IND vs NZ T20: ಪ್ರಸಕ್ತ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯನ್ನು ಶ್ರೇಯಸ್ ಅಯ್ಯರ್ ಪಡೆ ಗೆದ್ದಿದ್ದೇ ಆದರೂ ಐದನೇ ಹಾಗೂ ಕೊನೆಯ ಪಂದ್ಯದ ತಂಡದಲ್ಲಿ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಗೆ ಮತ್ತೇ ಅವಕಾಶ ಕೊಡದಿರುವ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಭಾರಿ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಹೆಡ್ ಕೋಚ್ ಗೌತಮ್ ಗಂಭೀರ್ ಪಂದ್ಯದ ಆರಂಭಕ್ಕೂ ಮುನ್ನ ನೀಡಿದ ಹೇಳಿಕೆಯೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಕಿಡಿನುಡಿಗಳಿಗೆ ಕಾರಣವಾಗಿದೆ.
ತಮ್ಮ ವಿರುದ್ಧ ಆಗಾಗ್ಗೆ ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುವ, ಟೀಕಿಸುವ, ವ್ಯಂಗ್ಯವಾಡುವ, ಕಾಲೆಳೆಯುವ ವಿಷಯಕ್ಕೆ ತಮ್ಮ ಶೈಲಿಯಲ್ಲೇ ಸಿಕ್ಕ ಸಿಕ್ಕ ಸಮಯದಲ್ಲಿ ತಿರುಗೇಟು ನೀಡುವ ಮೂಲಕ ಸೇಡು ತೀರಿಸಿಕೊಳ್ಳುವ ಗೌತಮ್ ಗಂಭೀರ್, ಇದೀಗ ಮತ್ತೊಮ್ಮೆ ಅದೇ ರೀತಿಯಲ್ಲಿ ವೈಭವ್ ಸೂರ್ಯವಂಶಿ ವಿಚಾರದಲ್ಲಿ ಪ್ರತಿಕ್ರಿಯಿಸಿರುವುದು ಹಲವರ ಗಮನ ಸೆಳೆದಿದೆ.
ಸರಣಿಯನ್ನು ಗೆದ್ದಿರುವಾಗ ಮತ್ತೇ ವೈಭವ್ ಸೂರ್ಯವಂಶಿಯನ್ನು ಬೆಂಚ್ನಲ್ಲಿ ಕೂರಿಸಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಗೌತಿ, ಆಯ್ಕೆ ವಿಚಾರದಲ್ಲಿ ಎಲ್ಲರನ್ನೂ ತೃಪ್ತಿಪಡಿಸುವುದು ಅಥವಾ ಮೆಚ್ಚಿಸುವುದು ನನ್ನ ಕೆಲಸವಲ್ಲ. ತಂಡಕ್ಕೆ ಅನುಕೂಲವಾಗುವ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಷ್ಟೇ ನನ್ನ ಗುರಿ ಎಂದು ಸ್ಪಷ್ಟಪಡಿಸಿದರು. ಪ್ರಸ್ತುತ ಭಾರತೀಯ ಕ್ರಿಕೆಟ್‌ನಲ್ಲಿ ಪ್ರತಿಭಾವಂತ ಆಟಗಾರರ ಕೊರತೆಯಿಲ್ಲ. ಆದರೆ, ಎಲ್ಲರಿಗೂ ಅವಕಾಶಗಳನ್ನು ನೀಡಲು ಸಾಧ್ಯವಿಲ್ಲ ಎಂದರು.
ತಂಡದ ಅಗತ್ಯತೆಗಳು ಮತ್ತು ಆಟಗಾರರ ಪ್ರದರ್ಶನದ ಆಧಾರದ ಮೇಲೆ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಇಲ್ಲಿ ಟೀಮ್ಗೆ ಹೆಚ್ಚು ಅನುಕೂಲವಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ ಹೊರತು ಅಭಿಮಾನಿಗಳನ್ನು ಖುಷಿಪಡಿಸಲು ಅಥವಾ ತೃಪ್ತಿಪಡಿಸುವಂತೆ ಅಲ್ಲ ಎಂದು ತಮ್ಮನ್ನು ಟೀಕಿಸುವವರಿಗೆ ತಿರುಗೇಟು ನೀಡಿದ್ದಾರೆ.
"ಜನಪ್ರಿಯ ನಿರ್ಧಾರಗಳನ್ನು ಕೈಗೊಳ್ಳುವುದು ತುಂಬಾ ಸುಲಭ. ಆದರೆ ನನಗೆ, ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಮತ್ತು ಡ್ರೆಸ್ಸಿಂಗ್ ರೂಮ್ನೊಳಗೆ ಸಾಕಷ್ಟು ಭದ್ರತೆ ಇದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ ವಿಷಯ" ಎಂದರು. ಕಿವೀಸ್ ವಿರುದ್ಧದ ಸರಣಿಯಲ್ಲಿ ಇಶಾನ್ ಕಿಶನ್ ಇಂಜುರಿಯ ಕಾರಣ ಎರಡು ಪಂದ್ಯಗಳಲ್ಲಿ ಮಾತ್ರ ಆಡಿದ ವೈಭವ್, ಮೊದಲ ಪಂದ್ಯದಲ್ಲಿ ಕೇವಲ 4 ರನ್ಗೆ ಔಟ್ ಆದರು. ನಂತರದ ಮ್ಯಾಚ್ನಲ್ಲಿ ಸ್ಫೋಟಕ 45 ರನ್ಗಳನ್ನು ಬಾರಿಸಿ ಎಲ್ಲರ ಗಮನ ಸೆಳೆದರು.
ಟಿ20 ಸರಣಿಗಳಿಗೆ ವೈಭವ್ರನ್ನು ಆಯ್ಕೆ ಮಾಡಿ, ಸುಮ್ಮನೆ ಬೆಂಚ್ನಲ್ಲಿ ಕೂರಿಸುವುದಾದರೆ ಅವರನ್ನು ಏಕೆ ಆಯ್ಕೆ ಮಾಡುತ್ತೀರಿ ಎಂಬ ಅನೇಕರ ಪ್ರಶ್ನೆ, ಟೀಕೆಗಳಿಗೆ ಈಗ ಗೌತಿ ಈ ರೀತಿ ಉತ್ತರ ಕೊಟ್ಟಿರುವುದು ಮತ್ತೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗಳಿಗೆ ಕಾರಣವಾಗಿದೆ,(ಏಜೆನ್ಸೀಸ್).