

ಹಾಂಗ್ರೆೌ: ಇಸ್ಪೀಟು ಎಲೆಗಳ ಆಟ ಬ್ರಿಡ್ಜ್ನಲ್ಲಿ ಭಾರತದ ಹಿರಿಯ ಆಟಗಾರರ ತಂಡ ಏಷ್ಯನ್ ಗೇಮ್ಸ್ನಲ್ಲಿ ರಜತ ಪದಕ ಗೆದ್ದು ಸಂಭ್ರಮಿಸಿದೆ. ಹಾಂಕಾಂಗ್ ವಿರುದ್ಧ 2 ದಿನಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ 65 ವರ್ಷದ ಜಗ್ಗಿ ಶಿವದಾಸಾನಿ, 64 ವರ್ಷದ ಅಜಯ್ ಪ್ರಭಾಕರ್ ಖಾರೆ, 62 ವರ್ಷದ ರಾಜು ತೋಲಾನಿ, 49 ವರ್ಷದ ಸಂದೀಪ್ ತಕ್ರಾಲ್, 60 ವರ್ಷದ ರಾಜೇಶ್ವರ್ ತಿವಾರಿ ಮತ್ತು 48 ವರ್ಷದ ಸುಮಿತ್ ಮುಖರ್ಜಿ ಒಳಗೊಂಡ ಭಾರತ ತಂಡ 152-238.1ರಿಂದ ಪರಾಭವಗೊಂಡಿತು. ಇದರಿಂದ ಭಾರತದ ಬ್ರಿಡ್ಜ್ ತಂಡ ಈ ಬಾರಿ ಏಕೈಕ ಪದಕದೊಂದಿಗೆ ಅಭಿಯಾನ ಮುಗಿಸಿತು. 2018ರ ಏಷ್ಯಾಡ್ನಲ್ಲಿ ಭಾರತ ಬ್ರಿಡ್ಜ್ನಲ್ಲಿ 1 ಚಿನ್ನ, 2 ಕಂಚು ಗೆದ್ದಿತ್ತು.
ಸೆಪಕ್ ಟಕ್ರಾದಲ್ಲಿ ಅಚ್ಚರಿಯ ಕಂಚು
ಕಿಕ್ ವಾಲಿಬಾಲ್ ಖ್ಯಾತಿಯ ಸೆಪಕ್ ಟಕ್ರಾ ಕ್ರೀಡೆಯಲ್ಲಿ ಭಾರತದ ಮಹಿಳೆಯರ ರೇಗು ತಂಡ ಅಚ್ಚರಿಯ ಕಂಚು ಜಯಿಸುವ ಮೂಲಕ ಏಷ್ಯಾಡ್ನಲ್ಲಿ ಪದಕಗಳ ಶತಕ ಸಿಡಿಸಲು ನೆರವಾಯಿತು. ಅಯೆಕ್ಪಮ್ ಮೈಪಕ್ ದೇವಿ, ಒಯಿನಮ್ ಚವೊಬಾ ದೇವಿ, ಖುಷ್ಬು, ಇಲಂಗ್ಬಮ್ ಪ್ರಿಯಾ ದೇವಿ ಮತ್ತು ಇಲಂಗ್ಬಮ್ ಲೈರೆಂಟೊಂಬಿ ದೇವಿ ಒಳಗೊಂಡ ಭಾರತ ತಂಡ ಸೆಮಿೈನಲ್ನಲ್ಲಿ 10-21, 13-21ರಿಂದ ಬಲಿಷ್ಠ ಥಾಯ್ಲೆಂಡ್ ಎದುರು ಸೋತಿತು. ಈ ಮುನ್ನ ಗ್ರೂಪ್ ಹಂತದಿಂದ ಸೆಮಿಫೈನಲ್ಗೇರುವ ಮೂಲಕ ಭಾರತ ಪದಕ ಖಚಿತಪಡಿಸಿಕೊಂಡಿತ್ತು. ಮಹಿಳೆಯರ ಸೆಪಕ್ ಟಕ್ರಾ ತಂಡಕ್ಕೆ ಇದು ಮೊದಲ ಪದಕವಾಗಿದೆ. ಈ ಮುನ್ನ 2018ರಲ್ಲಿ ಭಾರತ ಪುರುಷರ ವಿಭಾಗದಲ್ಲಿ ಕಂಚು ಗೆದ್ದಿತ್ತು.