ಚೊಚ್ಚಲ ಮಹಿಳಾ ಟಿ20 ವಿಶ್ವಕಪ್ ಗೆಲ್ಲುತ್ತಾ ಭಾರತ? ಹರ್ಮನ್‌ಪ್ರೀತ್ ಪಡೆಯ ಪ್ಲಸ್ ಮತ್ತು ಮೈನಸ್ ಏನು? Women T20 World Cup 2026
ಚೊಚ್ಚಲ ಮಹಿಳಾ ಟಿ20 ವಿಶ್ವಕಪ್ ಗೆಲ್ಲುತ್ತಾ ಭಾರತ? ಹರ್ಮನ್‌ಪ್ರೀತ್ ಪಡೆಯ ಪ್ಲಸ್ ಮತ್ತು ಮೈನಸ್ ಏನು? Women T20 World Cup 2026
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಇದೇ ವರ್ಷದ ಆರಂಭದಲ್ಲಿ ಮಹಿಳಾ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಂಡು ಇತಿಹಾಸ ಸೃಷ್ಟಿಸಿದ್ದ ಭಾರತ
ಇದೀಗ ಮತ್ತೊಂದು ಮಹತ್ತರ ಐಸಿಸಿ ಕಿರೀಟ ಮುಡಿಗೇರಿಸಿಕೊಳ್ಳಲು ಭಾರತ ತಂಡ ಸಕಲ ತಯಾರಿ ಮಾಡಿಕೊಂಡಿದೆ
ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಟಿ20 ಮಹಿಳಾ ವಿಶ್ವಕಪ್ ಗೆಲ್ಲಲು ಸಜ್ಜಾಗಿದೆ
Women T20 World Cup 2026 : ಇದೇ ವರ್ಷದ ಆರಂಭದಲ್ಲಿ ಐತಿಹಾಸಿಕ ಮಹಿಳಾ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಂಡು ಇತಿಹಾಸ ಸೃಷ್ಟಿಸಿದ್ದ ಟೀಮ್ ಇಂಡಿಯಾ, ಇದೀಗ ಮತ್ತೊಂದು ಮಹತ್ತರ ಐಸಿಸಿ (ICC) ಕಿರೀಟ ಮುಡಿಗೇರಿಸಿಕೊಳ್ಳಲು ಸಕಲ ತಯಾರಿ ಮಾಡಿಕೊಂಡಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆಯಲಿರುವ 2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲುವ ಬಲವಾದ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ.
ಟಿ20 ವಿಶ್ವಕಪ್ನಂತಹ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ ತಂಡವು ಜೂನ್ 14ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ಗ್ರೂಪ್ ಹಂತದ ಮುಂದಿನ ಪಂದ್ಯಗಳಲ್ಲಿ ನೆದರ್‌ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಬಲಿಷ್ಠ ಆಸ್ಟ್ರೇಲಿಯಾ ತಂಡಗಳನ್ನು ಎದುರಿಸಲಿದೆ. ಈಗಾಗಲೇ ಟೀಮ್ ಇಂಡಿಯಾದ 15 ಸದಸ್ಯರ ತಂಡ ಪ್ರಕಟವಾಗಿದ್ದು, ವಿಶ್ವಕಪ್ಗಾಗಿ ಸೆಣಸಾಡಲಿರುವ ಭಾರತ ತಂಡದ ಬಲ ಮತ್ತು ಬಲಹೀನತೆ ಏನೆಂದು ತಿಳಿದುಕೊಳ್ಳೋಣ.
ಟೀಮ್ ಇಂಡಿಯಾದ ಬಲ ಏನು?
ಬಲಿಷ್ಠ ಬ್ಯಾಟಿಂಗ್ ವಿಭಾಗವೇ ಭಾರತ ತಂಡದ ಪ್ರಮುಖ ಶಕ್ತಿಯಾಗಿದ್ದು, ನಾಯಕಿ ಹರ್ಮನ್‌ಪ್ರೀತ್ ಕೌರ್ ಜೊತೆಗೆ ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್ ಮತ್ತು ರಿಚಾ ಘೋಷ್ ಅವರಂತಹ ಮ್ಯಾಚ್ ವಿನ್ನರ್‌ಗಳು ತಂಡದ ಬೆನ್ನೆಲುಬಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಕೊನೆಯ ಓವರ್‌ಗಳಲ್ಲಿ ಅತ್ಯಂತ ವೇಗವಾಗಿ ರನ್ ಗಳಿಸುವ ಸಾಮರ್ಥ್ಯವಿರುವ ರಿಚಾ ಘೋಷ್ ಅವರಿಗೆ, ಪ್ರಸ್ತುತ ಅದ್ಭುತ ಫಾರ್ಮ್‌ನಲ್ಲಿರುವ ಹಾಗೂ ಎದುರಾಳಿ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡಬಲ್ಲ ಭಾರತಿ ಫುಲ್ಮಾಲಿ ಮತ್ತು ದೀಪ್ತಿ ಶರ್ಮಾ ಅವರ ಉಪಸ್ಥಿತಿಯು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಮತ್ತಷ್ಟು ಆನೆಬಲ ತಂದಿದೆ.
