ಭಾರತೀಯರ ಹಾರ್ಟ್​ ಬ್ರೇಕ್​ ಮಾಡ್ತೀವಿ ಅಂದಿದ್ದ ಮಿಚೆಲ್​ ಸ್ಯಾಂಟ್ನರ್​ ಸೋತ ಬೆನ್ನಲ್ಲೇ ನೀಡಿದ್ದು ಅಚ್ಚರಿ ಹೇಳಿಕೆ! Mitchell Santner

ಭಾರತೀಯರ ಹಾರ್ಟ್​ ಬ್ರೇಕ್​ ಮಾಡ್ತೀವಿ ಅಂದಿದ್ದ ಮಿಚೆಲ್​ ಸ್ಯಾಂಟ್ನರ್​ ಸೋತ ಬೆನ್ನಲ್ಲೇ ನೀಡಿದ್ದು ಅಚ್ಚರಿ ಹೇಳಿಕೆ! Mitchell Santner
ಭಾರತೀಯರ ಹಾರ್ಟ್​ ಬ್ರೇಕ್​ ಮಾಡ್ತೀವಿ ಅಂದಿದ್ದ ಮಿಚೆಲ್​ ಸ್ಯಾಂಟ್ನರ್​ ಸೋತ ಬೆನ್ನಲ್ಲೇ ನೀಡಿದ್ದು ಅಚ್ಚರಿ ಹೇಳಿಕೆ! Mitchell Santner
Published on

ಪ್ರಮುಖ ಮುಖ್ಯಾಂಶಗಳು

  • ಸೂರ್ಯಕುಮಾರ್​ ಯಾದವ್​ ನೇತೃತ್ವದಲ್ಲಿ ಟೀಮ್​ ಇಂಡಿಯಾ 2026ರ ಟಿ20 ವಿಶ್ವಕಪ್ ವಿಜೇತರಾಗಿ ಹೊರಹೊಮ್ಮಿದೆ
  • ಟಿ20 ವಿಶ್ವಕಪ್​ ಗೆದ್ದ ಖುಷಿಯಲ್ಲಿ ಭಾರತದಲ್ಲಿ ಮನೆ ಮಾಡಿದ ಸಂಭ್ರಮ
  • ನ್ಯೂಜಿಲೆಂಡ್​ ಮಾತ್ರ ಕೊನೆಯ ಹೆಜ್ಜೆಯಲ್ಲಿ ವಿಶ್ವಕಪ್​ ಕಳೆದುಕೊಂಡಿದಕ್ಕೆ ಬೇಸರಗೊಂಡಿದೆ
Mitchell Santner : ಸೂರ್ಯಕುಮಾರ್​ ಯಾದವ್​ ನೇತೃತ್ವದಲ್ಲಿ ಟೀಮ್​ ಇಂಡಿಯಾ 2026ರ ಟಿ20 ವಿಶ್ವಕಪ್ ವಿಜೇತರಾಗಿ ಹೊರಹೊಮ್ಮಿದೆ. ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದ್ದರೆ, ನ್ಯೂಜಿಲೆಂಡ್​ ಮಾತ್ರ ಕೊನೆಯ ಹೆಜ್ಜೆಯಲ್ಲಿ ವಿಶ್ವಕಪ್​ ಕಳೆದುಕೊಂಡಿದಕ್ಕೆ ಬೇಸರಗೊಂಡಿದೆ. ಭಾನುವಾರ (ಮಾರ್ಚ್​ 08) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಕಿವೀಸ್ ತಂಡವು ಭಾರತದ ವಿರುದ್ಧ 96 ರನ್‌ಗಳಿಂದ ಹೀನಾಯವಾಗಿ ಸೋಲುಂಡಿತು. ಈ ಬಗ್ಗೆ ಮಾತನಾಡಿದ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್, ಫೈನಲ್​ ಪಂದ್ಯವನ್ನು ಸೋತಿರುವುದು ನೋವಿನ ಸಂಗತಿ ಎಂದರು. ಭಾರತ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ನಾವು ಸೋತೆವು ಎಂದು ಹೇಳಿದರು. ತಮ್ಮ ತವರು ನೆಲದಲ್ಲಿ ಲಕ್ಷಾಂತರ ಅಭಿಮಾನಿಗಳ ನಡುವೆ ತೀವ್ರ ಒತ್ತಡದಲ್ಲಿ ಭಾರತದ ಆಟಗಾರರು ತೋರಿದ ಅಸಾಧಾರಣ ಪ್ರದರ್ಶನಕ್ಕಾಗಿ ಅವರನ್ನು ಶ್ಲಾಘಿಸಿದರು.

