ಮದುವೆ ನಿಲ್ಲಿಸಿದ್ದು ಸ್ಮೃತಿಯಲ್ಲ ನನ್ನ ಮಗ... ಪಲಾಶ್​ ಮುಚ್ಚಲ್​ ತಾಯಿಯ ಅಚ್ಚರಿ ಹೇಳಿಕೆ! Smriti Mandhana

ಟೀಮ್​ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂಧಾನ
ಟೀಮ್​ ಇಂಡಿಯಾದ ಆಟಗಾರ್ತಿ ಸ್ಮೃತಿ ಮಂಧಾನ
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾದ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ
  • ಮದುವೆ ರದ್ದಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳು
  • ಸ್ಮೃತಿ ಮಂಧಾನಗೆ ಸಂಗೀತ ನಿರ್ದೇಶಕ ಪಲಾಶ್​ ಮುಚ್ಚಲ್​ ಮೋಸ ಮಾಡಿದ್ದಾರೆ ಎಂಬ ವದಂತಿ
  • ವದಂತಿಗಳ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ ಪಲಾಶ್​ ಮುಚ್ಚಲ್ ತಾಯಿ
ಮುಂಬೈ: ಟೀಮ್​ ಇಂಡಿಯಾದ ಮಹಿಳಾ ಆಟಗಾರ್ತಿ ಸ್ಮೃತಿ ಮಂಧಾನ ( Smriti Mandhana ) ಅವರ ವಿವಾಹವು ಅನಿರೀಕ್ಷಿತ ಬೆಳವಣಿಗೆಯೊಂದರಿಂದ ಮುಂದೂಡಿರುವುದು ನಿಮಗೆಲ್ಲ ಗೊತ್ತೇ ಇದೆ. ಸ್ಮೃತಿ ಅವರು ತಮ್ಮ ಗೆಳೆಯ ಹಾಗೂ ಬಾಲಿವುಡ್ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರೊಂದಿಗೆ ವಿವಾಹವಾಗಲು ಸಿದ್ಧರಾಗುತ್ತಿದ್ದರು. ಆದರೆ, ಅವರ ತಂದೆ ಶ್ರೀನಿವಾಸ್ ಮಂಧಾನ ಅವರು ಹೃದಯಾಘಾತದಿಂದ ಮದುವೆ ದಿನವೇ ಆಸ್ಪತ್ರೆಗೆ ಸೇರಿದ್ದರಿಂದ ಮದುವೆಯನ್ನು ಮುಂದೂಡಲಾಯಿತು. ಸದ್ಯ ಶ್ರೀನಿವಾಸ್​ ಅವರು ಸಾಂಗ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಂದೆಯ ಅನಾರೋಗ್ಯದಿಂದ ಸ್ಮೃತಿ ಅವರು ತೀವ್ರವಾಗಿ ಮನನೊಂದಿದ್ದಾರೆ.  ತಂದೆ ಇಲ್ಲದೇ ನಡೆಯುವ ಸಮಾರಂಭ ನನಗೆ ಬೇಕಿಲ್ಲ ಎಂದು ಸ್ಮೃತಿ ಹೇಳಿದ್ದಾರೆ ಎಂದು ಅವರ ಮ್ಯಾನೇಜರ್ ತುಹಿನ್​ ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಒಂದೆಡೆ, ಸ್ಮೃತಿ ತನ್ನ ತಂದೆಯ ಬಗ್ಗೆ ಚಿಂತಿತರಾಗಿದ್ದರೆ, ಮತ್ತೊಂದೆಡೆ ಭಾವಿ ಪತಿ ಪಲಾಶ್ ಮುಚ್ಚಲ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈರಲ್ ಸೋಂಕು ಮತ್ತು ಅಸಿಡಿಟಿಯಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಗೋರೆಗಾಂವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ನಡುವೆ ಇಬ್ಬರ ಸಂಬಂಧದ ಬಗ್ಗೆ ವದಂತಿಗಳು ಕೂಡ ಹರಿದಾಡುತ್ತಿವೆ. ಮದುವೆ ಮುಂದೂಡಲು ಬೇರೆಯದ್ದೇ ಕಾರಣ ಇದೆ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿದೆ.
