ಭಾರತ-ಇಂಗ್ಲೆಂಡ್ ಸೆಮೀಸ್​ ಪಂದ್ಯ ಮಳೆಯಿಂದ ರದ್ದಾದರೆ ಯಾರು ಫೈನಲ್​ಗೆ? ಐಸಿಸಿ ರೂಲ್ಸ್​ ಏನಿದೆ? ಹೀಗಿದೆ ಲೆಕ್ಕಾಚಾರ... IND vs ENG

ಭಾರತ ಮತ್ತು ಇಂಗ್ಲೆಂಡ್​ ನಡುವಿನ ಸೆಮಿಫೈನಲ್ ಪಂದ್ಯ
ಭಾರತ ಮತ್ತು ಇಂಗ್ಲೆಂಡ್​ ನಡುವಿನ ಸೆಮಿಫೈನಲ್ ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • ಇದೇ ಮಾ.05ರಂದು ಭಾರತ ಮತ್ತು ಇಂಗ್ಲೆಂಡ್​ ನಡುವಿನ ಸೆಮಿಫೈನಲ್​ ಪಂದ್ಯ
  • ಫೈನಲ್​​ಗೇರಲು ಎರಡು ಬಲಿಷ್ಠ ತಂಡಗಳ ನಡುವೆ ಪೈಪೋಟಿ
  • ಅಕಸ್ಮಾತ್ ಪಂದ್ಯ ರದ್ದಾದರೆ ಯಾರು ಫೈನಲ್​ ಅಖಾಡಕ್ಕೆ?
  • ಸೆಮಿಫೈನಲ್​ನಲ್ಲಿ ಐಸಿಸಿ ನಿಯಮ ಹೇಗೆ ಅನ್ವಯ?
IND vs ENG: ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯಗಳು ನಾಳೆಯಿಂದ (ಮಾ.04) ಆರಂಭವಾಗಲಿದೆ. ದಕ್ಷಿಣ ಆಫ್ರಿಕಾ, ಭಾರತ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಈಗಾಗಲೇ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಮೊದಲ ಸೆಮೀಸ್​ ಪಂದ್ಯ ಕೋಲ್ಕತದ ಈಡನ್​ ಗಾರ್ಡನ್ಸ್​ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ನಡೆದರೆ, ಮಾ.05ರಂದು ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಎರಡನೇ ಪಂದ್ಯ ನಡೆಯಲಿದೆ.
ಈ ಪಂದ್ಯವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದೇ ಸಮಯದಲ್ಲಿ, ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ವರುಣನಿಂದ ಏನಾದರೂ ಅಡ್ಡಿಯಾದರೆ ಹೇಗೆ? ಇದರಿಂದ ಮ್ಯಾಚ್​ ರದ್ದಾದರೆ ಮುಂದೇನು ಕಥೆ? ಫೈನಲ್‌ ಕನಸು ಯಾರ ಪಾಲಾಗುತ್ತದೆ? ಈ ಬಗ್ಗೆ ಐಸಿಸಿ ನಿಯಮಗಳು ಏನು ಹೇಳುತ್ತೆ? ಎಂಬುದರ ವಿವರ ಹೀಗಿದೆ ನೋಡಿ.  

ಇಲ್ಲಿದೆ 'ರಿಸರ್ವ್​ ಡೇ' 

ನ್ಯೂಜಿಲೆಂಡ್- ದಕ್ಷಿಣ ಆಫ್ರಿಕಾ ಮತ್ತು ಭಾರತ-ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯಗಳು ಮಳೆಯಿಂದಾಗಿ ಏನಾದರೂ ರದ್ದಾದರೆ ಯಾವ ತಂಡ ಫೈನಲ್‌ಗೆ ಮುನ್ನಡೆಯುತ್ತದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡತೊಡಗಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್​ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾದರೆ, ಐಸಿಸಿ ಮೀಸಲು ದಿನವನ್ನು ನಿಗದಿಪಡಿಸಿದೆ. ಇದನ್ನು 'ರಿಸರ್ವ್​ ಡೇ' ಎಂದು ಕರೆಯಲಾಗಿದೆ.

