ಸಹೋದರಿಯ ಸಾವಿನ ನೋವಲ್ಲೂ ಅದ್ಭುತ ಇನ್ನಿಂಗ್ಸ್: ವಿಶ್ವಕಪ್​ ಗೆದ್ದ ಬೆನ್ನಲ್ಲೇ ಇಶಾನ್​ ಹೇಳಿದ ಮಾತು ಮನಕಲಕುತ್ತೆ! Ishan Kishan ​

ಸಹೋದರಿಯ ಸಾವಿನ ನೋವಲ್ಲೂ ಅದ್ಭುತ ಇನ್ನಿಂಗ್ಸ್: ವಿಶ್ವಕಪ್​ ಗೆದ್ದ ಬೆನ್ನಲ್ಲೇ ಇಶಾನ್​ ಹೇಳಿದ ಮಾತು ಮನಕಲಕುತ್ತೆ! Ishan Kishan ​
ಸಹೋದರಿಯ ಸಾವಿನ ನೋವಲ್ಲೂ ಅದ್ಭುತ ಇನ್ನಿಂಗ್ಸ್: ವಿಶ್ವಕಪ್​ ಗೆದ್ದ ಬೆನ್ನಲ್ಲೇ ಇಶಾನ್​ ಹೇಳಿದ ಮಾತು ಮನಕಲಕುತ್ತೆ! Ishan Kishan ​
Published on

ಪ್ರಮುಖ ಮುಖ್ಯಾಂಶಗಳು

  • ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಫೈನಲ್ ಪಂದ್ಯ ಭಾನುವಾರ (ಮಾರ್ಚ್​ 08) ನಡೆಯಿತು
  • ಟೀಮ್​ ಇಂಡಿಯಾ​ 96 ರನ್​ಗಳಿಂದ ಗೆದ್ದು ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆಯಿತು
  • ವಿಶ್ವಕಪ್​ ಗೆದ್ದ ಖುಷಿಯಲ್ಲಿ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ
  • ಆದರೆ ಭಾರತದ ಸ್ಫೋಟಕ ಆಟಗಾರ ಇಶಾನ್ ಕಿಶನ್ ಮನೆಯಲ್ಲಿ ದೊಡ್ಡ ದುರಂತವೊಂದು ಸಂಭವಿಸಿದೆ
Ishan Kishan ​ : ಆತಿಥೇಯ ಟೀಮ್ ಇಂಡಿಯಾ ಟಿ20 ವಿಶ್ವಕಪ್-2026ರ ಟೂರ್ನಮೆಂಟ್ ವಿಜೇತರಾಗಿ ಹೊರಹೊಮ್ಮಿರುವುದು ಎಲ್ಲರಿಗೂ ಗೊತ್ತೇ ಇದೆ. ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಫೈನಲ್ ಪಂದ್ಯ ಭಾನುವಾರ (ಮಾರ್ಚ್​ 08) ನಡೆಯಿತು. ಈ ಪಂದ್ಯದಲ್ಲಿ ಟೀಮ್​ ಇಂಡಿಯಾ​ 96 ರನ್​ಗಳಿಂದ ಗೆದ್ದು ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆಯಿತು. ಈ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ, ಎಲ್ಲರೂ ವಿಶ್ವಕಪ್ ಗೆಲುವನ್ನು ಆಚರಿಸುತ್ತಿರುವಾಗ, ಟೀಮ್ ಇಂಡಿಯಾದ ಸ್ಫೋಟಕ ಆಟಗಾರ ಇಶಾನ್ ಕಿಶನ್ ಮನೆಯಲ್ಲಿ ಮಾತ್ರ ದೊಡ್ಡ ದುರಂತವೊಂದು ಸಂಭವಿಸಿದೆ. ಕಿಶನ್ ಅವರ ಸಹೋದರಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೆ, ಸಹೋದರಿಯ ಸಾವಿನ ನೋವಿನಲ್ಲೂ ಫೈನಲ್​ ಪಂದ್ಯದಲ್ಲಿ ಕಿಶನ್ ಆಡಿದ ಇನ್ನಿಂಗ್ಸ್​ ಮಾತ್ರ ಮರೆಯುವಂತಿಲ್ಲ. 
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪ್ರಶಸ್ತಿ ಗೆದ್ದ ಬಳಿಕ ಭಾರತದಾದ್ಯಂತ ಸಂಭ್ರಮಾಚರಣೆಗಳು ನಡೆಯುತ್ತಿವೆ. ಆದರೆ, ಇಶಾನ್ ಕಿಶನ್ ಸಹೋದರಿಯ ಮನೆಯಲ್ಲಿ ದುಃಖದ ಛಾಯೆ ಆವರಿಸಿದೆ. ಟಿ20 ವಿಶ್ವಕಪ್ ಫೈನಲ್‌ಗೆ ಮುನ್ನ ಇಶಾನ್ ಕಿಶನ್ ಸಹೋದರಿ ಕಾರು ಅಪಘಾತದಲ್ಲಿ ನಿಧನರಾದರು. ಈ ಸುದ್ದಿ ಫೈನಲ್‌ಗೆ ಮುನ್ನ ಇಶಾನ್ ಕಿಶನ್‌ಗೆ ತಲುಪಿತು. ಆದರೆ, ನೋವನ್ನು ನುಂಗಿ ಟೀಮ್ ಇಂಡಿಯಾ ಪರ ರಿಂಗ್‌ಗೆ ಇಳಿದರು ಕಿಶನ್​. 
ಅಷ್ಟೇ ಅಲ್ಲದೆ, ಕಿಶನ್ ಅವರು ಸ್ಫೋಟಕ ಇನ್ನಿಂಗ್ಸ್​ ಆಡಿ ಭಾರತಕ್ಕೆ ಪ್ರಶಸ್ತಿಯನ್ನು ತಂದುಕೊಟ್ಟು ಆ ಪ್ರಶಸ್ತಿಯನ್ನು ತಮ್ಮ ಸಹೋದರಿಗೆ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ಪಂದ್ಯ ಮುಗಿದ ನಂತರ, ತಮ್ಮ ಕುಟುಂಬ ಸದಸ್ಯರೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡುವಾಗ ಕಿಶನ್​ ಭಾವುಕರಾದರು. ಇದಕ್ಕೂ ಮುನ್ನ ಕಿಶನ್, ತಮ್ಮ ಸಹೋದರಿಯ ಸಾವಿನ ಸುದ್ದಿಯನ್ನು ತಮ್ಮಲ್ಲಿಯೇ ಇಟ್ಟುಕೊಂಡರು.

