ಪ್ರತಿಕ್ರಿಯಿಸಲು ಸಿಗೋದು ಕೆಲವೇ ಸೆಕೆಂಡ್: ಫೀಲ್ಡಿಂಗ್‌ನಲ್ಲಿ ಟೀಮ್ ಇಂಡಿಯಾ ದಿಗ್ಗಜರ ಸಕ್ಸಸ್ ಸೀಕ್ರೆಟ್ ಬಿಚ್ಚಿಟ್ಟ ಹೊಸ ಕೋಚ್! | Subhadeep Ghosh

ಪ್ರತಿಕ್ರಿಯಿಸಲು ಸಿಗೋದು ಕೆಲವೇ ಸೆಕೆಂಡ್: ಫೀಲ್ಡಿಂಗ್‌ನಲ್ಲಿ ಟೀಮ್ ಇಂಡಿಯಾ ದಿಗ್ಗಜರ ಸಕ್ಸಸ್ ಸೀಕ್ರೆಟ್ ಬಿಚ್ಚಿಟ್ಟ ಹೊಸ ಕೋಚ್! | Subhadeep Ghosh
Published on: 

ಆಕ್ಲೆಂಡ್: ಕಣ್ಮುಚ್ಚಿ ತೆರೆಯುವುದರೊಳಗೆ ಚೆಂಡು ಬೌಂಡರಿ ಗೆರೆ ದಾಟುವ ಕಿವೀಸ್ ನೆಲದಲ್ಲಿ, ಪ್ರತಿಕ್ರಿಯಿಸಲು ಫೀಲ್ಡರ್‌ಗಳಿಗೆ ಸಿಗುವುದು ಕೆಲವೇ ಕೆಲವು ಸೆಕೆಂಡುಗಳ. ಇಂತಹ ಅಗ್ನಿಪರೀಕ್ಷೆ ತಂದೊಡ್ಡುವ ಮೈದಾನಗಳಲ್ಲೂ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಿಂಚಿನ ವೇಗದಲ್ಲಿ ರನ್‌ಔಟ್ ಹಾಗೂ ಕ್ಯಾಚ್‌ಗಳನ್ನು ಹೇಗೆ ಸಾಧಿಸುತ್ತಾರೆ ಎಂಬ ರಹಸ್ಯವನ್ನು ಟೀಮ್ ಇಂಡಿಯಾದ ನೂತನ ಫೀಲ್ಡಿಂಗ್ ಕೋಚ್ ಶುಭದೀಪ್ ಘೋಷ್ (Subhadeep Ghosh) ಬಹಿರಂಗಪಡಿಸಿದ್ದಾರೆ.

ನ್ಯೂಜಿಲೆಂಡ್‌ನ ಸಣ್ಣ ಕ್ರಿಕೆಟ್ ಮೈದಾನಗಳಲ್ಲಿ ಆಟಗಾರರಿಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಲು ಕಾಲಾವಕಾಶವೇ ಇರುವುದಿಲ್ಲ. ಇದು ಪ್ರತಿಯೊಬ್ಬ ಫೀಲ್ಡರ್‌ಗೂ ದೊಡ್ಡ ಸವಾಲು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಕೊಹ್ಲಿ ಮತ್ತು ರೋಹಿತ್ ಅವರಂತಹ ಅನುಭವಿ ಆಟಗಾರರಿಗೆ ಅನೇಕ ವರ್ಷಗಳ ಸತತ ಅಭ್ಯಾಸದ ಮೂಲಕ ಸಿದ್ಧವಾಗಿರುವ ಮಸಲ್ ಮೆಮೊರಿ ಬೆನ್ನೆಲುಬಾಗಿರುವ ಕಾರಣ, ಅವರು ಎಷ್ಟೇ ಕಠಿಣ ಸವಾಲಿದ್ದರೂ ಆರಾಮಾಗಿ ಎದುರಿಸುತ್ತಾರೆ ಎಂದು ಶುಭದೀಪ್ ಘೋಷ್ ಅಭಿಪ್ರಾಯಪಟ್ಟಿದ್ದಾರೆ.

