರತ
  • ವಿಶಾಖಪಟ್ಟಣದಲ್ಲಿ ಕೇಕ್ ಕತ್ತರಿಸಿ ವಿಜಯೋತ್ಸವ ಆಚರಿಸಿದ ಟೀಮ್​ ಇಂಡಿಯಾ
  • ಯಶಸ್ವಿ ಜೈಸ್ವಾಲ್​ ಕೇಕ್​​ ತಿನ್ನಿಸಲು ಬಂದಾಗ ಬೇಡ ಎಂದು ನಿರಾಕರಿಸಿದ ರೋಹಿತ್​
Rohit Sharma : ಶನಿವಾರ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅಂತಿಮ ಏಕದಿನ ಪಂದ್ಯವನ್ನು ಗೆದ್ದು, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಭಾರತ ಗೆದ್ದುಕೊಂಡಿತು. ಪಂದ್ಯ ಬಳಿಕ ತಾವು ತಂಗಿದ್ದ ಹೋಟೆಲ್​ಗೆ ಟೀಮ್​ ಇಂಡಿಯಾ ತಲುಪಿದಾಗ ಭವ್ಯ ಸ್ವಾಗತ ದೊರೆಯಿತು. ಈ ವೇಳೆ ಯಶಸ್ವಿ ಜೈಸ್ವಾಲ್ ಅವರು ಕೇಕ್ ಕತ್ತರಿಸಿ ವಿಜಯೋತ್ಸವ ಆಚರಿಸಿದರು.
ಕೇಕ್​ ಕತ್ತರಿಸಿದ ಬಳಿಕ ಮೊದಲ ತುಂಡನ್ನು ಹಿರಿಯ ಆಟಗಾರ ಕೊಹ್ಲಿಗೆ ತಿನ್ನಿಸಿದ ಜೈಸ್ವಾಲ್​, ನಂತರ ಮತ್ತೊಬ್ಬ ಹಿರಿಯ ಆಟಗಾರ ರೋಹಿತ್ ಶರ್ಮಗೆ ತಿನ್ನಿಸಲು ಮುಂದಾದರು. ಆದರೆ, ರೋಹಿತ್​ ಅವರು ತಿನ್ನಲು ನಿರಾಕರಿಸಿದರು. ಹೋಗಪ್ಪ ನಾನು ಮತ್ತೆ ದಪ್ಪಗಾಗುತ್ತೇನೆ ಎನ್ನುತ್ತಾ ಕೇಕ್​ ತಿನ್ನದೇ ಅಲ್ಲಿಂದ ನಗುತ್ತಾ ಹೊರಟು ಹೋದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ಅಂದಹಾಗೆ, ಟಿ20 ಮತ್ತು ಟೆಸ್ಟ್ ಪಂದ್ಯಗಳಿಂದ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮ, ಪ್ರಸ್ತುತ ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದ್ದಾರೆ. 2027ರ ಏಕದಿನ ವಿಶ್ವಕಪ್ ಗುರಿಯೊಂದಿಗೆ ರೋಹಿತ್​ ಅವರು ಏಕದಿನ ಮಾದರಿಯಲ್ಲಿ ಮುಂದುವರಿಯುತ್ತಿದ್ದಾರೆ. ವಿಶ್ವಕಪ್​ಗೆ ಇನ್ನೂ ಸಾಕಷ್ಟು ಸಮಯ ಇರುವುದರಿಂದ ರೋಹಿತ್​ ಅವರು ತಮ್ಮ ಫಿಟ್​ನೆಸ್​ ಕಡೆ ಹೆಚ್ಚು ಗಮನಹರಿಸಿದ್ದಾರೆ.
ಸದ್ಯ ರೋಹಿತ್​ ಅವರು ತಮ್ಮ ಫಿಟ್​ನೆಸ್​ನಲ್ಲಿ ಸಾಕಷ್ಟು ಸುಧಾರಿಸಿಕೊಂಡಿದ್ದಾರೆ. ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಿಸಿದಾಗಿನಿಂದ, ಬರೋಬ್ಬರಿ 10 ಕೆಜಿಗಿಂತ ಹೆಚ್ಚು ತೂಕ ಇಳಿಸಿಕೊಂಡಿದ್ದಾರೆ. ತಮ್ಮ ಫಿಟ್​ನೆಸ್​ಮ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಆಹಾರಕ್ರಮವನ್ನು ಅನುಸರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಣ್ಣ ಕೇಕ್ ತುಂಡನ್ನು ತಿನ್ನಲು ನಿರಾಕರಿಸಿದ್ದಾರೆ.
ಅಂದಹಾಗೆ, ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್​ ಅವರು 51 ಎಸೆತಗಳಲ್ಲಿ 57 ರನ್ ಗಳಿಸಿದರು. ಎರಡನೇ ಏಕದಿನ ಪಂದ್ಯದಲ್ಲಿ 14 ರನ್ ಗಳಿಸಿ ಔಟಾದರು. ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಅವರು 73 ಎಸೆತಗಳಲ್ಲಿ 75 ರನ್ ಗಳಿಸಿ ಭಾರತದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net