ಆಭರಣ, ಜಮೀನು ಎಲ್ಲವನ್ನು ಮಾರಿದ್ರೂ 4 ವರ್ಷ ಆಯ್ಕೆ ಮಾಡಲೇ ಇಲ್ಲ...ಕೊನೆಗೂ ಶ್ರಮಕ್ಕೆ ಸಿಕ್ತು ಫಲ! Kartik Sharma

ಕ್ರಿಕೆಟಿಗ ಕಾರ್ತಿಕ್ ಶರ್ಮ
ಕ್ರಿಕೆಟಿಗ ಕಾರ್ತಿಕ್ ಶರ್ಮ
Published on

ಪ್ರಮುಖ ಮುಖ್ಯಾಂಶಗಳು

  • ಇಂಡಿಯನ್ ಪ್ರೀಮಿಯರ್ ಲೀಗ್ ಅನೇಕ ಪ್ರತಿಭಾನ್ವಿತ ಕ್ರಿಕೆಟಿಗರನ್ನು ಮುನ್ನೆಲೆಗೆ ತರುತ್ತಿದೆ
  • IPL ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಬಲಪಡಿಸುವ ಪ್ರಕ್ರಿಯೆಯಲ್ಲಿ ಅಮೂಲ್ಯ ರತ್ನಗಳನ್ನು ಹೊರತೆಗೆಯುತ್ತಿವೆ
  • ಈ ಬಾರಿಯ ಮಿನಿ ಹರಾಜಿನಲ್ಲಿ ಎಲ್ಲರ ಗಮನ ಸೆಳೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ
  • ಅನ್​ಕ್ಯಾಪ್ಡ್​ ಆಟಗಾರರಾದ ಕಾರ್ತಿಕ್ ಶರ್ಮ ಮತ್ತು ಪ್ರಶಾಂತ್ ವೀರ್​ಗೆ ದುಬಾರಿ ಹಣ
Kartik Sharma : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನೇಕ ಪ್ರತಿಭಾನ್ವಿತ ಕ್ರಿಕೆಟಿಗರನ್ನು ಮುನ್ನೆಲೆಗೆ ತರುತ್ತಿದೆ. ಕ್ಯಾಶ್​ ರಿಚ್​ ಲೀಗ್‌ನಲ್ಲಿ ಭಾಗಿಯಾಗಿರುವ ಎಲ್ಲ 10 ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಬಲಪಡಿಸುವ ಪ್ರಕ್ರಿಯೆಯಲ್ಲಿ ಅಮೂಲ್ಯ ರತ್ನಗಳನ್ನು ಹೊರತೆಗೆಯುತ್ತಿವೆ. ಹೊಸ ಹೊಸ ಪ್ರತಿಭೆಗಳನ್ನು ಹುಡುಕಿ ತರುತ್ತಿದ್ದು, ಅವರ ಉಜ್ವಲ ಭವಿಷ್ಯಕ್ಕೆ ಹಾದಿ ಮಾಡಿಕೊಡುತ್ತದೆ. ಅದರಲ್ಲೂ ಈ ಬಾರಿಯ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂತಹ ಒಂದು ಸಂಚಲನಾತ್ಮಕ ನಿರ್ಧಾರವನ್ನು ತೆಗೆದುಕೊಂಡಿದೆ.
