ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ... ಆರ್​ಸಿಬಿ ವಿರುದ್ಧ ಬಿಸಿಸಿಐಗೆ ದೂರು ನೀಡಿದ ಸಿಎಸ್​ಕೆ! RCB

ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ... ಆರ್​ಸಿಬಿ ವಿರುದ್ಧ ಬಿಸಿಸಿಐಗೆ ದೂರು ನೀಡಿದ ಸಿಎಸ್​ಕೆ! RCB
ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ... ಆರ್​ಸಿಬಿ ವಿರುದ್ಧ ಬಿಸಿಸಿಐಗೆ ದೂರು ನೀಡಿದ ಸಿಎಸ್​ಕೆ! RCB
Published on

ಪ್ರಮುಖ ಮುಖ್ಯಾಂಶಗಳು

  • ಏಪ್ರಿಲ್ 5 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾದವು
  • ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸಿಎಸ್​ಕೆ ಹೀನಾಯ ಸೋಲು ಅನುಭವಿಸಿತು
  • ಈ ಪಂದ್ಯದಲ್ಲಿ ಆರ್​ಸಿಬಿ ನಮ್ಮೊಂದಿಗೆ ಅಗೌರವದಿಂದ ವರ್ತಿಸಿದೆ ಎಂದು ಸಿಎಸ್​ಕೆ ಇದೀಗ ಬಿಸಿಸಿಐಗೆ ದೂರು ಸಲ್ಲಿಸಿದೆ
  • 'ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ' ಎಂಬ ಹಾಡಿಗೆ ಡಿಜೆ ನುಡಿಸಿದ್ದಕ್ಕೆ ಸಿಎಸ್‌ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ
RCB  : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್ (IPL)​ ಭಾಗವಾಗಿ ಏಪ್ರಿಲ್ 5 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸಿಎಸ್​ಕೆ ಹೀನಾಯ ಸೋಲು ಅನುಭವಿಸಿತು. ಅಷ್ಟಕ್ಕೂ ಇದು ಮುಗಿದು ಹೋದ ಪಂದ್ಯ ತಾನೇ, ಹೀಗ್ಯಾಕೆ ಅದರ ವಿಚಾರ ಅನ್ನೋ ಪ್ರಶ್ನೆ ಬರಬಹುದು. ಉತ್ತರ ತಿಳಿಯಬೇಕಾದರೆ ಮುಂದೆ ಓದಿ. 
ತಾಜಾ ಸಂಗತಿ ಏನೆಂದರೆ, ಆರ್​ಸಿಬಿ ವಿರುದ್ಧ ಸಿಎಸ್​ಕೆ, ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (BCCI)ಗೆ ದೂರು ನೀಡಿದೆ. ಏಪ್ರಿಲ್​ 5 ರಂದು ತಮ್ಮ ಇನ್ನಿಂಗ್ಸ್ ಪ್ರಾರಂಭವಾಗುವ ಮೊದಲೇ ಆರ್​ಸಿಬಿ ನಮಗೆ ಕಿರುಕುಳ ನೀಡಿದೆ ಮತ್ತು ಅಗೌರವದಿಂದ ವರ್ತಿಸಿದೆ ಎಂದು ಆರೋಪಿಸಿ ಸಿಎಸ್​ಕೆ, ಬಿಸಿಸಿಐಗೆ ದೂರು ಸಲ್ಲಿಸಿದೆ ಎಂದು ವರದಿಯಾಗಿದೆ.
ಅಂದು 'ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ' ಎಂಬ ಹಾಡಿಗೆ ಡಿಜೆ ನುಡಿಸಿದ್ದಕ್ಕೆ ಸಿಎಸ್‌ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಗಾನ ಅಪ್ಪು ಸಂಗೀತ ಸಂಯೋಜಿಸಿರುವ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಇದೇ ಹಾಡನ್ನು ಆಗಾಗ ಮೀಮ್ಸ್‌ನಲ್ಲಿ ಬಳಸಲಾಗುತ್ತದೆ. ಅದರಲ್ಲೂ, ಪ್ರತಿಸ್ಪರ್ಧಿ ತಂಡಗಳ ಕೆಲವು ಅಭಿಮಾನಿಗಳು ಸಿಎಸ್‌ಕೆಯನ್ನು ಟ್ರೋಲ್ ಮಾಡಲು ಇದೇ ಹಾಡನ್ನು ಬಳಸುತ್ತಾರೆ.
ಒಂದು ಜವಾಬ್ದಾರಿಯುತ ಫ್ರಾಂಚೈಸಿಯು ತಮ್ಮ ತವರು ಮೈದಾನದಲ್ಲಿ ಡಿಜೆ ಪ್ಲೇ ಮಾಡುವಾಗ ಈ ಹಾಡನ್ನು ನುಡಿಸುವುದು ಸರಿಯಲ್ಲ. ಈ ಹಾಡನ್ನು ನುಡಿಸಿದ ಸಮಯ ಮತ್ತು ಸಂದರ್ಭ ಸರಿಯಾಗಿರಲಿಲ್ಲ ಎಂದು ಸಿಎಸ್‌ಕೆ ಹೇಳಿರುವುದಾಗಿ ವರದಿಯಾಗಿದೆ. ಇನ್ನು ಸಿಎಸ್‌ಕೆ ದೂರು ದಾಖಲಿಸಿದೆ ಎಂದು ಐಪಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಸಿಎಸ್‌ಕೆಯಿಂದ ನಮಗೆ ದೂರು ಬಂದಿದೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.
