Aaryavir Sehwag: ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್, ಯು-19 ಏಷ್ಯಾ ಕಪ್ 2026ರ ಆರಂಭಿಕ ಪಂದ್ಯದಲ್ಲಿ ನೇಪಾಳ ಎ ವಿರುದ್ಧ ಅಬ್ಬರಿಸಿದ್ದಾರೆ. ಆರ್ಯವೀರ್ ಅವರ ಸ್ಪೋಟಕ ಬ್ಯಾಟಿಂಗ್ ಹಾಗೂ ನಾಯಕ ಲಕ್ಷ್ಯ ರೈಚಂದಾನಿ ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ ಯು-19 ತಂಡವು 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ ಆರಂಭದಿಂದಲೇ ನೇಪಾಳ ಬ್ಯಾಟರ್‌ಗಳ ಮೇಲೆ ಸವಾರಿ ಮಾಡಿತು. ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡ ನೇಪಾಳ, ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ನೇಪಾಳ 51 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಭಾರತದ 17 ವರ್ಷದ ಯುವ ವೇಗಿ ಇಶಾನ್ ಸೂದ್ ಹೊಸ ಚೆಂಡಿನಲ್ಲಿ ಕಂಟಕವಾಗಿ ಪರಿಣಮಿಸಿದರು. ತಮ್ಮ 10 ಓವರ್‌ಗಳಲ್ಲಿ ಕೇವಲ 18 ರನ್ ನೀಡಿ 3 ವಿಕೆಟ್ ಕಬಳಿಸಿದ ಇಶಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇವರಿಗೆ ಸೂಕ್ತ ಸಾಥ್ ನೀಡಿದ ಅರ್ಜುನ್ ರಜಪೂತ್ 5.3 ಓವರ್‌ಗಳಲ್ಲಿ ಕೇವಲ 8 ರನ್ ನೀಡಿ 3 ವಿಕೆಟ್ ಪಡೆದರೆ, ಯಶ್‌ವೀರ್ ಗೌಡ್ 2 ವಿಕೆಟ್ ಕಬಳಿಸಿದರು. ಪಾಳ ಪರ ದರ್ಶ್ ಸೋನಾರ್ (43 ರನ್, 93 ಎಸೆತ) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಆಶಿಶ್ ಲೂಹಾರ್ (29 ರನ್) ಐದನೇ ವಿಕೆಟ್‌ಗೆ 43 ರನ್‌ಗಳ ಜೊತೆತಾಟ ನಡೆಸಿದರು. ಇದರಿಂದಾಗಿ ನೇಪಾಳ ತಂಡವು 128 ರನ್ ಕಲೆಹಾಕಲು ಸಾಧ್ಯವಾಯಿತು.
129 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಭಾರತದ ಆರಂಭಿಕ ಜೋಡಿ ನೇಪಾಳ ಬೌಲರ್‌ಗಳ ಮೇಲೆ ಸವಾರಿ ಮಾಡಿತು. ಭಾರತ ಕೇವಲ 19.1 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಜಯದ ದಡ ತಲುಪಿತು. 19 ವರ್ಷದ ಆರ್ಯವೀರ್ ಸೆಹ್ವಾಗ್ ಕೇವಲ 52 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ ಅಜೇಯ 70 ರನ್ ಚಚ್ಚಿದರು. ಮತ್ತೊಂದೆಡೆ ನಾಯಕ ಲಕ್ಷ್ಯ ರೈಚಂದಾನಿ 7 ಬೌಂಡರಿಗಳೊಂದಿಗೆ ಅಜೇಯ 53 ರನ್ ಗಳಿಸಿ ತಕ್ಕ ಸಾಥ್ ನೀಡಿದರು
ತಮ್ಮ ಮೊದಲ ಪಂದ್ಯದಲ್ಲೇ ಅಧಿಕಾರಯುತ ಗೆಲುವು ಸಾಧಿಸಿರುವ ಭಾರತ ಯು-19 ತಂಡವು, ಮುಂದಿನ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ(ಏಜೆನ್ಸೀಸ್).