ದೇಶವೇ ಹೆಚ್ಚು ಮುಖ್ಯ 

ಟೀಮ್ ಇಂಡಿಯಾ ಫೈನಲ್ಸ್ ಗೆದ್ದ ನಂತರ, ಇಶಾನ್ ಕಿಶನ್ ಭಾವುಕರಾಗಿ ತಮ್ಮ ಸಹೋದರಿ ನಿಧನರಾದರು ಎಂದು ಹೇಳಿದರು. ಫೈನಲ್‌ಗೆ ಮೊದಲೇ ತಮ್ಮ ಸಹೋದರಿಯನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದಾಗಿ ಮತ್ತು ಆ ನೋವನ್ನು ನುಂಗಿ ಪಂದ್ಯವನ್ನು ಆಡಿದ್ದಾಗಿ ಬಹಿರಂಗಪಡಿಸಿದರು. ನಾನು ವಿಚಾರವನ್ನು ಹಾರ್ದಿಕ್​ ಪಾಂಡ್ಯ ಜತೆ ಹಂಚಿಕೊಂಡಿದ್ದೆ. ಇಲ್ಲಿ ವೈಯಕ್ತಿಕ ವಿಷಯಗಳಿಗಿಂತ ದೇಶವೇ ಹೆಚ್ಚು ಮುಖ್ಯ ಎಂದು ಹಾರ್ದಿಕ್ ಸಲಹೆ ನೀಡಿದರು. ಅದೇ ಉತ್ಸಾಹದಿಂದ ನಾನು ನನ್ನ ತಂಡಕ್ಕಾಗಿ ಆಡಿದೆ. ಈ ಗೆಲುವನ್ನು ನನ್ನ ಸಹೋದರಿಗೆ ಅರ್ಪಿಸುತ್ತೇನೆ. ಇಂದು (ಮಾರ್ಚ್​ 08) ಅಂತಾರಾಷ್ಟ್ರೀಯ ಮಹಿಳಾ ದಿನ ಕೂಡ ಹೌದು. ಈ ಪ್ರಶಸ್ತಿ ಈ ದಿನವನ್ನು ಇನ್ನಷ್ಟು ವಿಶೇಷವಾಗಿಸುತ್ತದೆ ಎಂದು ಭಾವುಕರಾಗಿ ಮಾತನಾಡಿದರು. 
ಇನ್ನು ತಮ್ಮ ಅದ್ಭುತ ಇನ್ನಿಂಗ್ಸ್​ ಬಗ್ಗೆ ಮಾತನಾಡಿದ ಕಿಶನ್​, ನಾನು ಹೆಚ್ಚು ಯೋಚಿಸುವುದನ್ನು ನಿಲ್ಲಿಸಿದ್ದೇನೆ. ನಿಮ್ಮ ಕೆಲಸವನ್ನು ನೀವು ಮಾಡಿ ಮತ್ತು ನಿಮ್ಮ ನಿಯಂತ್ರಣದಲ್ಲಿಲ್ಲದ ವಿಷಯಗಳ ಬಗ್ಗೆ ಯೋಚಿಸಬೇಡಿ ಎಂಬ ಮಾತಿದೆ. ವಿರಾಟ್ (ಕೊಹ್ಲಿ) ಭಾಯ್ ಯಾವಾಗಲೂ ಅದನ್ನೇ ಮಾಡುತ್ತಿದ್ದರು ಎಂದು ಕೊಹ್ಲಿಯಲ್ಲಿ ಸ್ಮರಿಸಿದರು. 
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ನಡೆದ ಫೈನಲ್​ ಎಂಬ ಮಹಾಕದನದಲ್ಲಿ ಟೀಮ್​ ಇಂಡಿಯಾ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ (89 ರನ್​, 46 ಎಸೆತ, 5 ಬೌಂಡರಿ, 8 ಸಿಕ್ಸರ್‌) ಹಾಗೂ ಅಭಿಷೇಕ್ ಶರ್ಮಾ (52 ರನ್​, 21 ಎಸೆತ, 6 ಬೌಂಡರಿ, 3 ಸಿಕ್ಸರ್‌) ಭರ್ಜರಿ ಆರಂಭ ಒದಗಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಇಶಾನ್ ಕಿಶನ್ (54 ರನ್​, 25 ಎಸೆತ, 4 ಬೌಂಡರಿ, 4 ಸಿಕ್ಸರ್‌) ಅರ್ಧ ಶತಕದೊಂದಿಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಕೊನೆಯಲ್ಲಿ ಬಂದ ಶಿವಂ ದುಬೆ ( ಅಜೇಯ 26 ರನ್​, 8 ಎಸೆತ, 3 ಬೌಂಡರಿ, 2 ಸಿಕ್ಸರ್‌) ವಿನಾಶಕಾರಿ ಇನ್ನಿಂಗ್ಸ್ ಆಡಿದರು. ಈ ಮೂಲಕ ಟೀಮ್​ ಇಂಡಿಯಾ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 255 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಕಿವೀಸ್ ಬೌಲರ್‌ಗಳಲ್ಲಿ, ಜೇಮ್ಸ್ ನೀಶಮ್ ಮೂರು ವಿಕೆಟ್‌ಗಳನ್ನು ಪಡೆದರೆ, ಮ್ಯಾಟ್ ಹೆನ್ರಿ ಮತ್ತು ರಾಚಿನ್ ರವೀಂದ್ರ ತಲಾ ಒಂದು ವಿಕೆಟ್ ಪಡೆದರು.
256 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕಿವೀಸ್ ತಂಡ, ಟೀಮ್​ ಇಂಡಿಯಾದ ಬೌಲಿಂಗ್​ ದಾಳಿಗೆ ತತ್ತರಿಸಿತು. ಅಂತಿಮವಾಗಿ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಕಿವೀಸ್​ ಪರ ಟಿಮ್ ಸೈಫರ್ಟ್ (26 ಎಸೆತಗಳಲ್ಲಿ 52 ರನ್) ಮತ್ತು ಮಿಚೆಲ್ ಸ್ಯಾಂಟ್ನರ್ (35 ಎಸೆತಗಳಲ್ಲಿ 43 ರನ್) ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಉಳಿದಂತೆ ಯಾವೊಬ್ಬ ಬ್ಯಾಟರ್​ ಕೂಡ ಪ್ರಭಾವ ಬೀರಲಿಲ್ಲ. ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದ್ದ ಫಿನ್​ ಅಲೆನ್​ ನಿನ್ನೆಯ ಪಂದ್ಯದಲ್ಲಿ ಕೇವಲ 9 ರನ್​ಗೆ ಔಟಾದರು. ಟೀಮ್​ ಇಂಡಿಯಾ ಪರ  ಜಸ್​ಪ್ರೀತ್​ ಬುಮ್ರಾ ನಾಲ್ಕು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮೂರು ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಮತ್ತು ಅಭಿಷೇಕ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net