ಕಾವ್ಯಾ ಮಾರನ್​ ಮುಖಭಾವವೇ ಹೇಳುತ್ತೆ ಬೇಬಿ ಬಾಸ್​ ವೈಭವ್​ ಅಂದ್ರೆ ಎಷ್ಟು ಭಯ ಅಂತ! ವಿಡಿಯೋ ವೈರಲ್​... Vaibhav Sooryavanshi

ಕಾವ್ಯಾ ಮಾರನ್​ ಮುಖಭಾವವೇ ಹೇಳುತ್ತೆ ಬೇಬಿ ಬಾಸ್​ ವೈಭವ್​ ಅಂದ್ರೆ ಎಷ್ಟು ಭಯ ಅಂತ! ವಿಡಿಯೋ ವೈರಲ್​... Vaibhav Sooryavanshi
ಕಾವ್ಯಾ ಮಾರನ್​ ಮುಖಭಾವವೇ ಹೇಳುತ್ತೆ ಬೇಬಿ ಬಾಸ್​ ವೈಭವ್​ ಅಂದ್ರೆ ಎಷ್ಟು ಭಯ ಅಂತ! ವಿಡಿಯೋ ವೈರಲ್​... Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್​ ( IPL )​ ಅಂಗಳದಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವುದು ಒಂದೇ ಹೆಸರು
  • 15 ವರ್ಷದ ಬಾಲಕ ವೈಭವ್​ ಸೂರ್ಯವಂಶಿ ತನ್ನ ಬಿರುಗಾಳಿ ಬ್ಯಾಟಿಂಗ್​ ಮೂಲಕ ಬೌಲರ್​ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ
  • ಸಿಕ್ಸರ್​ ಮತ್ತು ಬೌಂಡರಿಗಳನ್ನು ಬಾರಿಸುವ ಮೂಲಕ ವಿಶ್ವ ಕ್ರಿಕೆಟ್​ ಅನ್ನು ವೈಭವ್​ ಬೆರಗಾಗಿಸಿದ್ದಾರೆ
  • ವೈಭವ್​ ಎಷ್ಟು ಡೇಂಜರ್​ ಅನ್ನೋದಕ್ಕೆ SRH ತಂಡದ ಒಡತಿ ಕಾವ್ಯಾ ಮಾರನ್​​ ಕೊಟ್ಟ ಒಂದು ಪ್ರತಿಕ್ರಿಯೆಯೇ ಸಾಕ್ಷಿ
Vaibhav Sooryavanshi : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್​ ( IPL )​ ಅಂಗಳದಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವುದು ಒಂದೇ ಹೆಸರು. ಅದುವೇ ವೈಭವ್​ ಸೂರ್ಯವಂಶಿ. ಈ 15 ವರ್ಷದ ಬಾಲಕ ತನ್ನ ಬಿರುಗಾಳಿ ಬ್ಯಾಟಿಂಗ್​ ಮೂಲಕ ಬೌಲರ್​ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಜಸ್​​ಪ್ರೀತ್​ ಬುಮ್ರಾ, ಜೋಶ್​ ಹ್ಯಾಜಲ್​ವುಡ್​ ಹಾಗೂ ಭುವನೇಶ್ವರ್​ ಕುಮಾರ್​ ಅವರಂತಹ ವಿಶ್ವದರ್ಜೆಯ ಬೌಲರ್​ಗಳಿಗೆ ಲೀಲಾಜಾಲವಾಗಿ ಸಿಕ್ಸರ್​ ಮತ್ತು ಬೌಂಡರಿಗಳನ್ನು ಬಾರಿಸುವ ಮೂಲಕ ವಿಶ್ವ ಕ್ರಿಕೆಟ್​ ಅನ್ನು ವೈಭವ್​ ಬೆರಗಾಗಿಸಿದ್ದಾರೆ. ವೈಭವ್​ ಅಂದರೆ ಸಾಕು ಬೌಲರ್​ಗಳು ಹೆದರುತ್ತಿದ್ದಾರೆ. ಹೀಗಿರುವಾಗ ವೈಭವ್​, ಯಾವುದೇ ರನ್​ ಖಾತೆ ತೆರೆಯದೇ ಶೂನ್ಯಕ್ಕೆ ಔಟಾದರೆ ಆ ತಂಡಕ್ಕೆ ಅದಕ್ಕಿಂತ ಬಿಗ್​ ವಿಕೆಟ್​ ಮತ್ತೊಂದಿಲ್ಲ. ವೈಭವ್​ ಎಷ್ಟೊಂದು ಡೇಂಜರ್​ ಅನ್ನೋದಕ್ಕೆ ಸನ್​ ರೈಸರ್ಸ್​ ಹೈದರಾಬಾದ್ (SRH) ತಂಡದ ಒಡತಿ ಕಾವ್ಯಾ ಮಾರನ್​​ ಕೊಟ್ಟ ಒಂದು ಪ್ರತಿಕ್ರಿಯೆಯೇ ಸಾಕ್ಷಿ.
