ಭಾರತ-ದಕ್ಷಿಣ ಆಫ್ರಿಕಾ ನಡುವಿನ 4ನೇ ಪಂದ್ಯ ರದ್ದಾಗಿದ್ದಕ್ಕೆ ಆಕ್ರೋಶ ಹೊರಹಾಕಿದ ರಾಬಿನ್ ಉತ್ತಪ್ಪ! IND vs SA

ಟೀಮ್​ ಇಂಡಿಯಾ ಮಾಜಿ ಆಟಗಾರ ರಾಬಿನ್ ಉತ್ತಪ್ಪ
ಟೀಮ್​ ಇಂಡಿಯಾ ಮಾಜಿ ಆಟಗಾರ ರಾಬಿನ್ ಉತ್ತಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯ ರದ್ದು
  • ದಟ್ಟವಾದ ಮಂಜಿನಿಂದಾಗಿ ಆರಂಭವೂ ಆಗದೇ ರದ್ದಾದ ಪಂದ್ಯ
  • ಪಂದ್ಯವನ್ನು ರದ್ದು ಮಾಡಿದ ಕ್ರಮವನ್ನು ಟೀಕಿಸಿದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ
  • ಪಂದ್ಯವು ನಿಗದಿತ ಸಮಯಕ್ಕೆ ಪ್ರಾರಂಭವಾಗಬೇಕಿತ್ತು ಎಂದ ಉತ್ತಪ್ಪ
ನವದೆಹಲಿ: ಬುಧವಾರ (ಡಿ.17) ಉತ್ತರ ಪ್ರದೇಶದ ಲಖನೌದಲ್ಲಿ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ( IND vs SA ) ನಡುವಿನ ನಾಲ್ಕನೇ ಟಿ20 ಪಂದ್ಯವು ದಟ್ಟವಾದ ಮಂಜಿನಿಂದಾಗಿ ಆರಂಭವೂ ಆಗದೇ ರದ್ದುಗೊಂಡಿತು. ಕನಿಷ್ಠ ಟಾಸ್ ಕೂಡ ಹಾಕಲಿಲ್ಲ. ಸಂಜೆ 6.30ಕ್ಕೆ ಟಾಸ್ ನಡೆಯಬೇಕಿತ್ತು. ಆದರೆ, ದಟ್ಟವಾಗಿ ಆವರಿಸಿದ್ದ ಮಂಜಿನಿಂದಾಗಿ ಟಾಸ್ ಅನ್ನು ಹಲವು ಬಾರಿ ಮುಂದೂಡಲಾಯಿತು. ಈ ಮಧ್ಯೆ ಹಲವು ಬಾರಿ ಮೈದಾನ ಪರಿಶೀಲಿಸಿದ ಅಂಪೈರ್‌ಗಳು ಅಂತಿಮವಾಗಿ ರಾತ್ರಿ 9.25ಕ್ಕೆ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು.
ಪಂದ್ಯವನ್ನು ರದ್ದು ಮಾಡಿದ ಕ್ರಮವನ್ನು 2007ರ ಟಿ20 ವಿಶ್ವಕಪ್ ವಿಜೇತ ರಾಬಿನ್ ಉತ್ತಪ್ಪ ಟೀಕಿಸಿದ್ದಾರೆ. ಈ ಪಂದ್ಯಕ್ಕೆ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಉತ್ತಪ್ಪ, ಅಂಪೈರ್‌ಗಳ ನಿರ್ಧಾರದ ಬಗ್ಗೆ ತಮ್ಮ ಅತೃಪ್ತಿಯನ್ನು ವ್ಯಕ್ತಪಡಿಸಿದರು. ಅಂಪೈರ್‌ಗಳ ನಿರ್ಧಾರವು ತಮ್ಮನ್ನು ಆಘಾತಗೊಳಿಸಿತು ಎಂದು ಹೇಳಿದ್ದಾರೆ.
