ಸಂಜು ಬದಲು ಈ ಆಟಗಾರನಿಗೆ ಗೆಲುವಿನ ಕ್ರೆಡಿಟ್​ ಕೊಟ್ಟು ಅಚ್ಚರಿ ಹೇಳಿಕೆ ನೀಡಿದ ಗೌತಮ್​ ಗಂಭೀರ್​! Gautam Gambhir

ಸಂಜು ಬದಲು ಈ ಆಟಗಾರನಿಗೆ ಗೆಲುವಿನ ಕ್ರೆಡಿಟ್​ ಕೊಟ್ಟು ಅಚ್ಚರಿ ಹೇಳಿಕೆ ನೀಡಿದ ಗೌತಮ್​ ಗಂಭೀರ್​! Gautam Gambhir
ಸಂಜು ಬದಲು ಈ ಆಟಗಾರನಿಗೆ ಗೆಲುವಿನ ಕ್ರೆಡಿಟ್​ ಕೊಟ್ಟು ಅಚ್ಚರಿ ಹೇಳಿಕೆ ನೀಡಿದ ಗೌತಮ್​ ಗಂಭೀರ್​! Gautam Gambhir
Published on

ಪ್ರಮುಖ ಮುಖ್ಯಾಂಶಗಳು

  • ವೆಸ್ಟ್​ ಇಂಡೀಸ್​ ವಿರುದ್ಧ ಭರ್ಜರಿ ಜಯ ಸಾಧಿಸಿ ಟಿ20 ವಿಶ್ವಕಪ್​ ಟೂರ್ನಿಯ ಸಮಿಫೈನಲ್​ಗೆ ಭಾರತ ಎಂಟ್ರಿ​
  • ವಿಂಡೀಸ್ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್
  • ಕೊನೆಯವರೆಗೂ ಕ್ರೀಸ್​ನಲ್ಲಿ ನಿಂತು 97 ರನ್‌ ಗಳಿಸಿ ಅಜೇಯರಾಗಿ ಉಳಿದ ಕೇರಳ ಕ್ರಿಕೆಟಿಗ
  • ಶಿವಂ ದುಬೆ ಬಾರಿಸಿದ 2 ಬೌಂಡರಿ ಸಂಜು ಮೇಲಿನ ಒತ್ತಡ ಕಡಿಮೆ ಮಾಡಿತು ಎಂದ ಗಂಭೀರ್​
Gautam Gambhir : ನಿರ್ಣಾಯಕ ಸೂಪರ್​ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ 2026ರ ಟಿ20 ವಿಶ್ವಕಪ್‌ನ ಸೆಮಿಫೈನಲ್​ಗೆ ಟೀಮ್ ಇಂಡಿಯಾ ಲಗ್ಗೆ ಇಟ್ಟಿದೆ. ವಿಂಡೀಸ್ ವಿರುದ್ಧದ ಗೆಲುವಿನಲ್ಲಿ ಭಾರತದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರ ವಹಿಸಿದರು. 196 ರನ್‌ಗಳ ಬೃಹತ್​ ಗುರಿಯನ್ನು ಬೆನ್ನಟ್ಟುವಾಗ ಕೊನೆಯವರೆಗೂ ಕ್ರೀಸ್​ನಲ್ಲಿ ನಿಂತು 97 ರನ್‌ ಗಳಿಸಿ ಅಜೇಯರಾಗಿ ಉಳಿದರು. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಸಂಜು ಸ್ಯಾಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಪಂದ್ಯದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್, ಸಣ್ಣ ಸಣ್ಣ ಜತೆಯಾಟಗಳ ಮಹತ್ವವನ್ನು ವಿವರಿಸಿದರು. ಪಂದ್ಯದ 19ನೇ ಓವರ್‌ನಲ್ಲಿ ಶಿವಂ ದುಬೆ ಅವರು ಬಾರಿಸಿದ ಎರಡು ಬೌಂಡರಿಗಳು ಸಂಜು ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ ಎಂದು ಗಂಭೀರ್​ ಹೇಳಿದರು.
