ತಮಿಳುನಾಡಿನಲ್ಲಿ ಏಲಿಯನ್​ ದೇವಸ್ಥಾನ: ಇದರ ಹಿಂದಿರುವ ಕತೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Aliens

ಏಲಿಯನ್​ ದೇವಸ್ಥಾನ
ಏಲಿಯನ್​ ದೇವಸ್ಥಾನ
Published on

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿನ ಸೇಲಂನಲ್ಲಿ ಒಂದು ಅಪರೂಪದ ದೇವಾಲಯವಿದೆ
  • ಆ ದೇವಾಲಯ ಸಂಪೂರ್ಣವಾಗಿ ಅನ್ಯಲೋಕದ ಜೀವಿಗೆ ಸಮರ್ಪಿತವಾಗಿದೆ
  • ದೇವರ ಪ್ರತಿಮೆಯ ಬದಲು ಕಪ್ಪು ಬಣ್ಣದ ಅನ್ಯಲೋಕದ ಜೀವಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ
ಚೆನ್ನೈ: ನಮ್ಮ ಭಾರತದಲ್ಲಿ ಲಕ್ಷಾಂತರ ದೇವಾಲಯಗಳಿವೆ. ಹೇಳಬೇಕೆಂದರೆ ಪ್ರತಿ ಊರುಗಳಲ್ಲೂ ಒಂದೊಂದು ದೇವಸ್ಥಾನ ಇದ್ದೇ ಇರುತ್ತದೆ. ಯಾವುದೇ ದೇವಾಲಯವನ್ನು ನೋಡಿದರೂ ಅದನ್ನು ವಾಸ್ತುಶಿಲ್ಪದ ಮಾದರಿಯಲ್ಲಿ ಚಿತ್ರಕಲೆಗಳ ಕೆತ್ತನೆಯೊಂದಿಗೆ ಭವ್ಯವಾಗಿ ನಿರ್ಮಿಸಲಾಗಿರುತ್ತದೆ. ಇನ್ನು ದೇವಾಲಯ ಅಂದಮೇಲೆ ಅಲ್ಲಿ ದೇವರಿಲ್ಲ ಅಂದರೆ ಅದು ಪೂರ್ಣ ಆಗುವುದೇ ಇಲ್ಲ. ವಿಗ್ರಹ ಅಥವಾ ಪ್ರತಿಮೆಯ ರೂಪದಲ್ಲಿ ಗರ್ಭಗುಡಿಯಲ್ಲಿ ದೇವರನ್ನು ಪ್ರತಿಷ್ಠಾಪನೆ ಮಾಡಲಾಗಿರುತ್ತದೆ. ದೇವರ ಮೂರ್ತಿ ನಮ್ಮ, ನಿಮ್ಮಂತೆಯೇ ಮಾನವ ರೂಪದಲ್ಲೇ ಇರುತ್ತದೆ. ಕೆಲವೆಡೆ ಲಿಂಗ ಸೇರಿದಂತೆ ಬೇರೆ ಆಕಾರದಲ್ಲೂ ಇರುತ್ತದೆ. ಆದರೆ, ಅನ್ಯಗ್ರಹ ಜೀವಿಯ ( Aliens ) ರೂಪದಲ್ಲಿರುವುದನ್ನು ಎಂದಾದರೂ ಕೇಳಿದ್ದೀರಾ? ಕೇಳಲು ಅಚ್ಚರಿ ಎನಿಸಿದರೂ ಇದೇ ಸತ್ಯ.
