ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ರನೌಟ್: ಬ್ಯಾಟ್ ಲಾಕ್ ಮಾಡಿದ ಡಿಕ್ವೆಲ್ಲಾ, ಗಮನಿಸದೇ ಔಟ್ ಕೊಟ್ಟ ಥರ್ಡ್ ಅಂಪೈರ್! Bizarre Run Out

ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ರನೌಟ್: ಬ್ಯಾಟ್ ಲಾಕ್ ಮಾಡಿದ ಡಿಕ್ವೆಲ್ಲಾ, ಗಮನಿಸದೇ ಔಟ್ ಕೊಟ್ಟ ಥರ್ಡ್ ಅಂಪೈರ್! Bizarre Run Out
ಕ್ರಿಕೆಟ್ ಇತಿಹಾಸದಲ್ಲೇ ವಿಚಿತ್ರ ರನೌಟ್: ಬ್ಯಾಟ್ ಲಾಕ್ ಮಾಡಿದ ಡಿಕ್ವೆಲ್ಲಾ, ಗಮನಿಸದೇ ಔಟ್ ಕೊಟ್ಟ ಥರ್ಡ್ ಅಂಪೈರ್! Bizarre Run Out
Published on

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್ ಮೈದಾನದಲ್ಲಿ ಕಾಲಕಾಲಕ್ಕೆ ವಿಲಕ್ಷಣ ಹಾಗೂ ಅನಿರೀಕ್ಷಿತ ರನ್ ಔಟ್‌ಗಳು ಸಂಭವಿಸುತ್ತಲೇ ಇರುತ್ತವೆ
  • ಭಾರತ-ಎ ಮತ್ತು ಶ್ರೀಲಂಕಾ-ಎ ತಂಡಗಳ ನಡುವೆ ನಡೆದ ತ್ರಿಕೋನ ಏಕದಿನ ಸರಣಿಯ ಮೊದಲ ಪಂದ್ಯ
  • ಇಂದು ನಡೆದ ಪಂದ್ಯದಲ್ಲಿ ವಿಚಿತ್ರ ರನ್ ಔಟ್ ಆದ ಬಗ್ಗೆ ಕ್ರೀಡಾ ವಲಯದಲ್ಲಿ ಭಾರಿ ಚರ್ಚೆ
Bizarre Run Out : ಕ್ರಿಕೆಟ್ ಮೈದಾನದಲ್ಲಿ ಕಾಲಕಾಲಕ್ಕೆ ವಿಲಕ್ಷಣ ಹಾಗೂ ಅನಿರೀಕ್ಷಿತ ರನ್ ಔಟ್‌ಗಳು ಸಂಭವಿಸುತ್ತಲೇ ಇರುತ್ತವೆ. ಇಂದು ಭಾರತ-ಎ ಮತ್ತು ಶ್ರೀಲಂಕಾ-ಎ ತಂಡಗಳ ನಡುವೆ ನಡೆದೆ ತ್ರಿಕೋನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಇಂತಹದ್ದೇ ಒಂದು ವಿಚಿತ್ರ ರನ್ ಔಟ್ ನಡೆದಿದ್ದು, ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಇದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ತ್ರಿಕೋನ ಏಕದಿನ ಸರಣಿಯ ಭಾಗವಾಗಿ ದಂಬುಲ್ಲಾದಲ್ಲಿ ಮಂಗಳವಾರ (ಜೂನ್​ 09) ನಡೆದ ಪಂದ್ಯದಲ್ಲಿ ಭಾರತ-ಎ ಮತ್ತು ಶ್ರೀಲಂಕಾ-ಎ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ, ಆರಂಭಿಕರಾದ ವೈಭವ್ ಸೂರ್ಯವಂಶಿ (14 ರನ್) ಮತ್ತು ಪ್ರಭ್‌ಸಿಮ್ರಾನ್ ಸಿಂಗ್ (2 ರನ್) ಕನಿಷ್ಠ ರನ್‌ಗಳಿಗೆ ಪೆವಿಲಿಯನ್ ಸೇರುವ ಮೂಲಕ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಹೀಗೆ ಕೇವಲ 16 ರನ್‌ಗಳಿಗೆ ಆರಂಭಿಕ ಆಟಗಾರರಿಬ್ಬರು ಔಟಾದ ನಂತರ, ರುತುರಾಜ್ ಗಾಯಕ್ವಾಡ್ ಮತ್ತು ಪ್ರಿಯಾಂಶ್ ಆರ್ಯ ಜೋಡಿಯು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ಇನಿಂಗ್ಸ್ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿತು.
ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಪ್ರಿಯಾಂಶ್ ಮತ್ತು ರುತುರಾಜ್ ಗಾಯಕ್ವಾಡ್ ನಡುವೆ ರನ್ ಗಳಿಸುವಲ್ಲಿ ಸರಿಯಾದ ಸಮನ್ವಯದ ಕೊರತೆ ಎದ್ದು ಕಾಣಿಸಿತು. ಈ ಓವರ್‌ನ ಕೊನೆಯ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ ಲಾಂಗ್ ಆನ್ ಕಡೆಗೆ ಶಾಟ್ ಬಾರಿಸಿ, ತಕ್ಷಣವೇ ಮೊದಲ ರನ್ ಅನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸಿದರು. ಅಲ್ಲದೆ ಎರಡನೇ ರನ್‌ಗಾಗಿ ಅವರು ನೀಡಿದ ಕರೆಯನ್ನು ಆರಂಭದಲ್ಲಿ ಒಪ್ಪಿ ಓಡಲು ಮುಂದಾದ ಪ್ರಿಯಾಂಶ್, ಫೀಲ್ಡರ್ ಕೈಗೆ ಚೆಂಡು ಸೇರುತ್ತಿರುವುದನ್ನು ಕಂಡು ಅರ್ಧದಲ್ಲೇ ಕೊಂಚ ಹಿಂಜರಿದು ಮತ್ತೆ ಹಿಂದಕ್ಕೆ ಹೆಜ್ಜೆ ಇಟ್ಟರು.