ಮತ್ತೊಂದೆಡೆ, ಈ ಟೂರ್ನಿಯಲ್ಲಿ ಭಾರತದ ಸ್ಪಿನ್ ವಿಭಾಗವು ಪ್ರಮುಖ ಪಾತ್ರ ವಹಿಸಲಿದೆ. ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್ ಮತ್ತು ಶ್ರೀ ಚರಣಿ ಪ್ರಮುಖ ಸ್ಪಿನ್ನರ್‌ಗಳಾಗಿದ್ದರೆ, ಅನುಭವಿ ದೀಪ್ತಿ ಶರ್ಮಾ ಸ್ಪಿನ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್‌ನ ಪಿಚ್ ಹಾಗೂ ಹವಾಮಾನದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡವು ತನ್ನ ಸ್ಪಿನ್ ಪಡೆಯನ್ನು ವಿಶೇಷವಾಗಿ ಸಜ್ಜುಗೊಳಿಸಿದೆ. ಮಧ್ಯಮ ಓವರ್‌ಗಳಲ್ಲಿ ರನ್ ವೇಗಕ್ಕೆ ಬ್ರೇಕ್ ಹಾಕಿ, ವಿಕೆಟ್ ಕಬಳಿಸುವ ವಿಶೇಷ ಸಾಮರ್ಥ್ಯ ಈ ಬೌಲರ್‌ಗಳಿಗಿದೆ.
ಘೋಷಣೆಯಾಗಿರುವ 15 ಸದಸ್ಯರ ಭಾರತ ತಂಡವು ಅನುಭವ ಮತ್ತು ಯುವ ಪ್ರತಿಭೆಗಳ ಅತ್ಯುತ್ತಮ ಸಮತೋಲನದಿಂದ ಕೂಡಿದೆ. ಮಹಿಳಾ ಪ್ರೀಮಿಯರ್ ಲೀಗ್ (WPL) ಮೂಲಕ ಬೆಳಕಿಗೆ ಬಂದ ಹಲವಾರು ಆಟಗಾರ್ತಿಯರು ಇದೀಗ ವಿಶ್ವಕಪ್ ವೇದಿಕೆಯಲ್ಲಿ ತಮ್ಮ ದಕ್ಷತೆಯನ್ನು ಸಾಬೀತುಪಡಿಸಲು ಸಜ್ಜಾಗಿದ್ದಾರೆ. ಡಬ್ಲ್ಯುಪಿಎಲ್ ಟೂರ್ನಿಯು ಭಾರತೀಯ ಮಹಿಳಾ ಕ್ರಿಕೆಟ್‌ಗೆ ಹೊಸ ಪೀಳಿಗೆಯ ಅತ್ಯುತ್ತಮ ಆಟಗಾರ್ತಿಯರನ್ನು ಕೊಡುಗೆಯಾಗಿ ನೀಡಿದೆ ಎಂದು ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಇತ್ತೀಚೆಗೆ ಶ್ಲಾಘಿಸಿದ್ದಾರೆ.
ಟೀಮ್ ಇಂಡಿಯಾದ ಬಲಹೀನತೆ ಏನು?
ಭಾರತಿ ಫುಲ್ಮಾಲಿ, ನಂದಿನಿ ಶರ್ಮಾ, ಶ್ರೀ ಚರಣಿ ಹಾಗೂ ಕ್ರಾಂತಿ ಗೌಡ್ ಅವರಿಗೆ ಇದು ಚೊಚ್ಚಲ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಇಂತಹ ದೊಡ್ಡ ಟೂರ್ನಿಯಲ್ಲಿ ಆಡಿದ ಅನುಭವ ಇವರಿಗಿಲ್ಲದಿರುವುದು ಭಾರತ ತಂಡಕ್ಕೆ ಸಣ್ಣದೊಂದು ಆತಂಕ ಮೂಡಿಸಿದೆ. ಈ ಕಾರಣದಿಂದಾಗಿ, ವಿಶೇಷವಾಗಿ ವೇಗದ ಬೌಲಿಂಗ್ ಮತ್ತು ಕೆಳ ಕ್ರಮಾಂಕದ ಬ್ಯಾಟಿಂಗ್ ವಿಭಾಗದಲ್ಲಿರುವ ಅನುಭವಿ ಆಟಗಾರ್ತಿಯರು ಪ್ರಸಕ್ತ ಟೂರ್ನಿಯಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.