ಹೌದು, ತಮಿಳುನಾಡಿನ ಸೇಲಂನಲ್ಲಿ ಒಂದು ಅಪರೂಪದ ದೇವಾಲಯವಿದೆ. ಈ ದೇವಾಲಯ ಸಂಪೂರ್ಣವಾಗಿ ಅನ್ಯಲೋಕದ ಜೀವಿಗೆ ಸಮರ್ಪಿತವಾಗಿದೆ. ಇಲ್ಲಿ ದೇವರ ಪ್ರತಿಮೆಯ ಬದಲು ಕಪ್ಪು ಬಣ್ಣದ ಅನ್ಯಲೋಕದ ಜೀವಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಏಲಿಯನ್​ಗಳ ವಿಷಯಕ್ಕೆ ಅಂದಾಗ ಒಂದು ಮಾತು ಹೇಳಲೇಬೇಕು. ಅದೇನೆಂದರೆ, ಏಲಿಯನ್​ಗಳು ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ಸದಾ ನಡೆಯುತ್ತಲೇ ಇವೆ. ಆದರೆ, ಅವುಗಳ ಅಸ್ತಿತ್ವದ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟತೆ ಮಾತ್ರ ದೊರೆತಿಲ್ಲ. ಏಲಿಯನ್​ಗಳು ಕಾಣಿಸಿಕೊಳ್ಳುವ ಬಗ್ಗೆ ಆಗಾಗ ಸುದ್ದಿಯಾದರೂ ಕೂಡ ಜನರಲ್ಲಿ ಅವುಗಳ ಅಸ್ತಿತ್ವದ ಪ್ರಶ್ನೆ ಹಾಗೇ ಉಳಿದಿದೆ. ಸಾಕಷ್ಟು ಸಂಶೋಧನೆಗಳು, ಸಿದ್ಧಾಂತಗಳು ಹೊರಬಂದರೂ ಕೂಡ ಏಲಿಯನ್​ಗಳ ಸಂಗತಿ​ ನಿಗೂಢವಾಗಿಯೇ ನಮ್ಮ ನಡುವೆ ಉಳಿದಿದೆ.
ಅಂದಹಾಗೆ, ಏಲಿಯನ್‌ ಮತ್ತು ಹಾರುವ ತಟ್ಟೆಗಳನ್ನು ಕಂಡಿರುವುದಾಗಿ ಕೆಲವರು ವಾದಿಸುತ್ತಾರೆ. ಇನ್ನು ಕೆಲವರು ಏಲಿಯನ್​ಗಳ ಇರುವಿಕೆಯನ್ನೇ ಸುಳ್ಳು ಎನ್ನುತ್ತಾರೆ. ಆಗಾಗ ಭೂಮಿ ಹಾಗೂ ಆಕಾಶದ ಮೇಲೆ ಕೆಲವು ವಿಚಿತ್ರ ವಸ್ತುಗಳು ಕಾಣಿಸಿಕೊಂಡಿವೆ. ಇವುಗಳನ್ನು ಯುಎಫ್​ಒ (ಯೂನಿಫೈಡ್​ ಫ್ಲೈಯಿಂಗ್​ ಆಬ್ಜೆಕ್ಟ್​) ಎಂದು ಕರೆಯಲಾಗುತ್ತದೆ. ಈ ಯುಎಫ್​ಒಗಳು ಅನ್ಯಗ್ರಹ ಜೀವಿಗಳ ವಾಹನ ಎಂದೂ ಹೇಳಲಾಗುತ್ತದೆ. ಇವುಗಳನ್ನು ಕಂಡಿದ್ದಾಗಿ ಆಗಾಗ ಕೆಲವರು ಹೇಳಿಕೊಳ್ಳುತ್ತಿರುತ್ತಾರೆ. ಆದರೆ, ಈ ನಿಗೂಢತೆಯ ಬಗ್ಗೆ ಇನ್ನೂ ಸರಿಯಾದ ಉತ್ತರ ಮಾತ್ರ ಸಿಕ್ಕಿಲ್ಲ. ಈ ವಿಚಾರವಾಗಿ ಅನೇಕ ಅಧ್ಯಯನಗಳು ಇಂದಿಗೂ ನಡೆಯುತ್ತಲೇ ಇವೆ.
ಈಗ ತಾಜಾ ಸಂಗತಿಯ ಕಡೆ ಬರೋಣ. ತಮಿಳುನಾಡಿನ ಸೇಲಂನಲ್ಲಿ ಏಲಿಯನ್​ ದೇವಾಲಯವಿದೆ. ಇದನ್ನು ಸೇಲಂನ ಮಲ್ಲಂ ಮೂಪಂಪಟ್ಟಿಯ ರಾಮಗೌಂಡನೂರಿನ ಸ್ಥಳೀಯ ನಿವಾಸಿ ಲೋಕನಾಥನ್ ಎಂಬುವರು ನಿರ್ಮಿಸಿದ್ದಾರೆ. ತಮ್ಮ ಕನಸಿನಲ್ಲಿ ಅನ್ಯ ದೇವರನ್ನು ನೋಡಿದ ನಂತರ ದೇವಾಲಯವನ್ನು ನಿರ್ಮಿಸಲು ಸ್ಫೂರ್ತಿ ಪಡೆದಿದ್ದಾಗಿ ಹೇಳಿದ್ದಾರೆ. ಈ ದೇವಾಲಯವನ್ನು 11 ಅಡಿ ಭೂಗತದಲ್ಲಿ ನಿರ್ಮಿಸಲಾಗಿದೆ. ಲೋಕನಾಥನ್ ಪ್ರತಿದಿನ ಈ ಕಪ್ಪು ಅನ್ಯಲೋಕದ ಪ್ರತಿಮೆಯನ್ನು ಪೂಜಿಸುತ್ತಾ, ಪ್ರಾರ್ಥಿಸುತ್ತಿದ್ದಾರೆ.
