VIDEO: ಪ್ರಶಸ್ತಿ ಸುತ್ತಿಗೇರಿದ ಟ್ರಿನ್‌ಬಾಗೊ ನೈಟ್ ರೈಡರ್ಸ್‌..!

carebian premier league
Published on

ತೌರಾಬ: ಪ್ರಶಸ್ತಿ ಫೇವರಿಟ್ ಎನಿಸಿರುವ ಟ್ರಿನ್‌ಬಾಗೊ ನೈಟ್ ರೈಡರ್ಸ್‌ (ಟಿಕೆಆರ್) ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್) ಸತತ 11ನೇ ಗೆಲುವಿನೊಂದಿಗೆ ಪ್ರಶಸ್ತಿ ಸುತ್ತಿಗೇರಿತು. ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಿಕೆಆರ್ ತಂಡ 9 ವಿಕೆಟ್‌ಗಳಿಂದ ಜಮೈಕಾ ತಲ್ಲವಾಸ್ ತಂಡವನ್ನು ಸೋಲಿಸಿತು. ಲೀಗ್ ಹಂತದಲ್ಲಿ ಆಡಿದ ಎಲ್ಲ 10 ಪಂದ್ಯಗಳಲ್ಲೂ ಟಿಕೆಆರ್ ಜಯ ದಾಖಲಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಜಮೈಕಾ ತಲ್ಲವಾಸ್, ಅಕೀಲ್ ಹೊಸೀನ್ (14ಕ್ಕೆ 3) ಹಾಗೂ ಖಾರಿ ಪೈರೆ (29ಕ್ಕೆ 2) ಜೋಡಿ ಮಾರಕ ದಾಳಿಗೆ ನಲುಗಿ 7 ವಿಕೆಟ್‌ಗೆ 107 ರನ್ ಕಲೆಹಾಕಿತು. ಪ್ರತಿಯಾಗಿ ಈ ಸುಲಭ ಮೊತ್ತ ಬೆನ್ನಟ್ಟಿದ ಟಿಕೆಆರ್ ತಂಡ, 15 ಓವರ್‌ಗಳಲ್ಲಿ 1 ವಿಕೆಟ್‌ಗೆ 111 ರನ್‌ಗಳಿಸಿ ಜಯದ ನಗೆ ಬೀರಿತು. ಟಿಕೆಆರ್ ತಂಡದ ಲೆಂಡ್ಲೆ ಸಿಮ್ಮನ್ಸ್ (54*ರನ್, 44 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಟಿಯೊನ್ ವೆಬ್‌ಸ್ಟೆರ್ (44*ರನ್, 43 ಎಸೆತ, 6 ಬೌಂಡರಿ, 1 ಸಿಕ್ಸರ್) ಜೋಡಿ ಮುರಿಯದ 2ನೇ ವಿಕೆಟ್‌ಗೆ 97 ರನ್ ಪೇರಿಸಿ, ಇನ್ನು5  ಓವರ್‌ಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿತು.

* ಗಯಾನ ಅಮೆಜಾನ್ ವಾರಿಯರ್ಸ್‌ ಹಾಗೂ ಸೇಂಟ್ ಲೂಸಿಯಾ ಜೌಕ್ಸ್ ನಡುವೆ ಬುಧವಾರ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಬಳಿಕ ಗುರುವಾರ (ಸೆ.10) ಫೈನಲ್ ಪಂದ್ಯ ನಡೆಯಲಿದೆ.

ಜಮೈಕಾ ತಲ್ಲವಾಸ್: 7 ವಿಕೆಟ್‌ಗೆ 107 (ರೊವ್‌ಮನ್ ಪೊವೆಲ್ 33, ಎನ್ರುಮಾ ಬೊನ್ನೆರ್ 41, ಅಕೀಲ್ ಹೊಸೀನ್ 14ಕ್ಕೆ 3, ಖಾರಿ ಪೈರೆ 29ಕ್ಕೆ 2), ಟ್ರಿನಿಬಾಗೊ ನೈಟ್ ರೈಡರ್ಸ್‌: 15 ಓವರ್‌ಗಳಲ್ಲಿ 1 ವಿಕೆಟ್‌ಗೆ 111 (ಲೆಂಡ್ಲೆ ಸಿಮ್ಮನ್ಸ್ 54*, ಟಿಯೊನ್ ವೆಬ್‌ಸ್ಟೆರ್ 44*, ಮುಜೀಬ್ ಉರ್ ರೆಹಮಾನ್ 18ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net