

ನವದೆಹಲಿ: ಬರೋಬ್ಬರಿ 17 ವರ್ಷಗಳ ಕಾಲ ಟ್ರೋಫಿ ಗೆಲ್ಲಲಾಗದೇ ಪರದಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸತತ ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿ ಮುನ್ನಡೆಸಿದರೂ, ಭಾರತದ ಟಿ20 ತಂಡದಿಂದ ನಿರ್ಲಕ್ಷ್ಯಕ್ಕೆ ಒಳಗಾದ ನೋವು ರಜತ್ ಪಾಟೀದಾರ್ ಅವರನ್ನು ಕಾಡುತ್ತಲೇ ಇದೆ. ಇದೀಗ ಅವರ ನೋವು ಬ್ಯಾಟ್ನಿಂದ ಸಿಡಿಲಾಗಿ ಹೊರಹೊಮ್ಮಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ, ಇಂದೋರ್ನ ಈ ಬಲಗೈ ಬ್ಯಾಟರ್ ಅಕ್ಷರಶಃ ಮೈದಾನದ ನಾಲ್ಕು ಮೂಲೆಗಳಿಗೂ ಚೆಂಡನ್ನು ಅಟ್ಟುವ ಮೂಲಕ, ಕೇವಲ 41 ಎಸೆತಗಳಲ್ಲಿ ಶತಕ ಸಿಡಿಸಿ, ಆಯ್ಕೆ ಸಮಿತಿಗೆ ಖಡಕ್ ಉತ್ತರ ನೀಡಿದ್ದಾರೆ.
ನ್ಯೂ ಚಂಡೀಗಢದ ಪಿಸಿಎ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಗ್ರೌಂಡ್ 'ಎ' ನಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ T20 ಟ್ರೋಫಿಯ ಎಲೈಟ್ ಗ್ರೂಪ್ ಸಿ ಪಂದ್ಯದಲ್ಲಿ ಅಸ್ಸಾಂ ಬೌಲರ್ಗಳು ರಜತ್ ಪಾಟೀದಾರ್ ಅವರ ರೌದ್ರಾವತಾರಕ್ಕೆ ಸಾಕ್ಷಿಯಾದರು. ಮಧ್ಯಪ್ರದೇಶದ ನಾಯಕರಾಗಿ ಕಣಕ್ಕಿಳಿದ ಪಾಟಿದಾರ್, ಅಕ್ಷರಶಃ ಅಸ್ಸಾಂ ಬೌಲಿಂಗ್ ದಾಳಿಯನ್ನು ಧೂಳೀಪಟ ಮಾಡಿದರು.
ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಪಾಟೀದಾರ್, ಕೇವಲ 48 ಎಸೆತಗಳಲ್ಲಿ ಅಜೇಯ 135 ರನ್ಗಳನ್ನು ಚಚ್ಚಿದರು. ಅವರ ಈ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮಧ್ಯಪ್ರದೇಶ ತಂಡವು ನಿಗದಿತ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಬೃಹತ್ 250 ರನ್ಗಳ ಮೊತ್ತವನ್ನು ಪೇರಿಸಿತು. ಇದಕ್ಕೆ ಪ್ರತಿಯಾಗಿ ಅಸ್ಸಾಂ ತಂಡವು 119 ರನ್ಗಳಿಗೆ ಆಲೌಟ್ ಆಗುವ ಮೂಲಕ 131 ರನ್ಗಳ ಹೀನಾಯ ಸೋಲನ್ನು ಅನುಭವಿಸಿತು.
ಮಧ್ಯಪ್ರದೇಶದ ಇಂದೋರ್ನಿಂದ ಬಂದಿರುವ 30ರ ಹರೆಯದ ಬಲಗೈ ಬ್ಯಾಟರ್ ರಜತ್ ಪಾಟೀದಾರ್, ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 2025 ಮತ್ತು 2026ರಲ್ಲಿ ಸತತವಾಗಿ ಚಾಂಪಿಯನ್ ಪಟ್ಟಕ್ಕೇರಿಸಿದ ಪ್ರಮುಖ ರೂವಾರಿ. ನಾಯಕನಾಗಿ ಇಂತಹ ದೊಡ್ಡ ಸಾಧನೆ ಮಾಡಿದರೂ, ರಾಷ್ಟ್ರೀಯ ಟಿ20 ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ.
ಇದುವರೆಗೆ ಕೇವಲ ಮೂರು ಏಕದಿನ ಮತ್ತು ಒಂದು ಟೆಸ್ಟ್ ಪಂದ್ಯವನ್ನು ಮಾತ್ರ ಆಡಿರುವ ಪಾಟಿದಾರ್, ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ತಾವು ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸಿಕೊಟ್ಟರು. ಮಧ್ಯಪ್ರದೇಶದ ಇನ್ನಿಂಗ್ಸ್ನ 19ನೇ ಓವರ್ನ ಎರಡನೇ ಎಸೆತದಲ್ಲಿ ಶತಕ ಪೂರೈಸಿದ ನಂತರವೂ ಅವರ ವೇಗ ಕಡಿಮೆಯಾಗಲಿಲ್ಲ. ನಂತರದ ಏಳು ಎಸೆತಗಳಲ್ಲಿ ಅವರು ಐದು ಸಿಕ್ಸರ್ಗಳು ಮತ್ತು ಒಂದು ಬೌಂಡರಿ ಬಾರಿಸಿದರು, ಇದರಲ್ಲಿ ಸತತ ನಾಲ್ಕು ಸಿಕ್ಸರ್ಗಳು ಸೇರಿವೆ. ಒಟ್ಟಾರೆ ಇನ್ನಿಂಗ್ಸ್ನಲ್ಲಿ ಅವರು ಎಂಟು ಬೌಂಡರಿ ಮತ್ತು 13 ಸಿಕ್ಸರ್ಗಳನ್ನು ಬಾರಿಸಿದರು.