ಈ ಹರಾಜಿನಲ್ಲಿ ಸಿಎಸ್​ಕೆ ತಂಡ ಅನ್​ಕ್ಯಾಪ್ಡ್​ ಆಟಗಾರರಾದ ಕಾರ್ತಿಕ್ ಶರ್ಮ ಮತ್ತು ಪ್ರಶಾಂತ್ ವೀರ್ ಅವರನ್ನು ತಲಾ 14.20 ಕೋಟಿ ರೂಪಾಯಿಗೆ ಖರೀದಿಸಿತು. ಈ ಇಬ್ಬರೂ ಆಟಗಾರರಿಗೆ ಅಷ್ಟೊಂದು ಹಣ ನೀಡಿದ್ದು ವಿಶ್ವದ ಗಮನ ಸೆಳೆಯಿತು. ಈ ಇಬ್ಬರು ಆಟಗಾರರು ಮಧ್ಯಮ ವರ್ಗದ ಕುಟುಂಬಗಳಿಂದ ಬಂದವರು. ಪಾಲಕರ ತ್ಯಾಗದಿಂದ ಕ್ರಿಕೆಟಿಗರಾಗಿ ಬೆಳೆದ ಕಾರ್ತಿಕ್ ಮತ್ತು ಪ್ರಶಾಂತ್, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಬಾಳುವ ಅನ್‌ಕ್ಯಾಪ್ಡ್ ಆಟಗಾರರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಇಬ್ಬರಲ್ಲಿ, ಕಾರ್ತಿಕ್ ಶರ್ಮ ಅವರ ಕುಟುಂಬವು ಒಂದು ಹಂತದಲ್ಲಿ ಶೋಚನೀಯ ಪರಿಸ್ಥಿತಿಯನ್ನು ಎದುರಿಸಿತು. ಈ ಬಗ್ಗೆ ಸ್ವತಃ ಕಾರ್ತಿಕ್​ ಅವರ ಕುಟುಂಬವೇ IANS ಸುದ್ದಿ ಸಂಸ್ಥೆಗೆ ತಿಳಿಸಿದೆ. ಹತ್ತೊಂಬತ್ತು ವರ್ಷದ ಕಾರ್ತಿಕ್ ಅವರ ಊರು ರಾಜಸ್ಥಾನದ ಭರತ್‌ಪುರ. ಅವರ ಪಾಲಕರ ಹೆಸರು ಮನೋಜ್ ಶರ್ಮ ಮತ್ತು ರಾಧಾ. ಕಾರ್ತಿಕ್​ ಅವರು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಆದಾಗ್ಯೂ, ಕಾರ್ತಿಕ್ ಅವರ ಪಾಲಕರು ತಮ್ಮ ಮಗನನ್ನು ಕ್ರಿಕೆಟಿಗನನ್ನಾಗಿ ಮಾಡುವ ಕನಸು ಕಂಡರು. ವಿಶೇಷವಾಗಿ ಅವರ ತಾಯಿ ರಾಧಾ, ತಮ್ಮ ಮಗ ಒಂದಲ್ಲ ಒಂದು ದಿನ ಕ್ರಿಕೆಟಿಗನಾಗುತ್ತಾನೆ ಎಂದು ಬಲವಾಗಿ ನಂಬಿದ್ದರು. ಅದಕ್ಕಾಗಿ, ರಾಧ ಮತ್ತು ಅವರ ಪತಿ ಅನೇಕ ತ್ಯಾಗಗಳನ್ನು ಮಾಡಿದರು.
ಈ ಬಗ್ಗೆ ಕಾರ್ತಿಕ್ ಅವರ ತಂದೆ ಮನೋಜ್ ಶರ್ಮ ಮಾತನಾಡಿದ್ದು, ನಾವು ನಮ್ಮ ಮಗನನ್ನು ಕ್ರಿಕೆಟಿಗನಾಗಿ ಮಾಡಲು ಆಭರಣಗಳು, ಪ್ಲಾಟ್‌ಗಳು ಮತ್ತು ಹೊಲಗಳನ್ನು ಮಾರಿದೆವು. ಏಕೆಂದರೆ, ನಮ್ಮ ಆದಾಯ ತುಂಬಾ ಕಡಿಮೆ ಇತ್ತು. ಆದರೆ, ನನ್ನ ಹೆಂಡತಿ ರಾಧಾಗೆ ಒಂದು ಕನಸು ಇತ್ತು. ಅದೇನೆಂದರೆ, ಯಾವುದೇ ಸಂದರ್ಭದಲ್ಲೂ ಕಾರ್ತಿಕ್​ ಕ್ರಿಕೆಟಿಗನಾಗಬೇಕೆಂಬ ಕನಸನ್ನು ರಾಧಾ ಹೊತ್ತಿದ್ದಳು. ಯಾವಾಗಲೂ ಅದರ ಬಗ್ಗೆಯೇ ಮಾತನಾಡುತ್ತಿದ್ದಳು. ಎಷ್ಟೇ ಖರ್ಚಾದರೂ ಪರವಾಗಿಲ್ಲ, ನಮ್ಮ ಮಗ ಕ್ರಿಕೆಟಿಗನಾಗಬೇಕೆಂದು ರಾಧಾ ಭಾವಿಸಿದ್ದಳು ಎಂದು ಮನೋಜ್​ ಶರ್ಮ ತಿಳಿಸಿದ್ದಾರೆ.