ವದಂತಿಗಳಿಗೆ ಪುಷ್ಠಿ ನೀಡುವಂತೆ ಸ್ಮೃತಿ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಿಂದ ಮದುವೆಗೆ ಸಂಬಂಧಿಸಿದ ಎಲ್ಲ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದ್ದಾರೆ. ಇದರ ನಡುವೆ ಜಾಲತಾಣದಲ್ಲಿ ಪಲಾಶ್​ ಅವರು ಯುವತಿಯೊಬ್ಬಳೊಂದಿಗೆ ನಡೆಸಿದ್ದಾರೆ ಎನ್ನಲಾದ ಚಾಟಿಂಗ್​ನ ಸ್ಕ್ರೀನ್​ ಶಾಟ್​ಗಳು ಕೂಡ ವೈರಲ್​ ಆಗಿವೆ. ಹೀಗಾಗಿ, ಎರಡೂ ಕುಟುಂಬದಲ್ಲಿ ವೈಮನಸ್ಸು ಮೂಡಿದೆ. ಈ ಮದುವೆ ನಡೆಯುವುದು ಬಹತೇಕು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಇದು ಕೇವಲ ವದಂತಿಗಳಷ್ಟೇ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಎಲ್ಲಿಯೂ ಹೊರಬಿದ್ದಿಲ್ಲ.

ಪಲಾಶ್​ ತಾಯಿಯ ಅಚ್ಚರಿ ಹೇಳಿಕೆ 

ಒಂದೆಡೆ ಅನೇಕ ವದಂತಿಗಳು ಹರಿದಾಡುತ್ತಿದ್ದು, ಇದೇ ಸಮಯದಲ್ಲಿ ಪಲಾಶ್ ಮುಚ್ಚಲ್ ಅವರ ತಾಯಿ ಅಮಿತಾ ಮುಚ್ಚಲ್, ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿ ಸ್ಪಷ್ಟನೆ ನೀಡುವ ಪ್ರಯತ್ನಗಳನ್ನು ಮಾಡಿದ್ದಾರೆ. ಪಲಾಶ್‌ಗೆ ಸ್ಮೃತಿ ಅವರ ತಂದೆ ಎಂದರೆ ತುಂಬಾ ಇಷ್ಟ. ಪಲಾಶ್, ಸ್ಮೃತಿಗಿಂತಲೂ ಅವರ ತಂದೆಗೆ ತುಂಬಾ ಹತ್ತಿರವಾಗಿದ್ದಾರೆ. ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆಂದು ತಿಳಿದಾಗ, ಪಲಾಶ್ ತುಂಬಾ ಕಣ್ಣೀರಿಟ್ಟರು. ಮದುವೆಯನ್ನು ಮುಂದೂಡಲು ಸ್ಮೃತಿಗಿಂತ ಮೊದಲು ನಿರ್ಧರಿಸಿದ್ದೇ ಪಲಾಶ್​. ಸ್ಮೃತಿಯ ತಂದೆ ಚೇತರಿಸಿಕೊಳ್ಳುವವರೆಗೆ ವಿವಾಹ ಸಮಾರಂಭವನ್ನು ಮುಂದೂಡಬೇಕೆಂದು ತಮ್ಮ ಹೇಳಿದ್ದಾಗಿ ತಿಳಿಸಿದ್ದಾರೆ.
ಸ್ಮೃತಿಯ ತಂದೆಗೆ ಎದೆ ನೋವು ಇದೆ ಎಂದು ತಿಳಿದಾಗ ಪಲಾಶ್ ಬಹಳ ಹೊತ್ತು ಅಳುತ್ತಲೇ ಇದ್ದರು. ತುಂಬಾ ಅತ್ತಿದ್ದರಿಂದ ಅವರ ಆರೋಗ್ಯ ಹಾಳಾಯಿತು. ಅವರನ್ನು ನಾಲ್ಕು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಐವಿ ಡ್ರಿಪ್ ಹಾಕಲಾಯಿತು. ಇಸಿಜಿ ತೆಗೆದುಕೊಳ್ಳಲಾಯಿತು. ಇತರ ಪರೀಕ್ಷೆಗಳನ್ನು ಸಹ ಮಾಡಲಾಯಿತು. ಅದೃಷ್ಟವಶಾತ್​ ಎಲ್ಲಾ ವರದಿಗಳು ಸಾಮಾನ್ಯವಾಗಿದ್ದವು. ಆದಾಗ್ಯೂ, ಇನ್ನೂ ಯಾವುದೇ ಒತ್ತಡದಿಂದ ಹೊರಬರಲು ಪಲಾಶ್​ಗೆ ಸಾಧ್ಯವಾಗಲಿಲ್ಲ ಎಂದು ಪಲಾಶ್ ಅವರ ತಾಯಿ ಅಮಿತಾ ಮುಚ್ಚಲ್ ಹೇಳಿದರು.
