ಇದೇನಾದ್ರೂ ನಡೆದ್ರೆ ಟೀಮ್​ ಇಂಡಿಯಾ ಹೆಸರಲ್ಲಿ ಲಾಹೋರ್​ ಬೀದಿಯಲ್ಲಿ ಬಿರಿಯಾನಿ ಹಂಚ್ತೀನಿ ಅಂದ್ರು ಇಂಜಮಾಮ್! Inzamam ul Haq

ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ( Inzamam ul Haq )
ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ( Inzamam ul Haq )
Published on

ಪ್ರಮುಖ ಮುಖ್ಯಾಂಶಗಳು

  • ಇಂದು ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆಯಲಿದೆ ನಿರ್ಣಾಯಕ ಪಂದ್ಯ
  • ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯಕ್ಕೆ ಚೆನ್ನೈನ ಚೆಪಾಕ್ ಕ್ರೀಡಾಂಗಣ ವೇದಿಕೆ
  • ಈ ಪಂದ್ಯದಲ್ಲಿ ಸೋತ ತಂಡವು ಟೂರ್ನಿಯಿಂದಲೇ ಹೊರ ಬೀಳುತ್ತದೆ
  • ಭಾರತ ಸೋತರೆ ಲಾಹೋರ್​ ಬೀದಿಯಲ್ಲಿ ಬಿರಿಯಾನಿ ಹಂಚ್ತೀನಿ ಎಂದ ಇಂಜಮಾಮ್
Inzamam ul Haq : ಇಂದು ರಾತ್ರಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8ರ ಪಂದ್ಯದಲ್ಲಿ ಜಿಂಬಾಬ್ವೆ ತಂಡವೇನಾದರೂ ಭಾರತವನ್ನು ಸೋಲಿಸಿದರೆ, ಲಾಹೋರ್‌ನ ಬೀದಿ ಬೀದಿಗಳಲ್ಲಿ ಬಿರಿಯಾನಿ ಹಂಚುವುದಾಗಿ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಘೋಷಣೆ ಮಾಡಿದ್ದಾರೆ.
ಟಿ20 ವಿಶ್ವಕಪ್ ಟೂರ್ನಮೆಂಟ್ ಭಾಗವಾಗಿ ಟೀಮ್ ಇಂಡಿಯಾ ಇಂದು ನಿರ್ಣಾಯಕ ಪಂದ್ಯವನ್ನು ಆಡಲಿದೆ. ಸೆಮೀಸ್​ ಆಸೆಯನ್ನು ಜೀವಂತವಾಗಿ ಇಡಲು ಭಾರತ ಮತ್ತು ಜಿಂಬಾಬ್ವೆ ನಡುವೆ ದೊಡ್ಡ ಕಾದಾಟ ನಡೆಯಲಿದೆ. ಈ ಮಹತ್ವದ ಪಂದ್ಯಕ್ಕೆ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣ ಸಜ್ಜಾಗಿದೆ. ಈ ಪಂದ್ಯವನ್ನು ಭಾರೀ ಅಂತರದಲ್ಲಿ ಗೆಲ್ಲಬೇಕೆಂದು ಪಣ ತೊಟ್ಟಿರುವ ಭಾರತದ ಆಟಗಾರರು ಕಠಿಣ ತರಬೇತಿಯನ್ನು ನಡೆಸುತ್ತಿದ್ದಾರೆ. ಒಂದು ವೇಳೆ, ಈ ಪಂದ್ಯದಲ್ಲಿ ಭಾರತ ಸೋತರೆ, ತನ್ನ ಸೆಮಿಫೈನಲ್ ಆಸೆಯನ್ನು ಕಳೆದುಕೊಳ್ಳುವುದಲ್ಲದೆ, ಟೂರ್ನಿಯಿಂದಲೇ ಹೊರ ಹೋಗಬೇಕಾಗುತ್ತದೆ.
ಇಂದು ಟೀಮ್ ಇಂಡಿಯಾ ಮತ್ತು ಜಿಂಬಾಬ್ವೆ ನಡುವೆ ನಡೆಯಲಿರುವ ಪಂದ್ಯಕ್ಕೂ ಮುನ್ನವೇ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಟೀಮ್ ಇಂಡಿಯಾ ಖಂಡಿತವಾಗಿಯೂ ಜಿಂಬಾಬ್ವೆ ವಿರುದ್ಧ ಸೋಲುತ್ತದೆ ಎಂದಿದ್ದಾರೆ. ಅಲ್ಲದೆ, ಈ ಪಂದ್ಯದ ವೇಳೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವಂತೆ ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಜಾರನ್ನು ಇಂಜಮಾಮ್​ ಕೇಳಿಕೊಂಡಿದ್ದಾರೆ.
