

ಇಸ್ಲಮಾಬಾದ್ : ಅಂಡರ್-19 ಏಷ್ಯಾ ಕಪ್ ಫೈನಲ್ ( U19 Asia Cup ) ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಅನುಭವಿಸಿದ ರೋಚಕ ಸೋಲಿನ ಬೆನ್ನಲ್ಲೇ, ಪಾಕ್ ಕ್ರಿಕೆಟ್ ವಲಯದಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದೆ. ಪಾಕಿಸ್ತಾನದ ಮಾಜಿ ವೇಗದ ಬೌಲರ್ ತನ್ವೀರ್ ಅಹ್ಮದ್ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದು, ತಮ್ಮದೇ ದೇಶದ ಕ್ರಿಕೆಟ್ ವ್ಯವಸ್ಥೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಟಿವಿ ಕಾರ್ಯಕ್ರಮದ ಚರ್ಚೆಯೊಂದರಲ್ಲಿ ಮಾತನಾಡಿದ ತನ್ವೀರ್, ಭಾರತೀಯ ಕ್ರಿಕೆಟ್ ತಂಡಕ್ಕಿಂತ ಪಾಕಿಸ್ತಾನ ಉತ್ತಮವಾಗಿದೆ ಎಂದು ಹೇಳಿಕೊಳ್ಳುವುದನ್ನು ಮಂಡಳಿಯು ತಕ್ಷಣವೇ ನಿಲ್ಲಿಸಬೇಕು ಎಂದು ಕಿಡಿಕಾರಿದ್ದಾರೆ. ಪಾಕಿಸ್ತಾನ ತಂಡ ಪಂದ್ಯವನ್ನು ಸೋತ ರೀತಿಯನ್ನು ನೋಡಿದರೆ, ಉಭಯ ತಂಡಗಳ ನಡುವೆ ಹೋಲಿಕೆ ಮಾಡಲು ಯಾವುದೇ ಅವಕಾಶವಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಆಕ್ರೋಶವನ್ನು ಮುಂದುವರಿಸಿದ ತನ್ವೀರ್ ಅಹ್ಮದ್, "ಪಿಸಿಬಿ ಇಡೀ ಪಾಕಿಸ್ತಾನಕ್ಕೆ ಅವಮಾನ ಮಾಡಿದೆ. ಭಾರತಕ್ಕಿಂತ ಪಾಕಿಸ್ತಾನ ಉತ್ತಮವಾಗಿದೆ ಎಂದು ಹೇಳುವುದನ್ನು ಮೊದಲು ನಿಲ್ಲಿಸಿ. ಪಾಕಿಸ್ತಾನ ಒಂದು ಸಂಪೂರ್ಣ ವೈಫಲ್ಯ ಎಂಬುದನ್ನು ನಾನು ನಿಮಗೆ ಖಚಿತವಾಗಿ ಹೇಳಬಲ್ಲೆ. ಇಲ್ಲಿನ ಕ್ರಿಕೆಟ್ ವ್ಯವಸ್ಥೆಯನ್ನು ಭಾರತದೊಂದಿಗೆ ಹೋಲಿಸಲು ಸಹ ಸಾಧ್ಯವಿಲ್ಲ" ಎಂದು ಕಟುವಾಗಿ ಟೀಕಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಎಲ್ಲವನ್ನೂ ಹಾಳು ಮಾಡುತ್ತಿದೆ ಎಂದು ಆರೋಪಿಸಿರುವ ತನ್ವೀರ್, ಪಿಸಿಬಿಗೆ ಯಾರೇ ಅಧ್ಯಕ್ಷರಾದರೂ ಅರ್ಹ ಆಟಗಾರರಿಗೆ ಅವಕಾಶ ನೀಡುವ ಬದಲು ತಮ್ಮದೇ ಜನರನ್ನು ತಂಡದೊಳಗೆ ತೂರಿಸಲು ಪ್ರಯತ್ನಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಫೈನಲ್ ಪಂದ್ಯದ ರೋಚಕ ಕ್ಷಣಗಳನ್ನು ನೆನೆದ ತನ್ವೀರ್ ಅಹ್ಮದ್, ಸೋಲುವ ಹಂತದಲ್ಲಿದ್ದ ಪಂದ್ಯವನ್ನು ಭಾರತ ಅದ್ಭುತವಾಗಿ ಗೆದ್ದುಕೊಂಡಿತು ಎಂದು ಶ್ಲಾಘಿಸಿದ್ದಾರೆ. ಪಾಕಿಸ್ತಾನ ತಂಡವು ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ಗುರಿ ಬೆನ್ನಟ್ಟಿದ ಭಾರತ ತಂಡ 42 ಓವರ್ಗಳಲ್ಲಿ 252 ರನ್ಗಳಿಗೆ ಪ್ರಮುಖ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಭಾರತದ ಕೈಯಲ್ಲಿ ಕೇವಲ ಎರಡು ವಿಕೆಟ್ಗಳು ಮಾತ್ರ ಬಾಕಿ ಇದ್ದಾಗ, ಪಾಕಿಸ್ತಾನ ಸಂಪೂರ್ಣವಾಗಿ ಪಂದ್ಯವನ್ನು ಗೆದ್ದೇಬಿಟ್ಟಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಕೆಳಕ್ರಮಾಂಕದಲ್ಲಿ ಮೋಹಿತ್ ಉಲ್ವಾಹ್ ಮತ್ತು ಮನಲ್ ಚೌಹಾಣ್ ಅತ್ಯಂತ ಅದ್ಭುತ ರೀತಿಯಲ್ಲಿ ಹೋರಾಡಿ ಪಾಕಿಸ್ತಾನದ ಕೈಯಲ್ಲಿದ್ದ ಗೆಲುವನ್ನು ಕಸಿದುಕೊಂಡರು ಎಂದು ತನ್ವೀರ್ ಹೇಳಿದ್ದಾರೆ.
ಕೊನೆಯ ಎಸೆತದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಈ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಕೇವಲ 1 ವಿಕೆಟ್ನ ರೋಚಕ ಜಯ ಸಾಧಿಸಿದೆ. ಪಂದ್ಯದ ಅಂತಿಮ ಎಸೆತದಲ್ಲಿ ಭಾರತಕ್ಕೆ ಗೆಲ್ಲಲು 3 ರನ್ಗಳ ಅವಶ್ಯಕತೆಯಿದ್ದಾಗ, ಮೋಹಿತ್ ಉಲ್ವಾಹ್ ಭರ್ಜರಿ ಬೌಂಡರಿ ಬಾರಿಸುವ ಮೂಲಕ ಟೀಮ್ ಇಂಡಿಯಾಗೆ ಐತಿಹಾಸಿಕ ಗೆಲುವು ತಂದುಕೊಟ್ಟರು. 9ನೇ ವಿಕೆಟ್ಗೆ ಜೊತೆಯಾದ ಮೋಹಿತ್ ಉಲ್ವಾಹ್ (26 ಎಸೆತಗಳಲ್ಲಿ ಅಜೇಯ 49 ರನ್) ಮತ್ತು ಮನಲ್ ಚೌಹಾಣ್ (32 ಎಸೆತಗಳಲ್ಲಿ 47 ರನ್) ತೋರಿದ ಅಪ್ರತಿಮ ಪ್ರತಿರೋಧವೇ ಭಾರತದ ಈ ಸ್ಮರಣೀಯ ಗೆಲುವಿಗೆ ಪ್ರಮುಖ ಕಾರಣವಾಯಿತು.
ಇದಕ್ಕೂ ಮುನ್ನ ಭಾರತದ ಇನ್ನಿಂಗ್ಸ್ನಲ್ಲಿ ನಾಯಕ ಲಕ್ಷ್ಯ ರಾಯಚಂದಾನಿ (101 ಎಸೆತಗಳಲ್ಲಿ 80 ರನ್) ಹಾಗೂ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ (61 ಎಸೆತಗಳಲ್ಲಿ 58 ರನ್) ಸಿಡಿಸಿದ ಅರ್ಧಶತಕಗಳು ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದವು. ಅಂತಿಮವಾಗಿ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿದ ಭಾರತ, ಕಳೆದ ಏಷ್ಯಾ ಕಪ್ ಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜತೆಗೆ ದಾಖಲೆಯ 9ನೇ ಏಷ್ಯಾ ಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ, (ಏಜೆನ್ಸೀಸ್).