ಭಾರತದ ವಿಶ್ವಕಪ್​ ಬೇಟೆ ಇಂದು ಶುರು; ಚೆನ್ನೈನಲ್ಲಿ ಆಸ್ಟ್ರೆಲಿಯಾ ಮೊದಲ ಸವಾಲು

ind vs aus web
Published on

ಚೆನ್ನೈ: ತವರಿನಲ್ಲಿ 12 ವರ್ಷಗಳ ಬಳಿಕ, ಒಟ್ಟಾರೆ 3ನೇ ವಿಶ್ವಕಪ್​ ಗೆಲ್ಲುವ ಗುರಿ, 13 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿಸುವ ಮಹಾದಾಸೆ ಮತ್ತು 1.40 ಕೋಟಿ ಭಾರತೀಯರ ನಿರೀಕ್ಷೆಗೆ ತಕ್ಕ ನಿರ್ವಹಣೆ ತೋರುವ ಹುರುಪಿನೊಂದಿಗೆ ರೋಹಿತ್​ ಶರ್ಮ ಸಾರಥ್ಯದ ಭಾರತ ತಂಡ 13ನೇ ಆವೃತ್ತಿಯ ಏಕದಿನ ವಿಶ್ವಕಪ್​ನಲ್ಲಿ ಭಾನುವಾರ ಅಭಿಯಾನ ಆರಂಭಿಸಲಿದೆ. ಐದು ಬಾರಿಯ ಚಾಂಪಿಯನ್​ ಆಸ್ಟ್ರೆಲಿಯಾ ಮೊದಲ ಎದುರಾಳಿಯಾಗಿದ್ದು, ಇತ್ತೀಚೆಗೆ ಇದೇ ತಂಡದ ವಿರುದ್ಧ ಸರಣಿ ಗೆದ್ದ ವಿಶ್ವಾಸ ಭಾರತಕ್ಕಿದೆ. ಹೀಗಾಗಿ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಶುಭಾರಂಭ ಕಾಣುವ ನಿರೀಕ್ಷೆ ಹೆಚ್ಚಾಗಿದೆ.

ಏಷ್ಯಾಡ್​ನಲ್ಲಿ ಭಾರತ ಪದಕಗಳ ಶತಕ ಬಾರಿಸಿ ಕ್ರೀಡಾಪ್ರೇಮಿಗಳಿಗೆ ಈಗಾಗಲೆ ಅಪಾರ ಸಂತಸ ತಂದಿದೆ. ಇದರ ನಡುವೆ ಕ್ರಿಕೆಟಿಗರೂ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವ ಸಿದ್ಧತೆಯಲ್ಲಿದ್ದಾರೆ. ಭಾರತದ ಬಲಿಷ್ಠ ಬ್ಯಾಟಿಂಗ್​ ವಿಭಾಗಕ್ಕೆ ಆಸ್ಟ್ರೆಲಿಯಾ ವೇಗಿಗಳು ಸವಾಲಾಗುವ ಸಾಧ್ಯತೆ ಇದ್ದರೂ, ಚೆನ್ನೈ ಪಿಚ್​ ಸ್ಪಿನ್ನರ್​ಗಳಿಗೆ ಹೆಚ್ಚಿನ ನೆರವು ನೀಡುವ ನಿರೀಕ್ಷೆ ಇದೆ. ಹೀಗಾಗಿ ಆತಿಥೇಯ ಮೂವರು ಸ್ಪಿನ್ನರ್​ಗಳ ಅಸ್ತ್ರ ಬಳಸುವ ಯೋಜನೆಯಲ್ಲಿದೆ. ಆದರೆ ಉಭಯ ತಂಡಗಳೂ ಅನುಭವಿ ಮತ್ತು ಯುವ ಆಟಗಾರರ ಮಿಶ್ರಣ ಹೊಂದಿರುವುದರಿಂದ ರೋಚಕ ಕಾದಾಟ ನಿಶ್ಚಿತವೆನಿಸಿದೆ.