ನಾನೀಗ ಅಂಪೈರ್ ನಿರ್ಧಾರದಿಂದ ತುಂಬಾ ಗೊಂದಲಕ್ಕೆ ಒಳಗಾಗಿದ್ದೇನೆ. ರಾತ್ರಿ ಕಳೆದಂತೆ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಅಂಪೈರ್​ಗಳು ಹೇಗೆ ಭಾವಿಸುತ್ತಾರೆ? ಹೇಳಬೇಕೆಂದರೆ ಪರಿಸ್ಥಿತಿ ಸುಧಾರಿಸುವುದಿಲ್ಲ. ಬದಲಾಗಿ ಇನ್ನಷ್ಟು ಕೆಟ್ಟದಾಗುತ್ತಲೇ ಇರುತ್ತದೆ. ಕಳೆದ ಒಂದೂವರೆ ಗಂಟೆಯಿಂದ ಸಂಭವಿಸದೇ ಇರುವುದು ಅರ್ಧ ಗಂಟೆಯಲ್ಲಿ ಏನಾಗುತ್ತದೆ? ಇನ್ನೂ ಅರ್ಧ ಗಂಟೆ ಹೆಚ್ಚು ಸಮಯ ನೀಡಲು ನಿರ್ಧರಿಸಿರುವುದು ತುಂಬಾ ಗೊಂದಲಮಯವಾಗಿದೆ ಎಂದು ಉತ್ತಪ್ಪ ನಿನ್ನೆ ಜಿಯೋಹಾಟ್‌ಸ್ಟಾರ್‌ನಲ್ಲಿ ಹೇಳಿದರು.
ಮಾತು ಮುಂದುವರಿಸಿದ ಉತ್ತಪ್ಪ, ತಾಪಮಾನ ಕಡಿಮೆಯಾಗುವುದರಿಂದ ರಾತ್ರಿಯ ನಂತರ ಪರಿಸ್ಥಿತಿ ಸುಧಾರಿಸುವುದಿಲ್ಲ, ಆದ್ದರಿಂದ ಪಂದ್ಯವು ನಿಗದಿತ ಸಮಯಕ್ಕೆ ಪ್ರಾರಂಭವಾಗಬೇಕಿತ್ತು ಅಥವಾ ಪರಿಸ್ಥಿತಿ ಸುಧಾರಿಸುವವರೆಗೆ ಕಾಯುವ ಬದಲು ಆರಂಭದಲ್ಲೇ ಪಂದ್ಯವನ್ನು ರದ್ದುಗೊಳಿಸಬೇಕಾಗಿತ್ತು. ನಾವು ಮೊದಲ ದರ್ಜೆಯ ಪಂದ್ಯಗಳನ್ನು ಇದಕ್ಕಿಂದಲೂ ತುಂಬಾ ಕೆಟ್ಟ ಪರಿಸ್ಥಿತಿಗಳಲ್ಲಿ, ಹೆಚ್ಚು ಮಂಜಿನಿಂದ ಕೂಡಿದ ಸ್ಥಳಗಳಲ್ಲಿ ಆಡಿದ್ದೇವೆ. ಇದು ಅದಕ್ಕಿಂತಲೂ ಉತ್ತಮವಾಗಿದೆ ಎಂದು ಹೇಳುವ ಮೂಲಕ ಪಂದ್ಯವನ್ನು ರದ್ದು ಮಾಡಿದ ಅಂಪೈರ್​ಗಳ ಕ್ರಮವನ್ನು ಟೀಕಿಸಿದರು.
ಅಂದಹಾಗೆ, ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಪ್ರಸ್ತುತ 2-1 ಅಂತರದಿಂದ ಮುನ್ನಡೆಯಲ್ಲಿದೆ. ಸರಣಿಯ ಕೊನೆಯ ಟಿ20 ಪಂದ್ಯ ಶುಕ್ರವಾರ (ಡಿಸೆಂಬರ್ 17) ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಭಾರತ ಗೆದ್ದರೆ ಸರಣಿಯನ್ನು 3-1 ಅಂತರದಲ್ಲಿ ಗೆಲ್ಲುತ್ತದೆ. ದಕ್ಷಿಣ ಆಫ್ರಿಕಾ ಗೆದ್ದರೆ ಸರಣಿ 2-2 ಅಂತರದಲ್ಲಿ ಸಮಬಲಗೊಳ್ಳುತ್ತದೆ. ಈಗಾಗಲೇ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಅಕ್ಷರ್ ಪಟೇಲ್ ಮತ್ತು ಶುಭಮಾನ್​ ಗಿಲ್ ಅಂತಿಮ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ತಿಳಿದುಬಂದಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net