ಭಾರತ-ದಕ್ಷಿಣ ಆಫ್ರಿಕಾ ನಡುವಿನ ಕೊನೆಯ ಟಿ20 ಪಂದ್ಯವು ಮಂಜಿನಿಂದಾಗಿ ರದ್ದಾಗುತ್ತಾ? ಇಲ್ಲಿದೆ ಉತ್ತರ...IND vs SA

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯ ದಟ್ಟ ಮಂಜಿನಿಂದಾಗಿ ರದ್ದು
  • ಐದನೇ ಹಾಗೂ ಕೊನೆಯ ಟಿ20 ಪಂದ್ಯವೂ ಮಂಜಿನಿಂದಾಗಿ ರದ್ದಾಗುವ ಭೀತಿ
  • ಅಹಮದಾಬಾದ್‌ನಲ್ಲಿ ಭಾರೀ ಮಂಜು ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ
ಅಹಮದಾಬಾದ್​: ಕಳೆದ ಬುಧವಾರ ಲಖನೌದ ಏಕನಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ( IND vs SA ) ನಡುವಿನ ನಾಲ್ಕನೇ ಟಿ20 ಪಂದ್ಯವು ಮಂಜಿನಿಂದಾಗಿ ರದ್ದಾಗಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಟಾಸ್ ಕೂಡ ಹಾಕದೆ ಪಂದ್ಯವನ್ನು ರದ್ದುಗೊಳಿಸಲಾಯಿತು.
ಸಂಜೆ 6.30ಕ್ಕೆ ಪಂದ್ಯದ ಟಾಸ್ ನಡೆಯಬೇಕಿತ್ತು. ಆದರೆ, ದಟ್ಟವಾಗಿ ಆವರಿಸಿದ್ದ ಮಂಜಿನಿಂದಾಗಿ ಟಾಸ್ ಅನ್ನು ಹಲವು ಬಾರಿ ಮುಂದೂಡಲಾಯಿತು. ಈ ಮಧ್ಯೆ ಹಲವು ಬಾರಿ ಮೈದಾನ ಪರಿಶೀಲಿಸಿದ ಅಂಪೈರ್‌ಗಳು ಅಂತಿಮವಾಗಿ ರಾತ್ರಿ 9.25ಕ್ಕೆ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು. ಇದರಿಂದ ಕ್ರೀಡಾಭಿಮಾನಿಗಳಿಗೆ ತುಂಬಾ ಬೇಸರವಾಯಿತು.
5 ಪಂದ್ಯಗಳ ಟಿ20 ಸರಣಿಯ ಕೊನೆಯ ಟಿ20 ಪಂದ್ಯ ಇಂದು (ಡಿ.19) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮಂಜು ಆವರಿಸುತ್ತದೆಯೇ? ಈ ಪಂದ್ಯವು ರದ್ದಾಗುತ್ತಾ? ಎಂಬ ಚಿಂತೆ ಅಭಿಮಾನಿಗಳಲ್ಲಿದೆ. ಏಕೆಂದರೆ, ಚಳಿಗಾಲವಾದ್ದರಿಂದ ಉತ್ತರ ಭಾರತದಲ್ಲಿ ವಿಪರೀತ ಮಂಜು ಕವಿದ ವಾತಾವರಣ ಇದೆ. ಹೀಗಾಗಿ, ಕ್ರೀಡಾಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.
ಖುಷಿಯ ಸಂಗತಿ ಏನೆಂದರೆ, ಅಭಿಮಾನಿಗಳು ಈ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೆ, ಪಂದ್ಯದ ದಿನದಂದು ಅಹಮದಾಬಾದ್‌ನಲ್ಲಿ ಭಾರೀ ಮಂಜು ಬೀಳುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಾಪಮಾನವು 15 ರಿಂದ 30 ಡಿಗ್ರಿಗಳ ನಡುವೆ ಇರುವ ಸಾಧ್ಯತೆಯಿದೆ ಎಂದಿದೆ. ಅಲ್ಲದೆ, ಆಕಾಶವು ತುಂಬಾ ಸ್ಪಷ್ಟವಾಗಿರುತ್ತದೆ ಅಂತಾನೂ ಹವಾಮಾನ ಇಲಾಖೆ ತಿಳಿಸಿದೆ.
ಅಂದಹಾಗೆ, ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಪ್ರಸ್ತುತ 2-1 ಅಂತರದಿಂದ ಮುನ್ನಡೆಯಲ್ಲಿದೆ. ಸರಣಿಯ ಕೊನೆಯ ಟಿ20 ಪಂದ್ಯ ಇಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಭಾರತ ಗೆದ್ದರೆ ಸರಣಿಯನ್ನು 3-1 ಅಂತರದಲ್ಲಿ ಗೆಲ್ಲುತ್ತದೆ. ದಕ್ಷಿಣ ಆಫ್ರಿಕಾ ಗೆದ್ದರೆ ಸರಣಿ 2-2 ಅಂತರದಲ್ಲಿ ಸಮಬಲಗೊಳ್ಳುತ್ತದೆ. ಈಗಾಗಲೇ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಅಕ್ಷರ್ ಪಟೇಲ್ ಮತ್ತು ಶುಭಮಾನ್​ ಗಿಲ್ ಅಂತಿಮ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ತಿಳಿದುಬಂದಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net