ಒಂದು ವೇಳೆ ಸಿಕಂದರ್ ರಜಾ, ಟೀಮ್ ಇಂಡಿಯಾವನ್ನು ಸೋಲಿಸಿದರೆ ಎಲ್ಲಾ ಕ್ರೆಡಿಟ್ ಪಾಕಿಸ್ತಾನಕ್ಕೆ ಸಲ್ಲುತ್ತದೆ. ಏಕೆಂದರೆ, ಸಿಕಂದರ್ ರಜಾ ಪಾಕಿಸ್ತಾನದಲ್ಲಿ ಹುಟ್ಟಿ ಬೆಳೆದರು ಮತ್ತು ಅವರು ಏನು ಸಾಧಿಸುತ್ತಾರೋ ಅದು ಅವರ ದೇಶಕ್ಕೂ ಅನ್ವಯಿಸುತ್ತದೆ ಎಂಬ ಮಾತುಗಳಾಡಿರುವ ಇಂಜಮಾಮ್​, ಜಿಂಬಾಬ್ವೆ ವಿರುದ್ಧ ಭಾರತ ಏನಾದರೂ ಸೋತರೆ ಲಾಹೋರ್​ ಬೀದಿಗಳಲ್ಲಿ ಉಚಿತ ಬಿರಿಯಾನಿ ವಿತರಿಸುವುದಾಗಿ ಘೋಷಿಸಿದ್ದಾರೆ.
ಲಾಹೋರ್‌ನಲ್ಲಿರುವ ಬಡವರಿಗೆ ಬಿರಿಯಾನಿ ವಿತರಿಸುವುದಲ್ಲದೆ, ಮಕ್ಕಳಿಗೆ ಬಟ್ಟೆಗಳನ್ನು ಸಹ ನೀಡುವುದಾಗಿ ಇಂಜಮಾಮ್​ ಹೇಳಿದ್ದಾರೆ. ಇದಿಷ್ಟೇ ಅಲ್ಲದೆ, ಕೆಲವು ಯುವ ಕ್ರಿಕೆಟಿಗರಿಗೆ ಉಚಿತ ತರಬೇತಿ ನೀಡುವುದಾಗಿಯೂ ಘೋಷಿಸಿದ್ದಾರೆ. ಭಾರತ ತಂಡ, ಜಿಂಬಾಬ್ವೆ ವಿರುದ್ಧ ಸೋತರೆ ಇಡೀ ಲಾಹೋರ್ ನಗರ ಆಚರಿಸಬೇಕೆಂದು ಇಂಜಮಾಮ್-ಉಲ್-ಹಕ್ ಕರೆ ನೀಡಿದ್ದಾರೆ.
ಸದ್ಯ ಇಂಜಮಾಮ್​ ನೀಡಿರುವ ಹೇಳಿಕೆಗಳು ಭಾರತೀಯ ಅಭಿಮಾನಿಗಳಿಂದ ಭಾರೀ ಟೀಕೆಗೆ ಗುರಿಯಾಗಿದೆ. ಮೊದಲು ನಿಮ್ಮ ಪಾಕಿಸ್ತಾನದ ಬಗ್ಗೆ ಮಾತನಾಡಿ, ಅವರೇ ಟೂರ್ನಿಯಿಂದ ಹೊರಬೀಳುವುದು ಖಚಿತವಾಗಿದೆ. ನಿಮ್ಮ ತಂಡದಲ್ಲಿರುವ ಹುಳುಕನ್ನು ಮೊದಲು ಮುಚ್ಚಿಕೊಳ್ಳಿ ಆಮೇಲೆ ಬೇರೆಯವರ ಬಗ್ಗೆ ಮಾತನಾಡಿ ಎಂದು ಕಾಮೆಂಟ್​ಗಳ ಸುರಿಮಳೆಗೈಯುವ ಮೂಲಕ ಇಂಜಮಾಮ್​ ವಿರುದ್ಧ ಕಟು ಟೀಕೆಗಳನ್ನು ಮಾಡುತ್ತಿದ್ದಾರೆ.
ಅಂದಹಾಗೆ, ಸೂಪರ್ 8ರ ಭಾಗವಾಗಿ ಟೀಮ್ ಇಂಡಿಯಾ ಮತ್ತು ಜಿಂಬಾಬ್ವೆ ನಡುವೆ ಇಂದು ದೊಡ್ಡ ಹೋರಾಟ ನಡೆಯಲಿದೆ. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರು ಮತ್ತೊಮ್ಮೆ ಆರಂಭಿಕ ಆಟಗಾರನಾಗಿ ಆಡಲಿದ್ದಾರೆ. ರಿಂಕು ಸಿಂಗ್ ಬದಲಿಗೆ ಸಂಜು ಸ್ಯಾಮ್ಸನ್ ತಂಡಕ್ಕೆ ಆಯ್ಕೆಯಾಗಲಿದ್ದಾರೆ. ವಾಷಿಂಗ್ಟನ್ ಸುಂದರ್ ಬದಲಿಗೆ ಉಪನಾಯಕ ಅಕ್ಷರ್ ಪಟೇಲ್ ತಂಡಕ್ಕೆ ಮರಳಲಿದ್ದಾರೆ. ಅಂತಿಮ ತಂಡದಲ್ಲಿ ಸಿರಾಜ್ ಅವರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಲಾಗುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net