55 ಶತಕ, 80 ಅರ್ಧಶತಕಗಳಿಗಿಲ್ಲ ಸ್ಥಾನ! ವಿರಾಟ್ ವೃತ್ತಿಜೀವನದ ಬೆಸ್ಟ್ ಇನಿಂಗ್ಸ್ ಯಾವ್ದು ಗೊತ್ತಾ?| Virat Kohli

55 ಶತಕ, 80 ಅರ್ಧಶತಕಗಳಿಗಿಲ್ಲ ಸ್ಥಾನ! ವಿರಾಟ್ ವೃತ್ತಿಜೀವನದ ಬೆಸ್ಟ್ ಇನಿಂಗ್ಸ್ ಯಾವ್ದು ಗೊತ್ತಾ?| Virat Kohli
Published on: 

Virat Kohli: ವಿರಾಟ್ ಕೊಹ್ಲಿ ತಮ್ಮ ಏಕದಿನ ವೃತ್ತಿಜೀವನದಲ್ಲಿ 306 ಇನಿಂಗ್ಸ್‌ಗಳಿಂದ 58.84 ರ ಸರಾಸರಿಯಲ್ಲಿ 15,183 ರನ್‌ಗಳನ್ನು ಕಲೆಹಾಕಿದ್ದಾರೆ. ಒಡಿಐ ಇತಿಹಾಸದಲ್ಲೇ ಗರಿಷ್ಠ 55 ಶತಕ ಹಾಗೂ 80 ಅರ್ಧಶತಕಗಳನ್ನು ಬಾರಿಸಿದ ಕೀರ್ತಿ ಅವರದ್ದಾಗಿದೆ. ಆದರೆ, ಈ ಎಲ್ಲಾ ದೊಡ್ಡ ಇನಿಂಗ್ಸ್‌ಗಳ ಮಧ್ಯೆ ಕೊಹ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಇನಿಂಗ್ಸ್ ಯಾವುದು ಎಂದು ಆರಿಸಿದ್ದಾರೆ. ಅದು ಯಾವುದೇ ಶತಕ ಅಥವಾ ಅರ್ಧಶತಕವಲ್ಲ ಎನ್ನುವುದು ಅಚ್ಚರಿಯ ಸಂಗತಿ.

ತಮ್ಮ 38ನೇ ಜನ್ಮದಿನದ ಅಂಗವಾಗಿ ಸ್ಟಾರ್ ಸ್ಪೋರ್ಟ್ಸ್ ನಡೆಸಿದ ಸಂವಾದದಲ್ಲಿ, ತಮ್ಮ ಪ್ರಮುಖ ಇನಿಂಗ್ಸ್‌ಗಳ ನಡುವಿನ ಹೋಲಿಕೆಯಲ್ಲಿ ಕೊಹ್ಲಿ 2013ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಬಾರಿಸಿದ 43 ರನ್‌ಗಳ ಇನಿಂಗ್ಸ್ ಅನ್ನು ತಮ್ಮ ಅತ್ಯುತ್ತಮ ಪ್ರದರ್ಶನ ಎಂದು ಆಯ್ಕೆ ಮಾಡಿದ್ದಾರೆ. 2012ರಲ್ಲಿ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಗಳಿಸಿದ 183 ರನ್, ಹೊಬಾರ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಬಾರಿಸಿದ 133 ರನ್ ಅಥವಾ 2011ರ ವಿಶ್ವಕಪ್ ಫೈನಲ್‌ನ 35 ರನ್‌ಗಳಿಗಿಂತಲೂ ಈ ಇನಿಂಗ್ಸ್ ಅವರಿಗೆ ನೆಚ್ಚಿನ ಇನ್ನಿಂಗ್ಸ್ ಆಗಿದೆ.

ಫೈನಲ್ ಪಂದ್ಯದ ರೋಚಕ ಕ್ಷಣಗಳು ಹೇಗಿದ್ವು ನೋಡಿ!

ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಆ ಫೈನಲ್ ಪಂದ್ಯವು ಮಳೆಯಿಂದಾಗಿ 20 ಓವರ್‌ಗಳಿಗೆ ಕಡಿತಗೊಂಡಿತ್ತು. ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರ ಶಿಖರ್ ಧವನ್ (31 ರನ್) ಔಟ್​ ಆದ ಬಳಿಕ, ಟೀಮ್​ ಇಂಡಿಯಾ 66 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಜೊತೆಗೂಡಿ 47 ರನ್‌ಗಳ ಮಹತ್ವದ ಜೊತೆಯಾಟ ನಡೆಸಿದರು.

34 ಎಸೆತಗಳನ್ನು ಎದುರಿಸಿದ ಕಿಂಗ್​ ಕೊಹ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 43 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಜಡೇಜಾ (ಅಜೇಯ 33) ಅವರ ಅಂತಿಮ ಹಂತದ ಸಾಹಸದಿಂದ ಭಾರತ 20 ಓವರ್‌ಗಳಲ್ಲಿ 129/7 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.