ಅಂದಹಾಗೆ, ಈ ಪಂದ್ಯದ 19ನೇ ಓವರ್​ನಲ್ಲಿ ಮೊದಲ ಎಸೆತ ಡಾಟ್ ಬಾಲ್ ಆಯಿತು ಮತ್ತು ಎರಡನೇ ಎಸೆತದಲ್ಲಿ ಹಾರ್ದಿಕ್ ಔಟಾದರು. ಈ ವೇಳೆ ಭಾರತದ ಗೆಲುವಿಗೆ 10 ಎಸೆತಗಳಲ್ಲಿ 17 ರನ್ ಬೇಕಿತ್ತು. ಪಾಂಡ್ಯ ಔಟಾದ ನಂತರ ಕ್ರೀಸ್​ಗೆ ಬಂದ ದುಬೆ ಎರಡು ಬೌಂಡರಿ ಬಾರಿಸಿದರು. ಇದರಿಂದಾಗಿ ತಂಡದ ಚೇಸಿಂಗ್​ ಮೊತ್ತ ಕಡಿಮೆಯಾಯಿತು ಮತ್ತು ಸಂಜು ಮೇಲಿನ ಒತ್ತಡವನ್ನು ಕಡಿಮೆ ಮಾಡಿತು. ನಿರ್ಣಾಯಕ ಸಮಯದಲ್ಲಿ ಬ್ಯಾಕ್​ ಟು ಬ್ಯಾಕ್​ ಬೌಂಡರಿ ಬಾರಿಸಿದ ದುಬೆ ಅವರನ್ನು ಗಂಭೀರ್ ಶ್ಲಾಘಿಸಿದರು. ತಂಡದ ಗೆಲುವಿಗೆ ಪ್ರತಿಯೊಬ್ಬ ಆಟಗಾರನ ಸಹಕಾರ ಬಹಳ ಮುಖ್ಯ ಎಂದು ಹೇಳಿದರು.
ನಾವು ಸಣ್ಣ ಜತೆಯಾಟದ ಬಗ್ಗೆ ಮಾತನಾಡುತ್ತಿದ್ದೇವೆ. ಕ್ರಿಕೆಟ್ ಒಂದು ತಂಡದ ಆಟ. ಅದು ಯಾವಾಗಲೂ ಹಾಗೆ ಇದೆ. ನನಗೆ, ಶಿವಂ ದುಬೆ ಹೊಡೆದ ಆ ಎರಡು ಬೌಂಡರಿಗಳು ಸಂಜು ಸ್ಯಾಮ್ಸನ್ (ಅಜೇಯ 97) ಇನ್ನಿಂಗ್ಸ್‌ನಷ್ಟೇ ಮುಖ್ಯ. ಏಕೆಂದರೆ ಶಿವಂ ಆ ಎರಡು ಬೌಂಡರಿಗಳನ್ನು ಬಾರಿಸದಿದ್ದರೆ, ನಾವು ಈಗ ಸಂಜು ಬಗ್ಗೆ ಮಾತನಾಡುತ್ತಿರಲಿಲ್ಲ ಎಂದು ಗಂಭೀರ್ ಹೇಳಿದರು.
ಹೌದು, ದೊಡ್ಡ ಇನ್ನಿಂಗ್ಸ್ ಯಾವಾಗಲೂ ಎದ್ದು ಕಾಣುತ್ತದೆ. ಆದರೆ, ಸಣ್ಣ ಇನ್ನಿಂಗ್ಸ್ ಪಂದ್ಯಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ ಎಂದ ಗಂಭೀರ್​, ಸಂಜು ಸ್ಯಾಮ್ಸನ್ ವಿಶ್ವ ದರ್ಜೆಯ ಆಟಗಾರ ಮತ್ತು ತಂಡಕ್ಕೆ ಅವರ ಅಗತ್ಯವಿದ್ದಾಗ ಯಾವಾಗಲೂ ಮುಂದೆ ಬರುತ್ತಾರೆ ಎಂದು ಹೊಗಳಿದರು.