2013ರ ಚಾಂಪಿಯನ್ಸ್​ ಟ್ರೋಫಿ ಬಳಿಕ ಐಸಿಸಿ ಟ್ರೋಫಿ ಬರ ಎದುರಿಸುತ್ತಿರುವ ಭಾರತ, 2015, 2019ರ ಏಕದಿನ ವಿಶ್ವಕಪ್​ಗಳಲ್ಲಿ ಸೆಮೀಸ್​ನಲ್ಲೇ ಮುಗ್ಗರಿಸಿತ್ತು. ಕಳೆದ ಬಾರಿ ಲೀಗ್​ ಹಂತದಲ್ಲಿ ಅಗ್ರಸ್ಥಾನ ಸಂಪಾದಿಸಿದರೂ, ಪ್ರಶಸ್ತಿ ಸನಿಹ ತಲುಪಲಾಗಿರಲಿಲ್ಲ. ಅಲ್ಲದೆ ವಿರಾಟ್​ ಕೊಹ್ಲಿ ಬಳಿಕ ಭಾರತದ ಐಸಿಸಿ ಟ್ರೋಫಿ ಬರ ನೀಗಿಸುವ ಜವಾಬ್ದಾರಿ ಹೊತ್ತುಕೊಂಡಿರುವ ರೋಹಿತ್​ ಶರ್ಮ ಅದಕ್ಕೆ ತಕ್ಕಂತೆ ತಂಡದಿಂದ ನಿರ್ವಹಣೆ ಹೊರಹೊಮ್ಮಿಸಬೇಕಾಗಿದೆ.

2: ಭಾರತ ಈ ಬಾರಿ ಪ್ರಶಸ್ತಿ ಗೆದ್ದರೆ ವಿರಾಟ್​ ಕೊಹ್ಲಿ ಮತ್ತು ಆರ್​. ಅಶ್ವಿನ್​ 2 ಬಾರಿ ಏಕದಿನ ವಿಶ್ವಕಪ್​ ಗೆದ್ದ ಮೊದಲ ಭಾರತೀಯ ಕ್ರಿಕೆಟಿಗರೆನಿಸಲಿದ್ದಾರೆ. ಇವರಿಬ್ಬರು 2011ರ ವಿಜೇತ ತಂಡದ ಭಾಗವೂ ಆಗಿದ್ದರು.

1: ವಿಶ್ವಕಪ್​ನಲ್ಲಿ ಗರಿಷ್ಠ 6 ಶತಕ ಸಿಡಿಸಿದ ಸಚಿನ್​ ತೆಂಡುಲ್ಕರ್​ ಸಾಧನೆಯನ್ನು ರೋಹಿತ್​ ಶರ್ಮ ಕಳೆದ ಆವೃತ್ತಿಯಲ್ಲೇ ಸರಿಗಟ್ಟಿದ್ದರು. ಹೀಗಾಗಿ ರೋಹಿತ್​ ಈ ಬಾರಿ ಒಂದು ಶತಕ ಸಿಡಿಸಿದರೂ, ಸಚಿನ್​ ದಾಖಲೆ ಮುರಿಯಲಿದ್ದಾರೆ.

ಗರಿಷ್ಠ ಸಿಕ್ಸರ್​ ಸನಿಹ ರೋಹಿತ್​

ರೋಹಿತ್​ ಶರ್ಮ ವಿಶ್ವಕಪ್​ನಲ್ಲಿ 3 ಸಿಕ್ಸರ್​ ಸಿಡಿಸಿದರೂ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಗರಿಷ್ಠ ಸಿಕ್ಸರ್​ ಬಾರಿಸಿದ ಬ್ಯಾಟರ್​ ಎನಿಸಲಿದ್ದಾರೆ. ವೆಸ್ಟ್​ ಇಂಡೀಸ್​ನ ಕ್ರಿಸ್​ ಗೇಲ್​ 553 ಸಿಕ್ಸರ್​ ಸಿಡಿಸಿರುವುದು ಹಾಲಿ ದಾಖಲೆಯಾಗಿದ್ದರೆ, ರೋಹಿತ್​ 471 ಇನಿಂಗ್ಸ್​ಗಳಲ್ಲಿ 551 ಸಿಕ್ಸರ್​ ಸಿಡಿಸಿ ಅದರ ಸನಿಹದಲ್ಲಿದ್ದಾರೆ.

ಟೀಮ್​ ನ್ಯೂಸ್​:

ಭಾರತ: ಡೆಂಘೆ ಜ್ವರದಿಂದ ಬಳಲುತ್ತಿರುವ ಶುಭಮಾನ್​ ಗಿಲ್​ ಆಡುವುದು ಅನುಮಾನ. ಇದರಿಂದ ಇಶಾನ್​ ಕಿಶನ್​ ಇನಿಂಗ್ಸ್​ ಆರಂಭಿಸಬಹುದು. 4ನೇ ಕ್ರಮಾಂಕಕ್ಕೆ ಶ್ರೇಯಸ್​ ಅಯ್ಯರ್​-ಸೂರ್ಯಕುಮಾರ್​ ನಡುವೆ ಪೈಪೋಟಿ ಇದೆ. 8ನೇ ಕ್ರಮಾಂಕಕ್ಕೆ ಆರ್​. ಅಶ್ವಿನ್​-ಶಾರ್ದೂಲ್​ ಠಾಕೂರ್​ ನಡುವೆ ಪೈಪೋಟಿ ಇದ್ದರೂ, ಅಶ್ವಿನ್​ ತವರಿನಲ್ಲಿ ಆಡುವ ನಿರೀೆ ಹೆಚ್ಚಿದೆ.