Also Read
ಚೇಸ್ ಮಾಸ್ಟರ್ ವಿರಾಟ್ ಕಿರೀಟಕ್ಕೆ ಮತ್ತೊಂದು ಗರಿ: ಕ್ರಿಕೆಟ್​ ದೇವರನ್ನೇ ಮೀರಿಸಿದ ಕಿಂಗ್​!...ಏನದು ದಾಖಲೆ? | Virat Kohli
55 ಶತಕ, 80 ಅರ್ಧಶತಕಗಳಿಗಿಲ್ಲ ಸ್ಥಾನ! ವಿರಾಟ್ ವೃತ್ತಿಜೀವನದ ಬೆಸ್ಟ್ ಇನಿಂಗ್ಸ್ ಯಾವ್ದು ಗೊತ್ತಾ?| Virat Kohli

ಈ ಸಣ್ಣ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಅದ್ಭತವಾಗಿ ಆಡುವ ಮೂಲಕ ಸುಸ್ಥಿಯಲ್ಲಿತ್ತು, ಈ ವೇಳೆ ಇಶಾಂತ್ ಶರ್ಮಾ ಒಂದೇ ಓವರ್‌ನಲ್ಲಿ ಇಯಾನ್ ಮಾರ್ಗನ್ ಮತ್ತು ರವಿ ಬೋಪಾರಾ ವಿಕೆಟ್ ಪಡೆದು ಪಂದ್ಯಕ್ಕೆ ಟ್ವಿಸ್ಟ್ ನೀಡಿದರು. ಅಂತಿಮವಾಗಿ ಭಾರತ 5 ರನ್‌ಗಳ ರೋಚಕ ಜಯ ಸಾಧಿಸಿ ಎರಡನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಎತ್ತಿಹಿಡಿಯಿತು. ಭಾರತಕ್ಕೆ ಟ್ರೋಫಿ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಈ 43 ರನ್‌ಗಳ ಹೋರಾಟವನ್ನೇ ಕೊಹ್ಲಿ ತಮ್ಮ ವೃತ್ತಿಜೀವನದ ಶ್ರೇಷ್ಠ ಇನಿಂಗ್ಸ್ ಎಂದು ಪರಿಗಣಿಸಿದ್ದಾರೆ.

ಕ್ರಿಕೆಟ್​ ದೇವರನ್ನೇ ಮೀರಿಸಿದ ಕಿಂಗ್​!

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ರನ್ ಚೇಸ್ ಮಾಡುವಾಗ ಅತಿ ಹೆಚ್ಚು ರನ್ ಗಳಿಸಿದ್ದ ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನು ಕೊಹ್ಲಿ ಮುರಿದರು. ನ್ಯೂಜಿಲೆಂಡ್ ವಿರುದ್ಧ ಆಕ್ಲೆಂಡ್‌ನ ಐಕಾನಿಕ್ ಈಡನ್ ಪಾರ್ಕ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಈ ಮಹತ್ವದ ಮೈಲಿಗಲ್ಲನ್ನು ತಲುಪಿದರು.

ನಿನ್ನೆ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಳಿಯುವ ಮುನ್ನ ಸಚಿನ್ ದಾಖಲೆ ಮುರಿಯಲು ಕೇವಲ 54 ರನ್‌ಗಳ ಅಗತ್ಯವಿತ್ತು. ಪಂದ್ಯದ ಆರಂಭದಿಂದಲೂ ಉತ್ತಮ ಲಯದಲ್ಲಿದ್ದ ಕೊಹ್ಲಿ, ತಾವೆದುರಿಸಿದ 39ನೇ ಎಸೆತದಲ್ಲಿ 54ನೇ ರನ್ ಕಲೆಹಾಕುವ ಮೂಲಕ ಸಚಿನ್ ತೆಂಡೂಲ್ಕರ್ ಅವರ 8,720 ರನ್‌ಗಳ ದಾಖಲೆಯನ್ನು ಹಿಂದಿಕ್ಕಿ ಏಕದಿನ ರನ್ ಚೇಸ್‌ನ ನಂಬರ್ ಒನ್ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಪ್ರಸ್ತುತ ವಿರಾಟ್ ಕೊಹ್ಲಿ ಒಟ್ಟು 176 ಏಕದಿನ ಪಂದ್ಯಗಳ 169 ಇನ್ನಿಂಗ್ಸ್‌ಗಳಲ್ಲಿ ಈವರೆಗೆ 8,722 ರನ್‌ಗಳನ್ನು ಕಲೆಹಾಕಿದ್ದಾರೆ. ಈ ವಿಶೇಷ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿ ಮತ್ತೊಬ್ಬ ದಿಗ್ಗಜ ರೋಹಿತ್ ಶರ್ಮಾ ಇದ್ದಾರೆ. ಹಿಟ್​​ಮ್ಯಾನ್​ 167 ಮ್ಯಾಚ್‌ಗಳ 163 ಇನ್ನಿಂಗ್ಸ್‌ಗಳಲ್ಲಿ ಒಟ್ಟು 6,801 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ(ಏಜೆನ್ಸೀಸ್​).