ಯಾರೇನೂ ಬೇಕಾಬಿಟ್ಟಿ ಆಡಿಲ್ಲ... ಕೋಚ್​ ಗಂಭೀರ್​ ಮಾತಿಗೆ ಕ್ಯಾಪ್ಟನ್​ ಅಯ್ಯರ್​ ಖಡಕ್​ ತಿರುಗೇಟು? | Shreyas Iyer

 Shreyas Iyer
ಯಾರೇನೂ ಬೇಕಾಬಿಟ್ಟಿ ಆಡಿಲ್ಲ... ಕೋಚ್​ ಗಂಭೀರ್​ ಮಾತಿಗೆ ಕ್ಯಾಪ್ಟನ್​ ಅಯ್ಯರ್​ ಖಡಕ್​ ತಿರುಗೇಟು? | Shreyas Iyer
Published on: 

ಮೌಂಟ್ ಮೌಂಗನುಯಿ: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಅನುಭವಿಸಿದ 244 ರನ್‌ಗಳ ಹೀನಾಯ ಸೋಲಿಗೆ ಪಿಚ್‌ನಲ್ಲಾದ ಅನಿರೀಕ್ಷಿತ ಬದಲಾವಣೆಯೇ ಪ್ರಮುಖ ಕಾರಣ ಎಂದು ಭಾರತೀಯ ಏಕದಿನ ತಂಡದ ಹಂಗಾಮಿ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಹೇಳಿದ್ದಾರೆ. ಸೋಲಿನ ಹೊಣೆ ಹೊತ್ತಿದ್ದೇ ಆದರೂ ಮೂವರು ಸ್ಟಾರ್​ ಬ್ಯಾಟ್ಸ್​ಮನ್​ಗಳ ಡಕ್​ಔಟ್​ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಉತ್ತರ ಮಾತ್ರ ಇದೀಗ ಚರ್ಚೆಗೆ ಕಾರಣವಾಗಿದೆ.

ಶ್ರೇಯಸ್​ ಅಯ್ಯರ್​ ಮಾತು

ಪಂದ್ಯದ ಬಳಿಕ ಮಾತನಾಡಿದ ಅಯ್ಯರ್​, ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಅತ್ಯಂತ ಪೂರಕವಾಗಿದ್ದ ಪಿಚ್, ನಂತರ ವೇಗದ ಬೌಲರ್‌ಗಳಿಗೆ ನೆರವಾಗುವ ಸೀಮಿಂಗ್ ಟ್ರ್ಯಾಕ್ ಆಗಿ ಬದಲಾಯಿತು ಎಂದು ಅಯ್ಯರ್​ ವಿವರಿಸಿದ್ದಾರೆ. ಮೊದಲ ಎರಡು ಪಂದ್ಯಗಳ ಪ್ರದರ್ಶನದಿಂದ ಸ್ಫೂರ್ತಿ ಪಡೆದು ಮುಂದಿನ ಪಂದ್ಯದಲ್ಲಿ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುವ ಮೂಲಕ ಸರಣಿಯನ್ನು ಸಮಬಲಗೊಳಿಸಲಿದ್ದೇವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಭಾರತ ಬ್ಯಾಟಿಂಗ್ ಆರಂಭಿಸಿದಾಗ ಚೆಂಡು ಪಿಚ್‌ನ ಎರಡೂ ಬದಿಗಳಿಗೆ ಅಸಾಮಾನ್ಯವಾಗಿ ಸ್ವಿಂಗ್ ಆಗಲು ಶುರುಮಾಡಿತು. ಇದರಿಂದ ಬ್ಯಾಟರ್‌ಗಳಿಗೆ ತಮ್ಮ ಶಾಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಕಷ್ಟಕರವಾಯಿತು. ಅಲ್ಲದೆ, ಭಾರತೀಯ ಬ್ಯಾಟರ್‌ಗಳು ಸುಮ್ಮನೆ ತಮ್ಮ ವಿಕೆಟ್‌ಗಳನ್ನು ಕೈಚೆಲ್ಲಿಲ್ಲ. ಯಾರೊಬ್ಬರೂ ಬೇಕಾಬಿಟ್ಟಿ ಆಡಲಿಲ್ಲ ಎಂದು ಅಯ್ಯರ್​ ತಮ್ಮ ಸಹ ಆಟಗಾರರನ್ನು ಸಮರ್ಥಿಸಿಕೊಂಡರು. ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಅನೇಕರು ಇದು ಕೋಚ್​ ಗೌತಮ್ ಗಂಭೀರ್​ ಮಾತಿಗೆ ಕೊಟ್ಟ ತಿರುಗೇಟು ಎಂದು ಬೆಟ್ಟು ಮಾಡಿದ್ದಾರೆ.

