ಅದನ್ನು ಯೋಚಿಸಿದರೆ ನನಗೆ ಭಯವಾಗ್ತಿದೆ... ವೈಭವ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಪಾಕ್ ಮಾಜಿ​ ಕ್ರಿಕೆಟರ್​! Vaibhav Suryavanshi

ಅದನ್ನು ಯೋಚಿಸಿದರೆ ನನಗೆ ಭಯವಾಗ್ತಿದೆ... ವೈಭವ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಪಾಕ್​ ಕ್ರಿಕೆಟರ್​! Vaibhav Suryavanshi
ಅದನ್ನು ಯೋಚಿಸಿದರೆ ನನಗೆ ಭಯವಾಗ್ತಿದೆ... ವೈಭವ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಪಾಕ್​ ಕ್ರಿಕೆಟರ್​! Vaibhav Suryavanshi
Published on

ಪ್ರಮುಖ ಮುಖ್ಯಾಂಶಗಳು

  • ಬ್ಯಾಟ್​ ಹಿಡಿದು ಮೈದಾನದಲ್ಲಿ ಅಬ್ಬರಿಸಿ, ಬೊಬ್ಬಿರಿಯುತ್ತಿರುವ ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ
  • ತಮ್ಮ ವಿಧ್ವಂಸಕ ಬ್ಯಾಟಿಂಗ್ ಮೂಲಕವೇ ಪ್ರತಿಯೊಬ್ಬರಿಂದ ಪ್ರಶಂಸೆ ಗಳಿಸುತ್ತಿರುವ ಬಿಹಾರದ ಕುವರ
  • ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​​​ನಲ್ಲಿ ಮೊದಲ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್​ ಮಾಡಿದ ವೈಭವ್​​
  • ವೈಭವ್​ ಸೂರ್ಯವಂಶಿಯ ಬಿರುಗಾಳಿಯ ಬ್ಯಾಟಿಂಗ್​ ನೋಡಿ ಮೆಚ್ಚುಗೆ ಮಾತುಗಳನ್ನಾಡಿದ ಪಾಕ್​ ಕ್ರಿಕೆಟರ್ಸ್​
Vaibhav Suryavanshi : ಬ್ಯಾಟ್​ ಹಿಡಿದು ಮೈದಾನದಲ್ಲಿ ಅಬ್ಬರಿಸಿ, ಬೊಬ್ಬಿರಿಯುತ್ತಿರುವ ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ಪ್ರತಿಯೊಬ್ಬರಿಂದ ಸಾಕಷ್ಟು ಪ್ರಶಂಸೆ ಗಳಿಸುತ್ತಿದ್ದಾರೆ. ಈ ಮಿಂಚಿನ ಬ್ಯಾಟರ್ ಐಪಿಎಲ್‌ ಹಾಗೂ ಭಾರತದ ಅಂಡರ್ -19 ತಂಡದಲ್ಲಿ ತಮ್ಮ ವಿಧ್ವಂಸಕ ಬ್ಯಾಟಿಂಗ್ ಮೂಲಕ ಭಾರಿ ಸಂಚಲನ ಮೂಡಿಸಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಕಳೆದ ವರ್ಷ ರಾಜಸ್ಥಾನ ರಾಯಲ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ವೈಭವ್, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಅತ್ಯಂತ ವೇಗದ ಶತಕ ಗಳಿಸಿ, ಕೇವಲ 14ನೇ ವಯಸ್ಸಿನಲ್ಲಿ ದಾಖಲೆಯ ಪುಟ ಸೇರಿದರು.
ವೈಭವ್ ಕೇವಲ 35 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು. ಐಪಿಎಲ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಿಷ್ಟೇ ಅಲ್ಲದೆ, ವೈಭವ್​ ಅವರ ಅಬ್ಬರದಾಟ ಅಂಡರ್-19 ವಿಶ್ವಕಪ್​ನಲ್ಲೂ ಮುಂದುವರಿಯಿತು. ಇಂಗ್ಲೆಂಡ್ ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ ಕೇವಲ 80 ಎಸೆತಗಳಲ್ಲಿ 175 ರನ್ ಗಳಿಸುವ ಮೂಲಕ ಟೀಮ್​ ಇಂಡಿಯಾದ ಗೆಲುವಿನಲ್ಲಿ ವೈಭವ್​ ಪ್ರಮುಖ ಪಾತ್ರ ವಹಿಸಿದರು.
ತಮ್ಮ ಬ್ಯಾಟಿಂಗ್​ನಲ್ಲಿ ಅದೇ ಆವೇಗವನ್ನು ಮುಂದುವರೆಸಿರುವ ವೈಭವ್​, ಮಾರ್ಚ್​ 28ರಿಂದ ಆರಂಭವಾಗಿರುವ 19ನೇ ಆವೃತ್ತಿಯ ಐಪಿಎಲ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನವನ್ನು ಆರಂಭಿಸಿದ್ದಾರೆ. ಮಾರ್ಚ್​ 31ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ 52 ರನ್ ಗಳಿಸುವ ಮೂಲಕ ಬ್ಯಾಟಿಂಗ್​ನಲ್ಲಿ ವಿನಾಶ ಸೃಷ್ಟಿಸಿದರು.