ಅನೇಕ ವರ್ಷಗಳ ಕಾಲ ಟೀಮ್​ ಇಂಡಿಯಾ ಫೀಲ್ಡಿಂಗ್ ಕೋಚ್​ ಆಗಿ ಜವಾಬ್ದಾರಿ ನಿಭಾಯಿಸಿದ ಟಿ. ದಿಲೀಪ್ ಬಳಿಕ ಈಗ ಆ ಜವಾಬ್ದಾರಿ ವಹಿಸಿಕೊಂಡಿರುವ ಶುಭದೀಪ್ ಘೋಷ್, ಪ್ರಸ್ತುತ ಭಾರತ ತಂಡದ ತರಬೇತಿ ಅವಧಿಗಳಲ್ಲಿ ಆಟಗಾರರ ಶರೀರದ ಸ್ಥಿರತೆ ಮತ್ತು ಚೆಂಡಿನ ಚಲನೆಯನ್ನು ನಿಖರವಾಗಿ ಅಂದಾಜಿಸುವ ಸಾಮರ್ಥ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದಿದ್ದಾರೆ.

Also Read
55 ಶತಕ, 80 ಅರ್ಧಶತಕಗಳಿಗಿಲ್ಲ ಸ್ಥಾನ! ವಿರಾಟ್ ವೃತ್ತಿಜೀವನದ ಬೆಸ್ಟ್ ಇನಿಂಗ್ಸ್ ಯಾವ್ದು ಗೊತ್ತಾ?| Virat Kohli
ಪ್ರತಿಕ್ರಿಯಿಸಲು ಸಿಗೋದು ಕೆಲವೇ ಸೆಕೆಂಡ್: ಫೀಲ್ಡಿಂಗ್‌ನಲ್ಲಿ ಟೀಮ್ ಇಂಡಿಯಾ ದಿಗ್ಗಜರ ಸಕ್ಸಸ್ ಸೀಕ್ರೆಟ್ ಬಿಚ್ಚಿಟ್ಟ ಹೊಸ ಕೋಚ್! | Subhadeep Ghosh

ಎರಡನೇ ಪಂದ್ಯಕ್ಕೂ ಮುನ್ನ ಮಾತನಾಡಿದ ಘೋಷ್, ನಾವು ಕಳೆದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಕೆಲವು ಉತ್ತಮ ಕ್ಯಾಚ್‌ಗಳನ್ನು ಹಿಡಿದಿದ್ದೇವೆ, ಮೈದಾನದಲ್ಲಿ ಆಟಗಾರರ ತೀವ್ರತೆ ಹಾಗೂ ಗ್ರೌಂಡ್ ಫೀಲ್ಡಿಂಗ್ ಅದ್ಭುತವಾಗಿತ್ತು ಎಂದು ಸಂತಸ ಹಂಚಿಕೊಂಡರು.

ಕ್ಯಾಚ್‌ಗಳನ್ನು ಕೈಚೆಲ್ಲುವ ವಿಚಾರವಾಗಿಯೂ ಮಾತನಾಡಿದ ಘೋಷ್​, ಕ್ಯಾಚ್‌ಗಳನ್ನು ಬಿಡುವುದು ಪಂದ್ಯದ ಒಂದು ಭಾಗ. ಕೆಲವೊಮ್ಮೆ ಹಾಗಾಗುವುದು ಸಹಜ. ಆದರೆ ನಾವು ಈ ಬಗ್ಗೆ ಪೂರ್ಣ ಜಾಗರೂಕರಾಗಿದ್ದೇವೆ ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಅಭ್ಯಾಸದ ಸಮಯದಲ್ಲಿ ಅನೇಕ ಪ್ರಮುಖ ವಿಷಯಗಳ ಮೇಲೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.