ಸಂಭಾವ್ಯ ತಂಡ: ರೋಹಿತ್​ ಶರ್ಮ (ನಾಯಕ), ಶುಭಮಾನ್​ ಗಿಲ್​/ಇಶಾನ್​ ಕಿಶನ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​/ಸೂರ್ಯಕುಮಾರ್​, ಕೆಎಲ್​ ರಾಹುಲ್​ (ವಿ.ಕೀ), ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಆರ್​. ಅಶ್ವಿನ್​, ಕುಲದೀಪ್​ ಯಾದವ್​, ಬುಮ್ರಾ, ಸಿರಾಜ್​.

ಆಸ್ಟ್ರೆಲಿಯಾ: ಆಲ್ರೌಂಡರ್​ ಮಾರ್ಕಸ್​ ಸ್ಟೋಯಿನಸ್​ ಫಿಟ್ನೆಸ್​ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಕ್ಯಾಮರಾನ್​ ಗ್ರೀನ್​ ತಂಡ ಪ್ರಮುಖ ಆಲ್ರೌಂಡರ್​ ಎನಿಸಲಿದ್ದಾರೆ. ಜೋಶ್​ ಇಂಗ್ಲಿಸ್​ರನ್ನು ಹಿಮ್ಮೆಟ್ಟಿಸಿ ಅಲೆಕ್ಸ್​ ಕ್ಯಾರಿ ವಿಕೆಟ್​ ಕೀಪಿಂಗ್​ ಗ್ಲೌಸ್​ ಸಂಪಾದಿಸುವ ನಿರೀೆ ಇದೆ.

ಸಂಭಾವ್ಯ ತಂಡ: ಡೇವಿಡ್​ ವಾರ್ನರ್​, ಮಿಚೆಲ್​ ಮಾರ್ಷ್​, ಸ್ಟೀವನ್​ ಸ್ಮಿತ್​, ಮಾರ್ನಸ್​ ಲಬುಶೇನ್​, ಕ್ಯಾಮರಾನ್​ ಗ್ರೀನ್​, ಅಲೆಕ್ಸ್​ ಕ್ಯಾರಿ (ವಿ.ಕೀ), ಗ್ಲೆನ್​ ಮ್ಯಾಕ್ಸ್​ವೆಲ್​, ಮಿಚೆಲ್​ ಸ್ಟಾರ್ಕ್​, ಪ್ಯಾಟ್​ ಕಮ್ಮಿನ್ಸ್​ (ನಾಯಕ), ಜೋಶ್​ ಹ್ಯಾಸಲ್​ವುಡ್​, ಆಡಂ ಜಂಪಾ.

ಆರಂಭ: ಮಧ್ಯಾಹ್ನ 2.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ವಿಶ್ವ ನಂ. 1 ತಂಡಕ್ಕೆ ವಿಶ್ವಕಪ್​?

ಆತಿಥೇಯ ಭಾರತ ತಂಡ ಈ ಬಾರಿ ವಿಶ್ವ ನಂ. 1 ತಂಡವಾಗಿ ವಿಶ್ವಕಪ್​ ಅಭಿಯಾನ ಆರಂಭಿಸಲಿದೆ. ಇತ್ತೀಚೆಗೆ ಆಸೀಸ್​ ಎದುರು ತವರಿನಲ್ಲಿ ಸರಣಿ ಗೆದ್ದ ಬಳಿಕ ಭಾರತ ಐಸಿಸಿ ಏಕದಿನ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೇರಿದೆ. 2015ರಲ್ಲಿ ಆಸ್ಟ್ರೆಲಿಯಾ ಮತ್ತು 2019ರಲ್ಲಿ ಇಂಗ್ಲೆಂಡ್​ ಕೂಡ ಇದೇ ರೀತಿ ವಿಶ್ವ ನಂ. 1 ತಂಡವಾಗಿ ಅಭಿಯಾನ ಆರಂಭಿಸಿ ಪ್ರಶಸ್ತಿ ಗೆದ್ದಿತ್ತು. ಇದು ಈ ಬಾರಿ ಭಾರತ ಪ್ರಶಸ್ತಿ ಗೆಲ್ಲಲು ಇನ್ನೊಂದು ಕಾರಣವಾಗುವ ನಿರೀಕ್ಷೆ ಕ್ರಿಕೆಟ್​ ಪ್ರೇಮಿಗಳದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net