ಇದೇ ವರ್ಷ ಭಾರತ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಲ್‌ರೌಂಡರ್ ಅಮಂಜೋತ್ ಕೌರ್ ಅವರು ಬೆನ್ನುನೋವಿನ ಗಾಯದ ಸಮಸ್ಯೆಯಿಂದಾಗಿ ಇಡೀ ಟೂರ್ನಿಯಿಂದ ಹೊರಬಿದ್ದಿದ್ದು, ಕನಿಷ್ಠ 5 ತಿಂಗಳು ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಇವರ ಸ್ಥಾನ ತುಂಬಬಲ್ಲರು ಎಂದು ನಿರೀಕ್ಷಿಸಲಾಗಿದ್ದ ಕಾಶ್ವಿ ಗೌತಮ್ ಕೂಡ ಮೊಣಕಾಲು ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ವಂಚಿತರಾಗಿದ್ದಾರೆ. ಇದು ತಂಡದಲ್ಲಿ ಗುಣಮಟ್ಟದ ವೇಗದ ಬೌಲಿಂಗ್ ಆಲ್‌ರೌಂಡರ್‌ಗಳ ಕೊರತೆಯನ್ನು ಎದ್ದು ಕಾಣುವಂತೆ ಮಾಡಿದೆ.
ಹಲವು ವರ್ಷಗಳಿಂದ ಐಸಿಸಿ ಟೂರ್ನಿಗಳಲ್ಲಿ ಎದುರಾಗುತ್ತಿದ್ದ ನಿರಾಶೆಯನ್ನು ಇದೇ ವರ್ಷದ ಆರಂಭದಲ್ಲಿ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಹೋಗಲಾಡಿಸಿದ್ದ ಭಾರತೀಯ ಮಹಿಳಾ ತಂಡಕ್ಕೆ, ಇದೀಗ ಅದೇ ಗೆಲುವಿನ ಲಯವನ್ನು ಮುಂದುವರಿಸಿ ಸತತ ಎರಡನೇ ಐಸಿಸಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಸುವರ್ಣಾವಕಾಶ ಒದಗಿಬಂದಿದೆ. ಆದರೆ, ಅಮಂಜೋತ್ ಮತ್ತು ಕಾಶ್ವಿ ಅನುಪಸ್ಥಿತಿಯಿಂದಾಗಿ ಬ್ಯಾಟಿಂಗ್‌ಗೆ ಆಸರೆಯಾಗಬಲ್ಲ ಸೀಮರ್‌ಗಳ ಕೊರತೆ ಎದುರಾಗಿದ್ದು, ಇದರ ಸಂಪೂರ್ಣ ಹೊರೆ ಈಗ ಅರುಂಧತಿ ರೆಡ್ಡಿ ಅವರ ಹೆಗಲ ಮೇಲೆ ಬಿದ್ದಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅವರು ತೋರುವ ಸ್ಥಿರ ಪ್ರದರ್ಶನದ ಮೇಲೆಯೇ ಟೂರ್ನಿಯಲ್ಲಿ ಭಾರತದ ಯಶಸ್ಸು ಹೆಚ್ಚಾಗಿ ಅವಲಂಬಿತವಾಗಿದೆ.
ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ (ಅಂದಾಜು)
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಭಾರತಿ ಫುಲ್ಮಾಲಿ, ರಿಚಾ ಘೋಷ್ (ವಿಕೆಟ್‌ಕೀಪರ್), ದೀಪ್ತಿ ಶರ್ಮಾ, ಶ್ರೀ ಚರಣಿ, ಕ್ರಾಂತಿ ಗೌಡ, ರೇಣುಕಾ ಸಿಂಗ್ ಠಾಕೂರ್, ಶ್ರೇಯಾಂಕ ಪಾಟೀಲ್/ರಾಧಾ ಯಾದವ್, (ಏಜೆನ್ಸೀಸ್).