ಉತ್ತಮ ತಂಡದ ಎದುರು ಸೋಲು

ಪಂದ್ಯದ ಬಳಿಕ ಮಾತನಾಡಿದ ಮಿಚೆಲ್ ಸ್ಯಾಂಟ್ನರ್, ಈ ಪಂದ್ಯವನ್ನು ನಾವು ಸೋತರು ಕೂಡ ನಮಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ನಾವು ಫೈನಲ್ ತಲುಪಿದ್ದಕ್ಕೆ ಮತ್ತು ನಮ್ಮ ತಂಡದ ಆಟಗಾರರನ್ನು ನೋಡಲು ನನಗೆ ತುಂಬಾ ಹೆಮ್ಮೆಯಾಗುತ್ತಿದೆ ಎಂದರು. ಈ ಮೆಗಾ ಟೂರ್ನಮೆಂಟ್‌ನ ಅಂತ್ಯದಲ್ಲಿ ನಾವು ಕೆಲವು ಸವಾಲುಗಳನ್ನು ಎದುರಿಸಿದೆವು. ಆದಾಗ್ಯೂ, ನಾವು ಪ್ರತಿ ಹಂತದಲ್ಲೂ ಅವುಗಳನ್ನು ಜಯಿಸಿ ಉತ್ತಮ ಪ್ರದರ್ಶನದೊಂದಿಗೆ ಮುನ್ನಡೆದಿದ್ದೇವೆ. ಇಂದು (ಮಾರ್ಚ್​ 08) ರಾತ್ರಿ ಲಕ್ಷಾಂತರ ಪ್ರೇಕ್ಷಕರ ಮುಂದೆ, ನಾವು ಉತ್ತಮ ತಂಡದ ಎದುರು ಸೋತಿದ್ದೇವೆ ಎಂದು ಸ್ಯಾಂಟ್ನರ್ ಹೇಳಿದರು.
ಭಾರತದಲ್ಲಿ ಆಡುವಾಗ ಕಿವೀಸ್ ತಂಡಕ್ಕೆ ಸಿಗುವ ಬೆಂಬಲದ ಬಗ್ಗೆ ಮಾತನಾಡಿದ ಸ್ಯಾಂಟ್ನರ್​, ನಾವು ಇಲ್ಲಿ ಆಡುವ ಹೆಚ್ಚಿನ ಪಂದ್ಯಗಳಲ್ಲಿ ಪ್ರೇಕ್ಷಕರಿಂದ ದೊರೆತ ಬೆಂಬಲ ಅವಿಸ್ಮರಣೀಯ. ತವರಿನಲ್ಲಿ ಫೈನಲ್ ಪಂದ್ಯ ಆಡುವುದು ತುಂಬಾ ಒತ್ತಡದಿಂದ ಕೂಡಿರುತ್ತದೆ, ಆದರೆ ಆ ಒತ್ತಡವನ್ನು ನಿವಾರಿಸಿ ವಿಶ್ವ ಚಾಂಪಿಯನ್ ಆದ ಭಾರತವನ್ನು ನಾವು ಅಭಿನಂದಿಸಲೇಬೇಕು ಎಂದು ಕೊಂಡಾಡಿದರು.
ಸೂಪರ್-8 ಮತ್ತು ಸೆಮಿಫೈನಲ್ ಪಂದ್ಯಗಳಲ್ಲಿಯೂ ಟೀಮ್​ ಇಂಡಿಯಾ ತುಂಬಾ ಚೆನ್ನಾಗಿ ಆಡಿದರು. ಆದಾಗ್ಯೂ, ಫೈನಲ್‌ನಲ್ಲಿ ಭಾರತ ಅದ್ಭುತವಾಗಿ ಆಡಿ ನಮ್ಮನ್ನು ಸೋಲಿಸಿತು. ಈ ಪಂದ್ಯದಲ್ಲಿ ಸೋತ ನಂತರವೂ ನಮ್ಮ ಕಿವೀಸ್ ಹುಡುಗರು ಈ ಮಟ್ಟಕ್ಕೆ ಬಂದು ನಿಂತಿದ್ದಕ್ಕಾಗಿ ಹೆಮ್ಮೆಪಡುತ್ತಾರೆ ಎಂದು ಸ್ಯಾಂಟ್ನರ್ ಹೇಳಿದರು.