ನಿನ್ನೆ (ಏಪ್ರಿಲ್​ 13) ಹೈದರಾಬಾದ್​ನ ಉಪ್ಪಲ್​ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್​ ಮತ್ತು ಸನ್​ ರೈಸರ್ಸ್​ ಹೈದರಾಬಾದ್​ ನಡುವೆ ಐಪಿಎಲ್​ನ 21ನೇ ಪಂದ್ಯದ ನಡೆಯಿತು. ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಎಸ್​ಆರ್​ಎಚ್​, ನಾಯಕ ಇಶಾನ್​ ಕಿಶನ್​ ( 91 ರನ್​, 44 ಎಸೆತ, 8 ಬೌಂಡರಿ, 6 ಸಿಕ್ಸರ್​) ಅವರ ಬಿರುಸಿನ ಬ್ಯಾಟಿಂಗ್​ ಹಾಗೂ ಹೆನ್ರಿಕ್​ ಕ್ಲಾಸೆನ್​ (40) ಅವರ ಉಪಯುಕ್ತ ರನ್​ ಕಾಣಿಕೆಯ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 216 ರನ್​ ಕಲೆ ಹಾಕಿತು. ಆರ್​ಆರ್​ ಪರ ಜೋಫ್ರ ಆರ್ಚರ್​ 2 ವಿಕೆಟ್​ ಪಡೆದರೆ, ಸಂದೀಪ್​ ಶರ್ಮಾ, ತುಷಾರ್​ ದೇಶಪಾಂಡೆ ಹಾಗೂ ರಿಯಾನ್​ ಪರಾಗ್​ ತಲಾ ಒಂದೊಂದು ವಿಕೆಟ್​ ಪಡೆದರು.
ಎಸ್​ಆರ್​ಎಚ್​ ನೀಡಿದ 217 ರನ್​ಗಳ ಬೃಹತ್​ ಗುರಿಯನ್ನು ಬೆನ್ನತ್ತಿದ ಆರ್​ಆರ್​ ತಂಡ ಆರಂಭಿಕ ಆಘಾತ ಅನುಭವಿಸಿ, 19 ಓವರ್​ಗಳಲ್ಲಿ 159 ರನ್​ಗಳಿಗೆ ಸರ್ವಪತನ ಕಂಡಿತು. ಆರ್​ಆರ್​ ಪರ ಡೊನೋವೆನ್​ ಫೆರೆರಾ (69) ಹಾಗೂ ರವೀಂದ್ರ ಜಡೇಜಾ (45) ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಎಸ್​ಆರ್​ಎಚ್​ ಪರ ಪಾದರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಪ್ರಫುಲ್​ ಹಿಂಗೆ ಹಾಗೂ ಸಾಕಿಬ್​ ಹುಸೇನ್​ 4 ವಿಕೆಟ್​ ಕಬಳಿಸಿ ಮಿಂಚಿದರು. ಉಳಿದಂತೆ, ಇಶಾನ್​ ಮಲಿಂಗಾ 2 ವಿಕೆಟ್​ ಕಬಳಿಸಿದರು. ಈ ಪಂದ್ಯದಲ್ಲಿ ಸೋಲುಂಡ ರಾಜಸ್ಥಾನ ರಾಯಲ್ಸ್​ ಈ ಲೀಗ್​ನಲ್ಲಿ ತನ್ನ ಮೊದಲ ಸೋಲನ್ನು ದಾಖಲಿಸಿತು.