ಪಂದ್ಯದ ಆರಂಭದಲ್ಲಿ ಮಧ್ಯಪ್ರದೇಶ ತಂಡವು ಸಂಕಷ್ಟದಲ್ಲಿತ್ತು. 7.4 ಓವರ್ಗಳಲ್ಲಿ 57 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಪರದಾಡುತ್ತಿತ್ತು. ಆಗ ನಾಯಕ ಪಾಟಿದಾರ್ಗೆ ಜತೆಯಾದ ಶಿವಂಗ್ ಕುಮಾರ್, ತಂಡವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಈ ಜೋಡಿ ನಾಲ್ಕನೇ ವಿಕೆಟ್ಗೆ ಕೇವಲ 62 ಎಸೆತಗಳಲ್ಲಿ ಅಮೂಲ್ಯವಾದ 153 ರನ್ಗಳನ್ನು ಸೇರಿಸಿತು. ಇವರಿಬ್ಬರ ಈ ಜತೆಯಾಟವು ತಂಡದ ಬೃಹತ್ ಮೊತ್ತಕ್ಕೆ ಬುನಾದಿಯಾಯಿತು. ಶಿವಂಗ್ ಕುಮಾರ್ ಕೂಡ ಆಕ್ರಮಣಕಾರಿ ಆಟವಾಡಿ 38 ಎಸೆತಗಳಲ್ಲಿ 61 ರನ್ ಗಳಿಸಿದರು. ರಾಜತ್ ಪಾಟೀದಾರ್ ಅವರ ಟಿ20 ಸ್ವರೂಪದಲ್ಲಿ ಇದು ಎರಡನೇ ಶತಕವಾಗಿದೆ. ಇದಕ್ಕೂ ಮೊದಲು, ಅವರು 2022ರ ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ಜೈಂಟ್ಸ್ ವಿರುದ್ಧ ಕೋಲ್ಕತದ ಈಡನ್ ಗಾರ್ಡನ್ಸ್ನಲ್ಲಿ ಶತಕ ಸಿಡಿಸಿದ್ದರು.
ರಜತ್ ಪಾಟೀದಾರ್ ಇತ್ತೀಚೆಗೆ ಅದ್ಭುತ ಫಾರ್ಮ್ನಲ್ಲಿದ್ದಾರೆ. ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಿಂದ ಗಾಯದ ಕಾರಣ ಹಿಂದೆ ಸರಿದರೂ, ಅವರು ಚೇತರಿಸಿಕೊಂಡು ಅಬ್ಬರಿಸುತ್ತಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಕೇರಳ ವಿರುದ್ಧ ಅಜೇಯ 36 ರನ್ ಗಳಿಸಿದ್ದ ಅವರು, ನಂತರ ಈ ಭರ್ಜರಿ ಶತಕ ಸಿಡಿಸಿದ್ದಾರೆ. ಇದಕ್ಕೂ ಮೊದಲು ಪ್ರಸಕ್ತ ರಣಜಿ ಟ್ರೋಫಿ ಸೀಸನ್ನಲ್ಲಿ ಮಧ್ಯಪ್ರದೇಶ ಪರ ಆಡಿದ ಮೂರು ಪಂದ್ಯಗಳ ಪೈಕಿ ಮೊದಲ ಎರಡು ಪಂದ್ಯಗಳಲ್ಲಿ ಸತತ ಶತಕಗಳನ್ನು ಸಿಡಿಸಿ ತಮ್ಮ ಫಾರ್ಮ್ ಅನ್ನು ಸಾಬೀತುಪಡಿಸಿದ್ದರು.
ಅಸ್ಸಾಂ ವಿರುದ್ಧದ ಈ ಐತಿಹಾಸಿಕ ಇನ್ನಿಂಗ್ಸ್ಗೂ ಮುನ್ನ, ಪಾಟೀದಾರ್ ಆಸ್ಟ್ರೇಲಿಯಾ 'ಎ' ವಿರುದ್ಧ ಪುದುಚೇರಿಯಲ್ಲಿ ನಡೆದ ಮೂರು ಅನಧಿಕೃತ ಏಕದಿನ ಪಂದ್ಯಗಳಲ್ಲಿ ಭಾರತ 'ಎ' ತಂಡವನ್ನು ಪ್ರತಿನಿಧಿಸಿದ್ದರು. ಆ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 53 ಮತ್ತು 67 ರನ್ ಗಳಿಸಿದ ಅವರು ಉತ್ತಮ ಲಯದಲ್ಲಿದ್ದರು. ಆದಾಗ್ಯೂ, ಅಕ್ಟೋಬರ್ 11ರಂದು ನಡೆದ ಮೂರನೇ ಪಂದ್ಯದಲ್ಲಿ ಅವರು ಕೇವಲ ಮೂರು ರನ್ಗಳಿಗೆ ಔಟಾಗಿದ್ದರು. ಆದರೆ, ಆ ಸಣ್ಣ ವೈಫಲ್ಯವನ್ನು ಮರೆತು ಇದೀಗ ದೇಶೀಯ ಕ್ರಿಕೆಟ್ನಲ್ಲಿ ಮತ್ತೆ ತಮ್ಮ ಪ್ರಭುತ್ವ ಮೆರೆಯುವ ಮೂಲಕ ಆಯ್ಕೆಗಾರರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ, (ಏಜೆನ್ಸೀಸ್).