ಕನಿಷ್ಠ ಮೂರು ಓವರ್​

ಮಳೆಯಿಂದ ಕನಿಷ್ಠ ಮೂರು ಓವರ್​ ಕೂಡ ಆಡಿಸಲು ಸಾಧ್ಯವಾಗದ ಹಿನ್ನೆಲೆ ಪಂದ್ಯ ರದ್ದುಗೊಂಡರೆ, ಅದರ ಮರುದಿನ ಆಡಿಸಲಾಗುವುದು. ಆದರೆ, ಎರಡನೇ ದಿನವೂ ಮಳೆಯಿಂದಾಗಿ ಪಂದ್ಯ ರದ್ದಾದರೆ ಮುಂದೇನು ಎಂಬ ಕುತೂಹಲಕಾರಿ ಪ್ರಶ್ನೆ ಸದ್ಯ ಕ್ರಿಕೆಟ್​ ಅಭಿಮಾನಿಗಳನ್ನು ಕಾಡುತ್ತಿದೆ. ಇದಕ್ಕೆ ಉತ್ತರ, ಪಂದ್ಯದ ದಿನ ಅಥವಾ ಮೀಸಲು ದಿನದಂದು ಮಳೆಯಿಂದಾಗಿ ಪಂದ್ಯವನ್ನು ರದ್ದುಗೊಳಿಸಿದರೆ, ಪಂದ್ಯದ ಫಲಿತಾಂಶವನ್ನು ಹೇಗೆ ನಿರ್ಧರಿಸಬೇಕು ಎಂಬುದರ ಕುರಿತು ಐಸಿಸಿ ನಿಯಮಗಳು ಬಹಳ ಸ್ಪಷ್ಟವಾಗಿವೆ. 

2ನೇ ದಿನವು ರದ್ದಾದರೆ ಈ ನಿಯಮ ಅನ್ವಯ

ನಿಯಮಗಳ ಪ್ರಕಾರ, ನಾಕೌಟ್ ಹಂತದಲ್ಲಿ ಪಂದ್ಯವನ್ನು ನಿರ್ಧರಿಸದಿದ್ದರೆ, ಎಲ್ಲಾ ಸೂಪರ್-8 ಪಂದ್ಯಗಳು ಪೂರ್ಣಗೊಂಡ ನಂತರ ಸೆಮಿಫೈನಲ್‌ನಲ್ಲಿ ಸ್ಪರ್ಧಿಸಿದ ಎರಡು ತಂಡಗಳಲ್ಲಿ ಉತ್ತಮ ಸ್ಥಾನ ಹೊಂದಿರುವ ತಂಡವು ಫೈನಲ್‌ಗೆ ಅರ್ಹತೆ ಪಡೆಯಲಿದೆ. ಅಲ್ಲಿಗೆ, ಪಂದ್ಯವೇನಾದರೂ ರದ್ದಾದರೆ, ಇಂಗ್ಲೆಂಡ್ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಇಂಗ್ಲೆಂಡ್ ಗ್ರೂಪ್-2ರಲ್ಲಿ ಅಗ್ರ ಸ್ಥಾನದಲ್ಲಿದೆ. ಅದೇ ಭಾರತ, ಗ್ರೂಪ್-1ರಲ್ಲಿ ಎರಡನೇ ರನ್ನರ್​ ಅಪ್ ಆಗಿ ಸೆಮಿಫೈನಲ್ ಪ್ರವೇಶಿಸಿದೆ. ಈ ಕಾರಣದಿಂದಾಗಿ, ಟೀಮ್​ ಇಂಡಿಯಾ ಸೆಮಿಫೈನಲ್​ ಪಂದ್ಯವನ್ನಾಡದೆ ಫೈನಲ್​ನಿಂದ ಹೊರಗುಳಿಯಲಿದೆ.

ಫೈನಲ್​ಗೆ ದಕ್ಷಿಣ ಆಫ್ರಿಕಾ 

ಅದೇ ರೀತಿ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಪಂದ್ಯ ರದ್ದಾದರೆ, ಹರಿಣರ ಪಡೆ ನೇರವಾಗಿ ಫೈನಲ್‌ಗೆ ಲಗ್ಗೆಯಿಡುತ್ತದೆ. ಕಾರಣ, ದಕ್ಷಿಣ ಆಫ್ರಿಕಾ ಗ್ರೂಪ್-1ರಲ್ಲಿ ಅಗ್ರ ಸ್ಥಾನದಲ್ಲಿದೆ. ಗ್ರೂಪ್-2ರಲ್ಲಿ ನ್ಯೂಜಿಲೆಂಡ್ ಎರಡನೇ ರನ್ನರ್ ಅಪ್ ಆಗಿ ಸೆಮೀಸ್​ಗೆ ಬಂದಿದೆ. ಹವಾಮಾನ ವರದಿಗಳ ಪ್ರಕಾರ, ಕೋಲ್ಕತ ಮತ್ತು ಮುಂಬೈನಲ್ಲಿ ಮಾ.04 ಮತ್ತು 05ರಂದು ಮಳೆ ಬೀಳುವ ಸಾಧ್ಯತೆಗಳಿಲ್ಲ. ಅಕಸ್ಮಾತ್​ ಮಳೆ ಬಂದರೂ, ಪಂದ್ಯ ರದ್ದಾಗುವ ಮಟ್ಟಿಗೆ ಸುರಿಯುವುದಿಲ್ಲ ಎನ್ನಲಾಗಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net