ಕಾರ್ತಿಕ್‌ನ ತರಬೇತಿಗಾಗಿ, ನಾವು ನಮ್ಮ ಸಣ್ಣ ಸೈಟ್​ ಮತ್ತು ಬರೀನಾ ಗ್ರಾಮದಲ್ಲಿ ನಮಗಿದ್ದ ಹೊಲವನ್ನು ಕೂಡ ಮಾರಿದೆವು. ರಾಧಾ ತನ್ನ ಆಭರಣಗಳನ್ನು ಸಹ ಮಾರಿದಳು. ಅದು ನಮ್ಮ ಜೀವನದಲ್ಲಿ ಬಹಳ ಕಷ್ಟಕರವಾದ ಹಂತವಾಗಿತ್ತು. ಆದಾಗ್ಯೂ, ಆರ್ಥಿಕ ತೊಂದರೆಗಳು ಕಾರ್ತಿಕ್‌ನ ಮೇಲೆ ಪರಿಣಾಮ ಬೀರದಂತೆ ನಾವು ನೋಡಿಕೊಂಡೆವು. ಗ್ವಾಲಿಯರ್‌ನಲ್ಲಿ ಟೂರ್ನಮೆಂಟ್ ಆಡಲು ನಾನು ಕಾರ್ತಿಕ್‌ನನ್ನು ಅಲ್ಲಿಗೆ ಕರೆದೊಯ್ದೆ. ಅವರ ತಂಡವು ನಾಲ್ಕು ಅಥವಾ ಐದು ಪಂದ್ಯಗಳನ್ನು ಆಡಿದ ಬಳಿಕ ಟೂರ್ನಿಯಿಂದ ಹೊರಬೀಳುತ್ತದೆ ಎಂದು ನಾವು ಭಾವಿಸಿದ್ದೆವು. ಆದಾಗ್ಯೂ, ಕಾರ್ತಿಕ್‌ನ ಅದ್ಭುತ ಪ್ರದರ್ಶನದಿಂದಾಗಿ, ತಂಡವು ಫೈನಲ್ ತಲುಪಿತು. ಆದರೆ, ಆ ಪಂದ್ಯದವರೆಗೂ ನಾವು ಗ್ವಾಲಿಯರ್‌ನಲ್ಲಿ ಉಳಿಯಲು ನಮ್ಮ ಬಳಿ ಸಾಕಷ್ಟು ಹಣವಿರಲಿಲ್ಲ. ನಾವು ಖಾಲಿ ಹೊಟ್ಟೆಯಲ್ಲಿ ಮಲಗಿದ್ದೇವೆ. ನಂತರ, ಫೈನಲ್‌ನಲ್ಲಿ ಪಂದ್ಯವನ್ನು ಗೆದ್ದ ನಂತರ, ಕಾರ್ತಿಕ್ ಪಡೆದ ಬಹುಮಾನದ ಹಣದೊಂದಿಗೆ ನಾವು ಮನೆಗೆ ಮರಳಲು ಸಾಧ್ಯವಾಯಿತು ಎಂದು ಮನೋಜ್​ ಶರ್ಮ ಅವರು ತಾವು ಪಟ್ಟ ಕಷ್ಟಗಳನ್ನು ನೆನಪಿಸಿಕೊಂಡರು.