ಇದಕ್ಕೂ ಮೊದಲು ಪಲಾಶ್ ಅವರ ಸಹೋದರಿ ಮತ್ತು ಬಾಲಿವುಡ್ ಗಾಯಕಿ ಪಲಾಕ್​ ಮುಚ್ಚಲ್ ಕೂಡ ತಮ್ಮ ಸಹೋದರನ ಮದುವೆ ಬಗ್ಗೆ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದರು. ಸ್ಮೃತಿಯ ತಂದೆಯ ಅನಾರೋಗ್ಯದ ಕಾರಣ ಮದುವೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು. ಯಾವಾಗ ಪಲಾಕ್ ಮುಚ್ಚಲ್ ಅವರು ಫೋಸ್ಟ್​ ಮಾಡಿದರೋ ಕೆಲವೇ ಕ್ಷಣಗಳಲ್ಲಿ ಅಪರಿಚಿತ ಮಹಿಳೆಯೊಬ್ಬರು ಪಲಾಶ್ ಜೊತೆ ಚಾಟ್​ ಮಾಡಿದ್ದಾರೆನ್ನಲಾದ ಸ್ಕ್ರೀನ್‌ಶಾಟ್‌ಗಳು ಜಾಲತಾಣದಲ್ಲಿ ಕಾಣಿಸಿಕೊಂಡವು. ಕೆಲವು ಪೋಸ್ಟ್‌ಗಳಲ್ಲಿ ಮೇರಿ ಡಿ'ಕೋಸ್ಟಾ ಎಂದು ಗುರುತಿಸಲ್ಪಟ್ಟ ಮಹಿಳೆ ಸ್ಕ್ರೀನ್​ ಶಾಟ್​ಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿವೆ. ಆ ಚಾಟ್​ನಲ್ಲಿ ಪಲಾಶ್ ಅವರು ನಿಗೂಢ ಯುವತಿಯ ಲುಕ್​ ಅನ್ನು ಹೊಗಳಿದ್ದಾರೆ ಮತ್ತು ಸ್ಮೃತಿ ಬಗ್ಗೆಯೂ ಚರ್ಚಿಸಿದ್ದಾರೆ. 
ಸ್ಪಾ ಭೇಟಿ, ಈಜು ಮತ್ತು ಮುಂಬೈನ ವರ್ಸೋವಾ ಬೀಚ್‌ನಲ್ಲಿ ಇಬ್ಬರು ಪರಸ್ಪರ ಭೇಟಿಯಾಗಿರುವ ಬಗ್ಗೆ ಚಾಟಿಂಗ್​ನಲ್ಲಿ ಉಲ್ಲೇಖವಾಗಿದೆ. ಯಾವಾಗ ಈ ಚಾಟಿಂಗ್​ ಸ್ಕ್ರೀನ್​ಶಾಟ್​ ವೈರಲ್​ ಆಯ್ತೋ ಅನೇಕರು ಪಲಾಶ್​ ವಿರುದ್ಧ ಮುಗಿಬಿದ್ದಿದ್ದಾರೆ. ಆತ ಓರ್ವ ಹೆಣ್ಣುಬಾಕ ಎನ್ನುತ್ತಿದ್ದಾರೆ. ಆದರೆ, ಇನ್ನು ಕೆಲವರು ಸಂಯಮ ಕಾಯ್ದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್​ಗಳಿಂದ ಒಂದು ನಿರ್ಧಾರಕ್ಕೆ ಬರಬೇಡಿ ಎನ್ನುತ್ತಿದ್ದಾರೆ.
ಅಂದಹಾಗೆ, ಈ ಚಾಟ್ ಯಾವಾಗ ನಡೆಯಿತು ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಈ ಚಾಟ್ ಹಾಗೂ ಕೇಳಿಬರುತ್ತಿರುವ ವದಂತಿಗಳು ನಿಜವೇ ಎಂಬುದರ ಕುರಿತು ಯಾವುದೇ ಅಧಿಕೃತ ದೃಢೀಕರಣವಿಲ್ಲ. ಸದ್ಯ ಆನ್‌ಲೈನ್‌ನಲ್ಲಿ ಹರಡುತ್ತಿರುವುದು ಕೇವಲ ಊಹಾಪೋಹಗಳಾಗಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net