ಕೆಕೆಆರ್ ವಿರುದ್ಧ ಗೆಲುವು; ಸತತ 13 ವರ್ಷಗಳ ಮೊದಲ ಪಂದ್ಯದ ಸೋಲಿಗೆ ಮುಂಬೈ ಬ್ರೇಕ್; ಕ್ಯಾಪ್ಟನ್ ಪಾಂಡ್ಯ ಹೇಳಿದ್ದೇನು? | Hardik pandya

ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ
ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ
Published on
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್​ನ(IPL) ಆರಂಭಿಕ ಪಂದ್ಯಗಳಲ್ಲಿ ಸತತ 13 ವರ್ಷಗಳಿಂದ ಸೋತಿದ್ದ ಮುಂಬೈ ಇಂಡಿಯನ್ಸ್​ ತಂಡವು, ಭಾನುವಾರ(ಮಾ. 29) ಕೆಕೆಆರ್ ವಿರುದ್ಧ ರೋಹಿತ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ಮತ್ತು ಆರು ವಿಕೆಟ್​ಗಳಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ತಮ್ಮ ಮೊದಲ ಪಂದ್ಯದ ಸೋಲಿಗೆ ಬ್ರೇಕ್​ ಹಾಕಿದೆ.
ಆರಂಭಿಕ ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ಅಜಿಂಕ್ಯ ರಹಾನೆ (67) ಮತ್ತು ಅಂಗ್‌ಕ್ರಿಶ್ ರಘುವಂಶಿ (51) ಅವರ ಅರ್ಧಶತಕಗಳ ನೆರವಿನಿಂದ ಕೆಕೆಆರ್ ತಂಡ 220/4 ಮೊತ್ತವನ್ನು ಕಲೆಹಾಕಿತ್ತು. ಸೆಕೆಂಡ್ ಬ್ಯಾಟಿಂಗ್ ಮೂಲಕ ರೋಹಿತ್ ಶರ್ಮಾ(78) ಮತ್ತು ರಯಾನ್ ರಿಕಲ್ಟನ್(81) ಅವರೊಂದಿಗೆ 148 ರನ್‌ಗಳ ಜೊತೆಯಾಟದಿಂದ ಮುಂಬೈ ಇಂಡಿಯನ್ಸ್ 19.2 ಓವರ್‌ಗಳಲ್ಲಿ 224/4 ಗಳಿಸಿ ಭರ್ಜರಿ ಗೆಲುವು ಸಾಧಿಸಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ ಗೆದ್ದ ಬಳಿಕ ಮಾತನಾಡಿರುವ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಐಪಿಎಲ್​ನ ಆರಂಭಿಕ ಪಂದ್ಯಗಳಲ್ಲಿ ತಂಡದ ಸತತ ಸೋಲನ್ನು ಕೊನೆಗೊಳಿಸಿದ್ದರಿಂದ ಹರ್ಷ ವ್ಯಕ್ತಪಡಿಸಿ, ರೋಹಿತ್ ಶರ್ಮಾ ಅವರ ಅದ್ಭುತ ಬ್ಯಾಟಿಂಗ್ ಅನ್ನು ಶ್ಲಾಘಿಸಿದರು.
ಐಪಿಎಲ್​ ಆವೃತ್ತಿಯ ಮೊದಲ ಪಂದ್ಯವನ್ನು ಗೆಲ್ಲಲು ಬಹಳ ಸಮಯ ಕಾಯಬೇಕಾಯಿತು. ಈ ಬಾರಿಯೂ ನಾವು ಆವತ್ತಿಯನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸಲು ಬಯಸಿದ್ದೆವು. ಅದು ಸಾಧ್ಯವಾಯಿತು. ಈ ಬಗ್ಗೆ ಇಡೀ ತಂಡ ತುಂಬಾ ಸಂತೋಷಪಟ್ಟಿದೆ ಎಂದರು.
ಟಿ20ಯಲ್ಲಿ ದೊಡ್ಡ ಮೊತ್ತವನ್ನು ಬೆನ್ನಟ್ಟುವುದು ಈಗ ಸುಲಭವಾಗಿದೆ. ಮತ್ತು ಆಧುನಿಕ ಕ್ರಿಕೆಟ್ ಮತ್ತು ಬ್ಯಾಟಿಂಗ್ ಸ್ನೇಹಿ ವಿಕೆಟ್‌ಗಳು ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೆಆರ್ ತಂಡವನ್ನು 240 ಅಥವಾ 250 ರನ್ ತಲುಪಲು ಬಿಡದಿದ್ದಕ್ಕಾಗಿ ಬೌಲರ್‌ಗಳಿಗೆ ಕ್ರೆಡಿಟ್ ನೀಡಬೇಕು. ಅವು ಕಠಿಣ ಗುರಿಗಳಾಗುತ್ತವೆ, ಆದರೆ 220 ರನ್‌ಗಳನ್ನು ಯಾವಾಗಲೂ ಬೆನ್ನಟ್ಟಬಹುದು ಎಂದು ತಿಳಿಸಿದರು.
ರೋಹಿತ್ ಮತ್ತು ರಿಕಲ್ಟನ್ ಅತ್ಯುತ್ತಮವಾಗಿ ಅಡಿದರು. ಕಳೆದ ವರ್ಷ ರಯಾನ್ ನಮಗಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮತ್ತು ಕ್ವಿನ್ನಿ (ಕ್ವಿಂಟನ್ ಡಿ ಕಾಕ್) ಒಬ್ಬ ಅತ್ಯುತ್ತಮ ಆಟಗಾರ. ನಾವು ಆಟಗಾರನನ್ನು ಬೆಂಬಲಿಸುತ್ತಿದ್ದೇವೆ. ಮತ್ತು ನಿರಂತರತೆಯನ್ನು ಕಾಯ್ದುಕೊಳ್ಳುತ್ತಿದ್ದೇವೆ ಎಂದು ಅವರು ಅರ್ಥಮಾಡಿಕೊಂಡರು. ಅದು ಕೆಲಸ ಮಾಡಿದೆ ಎಂದು ಸಂತೋಷವಾಯಿತು ಎಂದು ಹೇಳಿದರು.
ಈ ವಯಸ್ಸಿನಲ್ಲೂ ಬ್ಯಾಟಿಂಗ್​ ಭರ್ಜರಿಯಾಗಿ ಮಾಡಿದ್ದಕ್ಕಾಗಿ ತಮ್ಮ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರನ್ನು ಹೊಗಳಿದ ಪಾಂಡ್ಯ, ರೋಹಿತ್ ಅವರು ಕೆಲವು ಹೊಡೆತಗಳನ್ನು ಆಡುವುದನ್ನು ನಾನು ನೋಡಿದಾಗಲೆಲ್ಲಾ, ಅದು ಎಲ್ಲರನ್ನೂ ಬೆರಗುಗೊಳಿಸುತ್ತದೆ. ಅತ್ಯುತ್ತಮ, ಅತ್ಯುತ್ತಮ ಎನ್ನುವುದಕ್ಕಿಂತ ಕಡಿಮೆ ಏನೂ ಇಲ್ಲ ಎಂದು ಶ್ಲಾಘಿಸಿದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net