ಪಂದ್ಯದ ಸಮಯದಲ್ಲಿ ಕೆಲವರು ಸಿಎಸ್‌ಕೆ ಆಟಗಾರರ ಬಗ್ಗೆ ಅನುಚಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ ಮತ್ತು ಈ ಬಗ್ಗೆ ಬಿಸಿಸಿಐಗೆ ದೂರು ನೀಡಲಾಗಿದೆ ಎಂದು ಸಿಎಸ್‌ಕೆ ವ್ಯವಸ್ಥಾಪಕ ನಿರ್ದೇಶಕ ಕಾಶಿ ವಿಶ್ವನಾಥನ್ ಹೇಳಿದ್ದಾರೆ. ಸಾಮಾನ್ಯವಾಗಿ, ಡಿಜೆಗಳು ತವರು ತಂಡವನ್ನು ಹುರಿದುಂಬಿಸುತ್ತಾರೆ. ಆದಾಗ್ಯೂ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪರಿಸ್ಥಿತಿ ವಿಭಿನ್ನವಾಗಿತ್ತು. ನಮ್ಮ ಆಟಗಾರರನ್ನು ಗುರಿಯಾಗಿಸಿಕೊಂಡು ಕೆಲವು ಅನುಚಿತ ಕಾಮೆಂಟ್‌ಗಳನ್ನು ಮಾಡಲಾಗಿದೆ. ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಈ ವಿಷಯದ ಬಗ್ಗೆ ನಾವು ಬಿಸಿಸಿಐಗೆ ಪತ್ರ ಬರೆದಿದ್ದೇವೆ ಎಂದು ವಿಶ್ವನಾಥನ್ ಹೇಳಿದ್ದಾರೆ ಎಂದು ವರದಿಯಾಗಿದೆ. 
ಅಂದಹಾಗೆ, ಈ ವಿವಾದ ಹೊಸದೇನಲ್ಲ. ಕಳೆದ ವರ್ಷ, ಸಿಎಸ್​ಕೆ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್​ಸಿಬಿ ಒಂದು ವಿಡಿಯಯೋ ಬಿಡುಗಡೆ ಮಾಡಿತು. ಆ ವಿಡಿಯೋದಲ್ಲಿ, ಚೆನ್ನೈ ಅಂದರೆ ನಿಮ್ಮ ನೆನಪಿಗೆ ಬರುವುದು ಏನು ಎಂದು ಕೇಳಿದಾಗ, ದೋಸೆ, ಇಡ್ಲಿ, ಸಾಂಬರ್​, ಚಟ್ನಿ, ಚಟ್ನಿ ಎಂದು ಹಾಡಿದ್ದರು. ಇದಕ್ಕೆ ಸಿಎಸ್​ಕೆ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಇದೇ ಹಾಡನ್ನು ಕ್ರೀಡಾಂಗಣದಲ್ಲಿಯೇ ನುಡಿಸಿರುವುದು ಸಿಎಸ್​ಕೆ ತಂಡವನ್ನು ಕೆರಳಿಸಿದೆ.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಏಪ್ರಿಲ್​ 5ರಂದು ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 250 ರನ್​ಗಳ ಬೃಹತ್​ ಮೊತ್ತವನ್ನು ಕಲೆಹಾಕಿತು. ಆರ್‌ಸಿಬಿ ಪರ ಟಿಮ್ ಡೇವಿಡ್ (ಅಜೇಯ 70 ರನ್​, 25 ಎಸೆತ, 3 ಬೌಂಡರಿ, 8 ಸಿಕ್ಸರ್) ಮತ್ತು ದೇವದತ್ ಪಡಿಕ್ಕಲ್ (50 ರನ್​, 29 ಎಸೆತ, 5 ಬೌಂಡರಿ, 2 ಸಿಕ್ಸರ್) ಮಿಂಚಿನ ಅರ್ಧಶತಕಗಳನ್ನು ಗಳಿಸಿದರು. ನಾಯಕ ರಜತ್ ಪಾಟಿದಾರ್ (ಅಜೇಯ 48 ರನ್​, 19 ಎಸೆತ, 1 ಬೌಂಡರಿ, 6 ಸಿಕ್ಸರ್) ಮತ್ತು ಫಿಲ್ ಸಾಲ್ಟ್ (46 ರನ್​, 30 ಎಸೆತ, 3 ಬೌಂಡರಿ, 2 ಸಿಕ್ಸರ್) ವೇಗವಾಗಿ ಆಡಿದರು. ಸಿಎಸ್‌ಕೆ ಬೌಲರ್‌ಗಳಲ್ಲಿ ಅನ್ಶುಲ್ ಕಾಂಬೋಜ್, ಜೇಮಿ ಓವರ್ಟನ್ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.
ಆರ್​ಸಿಬಿ ನೀಡಿದ 251 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 207 ರನ್​ಗಳಿಗೆ ಆಲೌಟ್ ಆಯಿತು. ಸಿಎಸ್​ಕೆ ಪರ ಸರ್ಫರಾಜ್ ಖಾನ್ (50 ರನ್​, 25 ಎಸೆತ, 8 ಬೌಂಡರಿ, 2 ಸಿಕ್ಸರ್) ಅರ್ಧಶತಕ ಗಳಿಸಿದರು. ಪ್ರಶಾಂತ್ ವೀರ್ (43 ರನ್​, 29 ಎಸೆತ, 6 ಬೌಂಡರಿ, 1 ಸಿಕ್ಸರ್) ಮತ್ತು ಜೇಮೀ ಓವರ್ಟನ್ (37 ರನ್​, 16 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಆರ್​ಸಿಬಿ ಪರ ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಪಡೆದರು. ಜಾಕೋಬ್ ಡಫಿ, ಅಭಿನಂದನ್ ಸಿಂಗ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರೆ, ಸುಯಾಶ್ ಶರ್ಮಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net