Also Read
'ಪುಷ್ಪ', 'ಕೆಜಿಎಫ್'​, 'ರಾಮಾಯಣ'... ಮೊದಲನೇ ವಾರಕ್ಕೆ 1000 ಕೋಟಿ ಕ್ಲಬ್​ ಸೇರಿದ ಬ್ಲಾಕ್​ಬಸ್ಟರ್​ ಸಿನಿಮಾಗಳಿವು | Box Office Films
 Shreyas Iyer

ಕೊಹ್ಲಿ, ರೋಹಿತ್​ ವಿರುದ್ಧ ಗೌತಿ ಸಿಟ್ಟು!

ಪಂದ್ಯ ಮುಗಿದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್​, ಮ್ಯಾಟ್​ ಹೆನ್ರಿ ಹಾಕಿದ ಎಸೆತಗಳು ಆಡಲು ಆಗೋದೇ ಇಲ್ಲ ಎನ್ನುವಂತಿರಲಿಲ್ಲ. ಇಲ್ಲಿ ಬ್ಯಾಟರ್ಸ್​ಗಳ ವೈಫಲ್ಯವೇ ನೇರ ಹೊಣೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲಾಗದ ಎಸೆತಗಳೇ ಇಲ್ಲ. ಮೊದಲ 10 ಓವರ್‌ಗಳನ್ನು ಎಚ್ಚರಿಕೆಯಿಂದ ಎದುರಿಸಬೇಕಿತ್ತು. ಹೆನ್ರಿ ಉತ್ತಮ ಏರಿಯಾಗಳಲ್ಲಿ ಬೌಲಿಂಗ್ ಮಾಡಿದರು. ಆದರೆ, ಅದನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ನಮ್ಮ ಬ್ಯಾಟರ್‌ಗಳಿಗಿರಬೇಕು. ಎರಡನೇ ಏಕದಿನ ಪಂದ್ಯದಲ್ಲೂ ನಮ್ಮ ತಂಡ ಏಳು ವಿಕೆಟ್ ಕಳೆದುಕೊಂಡು 111 ರನ್ ಗಳಿಸಿತ್ತು. ಸತತ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗ ಕುಸಿಯುತ್ತಿರುವುದು ಕಳವಳಕಾರಿ ಸಂಗತಿ ಎಂದರು.

ಇಂತಹ ಪರಿಸ್ಥಿತಿಗಳಲ್ಲಿ ಮಾನಸಿಕವಾಗಿ ಮತ್ತು ಕೌಶಲ್ಯದ ದೃಷ್ಟಿಯಿಂದ ಸಿದ್ಧರಾಗಿರಬೇಕು. ಮೊದಲ 10 ಓವರ್‌ಗಳಲ್ಲಿ ವಿಕೆಟ್ ಉಳಿಸಿಕೊಳ್ಳುವುದು ತುಂಬಾ ಮುಖ್ಯ. ತಂಡದ ಆಟಗಾರರಿಗೆ ಅನುಭವವಿದೆ. ಮುಂದಿನ ಪಂದ್ಯದಲ್ಲಿ ಪರಿಸ್ಥಿತಿಗೆ ತಕ್ಕಂತೆ ಆಡುತ್ತಾರೆ ಎಂಬ ನಿರೀಕ್ಷೆಯೂ ಇದೆ ಎಂದು ಹೇಳುವ ಮೂಲಕ ರೋಹಿತ್​, ಕೊಹ್ಲಿ ಮತ್ತು ಅಯ್ಯರ್​ ಹೆಸರೇಳದೆ ಪರೋಕ್ಷವಾಗಿ ಕುಟುಕಿದ್ದಾರೆ,(ಏಜೆನ್ಸೀಸ್).