ಪತ್ನಿಯ ಜೋರು ಮಾತಿಗೆ ಸೈಲೆಂಟ್ ಆದ ಕಮಿನ್ಸ್​:​ ಸ್ಯಾಂಡ್‌ಪೇಪರ್‌ಗೇಟ್ ವಿವಾದದ ಸುಳಿಯಲ್ಲಿ ಆಸಿಸ್ ನಾಯಕ...! Pat Cummins

Pat Cummins
ಆಸ್ಟ್ರೇಲಿಯಾ ಟೆಸ್ಟ್​ ಕ್ರಿಕೆಟ್​ ತಂಡದ​ ನಾಯಕ ಪ್ಯಾಟ್​ ಕಮಿನ್ಸ್​ ಮತ್ತು ಅವರ ಪತ್ನಿ ಬೆಕಿ
Published on: 

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದ ಅತ್ಯಂತ ಕರಾಳ ಅಧ್ಯಾಯ ಎನಿಸಿಕೊಂಡ 2018ರ 'ಸ್ಯಾಂಡ್‌ಪೇಪರ್‌ಗೇಟ್' (ಚೆಂಡು ವಿರೂಪ) ವಿವಾದವು ಎಂಟು ವರ್ಷಗಳ ಬಳಿಕ ಮತ್ತೆ ಭಾರಿ ಸಂಚಲನ ಸೃಷ್ಟಿಸಿದೆ. ಮಾಜಿ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ ತಮ್ಮ ಆತ್ಮಕಥೆ 'ಸಬ್ರ್' (Sabr) ನಲ್ಲಿ ಮಾಡಿರುವ ಸ್ಫೋಟಕ ಆರೋಪಗಳು ಆಸೀಸ್ ಕ್ರಿಕೆಟ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿವೆ. ಇದರ ನಡುವೆ ಆಸಿಸ್​ ನಾಯಕ ಪ್ಯಾಟ್​ ಕಮಿನ್ಸ್ ( Pat Cummins )​ ಮತ್ತು ಅವರ ಪತ್ನಿ ಬೆಕಿ ರಸ್ತೆಯಲ್ಲೇ ವಾಗ್ವಾದ ನಡೆಸಿರುವ ವಿಡಿಯೋ ಕೂಡ ವೈರಲ್​ ಆಗಿದ್ದು, ಚೆಂಡು ವಿರೂಪ ಪ್ರಕರಣಕ್ಕೆ ಅದನ್ನು ತಳುಕು ಹಾಕಲಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್​ ಟೌನ್​ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಚೆಂಡನ್ನು ವಿರೂಪಗೊಳಿಸಲು ಸ್ಯಾಂಡ್‌ಪೇಪರ್ ಬಳಸುವ ಯೋಜನೆಯ ಬಗ್ಗೆ ಪ್ಯಾಟ್ ಕಮಿನ್ಸ್ ಸೇರಿದಂತೆ ಇಡೀ ಆಸ್ಟ್ರೇಲಿಯಾ ತಂಡಕ್ಕೆ ಮೊದಲೇ ತಿಳಿದಿತ್ತು ಎಂದು ಖವಾಜಾ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೂ ಮುನ್ನ ನಡೆದ ಪೋರ್ಟ್ ಎಲಿಜಬೆತ್ ಟೆಸ್ಟ್‌ನಲ್ಲೂ ಇಂತಹದ್ದೇ ಪ್ರಯತ್ನ ನಡೆದಿತ್ತು ಎಂಬ ಅವರ ಹೇಳಿಕೆಯು ಪ್ರಕರಣಕ್ಕೆ 'ಸ್ಯಾಂಡ್‌ಪೇಪರ್‌ಗೇಟ್ 2.0' ಎಂಬ ಹೊಸ ರೂಪ ನೀಡಿದೆ.

Also Read
"ಜೀವಮಾನವಿಡೀ ಜೊತೆಯಾಗಿರುವ ಸಂಗಾತಿ": ಗ್ರೀಸ್‌ನಲ್ಲಿ ಸಪ್ತಪದಿ ತುಳಿದ ಅನಿರುದ್ಧ್- ಕಾವ್ಯಾ; ಮದುವೆ ಫೋಟೋಗಳು ವೈರಲ್! Anirudh Weds Kavya
Pat Cummins

ಈ ಗಂಭೀರ ಆರೋಪಗಳ ಕುರಿತು ಇದುವರೆಗೂ ಮೌನವಾಗಿದ್ದ ಆಸ್ಟ್ರೇಲಿಯಾ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್, ಇದೀಗ ಮಾಧ್ಯಮಗಳ ಮುಂದೆ ಬಂದು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನಿರ್ಧರಿಸಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿರುವ ಕಮಿನ್ಸ್, ಶುಕ್ರವಾರ ಬೆಳಗ್ಗೆ 9.30ಕ್ಕೆ 'ಕ್ರಿಕೆಟ್ ಸೆಂಟ್ರಲ್' ಮೈದಾನದಲ್ಲಿ ನ್ಯೂ ಸೌತ್ ವೇಲ್ಸ್ ಮತ್ತು ದಕ್ಷಿಣ ಆಸ್ಟ್ರೇಲಿಯಾ ನಡುವಿನ ಶೆಫೀಲ್ಡ್ ಶೀಲ್ಡ್ ಪಂದ್ಯದ 3ನೇ ದಿನದಾಟಕ್ಕೂ ಮುನ್ನ ಅಭ್ಯಾಸ ನಡೆಸಲಿದ್ದು, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಖವಾಜಾ ಅವರ ಆರೋಪಗಳ ಪಟ್ಟಿ ಮತ್ತು ಅದರ ಸಂಪೂರ್ಣ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಲು ತಮಗೆ ಸ್ವಲ್ಪ ಸಮಯ ಬೇಕಾಯಿತು ಎಂದಿರುವ ಕಮಿನ್ಸ್, ಈಗ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ.