ಈ ಗೊಂದಲದ ಪರಿಸ್ಥಿತಿಯಲ್ಲಿ ಇಬ್ಬರೂ ಬ್ಯಾಟರ್‌ಗಳು ತೀವ್ರ ಗೊಂದಲಕ್ಕೆ ಒಳಗಾಗಿ ಪಿಚ್‌ನ ಒಂದೇ ತುದಿಯ (ಸ್ಟ್ರೈಕಿಂಗ್ ಎಂಡ್) ಕಡೆಗೆ ಒಟ್ಟಿಗೆ ಓಡತೊಡಗಿದರು, ಆದರೆ ಪ್ರಿಯಾಂಶ್‌ಗಿಂತ ಮುಂಚಿತವಾಗಿಯೇ ರುತುರಾಜ್ ಗಾಯಕ್ವಾಡ್ ಅತ್ಯಂತ ವೇಗವಾಗಿ ಕ್ರೀಸ್ ತಲುಪುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ, ಪ್ರಿಯಾಂಶ್ ಆರ್ಯ ಕ್ರೀಸ್ ತಲುಪುತ್ತಿದ್ದಂತೆ ಕೇವಲ ಬ್ಯಾಟ್ ಅನ್ನು ನೆಲಕ್ಕೆ ಮುಟ್ಟಿಸಿ ಹಾಗೇ ಮುಂದೆ ಸಾಗಿದರು. ಇದೇ ವೇಳೆ ಶ್ರೀಲಂಕಾದ ವಿಕೆಟ್ ಕೀಪರ್ ನಿರೋಶನ್ ಡಿಕ್ವೆಲ್ಲಾ ಅತ್ಯಂತ ಚತುರತೆಯಿಂದ ಪ್ರಿಯಾಂಶ್ ಅವರ ಬ್ಯಾಟ್ ಅನ್ನು ತಮ್ಮ ಕಾಲಿನ ಕೆಳಗೆ ಸಿಲುಕಿಸಿ ಲಾಕ್ ಮಾಡಿಕೊಂಡರು.
ಇದರ ಪರಿಣಾಮವಾಗಿ, ಪ್ರಿಯಾಂಶ್ ಆರ್ಯ ಅವರಿಗೆ ಸರಿಯಾದ ಸಮಯಕ್ಕೆ ಕ್ರೀಸ್ ತಲುಪಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಫೀಲ್ಡರ್‌ನಿಂದ ಚೆಂಡನ್ನು ಪಡೆದ ವಿಕೆಟ್ ಕೀಪರ್ ಮತ್ತೊಂದು ತುದಿಯಲ್ಲಿದ್ದ ವಿಕೆಟ್‌ಗಳನ್ನು ಹಾರಿಸಿ ರನ್ ಔಟ್ ಮಾಡಿದರು. ಆದರೆ, ಕೀಪರ್ ಕಾಲಿನ ಕೆಳಗೆ ಬ್ಯಾಟ್ ಸಿಲುಕಿಕೊಂಡಿದ್ದ ಈ ಮುಖ್ಯವಾದ ಅಂಶವನ್ನು ಗಮನಿಸದೆಯೇ ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಒಂದು ವೇಳೆ ಲಂಕಾ ಕೀಪರ್ ಕಾಲಿನ ಅಡ್ಡಿ ಇಲ್ಲದಿದ್ದರೆ ಪ್ರಿಯಾಂಶ್ ಅವರು ರುತುರಾಜ್‌ಗಿಂತ ಮುಂಚಿತವಾಗಿಯೇ ಕ್ರೀಸ್ ತಲುಪಿ ಸುರಕ್ಷಿತವಾಗಿರುತ್ತಿದ್ದರು ಎಂದು ಅಭಿಪ್ರಾಯಪಟ್ಟಿರುವ ಕ್ರಿಕೆಟ್ ಅಭಿಮಾನಿಗಳು, ಅಂಪೈರ್ ತಪ್ಪು ನಿರ್ಧಾರ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇತ್ತ ಸಿಕ್ಕ ಅವಕಾಶವನ್ನು ಅತ್ಯುತ್ತಮವಾಗಿ ಬಳಸಿಕೊಂಡ ರುತುರಾಜ್ ಗಾಯಕ್ವಾಡ್ 114 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಭರ್ಜರಿ ಶತಕ (101 ರನ್) ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ತಿಲಕ್ ವರ್ಮಾ ಕೂಡ 97 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಂತೆ ಜವಾಬ್ದಾರಿಯುತ ಅರ್ಧಶತಕ (60 ರನ್) ಬಾರಿಸಿದರು; ಪರಿಣಾಮವಾಗಿ, ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 277 ರನ್‌ಗಳ ಸವಾಲಿನ ಮೊತ್ತವನ್ನು ಪೇರಿಸಿತು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net