ಹಾರ್ಟ್​ ಬ್ರೇಕ್​ ಮಾಡ್ತಿವಿ

ಅಂದಹಾಗೆ, ಫೈನಲ್​ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸ್ಯಾಂಟ್ನರ್​, ಅಂತಿಮ ಪಂದ್ಯದಲ್ಲಿ ನಾವು ಗೆಲ್ಲುವ ಮೂಲಕ ಟೀಮ್​ ಇಂಡಿಯಾದ ಅಭಿಮಾನಿಗಳ ಹಾರ್ಟ್​ ಬ್ರೇಕ್​ ಮಾಡ್ತೀವಿ. ಇಡೀ ಕ್ರೀಡಾಂಗಣವನ್ನು ಸೈಲೆಂಟ್​ ಮಾಡುತ್ತೇವೆ ಎಂದಿದ್ದರು. ಆದರೆ, ಇದೀಗ ಟೀಮ್​ ಇಂಡಿಯಾದ ಶಿಳ್ಳೆ, ಚಪ್ಪಾಳೆಗಳ ಅಲೆಯಲ್ಲಿ ಕಿವೀಸ್ ಕೊಚ್ಚಿ ಹೋಗಿದೆ. ಸ್ಯಾಂಟ್ನರ್​ ನೀಡಿದ್ದ ಹೇಳಿಕೆ ಇದೀಗ ಅವರಿಗೆ ತಿರುಮಂತ್ರವಾಗಿದ್ದು, ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದ್ದಾರೆ.​
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ನಡೆದ ಫೈನಲ್​ ಎಂಬ ಮಹಾಕದನದಲ್ಲಿ ಟೀಮ್​ ಇಂಡಿಯಾ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ (89 ರನ್​, 46 ಎಸೆತ, 5 ಬೌಂಡರಿ, 8 ಸಿಕ್ಸರ್‌) ಹಾಗೂ ಅಭಿಷೇಕ್ ಶರ್ಮಾ (52 ರನ್​, 21 ಎಸೆತ, 6 ಬೌಂಡರಿ, 3 ಸಿಕ್ಸರ್‌) ಭರ್ಜರಿ ಆರಂಭ ಒದಗಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಇಶಾನ್ ಕಿಶನ್ (54 ರನ್​, 25 ಎಸೆತ, 4 ಬೌಂಡರಿ, 4 ಸಿಕ್ಸರ್‌) ಅರ್ಧ ಶತಕದೊಂದಿಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಕೊನೆಯಲ್ಲಿ ಬಂದ ಶಿವಂ ದುಬೆ ( ಅಜೇಯ 26 ರನ್​, 8 ಎಸೆತ, 3 ಬೌಂಡರಿ, 2 ಸಿಕ್ಸರ್‌) ವಿನಾಶಕಾರಿ ಇನ್ನಿಂಗ್ಸ್ ಆಡಿದರು. ಈ ಮೂಲಕ ಟೀಮ್​ ಇಂಡಿಯಾ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 255 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಕಿವೀಸ್ ಬೌಲರ್‌ಗಳಲ್ಲಿ, ಜೇಮ್ಸ್ ನೀಶಮ್ ಮೂರು ವಿಕೆಟ್‌ಗಳನ್ನು ಪಡೆದರೆ, ಮ್ಯಾಟ್ ಹೆನ್ರಿ ಮತ್ತು ರಾಚಿನ್ ರವೀಂದ್ರ ತಲಾ ಒಂದು ವಿಕೆಟ್ ಪಡೆದರು.
256 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕಿವೀಸ್ ತಂಡ, ಟೀಮ್​ ಇಂಡಿಯಾದ ಬೌಲಿಂಗ್​ ದಾಳಿಗೆ ತತ್ತರಿಸಿತು. ಅಂತಿಮವಾಗಿ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಕಿವೀಸ್​ ಪರ ಟಿಮ್ ಸೈಫರ್ಟ್ (26 ಎಸೆತಗಳಲ್ಲಿ 52 ರನ್) ಮತ್ತು ಮಿಚೆಲ್ ಸ್ಯಾಂಟ್ನರ್ (35 ಎಸೆತಗಳಲ್ಲಿ 43 ರನ್) ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಉಳಿದಂತೆ ಯಾವೊಬ್ಬ ಬ್ಯಾಟರ್​ ಕೂಡ ಪ್ರಭಾವ ಬೀರಲಿಲ್ಲ. ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದ್ದ ಫಿನ್​ ಅಲೆನ್​ ನಿನ್ನೆಯ ಪಂದ್ಯದಲ್ಲಿ ಕೇವಲ 9 ರನ್​ಗೆ ಔಟಾದರು. ಟೀಮ್​ ಇಂಡಿಯಾ ಪರ  ಜಸ್​ಪ್ರೀತ್​ ಬುಮ್ರಾ ನಾಲ್ಕು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮೂರು ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಮತ್ತು ಅಭಿಷೇಕ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net