ನ್ಯೂಜಿಲೆಂಡ್ ಸರಣಿಯಲ್ಲಿ ಸಂಜು, ಕಠಿಣ ಪರಿಸ್ಥಿತಿಯನ್ನು ಎದುರಿಸಿದರು. ಆದ್ದರಿಂದ, ಕೆಲವೊಮ್ಮೆ ಅವರಿಗೆ ವಿಶ್ರಾಂತಿ ನೀಡುವುದು ಮುಖ್ಯ. ಏಕೆಂದರೆ ನೀವು ಆ ವ್ಯಕ್ತಿಯನ್ನು ಆ ಒತ್ತಡದ ಪರಿಸ್ಥಿತಿಯಿಂದ ಹೊರಗೆ ತರಲು ಬಯಸುತ್ತೀರಿ. ವಿಶ್ವಕಪ್‌ನಂತಹ ಪ್ರಮುಖ ಪಂದ್ಯಗಳಲ್ಲಿ ಸಂಜು ಅವರು ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ನಾನು ನಂಬುತ್ತೇನೆ. ಅವರು ಇಂದು ಅದನ್ನು ಮಾಡಿದ್ದಾರೆ ಎಂದು ಗಂಭೀರ್​ ಹೇಳಿದರು.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ವಿಂಡೀಸ್​ ಪಡೆಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟಿಂಗ್​​ಗಿಳಿದ ವೆಸ್ಟ್​ ಇಂಡೀಸ್​ ದೈತ್ಯರು, 20 ಓವರ್​ನಲ್ಲಿ ಕೇವಲ 4 ವಿಕೆಟ್​ ನಷ್ಟಕ್ಕೆ 195 ರನ್​ ಕಲೆಹಾಕಿದರು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಸೂರ್ಯ ಪಡೆಗೆ, ಆರಂಭಿಕ ಬ್ಯಾಟರ್​ ಸಂಜು ಸ್ಯಾಮ್ಸನ್​ ಅವರ ಸ್ಫೋಟಕ ಇನ್ನಿಂಗ್ಸ್​ ಗೆಲುವಿಗೆ ಪ್ರಮುಖ ಕಾರಣವಾಯಿತು. ಚೇಸಿಂಗ್​ನಲ್ಲಿ ವಿರಾಟ್​ ಕೊಹ್ಲಿ ಬಿಟ್ಟರೆ ಸ್ಯಾಮ್ಸನ್​ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದಿದ್ದು ವಿಶೇಷ.
ಇದೇ ಸಮಯದಲ್ಲಿ ಕೇವಲ 10 ರನ್​ಗೆ ಪೆವಿಲಿಯನ್​ ಹಾದಿ ಹಿಡಿದ ಸ್ಫೋಟಕ ಎಡಗೈ ಬ್ಯಾಟರ್​ಗಳಾದ ಅಭಿಷೇಕ್ ಶರ್ಮ ಮತ್ತು ಇಶಾನ್ ಕಿಶನ್​​ ಅಭಿಮಾನಿಗಳು ಹಾಗೂ ಕ್ರಿಕೆಟ್​ ಪ್ರಿಯರನ್ನು ಮತ್ತೊಮ್ಮೆ ಭಾರೀ ನಿರಾಶೆಗೊಳಿಸಿದರು. ಉಳಿದಂತೆ ಕ್ರೀಸ್​ಗೆ ಬಂದ ಸೂರ್ಯಕುಮಾರ್ ಯಾದವ್​, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಹೆಚ್ಚು ಕಾಲ ನಿಲ್ಲಲಿಲ್ಲ. ಆದರೆ, ಏಕಾಂಗಿಯಾಗಿ ಹೋರಾಟ ನಡೆಸಿದ ಸಂಜು, ಇಡೀ ಪಂದ್ಯದ ಪೂರ ಕೂಲ್ ಆಗಿಯೇ ಚೇಸ್​ ಮಾಡಿದ್ದು ನಿಜಕ್ಕೂ ರೋಮಾಂಚಕಕಾರಿ ಆಗಿತ್ತು. ಕಡೆಯ 2 ಓವರ್​ನಲ್ಲಿ ಸ್ಯಾಮ್ಸನ್​ ಮೇಲಿದ್ದ ಒತ್ತಡವನ್ನು ಇಳಿಸಿದ್ದೇ ಶಿವಂ ದುಬೆ ಅವರ ಎರಡು ಬೌಂಡರಿಗಳು. ಕೇವಲ 50 ರನ್​ಗೆ 97 ರನ್​ ಬಾರಿಸಿದ ಸಂಜು ಸ್ಯಾಮ್ಸನ್, ಟೀಮ್ ಇಂಡಿಯಾದ ರೋಚಕ ಗೆಲುವಿನ ರೂವಾರಿ. ಈ ಅದ್ಭುತ ಇನ್ನಿಂಗ್ಸ್​ನಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್​ಗಳು ಸೇರಿವೆ. ತನ್ನ ಅಮೋಘ ಬ್ಯಾಟಿಂಗ್​ ಪ್ರದರ್ಶನದಿಂದ ಭಾರತವನ್ನು ಸೆಮಿಫೈನಲ್​ಗೆ ಕೊಂಡೊಯ್ದ ಸಂಜುಗೆ ಇಡೀ ಭಾರತೀಯ ಕ್ರಿಕೆಟ್​ ಪ್ರಿಯರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net