ಸಣ್ಣ ಬೌಂಡರಿಗಳ ಸವಾಲು, ತರಬೇತಿ ತಂತ್ರಗಳು ಹೇಗಿರ್ತಾವೆ ಗೊತ್ತಾ?

ನ್ಯೂಜಿಲೆಂಡ್‌ನಲ್ಲಿ ಆಡುವಾಗ ಚೆಂಡಿನ ಚಲನೆ ಮತ್ತು ಗಾಳಿಯಲ್ಲಿ ಅದರ ನಡವಳಿಕೆಯನ್ನು ಅರ್ಥೈಸಿಕೊಳ್ಳುವುದು ಅತ್ಯಂತ ಮುಖ್ಯ ಎಂದಿರುವ ಟೀಮ್​ ಇಂಡಿಯಾ ಫೀಲ್ಡಿಂಗ್ ಕೋಚ್​, ಇಲ್ಲಿನ ಸಣ್ಣ ಮೈದಾನಗಳಲ್ಲಿ ಪ್ರತಿಯೊಬ್ಬ ಆಟಗಾರನೂ ಇನ್‌ಫೀಲ್ಡರ್‌ನಂತೆ ಕೆಲಸ ಮಾಡಬೇಕಾಗುತ್ತದೆ, ಯಾರೂ ಔಟ್‌ಫೀಲ್ಡರ್ ಆಗಿ ಉಳಿಯುವುದಿಲ್ಲ. ಬೌಂಡರಿ ಗೆರೆಗಳು ಅತ್ಯಂತ ಹತ್ತಿರದಲ್ಲಿರುವುದರಿಂದ ಆಟಗಾರನಿಗೆ ಸ್ಪಂದಿಸಲು ಸಿಗುವ ಸಮಯ ತುಂಬಾ ಕಡಿಮೆ ಎಂದು ವಿವರಿಸಿದ್ದಾರೆ.

ಈ ಸವಾಲನ್ನು ಎದುರಿಸಲು ಭಾರತ ತಂಡದ ಅಭ್ಯಾಸದ ಸಮಯದಲ್ಲಿ ಹಗುರವಾದ ಚೆಂಡನ್ನು ಬಳಸಲಾಗುತ್ತಿದೆ. ಹಗುರವಾದ ಚೆಂಡು ವೇಗವಾಗಿ ತನ್ನ ಚಲನೆ ಬದಲಾಯಿಸುವುದರಿಂದ ಆಟಗಾರರು ತಮ್ಮ ಶರೀರದ ಸ್ಥಿರತೆಯನ್ನು ಕಾಯ್ದುಕೊಳ್ಳಲು ಮತ್ತು ತಕ್ಷಣವೇ ಪ್ರತಿಕ್ರಿಯಿಸಲು ಇದು ಸಹಾಯ ಮಾಡುತ್ತದೆ.

ವಿರಾಟ್ ಮತ್ತು ರೋಹಿತ್ ಪ್ರದರ್ಶನದ ರಹಸ್ಯ

ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್ ಮತ್ತು ರೋಹಿತ್ ಶರ್ಮಾ ಮಾಡಿದ ಮಿಂಚಿನ ರನ್ ಔಟ್ ಅನ್ನು ಉದಾಹರಣೆಯಾಗಿ ನೀಡಿದ ಘೋಷ್, ಅನುಭವ ಮತ್ತು ಮುಂಚಿತವಾಗಿ ಊಹಿಸುವ ಸಾಮರ್ಥ್ಯವೇ ಇದಕ್ಕೆ ಮುಖ್ಯ ಕಾರಣ ಎಂದರು.

