ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮುಂಬೈ ಇಂಡಿಯನ್ಸ್ 'ವಿಶ್ವ ದಾಖಲೆ': ಆರ್​ಸಿಬಿ, ಸಿಎಸ್‌ಕೆಗೂ ಸಾಧ್ಯವಾಗದ ಸಾಧನೆ ಈಗ ಎಂಐ ಪಾಲು! Mumbai Indians

ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮುಂಬೈ ಇಂಡಿಯನ್ಸ್ 'ವಿಶ್ವ ದಾಖಲೆ': ಆರ್​ಸಿಬಿ, ಸಿಎಸ್‌ಕೆಗೂ ಸಾಧ್ಯವಾಗದ ಸಾಧನೆ ಈಗ ಎಂಐ ಪಾಲು!
ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮುಂಬೈ ಇಂಡಿಯನ್ಸ್ 'ವಿಶ್ವ ದಾಖಲೆ': ಆರ್​ಸಿಬಿ, ಸಿಎಸ್‌ಕೆಗೂ ಸಾಧ್ಯವಾಗದ ಸಾಧನೆ ಈಗ ಎಂಐ ಪಾಲು!
Published on
ಮುಂಬೈ: ಐದು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವು(Mumbai Indians) ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ತನ್ನ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿದೆ. ಭಾನುವಾರ (ಮಾ.29) ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ 2026ರ ಆರಂಭಿಕ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಎಂಐ 300 ಟಿ20 ಪಂದ್ಯಗಳನ್ನು ಪೂರೈಸಿದ ವಿಶ್ವದ ಮೊದಲ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

300 ಪಂದ್ಯಗಳ 'ಮ್ಯಾಜಿಕಲ್' ಮೈಲಿಗಲ್ಲು

ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತಂಡವು ಕೆಕೆಆರ್ ವಿರುದ್ಧ ಟಾಸ್‌ಗಾಗಿ ಮೈದಾನಕ್ಕೆ ಬಂದ ಕೂಡಲೇ ಈ ಅಪರೂಪದ ಸಾಧನೆ ಮಾಡಿದೆ. ಈ ಹಿಂದೆ 299 ಟಿ20 ಪಂದ್ಯಗಳನ್ನು ಆಡಿದ್ದ ಎಂಐ, ಇಂದು ತನ್ನ 300ನೇ ಪಂದ್ಯವನ್ನು ಆಡುತ್ತಿದೆ.
ಐಪಿಎಲ್ ಪಂದ್ಯಗಳು: 278
CLT20 ಪಂದ್ಯಗಳು: 22
ಒಟ್ಟು: 300 ಪಂದ್ಯಗಳು
ವಿಶ್ವದ ಯಾವುದೇ ಫ್ರಾಂಚೈಸಿ ತಂಡ ಇದುವರೆಗೆ ಈ ಮೈಲಿಗಲ್ಲನ್ನು ತಲುಪಿಲ್ಲ ಎಂಬುದು ಗಮನಾರ್ಹವಾಗಿದೆ. ಪಾಕಿಸ್ತಾನ ರಾಷ್ಟ್ರೀಯ ತಂಡ (303) ಮತ್ತು ಇಂಗ್ಲೆಂಡ್‌ನ ಕೌಂಟಿ ಕ್ಲಬ್ ಸಮರ್‌ಸೆಟ್ (303) ಮಾತ್ರ 300ಕ್ಕೂ ಹೆಚ್ಚು ಟಿ20 ಪಂದ್ಯಗಳನ್ನು ಆಡಿವೆ. ಆದರೆ, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮುಂಬೈ ಈಗ ಸಾಧನೆ ಮಾಡಿದೆ.
1. ಪಾಕಿಸ್ತಾನ- 303 ಪಂದ್ಯಗಳು
2. ಸಮರ್‌ಸೆಟ್ (ಕೌಂಟಿ)- 303 ಪಂದ್ಯಗಳು
3. ಮುಂಬೈ ಇಂಡಿಯನ್ಸ್- 300* ಪಂದ್ಯಗಳು
4. ಹ್ಯಾಂಪ್‌ಶೈರ್- 296 ಪಂದ್ಯಗಳು
5. ರಾಯಲ್ ಚಾಲೆಂಜರ್ಸ್ ಬೆಂಗಳೂರು- 287 ಪಂದ್ಯಗಳು

ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

ವಾಂಖೆಡೆಯ ತನ್ನ 'ಕೋಟೆ'ಯಲ್ಲಿ ಟಾಸ್ ಗೆದ್ದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಪಿಚ್ ಮೇಲೆ ಸಾಕಷ್ಟು ಹುಲ್ಲು ಇದೆ, ಇದು ಬೌಲರ್‌ಗಳಿಗೆ ನೆರವಾಗಬಹುದು. ನಮ್ಮ ತಂಡದಲ್ಲಿ ಅನುಭವ ಮತ್ತು ಯುವ ಪ್ರತಿಭೆಗಳ ಅದ್ಭುತ ಮಿಶ್ರಣವಿದೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರಂತಹ ನಾಯಕರ ದಂಡೇ ನಮ್ಮಲ್ಲಿದೆ ಎಂದು ಹಾರ್ದಿಕ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು

ಕೆಕೆಆರ್ ಸಿದ್ಧತೆ ಮತ್ತು ಬದಲಾವಣೆ

ಮತ್ತೊಂದೆಡೆ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಅವರು ಕೂಡ ಮೊದಲು ಬೌಲಿಂಗ್ ಮಾಡಲು ಇಚ್ಛಿಸಿದ್ದರು. ವಾಂಖೆಡೆಯಲ್ಲಿ ಇಷ್ಟೊಂದು ಹುಲ್ಲು ಇರುವುದನ್ನು ನಾನು ಎಂದೂ ನೋಡಿಲ್ಲ. ಮುಂಬೈ ಚಾಂಪಿಯನ್ ತಂಡ ಎಂಬುದು ನಮಗೆ ಗೊತ್ತು, ಆದರೆ ನಾವು ಇಂದಿನ ಕ್ಷಣದ ಮೇಲೆ ಗಮನ ಹರಿಸುತ್ತೇವೆ ಎಂದರು. ಕೆಕೆಆರ್ ತಂಡದಲ್ಲಿ ಕ್ಯಾಮರೂನ್ ಗ್ರೀನ್, ಫಿನ್ ಅಲೆನ್, ಸುನಿಲ್ ನರೈನ್ ಮತ್ತು ಬ್ಲೆಸಿಂಗ್ ಮುಜರಬಾನಿ ನಾಲ್ವರು ವಿದೇಶಿ ಆಟಗಾರರಾಗಿ ಕಣಕ್ಕಿಳಿದಿದ್ದಾರೆ.

14 ವರ್ಷಗಳ ಹಳೇ ದಾಖಲೆ ಮುರಿಯುತ್ತಾ ಮುಂಬೈ?

ಮುಂಬೈ ಇಂಡಿಯನ್ಸ್ 2012ರಿಂದ ಇದುವರೆಗೆ ತಮ್ಮ ಮೊದಲ ಐಪಿಎಲ್ ಪಂದ್ಯವನ್ನು ಗೆದ್ದಿಲ್ಲ. ಈ ಸ್ಲೋ ಸ್ಟಾರ್ಟರ್ ಹಣೆಪಟ್ಟಿಯನ್ನು ಅಳಿಸಿಹಾಕಲು ಹಾರ್ದಿಕ್ ಪಡೆ ಇಂದು ಶತಾಯಗತಾಯ ಪ್ರಯತ್ನಿಸಲಿದೆ. 300ನೇ ಪಂದ್ಯದ ಈ ಐತಿಹಾಸಿಕ ಕ್ಷಣವನ್ನು ಗೆಲುವಿನೊಂದಿಗೆ ಆಚರಿಸುತ್ತಾರೆಯೇ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net