ಎರಡೂವರೆ ವಯಸ್ಸಿನಲ್ಲೇ ನನ್ನ ಮಗ ಬ್ಯಾಟ್‌ನಿಂದ ಚೆಂಡನ್ನು ಹೊಡೆದು ಎರಡು ಫೋಟೋ ಫ್ರೇಮ್‌ಗಳನ್ನು ಮುರಿದು ಹಾಕಿದನು. ಆ ದಿನವೇ ನಾವು ಅವನ ಭವಿಷ್ಯದ ಬಗ್ಗೆ ಒಂದು ನಿರ್ಧಾರಕ್ಕೆ ಬಂದೆವು. ವಾಸ್ತವವಾಗಿ, ನಾನು ಕೂಡ ಕ್ರಿಕೆಟಿಗನಾಗುವ ಕನಸು ಕಂಡಿದ್ದೆ. ಆದರೆ, ನನ್ನ ಆಸೆ ನನಸಾಗಲಿಲ್ಲ. ಈಗ ಆ ಕನಸು ನನ್ನ ಮಗನ ರೂಪದಲ್ಲಿ ನನಸಾಗಿದೆ ಎಂದು ಮನೋಜ್ ಶರ್ಮಾ ಹೇಳಿದರು.
ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕಾರ್ತಿಕ್ ಶರ್ಮಗೆ ಹರಾಜಿನಲ್ಲಿ ತೀವ್ರ ಪೈಪೋಟಿ ನಡೆಯಿತು. ಆದರೆ, ಚೆನ್ನೈ ಕಾರ್ತಿಕ್​ ಅವರನ್ನು ಕೈಬಿಡಲಿಲ್ಲ. ಅವರನ್ನು ದೊಡ್ಡ ಬೆಲೆಗೆ ತಮ್ಮದಾಗಿಸಿಕೊಂಡರು. ಹನ್ನೆರಡನೇ ತರಗತಿಯನ್ನು ಪೂರ್ಣಗೊಳಿಸಿರುವ ಕಾರ್ತಿಕ್, ಕ್ರಿಕೆಟ್ ಜೊತೆಗೆ ತಮ್ಮ ಅಧ್ಯಯನವನ್ನು ಮುಂದುವರಿಸುವುದಾಗಿ ಹೇಳುತ್ತಾರೆ. ಸದ್ಯ ಕಾರ್ತಿಕ್ ಅವರ ಅಣ್ಣ ತಮ್ಮ ಅಧ್ಯಯನದ ಮೇಲೆ ಹೆಚ್ಚು ಗಮನಹರಿಸುತ್ತಿದ್ದರೆ, ಅವರ ಕಿರಿಯ ಸಹೋದರ ಕ್ರಿಕೆಟ್‌ನಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ.
ಅನೇಕ ಯುವ ಆಟಗಾರರು ಈಗಾಗಲೇ ಇಚ್ಛಾಶಕ್ತಿ ಒಂದಿದ್ದರೆ ಎಷ್ಟೇ ಅಡೆತಡೆಗಳನ್ನು ಮೆಟ್ಟಿನಿಲ್ಲಬಹುದು ಎಂದು ಸಾಬೀತುಪಡಿಸಿದ್ದಾರೆ. ಈಗ ಕಾರ್ತಿಕ್ ಶರ್ಮ ಕೂಡ ಈ ಪಟ್ಟಿಗೆ ಸೇರಿದ್ದಾರೆ. ಅವರ ಪಾಲಕರ ತ್ಯಾಗಕ್ಕೆ ಪ್ರತಿಫಲವಾಗಿ, ಇಂದು ಅವರನ್ನು ಐಪಿಎಲ್‌ಗೆ ಆಯ್ಕೆ ಮಾಡಲಾಗಿದೆ. ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ತೋರಿದರೆ ಟೀಮ್ ಇಂಡಿಯಾದ ಚೊಚ್ಚಲ ಪ್ರವೇಶಕ್ಕೆ ದಾರಿಯಾಗಲಿದೆ. ಚೆನ್ನೈನಂತಹ ಚಾಂಪಿಯನ್ ತಂಡ ಕಾರ್ತಿಕ್​ ಅವರನ್ನು ಖರೀದಿಸಿದ್ದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net