ಕಾಳಸಂತೆಯಲ್ಲಿ ಭಾರತ-ಪಾಕ್​ ನಡುವಿನ ವಿಶ್ವಕಪ್​ ಪಂದ್ಯದ ಟಿಕೆಟ್ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!

indo pak ticket web
Published on

ನವದೆಹಲಿ: ಭಾರತ-ಪಾಕಿಸ್ತಾನ ತಂಡಗಳ ನಡುವೆ ಅಕ್ಟೋಬರ್​ 14ರಂದು ಅಹಮದಾಬಾದ್​ನಲ್ಲಿ ನಡೆಯಲಿರುವ ವಿಶ್ವಕಪ್​ ಪಂದ್ಯದ ಟಿಕೆಟ್​ಗಳು ಈಗಾಗಲೆ ಸೋಲ್ಡ್​ಔಟ್​ ಆಗಿವೆ. ಇದೀಗ ಕಾಳಸಂತೆಯಲ್ಲಿ ಈ ಪಂದ್ಯದ ಟಿಕೆಟ್​ಗಳಿಗೆ 57 ಲಕ್ಷ ರೂ. ತನಕವೂ ಡಿಮಾಂಡ್​ ಮಾಡಲಾಗುತ್ತಿದೆ. "ವಯಾಗೋಗೋ' ಎಂಬ ಅಮೆರಿಕದ ಟಿಕೆಟ್​ ಮರುಮಾರಾಟ ವೆಬ್​ಸೈಟ್​ನಲ್ಲಿ ಭಾರತ-ಪಾಕ್​ ಪಂದ್ಯದ ಟಿಕೆಟ್​ ಒಂದಕ್ಕೆ 57,62,676 ರೂ. ಮೊತ್ತದ ಬೇಡಿಕೆ ಇಡಲಾಗಿದೆ.

ಇನ್ನೂ ಕೆಲ ಟಿಕೆಟ್​ಗಳನ್ನು 18ರಿಂದ 22 ಲಕ್ಷ ರೂ.ಗಳಿಗೆ ರೀಸೇಲ್​ಗೆ ಇಡಲಾಗಿದೆ. ಭಾರತ ತಂಡ ಅಕ್ಟೋಬರ್​ 8ರಂದು ಆಸ್ಟ್ರೆಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಾಗುವ ಪಂದ್ಯದ ಟಿಕೆಟ್​ಗೆ 2.85 ಲಕ್ಷ ರೂ. ರೀಸೇಲ್​ ಬೆಲೆ ನಿಗದಿಪಡಿಸಲಾಗಿದ್ದರೆ, ಭಾರತ-ಇಂಗ್ಲೆಂಡ್​ (ಲಖನೌ) ಮತ್ತು ಭಾರತ-ದಕ್ಷಿಣ ಆಫ್ರಿಕಾ (ಕೋಲ್ಕತ) ಪಂದ್ಯದ ಟಿಕೆಟ್​ಗಳು ಗರಿಷ್ಠ 2.35 ಲಕ್ಷ ರೂ. ಮೌಲ್ಯ ಹೊಂದಿವೆ. ವಿಶ್ವಕಪ್​ ಟಿಕೆಟ್​ಗಳು ಕಾಳಸಂತೆಯಲ್ಲಿ ಇಷ್ಟೊಂದು ದುಬಾರಿ ಮೊತ್ತಕ್ಕೆ ಮರುಮಾರಾಟವಾಗುತ್ತಿರುವುದಕ್ಕೆ ಕ್ರಿಕೆಟ್​ ಪ್ರೇಮಿಗಳು, ಟೂರ್ನಿಯ ಅಧಿಕೃತ ಟಿಕೆಟ್​ ಮಾರಾಟ ಕಂಪನಿ "ಬುಕ್​ ಮೈ ಶೋ' ವಿರುದ್ಧ ಕಿಡಿಕಾರುತ್ತಿದ್ದಾರೆ.

ಬುಕ್​ ಮೈ ಶೋನಲ್ಲಿ ಎಲ್ಲ ಟಿಕೆಟ್​ಗಳು ಮಾರಾಟವಾಗಿವೆ ಎಂದು ತೋರಿಸಲಾಗುತ್ತಿದೆ. ಆದರೆ ವಯಾಗೋಗೋ ವೆಬ್​ಸೈಟ್​ನಲ್ಲಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿರುವವರಿಗೆ ಎಲ್ಲಿಂದ ಟಿಕೆಟ್​ಗಳು ಸಿಗುತ್ತಿವೆ? 1.32 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಭಾರತ-ಪಾಕ್​ ಪಂದ್ಯದ ಎಷ್ಟು ಟಿಕೆಟ್​ಗಳನ್ನು ಸಾರ್ವಜನಿಕರಿಗೆ ಇದುವರೆಗೆ ಮಾರಾಟ ಮಾಡಲಾಗಿದೆ ಎಂಬ ಬಗ್ಗೆ ಬುಕ್​ಮೈಶೋ ಅಧಿಕೃತ ಮಾಹಿತಿ ನೀಡಬೇಕು ಎಂದು ಕ್ರಿಕೆಟ್​ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net