ಕಾವ್ಯಾ ಮಾರನ್​ ರಿಯಾಕ್ಷನ್​ ವೈರಲ್​

19ನೇ ಆವೃತ್ತಿಯ ಐಪಿಎಲ್​ ಆರಂಭವಾದಾಗಿನಿಂದ ಆರ್​ಆರ್​ ತಂಡದ ಆರಂಭಿಕ ಆಟಗಾರ ವೈಭವ್​ ಸೂರ್ಯವಂಶಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. ಇದುವರೆಗೆ ಆಡಿರುವ 5 ಪಂದ್ಯಗಳಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಕೇವಲ 17 ಎಸೆತಗಳಲ್ಲಿ 52 ರನ್, ಗುಜರಾತ್ ಟೈಟನ್ಸ್ (GT) ವಿರುದ್ಧ 18 ಎಸೆತಗಳಲ್ಲಿ 31 ರನ್, ಮುಂಬೈ ಇಂಡಿಯನ್ಸ್ (MI) ವಿರುದ್ಧ 14 ಎಸೆತಗಳಲ್ಲಿ 39 ರನ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ 26 ಎಸೆತಗಳಲ್ಲಿ 78 ರನ್ ಗಳಿಸಿ, ಪ್ರಸಕ್ತ ಐಪಿಎಲ್​ನಲ್ಲಿ ಆರೇಂಜ್​ ಕ್ಯಾಪ್​ ರೇಸ್​ನಲ್ಲಿದ್ದಾರೆ. ಇಂತಹ ಡೇಂಜರಸ್​ ಆಟಗಾರ ನಿನ್ನೆ ಎಸ್​ಆರ್​ಎಚ್​ ವಿರುದ್ಧದ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಕ್ಯಾಚ್​ ನೀಡಿ ಡಗೌಟ್​ ತಲುಪಿದರು. ಪ್ರಫುಲ್​​ ಹಿಂಗೆ ಎಸೆದ ಮೊದಲ ಓವರ್​ನ ಎರಡನೇ ಎಸೆತದಲ್ಲಿ ಶಾಟ್​ ಆಡಲು ಹೋಗಿ ಕ್ಯಾಚಿತ್ತು ನಿರ್ಗಮಿಸಿದರು. ಅಲ್ಲಿಂದಾಚೆಗೆ ಆರ್​ಆರ್​ ತಂಡದ ವಿಕೆಟ್​ಗಳು ತರಗೆಲೆ​ಗಳಂತೆ ಉದುರಿಹೋದವರು. ವೈಭವ್​ ಬಾರಿಸಿದ ಚೆಂಡು ಗಾಳಿಯಲ್ಲಿ ಮೇಲಕ್ಕೆ ಹಾರಿ ಹೋಗುತ್ತಿದ್ದಂತೆ ಕ್ರೀಡಾಂಗಣದಲ್ಲಿದ್ದ ಎಸ್​ಆರ್​​ಎಚ್​ ಒಡತಿ ಕಾವ್ಯಾ ಮಾರನ್ ಎದ್ದು ನಿಂತರು. ಹೇಗಾದರೂ ಮಾಡಿ ಈ ಕ್ಯಾಚ್​ ಹಿಡಿದುಬಿಡಲಪ್ಪ ಎಂದು ದೇವರ ಬಳಿ ಬೇಡಿಕೊಳ್ಳುವಂತೆ ಮುಖಭಾವ ತೋರಿದರು. ಅವರ ಮುಖಭಾವ ವೈಭವ್​ ಎಷ್ಟು ಡೇಂಜರ್​ ಅನ್ನೋದನ್ನು ತೋರಿಸಿತು. ವೈಭವ್​ ಔಟಾದ ಕೂಡಲೇ ಕಾವ್ಯಾ ಮಾರನ್​ ಕುಣಿದು ಕುಪ್ಪಳಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಕಾವ್ಯಾರ ರಿಯಾಕ್ಷನ್​ ನೋಡಿದರೆ ವೈಭವ್​ ಎಷ್ಟು ಅಪಾಯಕಾರಿ ಬ್ಯಾಟ್ಸ್​ಮನ್​ ಅನ್ನೋದು ಗೊತ್ತಾಗುತ್ತೆ ಎಂದು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net