ಇನ್ನೊಂದೆಡೆ, ಈ ಪ್ರಕರಣದಲ್ಲಿ ಕಮಿನ್ಸ್ ಅವರ ಸಹ ವೇಗಿ ಮಿಚೆಲ್ ಸ್ಟಾರ್ಕ್ ಅವರು ಖವಾಜಾ ಅವರ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಚೆಂಡನ್ನು ವಿರೂಪಗೊಳಿಸಲು ಸ್ಯಾಂಡ್‌ಪೇಪರ್ ಬಳಸುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಸ್ಟಾರ್ಕ್ ಸ್ಪಷ್ಟಪಡಿಸಿದ್ದಾರೆ. 2018ರಲ್ಲಿ ಈ ಹಗರಣ ಬೆಳಕಿಗೆ ಬಂದಾಗ ಕ್ರಿಕೆಟ್ ಆಸ್ಟ್ರೇಲಿಯಾವು ಅಂದಿನ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಮತ್ತು ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಅವರಿಗೆ ಮಾತ್ರ ಕಠಿಣ ನಿಷೇಧದ ಶಿಕ್ಷೆ ವಿಧಿಸಿತ್ತು. ಆದರೆ, ಇಡೀ ತಂಡಕ್ಕೆ ವಿಷಯ ತಿಳಿದಿದ್ದರೂ ಕೇವಲ ಮೂವರನ್ನು ಮಾತ್ರ ಬಲಿಪಶು ಮಾಡಲಾಯಿತು ಎಂಬ ಖವಾಜಾ ಅವರ ವಾದವು ಈಗ ಕಮಿನ್ಸ್ ನಾಯಕತ್ವಕ್ಕೂ ಸಂಕಷ್ಟ ತಂದೊಡ್ಡಿದೆ.

ಈ ನಡುವೆ, 'ಸ್ಯಾಂಡ್‌ಪೇಪರ್‌ಗೇಟ್ 2.0' ವಿವಾದದ ಒತ್ತಡದ ನಡುವೆಯೇ ಪ್ಯಾಟ್ ಕಮಿನ್ಸ್ ಮತ್ತು ಅವರ ಪತ್ನಿ ಬೆಕಿ ಸಾರ್ವಜನಿಕವಾಗಿ ವಾಗ್ವಾದ ನಡೆಸುತ್ತಿರುವ ವಿಡಿಯೋವೊಂದು ವೈರಲ್ ಆಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. 2013ರಿಂದ ಜತೆಯಾಗಿರುವ ಈ ದಂಪತಿಯ ನಡುವೆ ಬಿರುಕು ಮೂಡಿದೆ ಎಂಬ ವದಂತಿಗಳು ಹರಡಲು ಶುರುವಾಗಿವೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಮಿನ್ಸ್ ಪತ್ನಿ ಬೆಕಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕಮಿನ್ಸ್ ಮತ್ತು ತಮ್ಮ ಮಗಳೊಂದಿಗಿನ ಮುದ್ದಾದ ಫೋಟೋ ಹಂಚಿಕೊಂಡು "ನನ್ನ ಪ್ರೀತಿಪಾತ್ರರು" (My loves) ಎಂದು ಬರೆಯುವ ಮೂಲಕ ದಾಂಪತ್ಯದಲ್ಲಿ ಯಾವುದೇ ಬಿರುಕಿಲ್ಲ ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.

Also Read
ಪಂಜಾಬ್​ ಪಾಲಾದ ಹಾರ್ದಿಕ್​ ಪಾಂಡ್ಯ: ಈ ನಾಲ್ವರಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಮುಂದಿನ ಸಾರಥಿ ಯಾರು? Mumbai Indians
Pat Cummins

ಒಟ್ಟಾರೆಯಾಗಿ, ಶುಕ್ರವಾರ ನಡೆಯಲಿರುವ ಪ್ಯಾಟ್ ಕಮಿನ್ಸ್ ಅವರ ಪತ್ರಿಕಾಗೋಷ್ಠಿಯು ಇಡೀ ಕ್ರಿಕೆಟ್ ಜಗತ್ತಿನ ಕುತೂಹಲ ಕೆರಳಿಸಿದೆ. 2018ರ ಹಗರಣದಲ್ಲಿ ತಂಡದ ಇತರ ಸದಸ್ಯರ ಪಾತ್ರ ಅಥವಾ ಅವರಿಗೆ ಈ ಬಗ್ಗೆ ಮೊದಲೇ ಅರಿವಿತ್ತೇ ಎಂಬ ಕುರಿತು ಪತ್ರಕರ್ತರಿಂದ ಕಮಿನ್ಸ್ ಅವರಿಗೆ ಅತ್ಯಂತ ಕಠಿಣ ಮತ್ತು ಮುಜುಗರ ತರುವ ಪ್ರಶ್ನೆಗಳು ಎದುರಾಗುವುದು ಖಚಿತವಾಗಿದೆ. ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ಈ ಪ್ರಕರಣದ ಮರುತನಿಖೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ನಾಯಕನಾಗಿ ಕಮಿನ್ಸ್ ನೀಡಲಿರುವ ಸ್ಪಷ್ಟನೆಯು ಆಸ್ಟ್ರೇಲಿಯಾ ಕ್ರಿಕೆಟ್‌ನ ಮುಂದಿನ ಬೆಳವಣಿಗೆಗಳ ದಿಕ್ಕನ್ನು ನಿರ್ಧರಿಸಲಿದೆ, (ಏಜೆನ್ಸೀಸ್​).