ಈ ಅನ್ಯಲೋಕದ ಜೀವಿ ಶಿವನಿಂದ ಸೃಷ್ಟಿಸಲ್ಪಟ್ಟ ಮೊದಲ ದೇವರು ಮತ್ತು ನೈಸರ್ಗಿಕ ವಿಕೋಪಗಳಿಂದ ಇಡೀ ಜಗತ್ತನ್ನು ರಕ್ಷಿಸುವ ಅಪಾರ ಶಕ್ತಿಯನ್ನು ಹೊಂದಿವೆ ಎಂದು ಲೋಕನಾಥನ್ ಅವರು ನಂಬುತ್ತಾರೆ. ಅಲ್ಲದೆ, ತಾನು ಅನ್ಯಲೋಕದ ಜೀವಿಗಳೊಂದಿಗೆ ಮಾತನಾಡಿರುವುದಾಗಿ ಹೇಳಿಕೊಂಡಿದ್ದಾರೆ. ಏಲಿಯನ್​​ಗಳು ಈ ಜಗತ್ತನ್ನು ರಕ್ಷಿಸಲು ನಮಗೆ ಸಹಾಯ ಮಾಡುತ್ತವೆ. ಸ್ವತಃ ಅವುಗಳೇ ನನಗೆ ಈ ಭರವಸೆಯನ್ನು ನೀಡಿವೆ ಎನ್ನುತ್ತಾರೆ ಲೋಕನಾಥನ್.
10ನೇ ತರಗತಿಯವರೆಗೆ ಮಾತ್ರ ಓದಿರುವ ಲೋಕನಾಥನ್, ಕೆಲವು ವರ್ಷಗಳ ಹಿಂದೆ ಒಂದು ಕೆಫೆಯನ್ನು ನಡೆಸುತ್ತಿದ್ದರು. ಕಾಲು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ, ಸಿದ್ಧರಭಾಗ್ಯ ಎಂಬ ವ್ಯಕ್ತಿಯನ್ನು ಭೇಟಿಯಾಗಿ ಅವರ ಶಿಷ್ಯರಾದರು. ನಂತರ, ಗುರುನಾಥನ್ ಎಂಬ ಮತ್ತೊಬ್ಬ ಮಾರ್ಗದರ್ಶಕರ ಸಲಹೆಯ ಮೇರೆಗೆ, ದೇವಾಲಯದ ನಿರ್ಮಾಣ ಪ್ರಾರಂಭವಾಯಿತು. ಪ್ರಾಚೀನ ಸಿದ್ಧ ತಾಳೆಗರಿ ಗ್ರಂಥಗಳು, ಅನ್ಯಗ್ರಹ ಜೀವಿಗಳ ಬಗ್ಗೆ ಉಲ್ಲೇಖಿಸುತ್ತವೆ ಮತ್ತು ಭವಿಷ್ಯದಲ್ಲಿ ಜನರು ಏಲಿಯನ್​ಗಳನ್ನು ಪೂಜಿಸುತ್ತಾರೆ ಎಂದು ಲೋಕನಾಥನ್ ನಂಬುತ್ತಾರೆ.
ಇನ್ನು ದೇವಾಲಯದ ನಿರ್ಮಾಣಕ್ಕಾಗಿ ಲೋಕನಾಥನ್​ ಅವರು ಯಾವುದೇ ದೇಣಿಗೆ ಸ್ವೀಕರಿಸಿಲ್ಲ. ಬದಲಾಗಿ ತಮ್ಮ ಶಿಷ್ಯರ ಸಹಾಯದಿಂದ ನಿರ್ಮಾಣವನ್ನು ಪೂರ್ಣಗೊಳಿಸಿದ್ದಾರೆ. ಇದೀಗ ದೇವಾಲಯದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ಜನರ ಗಮನ ಸೆಳೆದಿವೆ. ಇಂತಹ ಅಸಾಮಾನ್ಯ ಕಲ್ಪನೆಯನ್ನು ನೋಡಿ ಹುಬ್ಬೇರಿಸಿರುವ ನೆಟ್ಟಿಗರು, ತರಹೇವಾರಿ ಕಾಮೆಂಟ್​ಗಳನ್ನು ಹರಿಬಿಡುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net