ಫೀಲ್ಡಿಂಗ್‌ನಲ್ಲಿ ಮುಂಚಿತವಾಗಿ ಊಹಿಸುವುದು ಅತ್ಯಂತ ಮುಖ್ಯ. ವಿರಾಟ್ ಕೊಹ್ಲಿ ಕವರ್ಸ್ ಮತ್ತು ಪಾಯಿಂಟ್ ವಿಭಾಗಗಳಲ್ಲಿ ಲಕ್ಷಾಂತರ ಬಾರಿ ಫೀಲ್ಡಿಂಗ್ ಮಾಡಿದ್ದಾರೆ. ಚೆಂಡು ಬರುವ ಹಾದಿ, ಅದರ ಪಥ ಮತ್ತು ವೇಗದ ಪರಿಣಾಮದ ಸಂಪೂರ್ಣ ಅರಿವು ಅವರಿಗಿದೆ. ಹಾಗಾಗಿ ಅವರು ಇತರರಿಗಿಂತ ಮುಂಚಿತವಾಗಿಯೇ ಪರಿಸ್ಥಿತಿಯನ್ನು ಗ್ರಹಿಸುತ್ತಾರೆ. ರೋಹಿತ್ ಅವರ ರನ್ ಔಟ್ ವಿಚಾರದಲ್ಲೂ ಇದೇ ಆಯಿತು. ಅಪಾರ ಅನುಭವ, ನ್ಯಾಚುರಲ್​ ಪ್ರತಿಭೆ ಮತ್ತು ಒಂದೇ ಕೆಲಸವನ್ನು ಪದೇ ಪದೇ ಮಾಡುವುದು ಶ್ರೇಷ್ಠ ಫೀಲ್ಡರ್ ಆಗಲು ಕಾರಣ ಎಂದು ಶ್ಲಾಘಿಸಿದರು.

ಆಟಗಾರರ ದೈಹಿಕ ಸಾಮರ್ಥ್ಯ ಮತ್ತು ಪಂದ್ಯದ ಆಯ್ಕೆ

ಟೆಸ್ಟ್ ಸರಣಿಯನ್ನು ಒಳಗೊಂಡಂತೆ ಸರಣಿಯ ನಿರಂತರ ವೇಳಾಪಟ್ಟಿಯು ಆಟಗಾರರ ಮೇಲೆ ದೈಹಿಕವಾಗಿ ಒತ್ತಡ ಹೇರುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಘೋಷ್​, ಇದು ದೈಹಿಕ ಸವಾಲಿಗಿಂತ ಹೆಚ್ಚಾಗಿ ಆಟಗಾರರ ಮನಸ್ಥಿತಿಗೆ ಸಂಬಂಧಿಸಿದೆ. ದೈಹಿಕವಾಗಿ ಸವಾಲಿನಿಂದ ಕೂಡಿದ್ದರೂ, ಇಂತಹ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯಲು ನಮ್ಮ ಆಟಗಾರರು ಸಾಕಷ್ಟು ಕ್ರಿಕೆಟ್ ಆಡಿದ್ದಾರೆ ಎಂದರು.

ಶನಿವಾರದ ಪಂದ್ಯಕ್ಕೆ ವೇಗಿ ಮಹಮ್ಮದ್ ಸಿರಾಜ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುತ್ತಾರೆಯೇ ಎಂಬುದರ ಕುರಿತು ಯಾವುದೇ ಸುಳಿವು ನೀಡದೇ, ಈ ನಿರ್ಧಾರವನ್ನು ತಂಡದ ಮ್ಯಾನೇಜ್‌ಮೆಂಟ್ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು. ಪ್ರಸ್ತುತ ನಡೆಯುತ್ತಿರುವ ಪ್ರವಾಸದ ಬಗ್ಗೆ ಹೇಳುವುದಾದರೆ ಟಿ20 ಸರಣಿಯನ್ನು 3-2 ಅಂತರದಿಂದ ವಶಪಡಿಸಿಕೊಂಡಿರುವ ಭಾರತ ತಂಡ, ಆಕ್ಲೆಂಡ್‌ನಲ್ಲಿ ನಡೆದ ಚೊಚ್ಚಲ ಏಕದಿನ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.(ಏಜೆನ್ಸೀಸ್​).