ಟೀಮ್ ಇಂಡಿಯಾಗೆ ಆಯ್ಕೆ ಮಾಡುವಂತೆ ಒತ್ತಾಯ

ವೈಭವ್, ನಿರಂತರವಾಗಿ ತೋರುತ್ತಿರುವ ಉತ್ತಮ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾಗೆ ಆತನನ್ನು ಆಯ್ಕೆ ಮಾಡಬೇಕೆಂಬ ಬೇಡಿಕೆಗಳು ಹೆಚ್ಚುತ್ತಿವೆ. 19ನೇ ಆವೃತ್ತಿಯ ಐಪಿಎಲ್​ ಮುಗಿದ ಬಳಿಕ ಭಾರತ ತಂಡ ಇಂಗ್ಲೆಂಡ್‌ ಪ್ರವಾಸ ಮಾಡಲಿದೆ. ಹೀಗಾಗಿ, ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್ ವೈಭವ್​ ಉದ್ದೇಶಿಸಿ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಅದೇನೆಂದರೆ, ಇಂಗ್ಲೆಂಡ್​ ಪ್ರವಾಸಕ್ಕೆ ವೈಭವ್​ರನ್ನು ಕಳುಹಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ.

ಟೀಮ್ ಇಂಡಿಯಾ ಪ್ರವೇಶಿಸಲಿದ್ದಾರೆ

ಮೈಕೆಲ್​ ವಾನ್​ ಮಾತ್ರವಲ್ಲ, ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ಕಮ್ರಾನ್ ಅಕ್ಮಲ್ ಮತ್ತು ಬಸಿತ್ ಅಲಿ ಕೂಡ ವೈಭವ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇತ್ತೀಚೆಗೆ ಗೇಮ್ ಪ್ಲಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಮಲ್​, ಇಲ್ಲಿಯವರೆಗೆ ಕೇವಲ 8 ಐಪಿಎಲ್ ಪಂದ್ಯಗಳನ್ನು ಆಡಿರುವ ಈ ಹುಡುಗ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾನೆ. ಶೀಘ್ರದಲ್ಲೇ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲಿದ್ದಾನೆ ಎಂದು ತೋರುತ್ತದೆ ಎಂದಿದ್ದಾರೆ.
ಐಪಿಎಲ್ ಮುಗಿದ ನಂತರ ಭಾರತ ತಂಡ ಆಡುವ ಸರಣಿಯ ಸಮಯದಲ್ಲಿ ವೈಭವ್​ ಅವರು ತಂಡಕ್ಕೆ ಸೇರಬಹುದು. ಒಂದು ವೇಳೆ ಆ ರೀತಿ ಆದಲ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರರಾಗುತ್ತಾರೆ. ವೈಭವ್​ ಅವರು ತಮ್ಮ ಇದೇ ಫಾರ್ಮ್ ಅನ್ನು ಮುಂದುವರಿಸಿದರೆ, ಖಂಡಿತವಾಗಿಯೂ ಭಾರತೀಯ ತಂಡಕ್ಕೆ ಬರುತ್ತಾರೆ ಎಂದು ಅಕ್ಮಲ್​ ಹೇಳಿದರು.

ನನಗೆ ಭಯವಾಗಿದೆ

ಮತ್ತೊಂದೆಡೆ, ಬಸಿತ್ ಅಲಿ ಮಾತನಾಡುತ್ತಾ, ವೈಭವ್​ಗೆ ಆಟದ ಬಗ್ಗೆ ಸಂಪೂರ್ಣ ತಿಳುವಳಿಕೆ ಇದೆ. ಅವರು ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಪ್ರಬುದ್ಧರಾಗಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ 128 ರನ್ ಗಳಿಸಬೇಕಾಗಿತ್ತು ಎಂಬುದು ದೊಡ್ಡ ವಿಷಯವಲ್ಲ. ಆದಾಗ್ಯೂ, ವೈಭವ್ ಕೇವಲ 15 ಎಸೆತಗಳಲ್ಲಿ 50 ರನ್ ಗಳಿಸಿರುವುದು ಚರ್ಚಾಸ್ಪದ ವಿಷಯವಾಗಿದೆ. ಅವರ ತಂದೆ ತುಂಬಾ ಹೆಮ್ಮೆಪಡಬೇಕು. ತರಬೇತುದಾರರು ಮತ್ತು ಕ್ರಿಕೆಟ್ ಕ್ಲಬ್ ಸ್ನೇಹಿತರು ಸಂತೋಷಪಡಬೇಕು. ಈಗಲೇ ಈ ರೀತಿ ಆಡುವಾಗ 16 ವರ್ಷ ತಲುಪಿದರೆ ಬೌಲರ್‌ಗಳ ಪರಿಸ್ಥಿತಿಯ ಬಗ್ಗೆ ಯೋಚಿಸಲು ನನಗೆ ಭಯವಾಗುತ್ತದೆ. ಈ ಮಗು ಎಲ್ಲರ ಮೇಲೂ ಪ್ರಾಬಲ್ಯ ಸಾಧಿಸಬಹುದು ಎಂದು ವೈಭವ್ ಸೂರ್ಯವಂಶಿಯನ್ನು ಬಸಿತ್​ ಅಲಿ ಹೊಗಳಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net